ಪೂರ್ವ ಜನ್ಮದ ಪುಣ್ಯದ ಫಲವಾಗಿ ನಾವೆಲ್ಲರೂ ಈ ಜನ್ಮದಲ್ಲಿ ಹಿಂದೂ, ಧರ್ಮದಲ್ಲಿ ಅದರಲ್ಲಿಯೂ ಬಂಟರ್ ಸಮಾಜದಲ್ಲಿ ಜನಿಸಿರುವುದು ನಮ್ಮೆಲ್ಲರ ಸೌಭಾಗ್ಯವಾಗಿದೆ ಎಂದು ಮೂಡಬಿದ್ರಿ ಆಳ್ವಾಸ್ ಫೌಂಡೇಶನ್ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಶ್ಲಾಘಿಸಿದರು.
ಹುಬ್ಬಳ್ಳಿ: ಪೂರ್ವ ಜನ್ಮದ ಪುಣ್ಯದ ಫಲವಾಗಿ ನಾವೆಲ್ಲರೂ ಈ ಜನ್ಮದಲ್ಲಿ ಹಿಂದೂ, ಧರ್ಮದಲ್ಲಿ ಅದರಲ್ಲಿಯೂ ಬಂಟರ್ ಸಮಾಜದಲ್ಲಿ ಜನಿಸಿರುವುದು ನಮ್ಮೆಲ್ಲರ ಸೌಭಾಗ್ಯವಾಗಿದೆ ಎಂದು ಮೂಡಬಿದ್ರಿ ಆಳ್ವಾಸ್ ಫೌಂಡೇಶನ್ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಶ್ಲಾಘಿಸಿದರು.
ನಗರದ ಖಾಸಗಿ ಹೊಟೇಲ್ ಸಭಾಭದಲ್ಲಿ ಭಾನುವಾರ ಸಂಜೆ ನಡೆದ ಹು-ಧಾ ಬಂಟರ ಸಂಘದ ಸುವರ್ಣ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಡಾ. ಆರ್.ಎನ್. ಶೆಟ್ಟಿ ಸ್ಮಾರಕ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.ನಮ್ಮದೇಯಾದ ಜೀವನ ಪದ್ಧತಿ, ನಮ್ಮದೇಯಾದ ಸಮಾಜದ ಪರಿಕಲ್ಪನೆ, ವಿಶಾಲವಾದ ಮನೋಧರ್ಮ ಹಾಗೂ ಧಾರ್ಮಿಕ ಆಚರಣೆ ಹೊಂದಿರುವ ಬಂಟರ ಸಮಾಜ ಇತರ ಸಮಾಜಕ್ಕೆ ಮಾದರಿಯಾಗಿದೆ ಎಂದು ಹೇಳಲು ಹೆಮ್ಮೆ ಅನಿಸುತ್ತದೆ ಎಂದರು.
ವಿಪ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಬಂಟರ ಸಂಘವನ್ನು ಸುದೀರ್ಘ 50 ವರ್ಷಗಳ ಕಾಲ ಉತ್ತಮ ರೀತಿಯಲ್ಲಿ ಮುನ್ನಡೆಸಿಕೊಂಡು ಬರುತ್ತಿರುವ ಸಮಾಜದ ಹಿರಿಯರ ಕಾರ್ಯ ಶ್ಲಾಘನೀಯ. ಹು-ಧಾ ಅವಳಿ ನಗರದಲ್ಲಿ ಬಂಟರ ಸಮಾಜ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಬೆಳೆಯಲು ದಿ. ಆರ್.ಎನ್. ಶೆಟ್ಟಿ ಅವರ ಪರಿಶ್ರಮ ಅಪಾರವಾಗಿದ್ದು, ಅವರ ಮಾರ್ಗದಲ್ಲಿ ಸಮಾಜ ನಡೆಯುವಂತಾಗಲಿ ಎಂದರು.ಕಾಪು ಶಾಸಕ ಸುರೇಶ ಶೆಟ್ಟಿ ಗುರ್ಮೆ, ಎಂ.ಜಿ.ಆರ್. ಗ್ರುಪ್ ಚೇರ್‌ಮನ್ ಡಾ. ಕೆ. ಪ್ರಕಾಶ ಶೆಟ್ಟಿ ಮಾತನಾಡಿದರು. ಅದಕ್ಕೂ ಮುನ್ನ ಆಳ್ವಾಸ್ ಫೌಂಡೇಶನ್ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ, ಎಂ.ಜಿ.ಆರ್. ಗ್ರುಪ್ ಚೇರ್‌ಮನ್ ಡಾ. ಕೆ. ಪ್ರಕಾಶ ಶೆಟ್ಟಿ, ಉದ್ಯಮಿ ಸೀತಾರಾಮ ಶೆಟ್ಟಿ ಅವರಿಗೆ ಡಾ. ಆರ್.ಎನ್. ಶೆಟ್ಟಿ ಸ್ಮಾರಕ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಹು-ಧಾ ಬಂಟರ ಸಂಘದ ಅಧ್ಯಕ್ಷ ವಿಜಯಾನಂದ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ವಿಪ ಸದಸ್ಯೆ ಭಾರತಿ ಶೆಟ್ಟಿ, ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಪ್ರದೀಪ ಟಿ. ಪಕ್ಕಳ, ಹರ್ಷಕುಮಾರ ಶೆಟ್ಟಿ, ರತ್ನಾಕರ ಎಂ. ಶೆಟ್ಟಿ, ಸುಗ್ಗಿ ಸುಧಾಕರ ಶೆಟ್ಟಿ, ಮಹೇಶ ಶೆಟ್ಟಿ ಸೇರಿದಂತೆ ಎಲ್ಲ ಪದಾಧಿಕಾರಿಗಳು ಹಾಗೂ ಸದಸ್ಯರು ಪಾಲ್ಗೊಂಡಿದ್ದರು.