ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ/ಚಾಮರಾಜನಗರ
ಕೇರಳದ ವಯನಾಡಿನಲ್ಲಿ ಸಂಭವಿಸಿದ ಘೋರ ಗುಡ್ಡ ಕುಸಿತ ದುರಂತ, ಪ್ರವಾಹ ಪ್ರಕರಣದಲ್ಲಿ ಕರ್ನಾಟಕದ ಇಬ್ಬರು ಮೃತಪಟ್ಟಿದ್ದು, ಎರಡೂವರೆ ವರ್ಷದ ಬಾಲಕ ಸೇರಿ ನಾಲ್ವರು ನಾಪತ್ತೆಯಾಗಿದ್ದಾರೆ. ನಾಪತ್ತೆಯಾದವರು ಬಹುತೇಕ ದುರಂತ ನಡೆದ ಸ್ಥಳದಲ್ಲಿ ಮಣ್ಣಿನಡಿ ಸಿಲುಕಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.ಚಾಮರಾಜನಗರ ಜಿಲ್ಲೆಯ ಪುಟ್ಟಸಿದ್ದಶೆಟ್ಟಿ (62), ರಾಣಿ ಮದರ್ (50 ) ಮೃತಪಟ್ಟವರು. ಇವರ ಮೃತದೇಹ ಪತ್ತೆಯಾಗಿದ್ದು, ನಾಪತ್ತೆಯಾಗಿರುವ ಚಾಮರಾಜನಗರ ತಾಲೂಕಿನ ರಾಜನ್ (50) ಮತ್ತು ರಜನಿ (45) ಅವರಿಗಾಗಿ ಹುಡುಕಾಟ ಮುಂದುವರಿದಿದೆ. ಇನ್ನು ಗುಂಡ್ಲುಪೇಟೆ ತಾಲೂಕಿನ ತ್ರಿಯಾಂಬಕಪುರದ ಸ್ವಾಮಿ ಶೆಟ್ಟಿ ಎಂಬವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರೆಲ್ಲ ವೈನಾಡು ಜಿಲ್ಲೆಯ ಮೆಪ್ಪಾಡಿ ಪ್ರದೇಶದಲ್ಲಿ ವಾಸಿಸುತ್ತಿದ್ದರು ಎಂದು ಮಾಹಿತಿ ಸಿಕ್ಕಿದೆ.
ಮಂಡ್ಯದ ಇಬ್ಬರು ನಾಪತ್ತೆ:ವಯನಾಡಿನ ಮುಂಡಕೈನಲ್ಲಿ ನೆಲೆಸಿದ್ದ ಮಂಡ್ಯ ಜಿಲ್ಲೆಯ ಝಾನ್ಸಿರಾಣಿ ಮತ್ತು ಅನಿಲ್ ಕುಮಾರ್ ದಂಪತಿಯ ಕುಟುಂಬದ ಇಬ್ಬರು ಸದಸ್ಯರೂ ನಾಪತ್ತೆಯಾಗಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಝಾನ್ಸಿ ರಾಣಿ ಅವರ ಪುತ್ರ ನಿಹಾಲ್ (2.5), ಅತ್ತೆ ಲೀಲಾವತಿ (55) ನಾಪತ್ತೆಯಾದವರು. ಝಾನ್ಸಿ ರಾಣಿ, ಅವರ ಪತಿ ಅನಿಲ್ ಕುಮಾರ್, ಮಾವ ದೇವರಾಜು ಗಂಭೀರವಾಗಿ ಗಾಯಗೊಂಡು ಸಾವು-ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾರೆ.
ಮೈಸೂರಿನ ಸರಗೂರು ಮೂಲದ ಆದರೆ ಇದೀಗ ಕೇರಳದ ಮುಂಡಕೈನ ಟೀ ಎಸ್ಟೇಟ್‌ನಲ್ಲಿ ಕೆಲಸ ಮಾಡುತ್ತಿರುವ ಅನಿಲ್ ಕುಮಾರ್ ಎಂಬುವವರಿಗೆ ಕೆ.ಆರ್.ಪೇಟೆ ತಾಲೂಕಿನ ಝಾನ್ಸಿರಾಣಿ ಅವರನ್ನು ಮದುವೆ ಮಾಡಿಕೊಡಲಾಗಿತ್ತು. ಗುಡ್ಡಕುಸಿತ ದುರಂತದಲ್ಲಿ ಅನಿಲ್ ತಾಯಿ ಲೀಲಾವತಿ, ಪುತ್ರ ನಿಹಾಲ್ ಮಣ್ಣಿನಡಿ ಸಿಲುಕಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಗಾಯಗೊಂಡವರಿಗೆ ಅಲ್ಲಿನ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ಸ್ಥಳದಲ್ಲಿ ಗುಂಡ್ಲುಪೇಟೆ ತಹಸೀಲ್ದಾರ್:
ದುರಂತ ಸ್ಥಳದಲ್ಲಿ ಕನ್ನಡಿಗರೂ ವಾಸಿಸುತ್ತಿರುವ ಹಿನ್ನೆಲೆಯಲ್ಲಿ ಮೃತಪಟ್ಟವರ ಮಾಹಿತಿ ಸಿಗುತ್ತಿಲ್ಲ ಎಂಬ ಕಾರಣಕ್ಕೆ ಗುಂಡ್ಲುಪೇಟೆ ತಹಸೀಲ್ದಾರ್ ಟಿ.ರಮೇಶ್ ಬಾಬು ನೇತೃತ್ವದ ತಂಡವೊಂದು ಕೇರಳದ ಮೆಪ್ಪಾಡಿಗೆ ತೆರಳಿದೆ. ನಾಪತ್ತೆಯಾಗಿರುವವರ ಮಾಹಿತಿ ಕಲೆಹಾಕುವ ಪ್ರಯತ್ನ ನಡೆಸುತ್ತಿದೆ.ಬೆಂಗಳೂರಿನಿಂದ ಹೋಗಿದ್ದ ಇಬ್ಬರು ಪ್ರವಾಸಿಗರು ಕಣ್ಮರೆ
ಉತ್ತರ ಭಾರತದಿಂದ ಬೆಂಗಳೂರಿಗೆ ಬಂದು ಅಲ್ಲಿಂದ ವಯನಾಡ್‌ಗೆ ಪ್ರಯಾಣಿಸಿದ ನಾಲ್ವರು ಪ್ರವಾಸಿಗರು ಹಾಗೂ ಬೆಂಗಳೂರಿನ ಒಬ್ಬ ಚಾಲಕ ಪ್ರವಾಹದಲ್ಲಿ ಸಿಲುಕಿದ್ದರೂ ಈ ಪೈಕಿ ಇಬ್ಬರು ಪ್ರವಾಸಿಗರು ಹಾಗೂ ಅವರನ್ನು ಕರೆದುಕೊಂಡು ಹೋದ ಬೆಂಗಳೂರು ಚಾಲಕ ಸುರಕ್ಷಿತವಾಗಿದ್ದಾರೆ. ಮತ್ತಿಬ್ಬರು ಪ್ರವಾಸಿಗರು ನಾಪತ್ತೆಯಾಗಿದ್ದಾರೆ ಎಂದು ಬೆಂಗಳೂರು ಮೂಲದ ಪ್ಲಸ್ ಕ್ಯಾಬ್ ಏಜೆನ್ಸಿಯ ಸಚಿನ್ ಗೌಡ ಹೇಳಿದ್ದಾರೆ.