ಸಾರಾಂಶ
ಕಾರವಾರ: ಶಾಂತಿ, ಸೌಹಾರ್ದಕ್ಕೆ ಹೆಸರಾದ ಕಾರವಾರದ ಕಡಲ ತೀರದಲ್ಲಿ ಮತ್ತೆ ನೆತ್ತರಿನ ಅಲೆಗಳು ಎದ್ದಿವೆ. ಸುಮಾರು ಎರಡು ದಶಕಗಳ ತರುವಾಯ ನಗರದಲ್ಲಿ ಬರ್ಬರ ಹತ್ಯೆ ನಡೆದಿದ್ದು, ಕಾರವಾರಕ್ಕೆ ಕಾರವಾರವೇ ತಲ್ಲಣಗೊಂಡಿದೆ.
ನಗರಸಭೆ ಮಾಜಿ ಸದಸ್ಯ ಸತೀಶ ಕೊಳಂಬಕರ ಮೇಲೆ ಸಂತೆಯಲ್ಲೇ ಚೂರಿಯಿಂದ ಇರಿಯಲಾಗಿದೆ. ರಕ್ತದ ಮಡುವಿನಲ್ಲಿ ಬಿದ್ದ ಕೊಳಂಬಕರ ಕೆಲವೇ ನಿಮಿಷಗಳಲ್ಲಿ ಪ್ರಾಣ ತ್ಯಜಿಸಿದ್ದಾರೆ. ಭಾನುವಾರದ ಬೆಳಿಗ್ಗೆ ನಡೆದ ವಿದ್ಯಮಾನದಿಂದ ನಗರದ ಜನತೆ ಬೆಚ್ಚಿಬಿದ್ದಿದ್ದಾರೆ.ರಸ್ತೆಯ ಇಕ್ಕೆಲಗಳಲ್ಲಿ ತರಕಾರಿ ಮಾರಾಟಗಾರರು, ನಡುವೆ ಕಾಯಿಪಲ್ಲೆ ಖರೀದಿಗೆ ಬರುತ್ತಿರುವ ಗ್ರಾಹಕರು. ಹೀಗೆ ಜನರೆದುರೇ ಆರಂಭವಾದ ವಾಗ್ವಾದ ವಿಕೋಪಕ್ಕೆ ಹೋಗಿ ಸತೀಶ ಕೊಳಂಬಕರ ಹತ್ಯೆಗೀಡಾಗಿದ್ದು ಸ್ಥಳದಲ್ಲಿದ್ದ ಜನತೆಗೆ ಭಯ ಹುಟ್ಟಿಸಿತು.
ಅದು 2000ನೇ ಇಸ್ವಿ ಫೆಬ್ರವರಿ 19. ನಗರದ ದೈವಜ್ಞ ಭವನದಲ್ಲಿ ಆರತಕ್ಷತೆಯ ಸಿದ್ಧತೆಯಲ್ಲಿದ್ದ ಶಾಸಕ ವಸಂತ ಅಸ್ನೋಟಿಕರ್ ಮೇಲೆ ಗುಂಡಿನ ಮೊರೆತ ಆದಾಗ ಅಕ್ಷರಶಃ ರಾಜ್ಯವೇ ಬೆಚ್ಚಿ ಬಿದ್ದಿತ್ತು. ಕಾರವಾರದ ಶಾಂತಿ ಕದಡಿತ್ತು.ಅದಾಗಿ ಒಂದು ವರ್ಷದ ಬಳಿಕ ಅಸ್ನೋಟಿಕರ್ ಹತ್ಯೆ ಆರೋಪ ಎದುರಿಸುತ್ತಿದ್ದ ಉದ್ಯಮಿ ದಿಲೀಪ ಅರ್ಜುನ್ ನಾಯ್ಕ ಅವರು ಬರ್ಬರವಾಗಿ ಹತ್ಯೆಯಾಗುತ್ತಿದ್ದಂತೆ ರಕ್ತಸಿಕ್ತ ಅಧ್ಯಾಯ ಮುಂದುವರಿಯಿತು.
ಅಂದಿನಿಂದ ಇಂದಿನ ತನಕ ಕಾರವಾರ ನಗರ ಶಾಂತವಾಗಿಯೇ ಇತ್ತು. ಹಠಾತ್ತನೇ ಸತೀಶ ಕೊಳಂಬಕರ ಅವರನ್ನು ಚೂರಿಯಿಂದ ಇರಿದು ಕೊಲೆ ಮಾಡುವುದರೊಂದಿಗೆ ಮತ್ತೆ ಕಾರವಾರದ ರಸ್ತೆಯಲ್ಲಿ ನೆತ್ತರು ಹರಿಯುವಂತಾಯಿತು.ಭಟ್ಕಳ ಶಾಸಕ ಚಿತ್ತರಂಜನ್ ಹತ್ಯೆ, ಅಂಕೋಲಾದ ಉದ್ಯಮಿ ಆರ್.ಎನ್. ನಾಯಕ ಹತ್ಯೆಗಳು ಜನಮನದಲ್ಲಿ ಹಸಿರಾಗಿಯೇ ಇವೆ. ಆದರೆ ಕಾರವಾರ ಶಾಂತಿ, ಸಾಮರಸ್ಯಕ್ಕೆ ಹೆಸರಾದ ಊರು. ವೈಯಕ್ತಿಕ ದ್ವೇಷವೇ ಇರಲಿ, ಬೇರಾವುದೇ ಕಾರಣ ಇರಲಿ. ಹತ್ಯೆಯ ಮಟ್ಟಕ್ಕೆ ಇಳಿಯುವುದು ಬಹುತೇಕ ಅಪರೂಪ. ಈಗ ಕೊಳಂಬಕರ ಹತ್ಯೆ ಜನತೆಯ ನಿದ್ದೆಗೆಡಿಸಿದೆ. ಕಾರವಾರದಲ್ಲಿ ಶಾಂತಿ, ಸುವ್ಯವಸ್ಥೆ ಕಲ್ಪಿಸಬೇಕಾದ ಜವಾಬ್ದಾರಿ ಪೊಲೀಸ್ ಇಲಾಖೆಯದ್ದಾಗಿದೆ.
ಹತ್ಯೆ ನಡೆಯುತ್ತಿದ್ದಂತೆ ಕಾರ್ಯಾಚರಣೆಗಿಳಿದ ಪೊಲೀಸರು ತರಕಾರಿ ಮಾರಾಟಗಾರರನ್ನು ಪ್ರಶ್ನಿಸತೊಡಗಿದರು. ಹಂತಕರ ಬಗ್ಗೆ ಮಾಹಿತಿ ಕಲೆ ಹಾಕಲು ಆರಂಭಿಸಿದರು. ಆದರೆ ಬೇರೆ ಬೇರೆ ಜಿಲ್ಲೆಗಳ ಮಾರಾಟಗಾರರು ತಮಗೇಕೆ ಇಲ್ಲಿನ ಉಸಾಬರಿ ಎಂದು ಕಂಡಿದ್ದನ್ನು ಹೇಳಲು ಹಿಂದೇಟು ಹಾಕಿದರು. ಆದರೂ ಹಂತಕರ ಬಗ್ಗೆ ಪಟ್ಟು ಬಿಡದೇ ಉಪಯುಕ್ತ ಸುಳಿವು ಹಿಡಿಯುವಲ್ಲಿ ಪೊಲೀಸರು ಸಫಲರಾಗಿದ್ದು, ಆ ನಿಟ್ಟಿನಲ್ಲಿ ಆರೋಪಿಗಳ ಪತ್ತೆಗೆ ಕಾರ್ಯೋನ್ಮುಖರಾಗಿದ್ದಾರೆ.