ಕನ್ನಡಪ್ರಭ ವಾರ್ತೆ ದಾವಣಗೆರೆ
ಸ್ವಾಮೀಜಿಗಳ ಪೂರ್ವಾಶ್ರಮದ ಹೆತ್ತವರು, ಕುಟುಂಬಕ್ಕೆ ಇನ್ನು ನಾವೆಲ್ಲಾ ಆಸರೆಯಾಗಿ ಇರುತ್ತೇವೆ ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ಭರವಸೆ ನೀಡಿದ್ದಾರೆ.ನಗರದ ಯರಗುಂಟೆಯಲ್ಲಿ ಹೊಸದುರ್ಗದ ಕುಂಚಿಟಿಗ ಮಠದ ಶಾಂತವೀರ ಸ್ವಾಮೀಜಿಯವರು ತಮ್ಮ ಬಾಲ್ಯ ಸ್ನೇಹಿತರಾದ ಇಮ್ಮಡಿ ಸಿದ್ಧರಾಮೇಶ್ವರ ಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿಯ ಪೂರ್ವಾಶ್ರಮದ ಹೆತ್ತವರಾದ ಹನುಮಂತಪ್ಪ-ಸರೋಜಮ್ಮ ದಂಪತಿಗೆ ಕಟ್ಟಿಸಿಕೊಟ್ಟ ‘ಸಿದ್ಧರಾಮ ಕುಟೀರ’ ಮನೆ ಹಸ್ತಾಂತರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಇಂತಹದ್ದೊಂದು ಕಾರ್ಯಕ್ರಮ ಖುಷಿ ನೀಡಿದರೂ, ಮತ್ತೊಂದು ಕಡೆ ನಮಗೆ ಮುಜುಗರಕ್ಕೆ ತಳ್ಳಿದಂತಿದೆ. ನಿಮ್ಮ ಸ್ವಾಮೀಜಿಯ ಪೂರ್ವಾಶ್ರಮದ ಹೆತ್ತವರಿಗೆ ಮನೆ ಕಟ್ಟುವ ಸಾಮರ್ಥ್ಯ ನಿಮ್ಮ ಸಮಾಜಕ್ಕೆ ಇಲ್ಲವೇ ಎಂಬುದಾಗಿ ಕೇಳಿದಂತಿದೆ. ಮುಂದೆ ಯಾರ ಮನೆ ಕಟ್ಟುತ್ತೀರೋ ಆ ಜವಾಬ್ದಾರಿ ನಿಮ್ಮದಲ್ಲ. ನಿಮ್ಮ ಸಮಸಮಾಜ ಕಟ್ಟುವ ಕೆಲಸಕ್ಕೆ ಚ್ಯುತಿ ಬರಬಾರದು ಎಂದರು.ಇನ್ನು ಮುಂದೆ ಯಾವುದೇ ಸ್ವಾಮೀಜಿಗಳ ಪೂರ್ವಾಶ್ರಮದ ಹೆತ್ತವರು, ಕುಟುಂಬ ವರ್ಗ ತೊಂದರೆಯಲ್ಲಿದ್ದರೆ ನಮಗೆ ಹೇಳಿ. ನಾನೇ ಈ ಬಗ್ಗೆ ನೇತೃತ್ವ ವಹಿಸುತ್ತೇನೆ. ಎಲ್ಲ ಸಮುದಾಯಗಳ ಮುಖಂಡರ ಬಳಗ ಕಟ್ಟಿಕೊಂಡು, ಅಂತಹ ಸ್ವಾಮೀಜಿಗಳ ಪೂರ್ವಾಶ್ರಮದವರಿಗೆ ಸೂರು ಕಲ್ಪಿಸುವ ಕೆಲಸದ ಹೊಣೆ ಹೊರುತ್ತೇನೆ. ಯಾವುದಾದರೂ ಸ್ವಾಮೀಜಿಗಳ ಪೂರ್ವಾಶ್ರಮದವರಿಗೆ ಸಮಸ್ಯೆ ಇದ್ದರೆ ನಮಗೆ ಹೇಳಿ, ನಾವೇ ನೋಡಿಕೊಳ್ಳುತ್ತೇವೆ ಎಂದು ಘೋಷಿಸಿದರು.
ಸ್ವಾಮೀಜಿಗಳ ಪೂರ್ವಾಶ್ರಮದ ಪಾಲಕರ ಸಮಸ್ಯೆಗಳನ್ನು ಮಠಾಧೀಶರು ತೆಗೆದುಕೊಳ್ಳುವುದು ಬೇಡ. ನಾವು ಅದನ್ನು ಮಾಡುತ್ತೇವೆ. ಆರೋಗ್ಯ ಸಮಸ್ಯೆ, ಮನೆ ಸಮಸ್ಯೆ ಇರುವರನ್ನು ನೋಡಿಕೊಳ್ಳಲು ನಾವು ಸಿದ್ಧರಿದ್ದೇವೆ. ಇದಕ್ಕಾಗಿ ಸಮಿತಿಯೊಂದನ್ನು ಮಾಡಿ. ಹೊಳಲ್ಕೆರೆ ತಾ.ತಾಳಿಕಟ್ಟೆಯಲ್ಲಿ ಈಶ್ವರಾನಂದಪುರಿ ಸ್ವಾಮೀಜಿ ಪೂರ್ವಾಶ್ರಮದ ಪಾಲಕರ ಮನೆ ಕಟ್ಟುವ ಜವಾಬ್ದಾರಿ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.
ಮತಾಂತರ ಆದವರನ್ನು ವಾಪಸ್ ಹಿಂದೂ ಧರ್ಮಕ್ಕೆ ಕರೆ ತರುವ ಕೆಲಸವನ್ನು ಪೇಜಾವರ ಸ್ವಾಮೀಜಿ ಮಾಡಿದ್ದರು. ಯಾರು ಯಾರು, ಯಾವ್ಯಾವ ಧರ್ಮಗಳಿಗೆ ಮತಾಂತರ ಆಗಿದ್ದಾರೋ ಅಂತಹವರನ್ನು ವಾಪಸ್ ಮಾತೃಧರ್ಮ, ಹಿಂದೂ ಧರ್ಮಕ್ಕೆ ಕರೆ ತರುವ ಕೆಲಸವಾಗಲಿ. ಬೇರೆ ಧರ್ಮದವರಿಂದ ಹಿಂದೂ ಧರ್ಮಕ್ಕೆ ಸಮಸ್ಯೆ ಇಲ್ಲ. ನಮ್ಮ ಧರ್ಮದಲ್ಲೇ ಇರುವಂತಹ ಮನಸ್ಥಿತಿಯಿಂದಾಗಿ ಸಮಸ್ಯೆಗಳಿವೆ. ಅದೆಲ್ಲವನ್ನೂ ನಿವಾರಿಸೋಣ ಎಂದು ಅವರು ಹೇಳಿದರು.
ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಕಾವಿ ಕುಲವು ಒಂದಾಗದಿದ್ದರೆ ಆಪತ್ತು ಕಟ್ಟಿಟ್ಟ ಬುತ್ತಿ. ಕಾವಿ ಕುಲವು ಒಂದಾಗಬೇಕಾದ ಅನಿವಾರ್ಯತೆ ಹಿಂದೆಂದಿಗಿಂತ ಇಂದು ಹೆಚ್ಚಾಗಿದೆ ಎಂದು ಸೂಚ್ಯವಾಗಿ ಎಚ್ಚರಿಸಿದರು.ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ ರವಿ ಹೆಗಡೆ ಮಾತನಾಡಿ, ಸ್ವಾಮೀಜಿಗಳ ಪೂರ್ವಾಶ್ರಮದ ಹೆತ್ತವರಿಗೆ ಸಮಾಜ ಸ್ಪಂದಿಸಬೇಕು. ಕುಂಚಿಟಿಗ ಸಮಾಜದ ಸ್ವಾಮೀಜಿಗಳು ಭೋವಿ ಪೀಠದ ಶ್ರೀಗಳ ಪೂರ್ವಾಶ್ರಮದ ಹೆತ್ತವರಿಗೆ ಮನೆ ಕಟ್ಟಿ ಕೊಡುವ ಮೂಲಕ ಸಮಾಜಕ್ಕೆ ಮಹತ್ತರ ಸಂದೇಶ ನೀಡಿದ್ದಾರೆ. ಆ ಮೂಲಕ ಬೌದ್ಧ ಪೌರ್ಣಿಮೆ, ಕಾರ್ಮಿಕರ ದಿನವನ್ನು ಮತ್ತಷ್ಟು ವಿಶೇಷ ದಿನವಾಗಿಸಿದ್ದಾರೆ ಎಂದು ಬಣ್ಣಿಸಿದರು.ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಇದ್ದರು.