ನಾವೆಲ್ಲರೂ ಕೂಡಾ ಕೇವಲ ಆಚರಣೆಗಳಲ್ಲಿ ಕಾಲ ಕಳೆಯುತ್ತಿದ್ದೇವೆ. ರೈತನು ಇಂದಿನ ಪರಿಸ್ಥಿತಿಯಲ್ಲಿ ಇರುವ ಭೂಮಿಯನ್ನು ಕಳೆದುಕೊಂಡರೆ ಮತ್ತೆ ಭೂ ಮಾಲೀಕನಾಗಲು ಸಾಧ್ಯವಿಲ್ಲ. ಆದ್ದರಿಂದ ಯಾರೊಬ್ಬರು ಕೂಡಾ ಇರುವ ನಿಮ್ಮ ಪೂರ್ವಿಕರ ಜಮೀನನ್ನು ಮಾರಾಟ ಮಾಡದೆ ಉಳಿಸಿಕೊಂಡು ಕೃಷಿ ಬದುಕಿಗೆ ಅರ್ಥವನ್ನು ಕೊಡಿ.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ರೈತರ ಆತ್ಮವಿಶ್ವಾಸದ ಸೆಲೆ ಬತ್ತಿ ಹೋಗಿದೆ. ಕೃಷಿ ಮಾಡುವ ಗಂಡು ಮಕ್ಕಳಿಗೆ ಕೃಷಿಕರೇ ಹೆಣ್ಣು ಕೊಡದ ಇಂದಿನ ಸ್ಥಿತಿಗೆ ನಾವೆಲ್ಲರೂ ಹೊಣೆ ಎಂದು ರಾಜ್ಯ ರೈತಸಂಘದ ಮಹಿಳಾ ಘಟಕದ ಅಧ್ಯಕ್ಷೆ ನಂದಿನಿ ಜಯರಾಂ ಅಭಿಪ್ರಾಯಪಟ್ಟರು.ತಾಲೂಕಿನ ಲಕ್ಷ್ಮೀಪುರ ಗ್ರಾಮದಲ್ಲಿ ಕೃಷಿಕ ಸಮಾಜ ಹಾಗೂ ಆಕಾಶವಾಣಿ ಮೈಸೂರು ಸಹಯೋಗದಲ್ಲಿ ಆಯೋಜಿಸಿದ್ದ ರೈತ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿ, ಯಾವುದೇ ಒಂದು ಕೃಷಿ ಕುಟುಂಬ ರೈತ ಮಹಿಳೆ ಇಲ್ಲದೆ ತನ್ನ ಸಂಪೂರ್ಣ ಕೃಷಿ ಬದುಕನ್ನು ನಡೆಸಲು ಸಾಧ್ಯವಿಲ್ಲ. ಕೃಷಿಯ ಬೆನ್ನೆಲುಬು ಮಹಿಳೆಯು ಇದ್ದಾರೆ ಎಂದರು.
ಕೃಷಿಕರೇ ಆಗಿರುವ ಕುಟುಂಬದವರು ಕೂಡಾ ಒಬ್ಬ ವಿದ್ಯಾವಂತ ರೈತ ಮಗನಿಗೆ ತಮ್ಮ ಮಗಳನ್ನು ಮದುವೆ ಮಾಡಿಕೊಡುವುದಿಲ್ಲ ಎಂದರೆ ನಾವೆಲ್ಲಾ ಎಂತಹ ಸಂದಿಗ್ಧತೆಯಲ್ಲಿದ್ದೇವೆ ಎಂದು ಅರ್ಥಮಾಡಿಕೊಳ್ಳಬೇಕು. ಇಂತಹ ದಿನಗಳಲ್ಲಿ ನಾವು ಅತ್ಮಕ್ಕೆ ವಂಚನೆ ಮಾಡಿಕೊಂಡು ಸಂಭ್ರಮ ಪಡುವ ಪರಿಸ್ಥಿತಿಯಲ್ಲಿ ನಾವಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ನಾವೆಲ್ಲರೂ ಕೂಡಾ ಕೇವಲ ಆಚರಣೆಗಳಲ್ಲಿ ಕಾಲ ಕಳೆಯುತ್ತಿದ್ದೇವೆ. ರೈತನು ಇಂದಿನ ಪರಿಸ್ಥಿತಿಯಲ್ಲಿ ಇರುವ ಭೂಮಿಯನ್ನು ಕಳೆದುಕೊಂಡರೆ ಮತ್ತೆ ಭೂ ಮಾಲೀಕನಾಗಲು ಸಾಧ್ಯವಿಲ್ಲ. ಆದ್ದರಿಂದ ಯಾರೊಬ್ಬರು ಕೂಡಾ ಇರುವ ನಿಮ್ಮ ಪೂರ್ವಿಕರ ಜಮೀನನ್ನು ಮಾರಾಟ ಮಾಡದೆ ಉಳಿಸಿಕೊಂಡು ಕೃಷಿ ಬದುಕಿಗೆ ಅರ್ಥವನ್ನು ಕೊಡಿ ಎಂದು ಕಿವಿಮಾತು ಹೇಳಿದರು.
ಮಂಡ್ಯ ಜಿಲ್ಲಾ ಸಂಪೂರ್ಣ ಸಾವಯವ ಕೃಷಿ ಉತ್ಪಾದಕರ ಸಂಘದ ಅಧ್ಯಕ್ಷ ಮಳವಳ್ಳಿ ಮಹೇಶ್ ಮಾತನಾಡಿ, ಈ ದೇಶದಲ್ಲಿ ಅತ್ಯಂತ ಹೆಚ್ಚು ಅಪಾಯಕಾರಿ ಜೀವನವನ್ನು ನಡೆಸುತ್ತಿರುವವರು ರೈತರು. ನಮ್ಮ ಪೂರ್ವಿಕರು ಯಾವುದೇ ರೀತಿಯ ಸವಾಲುಗಳನ್ನಾದರು ಕೂಡಾ ಎದುರಿಸುತ್ತಿದ್ದರು. ಇದಕ್ಕೆ ಕಾರಣ ವಿಷಮುಕ್ತ ಆಹಾರ ಬೆಳೆಯುತ್ತಿದ್ದರು. ನಮ್ಮ ನಡುವೆ ಇಂದು ಸಾವಿರಾರು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆದರೆ, ಇವರಲ್ಲಿ ಒಬ್ಬನೆ ಒಬ್ಬ ಸಾವಯವ ಕೃಷಿಕ ಆತ್ಮಹತ್ಯೆ ಮಾಡಿಕೊಂಡಿಲ್ಲ. ಇದನ್ನು ನಾವೆಲ್ಲರೂ ಆರ್ಥಮಾಡಿಕೊಳ್ಳಬೇಕು ಎಂದರು.ಪ್ರತಿ ನಿಮಿಷಕ್ಕೊಬ್ಬ ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೂ ಪಂಚೇಂದ್ರೀಯಗಳೇ ಇಲ್ಲದ ದಪ್ಪ ಚರ್ಮದ ಈ ಸರಕಾರಗಳಿಗೆ ರೈತರ ಕಷ್ಟ ಅರ್ಥವಾಗುತ್ತಿಲ್ಲ. ವಿಶ್ವಕ್ಕೆ ಅನ್ನ ಕೊಡುವ ರೈತನ ದಿನಾಚರಣೆಯನ್ನು ಸರಕಾರಗಳು ರಾಷ್ಟ್ರೀಯ ಹಬ್ಬವನ್ನಾಗಿ ಆಚರಣೆ ಮಾಡಬೇಕು ಎಂದು ಅಭಿಪ್ರಾಯಪಟ್ಟರು.
ದಿವ್ಯ ಸಾನಿಧ್ಯ ವಹಿಸಿದ್ದ ಬೆಂಗಳೂರಿನ ಕೆಂಗೇರಿ ವಿಶ್ವ ಒಕ್ಕಲಿಗರ ಮಠದ ಪೀಠಾಧ್ಯಕ್ಷ ನಿಶ್ಚಲಾನಂದನಾಥ ಸ್ವಾಮೀಜಿ ಮಾತನಾಡಿ, ಸರಕಾರಗಳ ರೈತ ವಿರೋಧಿ ನೀತಿಗಳಿಂದ ಮುಂದಿನ ತಲೆ ಮಾರಿಗೆ ರೈತ ವರ್ಗವನ್ನು ಹುಡುಕುವಂತಹ ಸ್ಥಿತಿ ನಿರ್ಮಾಣವಾಗುತ್ತಿದೆ ಎಂದರು.ಕೃಷಿಗೆ ಸಾಕಷ್ಟು ಅನುದಾನ ಕೊಡಲಾಗುತ್ತಿದೆ. ಆದರೆ, ಆ ಅನುದಾನ ಎಲ್ಲಿ ಹೋಗುತ್ತಿದೆ ಎಂಬುದನ್ನು ಹುಡುಕಬೇಕಾಗಿದೆ. ಇಂದು ಬಂಡವಾಳಶಾಹಿಗಳು ರೈತನಾಗುವ ಯುವ ಪೀಳಿಗೆಯನ್ನು ಟೀಕಿಸುತ್ತಿದ್ದಾರೆ. ಇದರಿಂದ ಹೆಣ್ಣು ಕೊಡಲು ಯಾರು ಮುಂದೆ ಬರುತ್ತಿಲ್ಲ. ಇದನ್ನು ಅರ್ಥಮಾಡಿಕೊಂಡು ಮುಂದಿನ ದಿನಗಳಲ್ಲಿ ಜಾಗೃತಿ ಮೂಡಿಸಲು ಸಂಕಲ್ಪ ಮಾಡಿದ್ದೇವೆ ಎಂದರು.
ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಮರುವನಹಳ್ಳಿ ಶಂಕರ್ ಮಾತನಾಡಿ, ಸರ್ಕಾರ ಕೃಷಿ ಪಂಪಸೆಟ್ ಖಾಸಗೀಕರಣ ಕೈ ಬಿಡಬೇಕು. ಅಕ್ರಮ ಸಕ್ರಮ ಮತ್ತೆ ಜಾರಿಗೆ ತರಬೇಕು. ಗ್ರಾಪಂ ಮಟ್ಟದಲ್ಲಿ ವರ್ಷಪೂರ್ತಿ ಭತ್ತ, ರಾಗಿ, ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯಬೇಕು. ಎಂಎಸ್‌ಪಿ ಅಡಿಯಲ್ಲಿ ಬೆಂಬಲ ಬೆಲೆ ಘೋಷಿಸಬೇಕು. ಸ್ಮಾರ್ಟ್ ಮೀಟರ್ ಯೋಜನೆ ಕೈ ಬಿಡಬೇಕು. ಎಪಿಎಂಸಿ ಕಾಯಿದೆ ತಿದ್ದುಪಡಿ ರದ್ದಾಗಬೇಕು ಆಗ್ರಹಿಸಿದರು.ಮೈಸೂರು ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕ ಕೇಶವಮೂರ್ತಿ ರೈತರೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಕೃಷಿಕ ಸಮಾಜದ ಅಧ್ಯಕ್ಷ ನಾಟನಹಳ್ಳಿ ಗಂಗಾಧರ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಆರ್‌ಟಿಓ ನೌಕರರ ಸಂಘದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ್, ತಾಪಂ ಮಾಜಿ ಸದಸ್ಯರಾದ ಜಾನಕಿರಾಂ, ಹೆತ್ತಗೋನಹಳ್ಳಿ ನಾರಾಯಣಗೌಡ, ಟಿಎಪಿಸಿಎಂಎಸ್ ನಿರ್ದೇಶಕ ಎಸ್.ಎಲ್.ಮೋಹನ್, ಪಿಎಲ್‌ಡಿ ಬ್ಯಾಂಕ್ ಮಾಜಿ ನಿರ್ದೇಶಕ ರಘು, ಕರವೇ ಜಿಲ್ಲಾಧ್ಯಕ್ಷ ಹೊನ್ನೇನಹಳ್ಳಿ ವೇಣು, ಪದವೀಧರ ಘಟಕದ ಅಧ್ಯಕ್ಷ ಚಿಕ್ಕೋನಹಳ್ಳಿ ಚೇತನ್, ಪ್ರಗತಿಪರ ಮಹಿಳಾ ರೈತ ಮುಖಂಡರಾದ ಪ್ರಮೀಳಾ ವರದರಾಜೇಗೌಡ, ತಾಲೂಕು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ್ ಸೇರಿದಂತೆ ಸಾವಿರಾರು ರೈತರು ಉಪಸ್ಥಿತರಿದ್ದರು.