ನೀವಷ್ಟೇ ರಾಮಭಕ್ತರಾ? ನಾವು ಅಲ್ವಾ?: ಕೇಸರಿ ಶಾಲಿನ ಶಾಸಕರಿಗೆ ಸಿದ್ದು ಪ್ರಶ್ನೆ

| Published : Feb 13 2024, 12:47 AM IST

ನೀವಷ್ಟೇ ರಾಮಭಕ್ತರಾ? ನಾವು ಅಲ್ವಾ?: ಕೇಸರಿ ಶಾಲಿನ ಶಾಸಕರಿಗೆ ಸಿದ್ದು ಪ್ರಶ್ನೆ
Share this Article
  • FB
  • TW
  • Linkdin
  • Email

ಸಾರಾಂಶ

ಬಜೆಟ್‌ ಅಧಿವೇಶನದ ಮೊದಲ ದಿನ ಸೋಮವಾರ ಕೇಸರಿ ಶಾಲು ಧರಿಸಿ ವಿಧಾನಸೌಧಕ್ಕೆ ಆಗಮಿಸಿದ ಬಿಜೆಪಿ ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜೈ ಶ್ರೀರಾಮ್‌ ಎಂದು ನಮಸ್ಕರಿಸಿದ್ದು ಗಮನ ಸೆಳೆಯಿತು.

ಕನ್ನಡಪ್ರಭ ವಾರ್ತೆ ಬೆಂಗಳೂರು ಬಜೆಟ್‌ ಅಧಿವೇಶನದ ಮೊದಲ ದಿನ ಸೋಮವಾರ ಕೇಸರಿ ಶಾಲು ಧರಿಸಿ ವಿಧಾನಸೌಧಕ್ಕೆ ಆಗಮಿಸಿದ ಬಿಜೆಪಿ ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜೈ ಶ್ರೀರಾಮ್‌ ಎಂದು ನಮಸ್ಕರಿಸಿದ್ದು ಗಮನ ಸೆಳೆಯಿತು. ಸದನಕ್ಕೆ ಪ್ರವೇಶಿಸುವ ಮುನ್ನ ಮೊಗಸಾಲೆಯ ಬಳಿ ಮುಖ್ಯಮಂತ್ರಿ ಅವರಿಗೆ ಎದುರಾದ ಶಾಸಕ ದೊಡ್ಡನಗೌಡ ಪಾಟೀಲ, ವಿಧಾನ ಪರಿಷತ್‌ ಸದಸ್ಯರಾದ ಎಸ್‌.ವಿ.ಸಂಕನೂರ, ಪಿ.ಎಚ್‌.ಪೂಜಾರ್‌ ಮತ್ತಿತರ ಬಿಜೆಪಿ ಶಾಸಕರು ಜೈ ಶ್ರೀರಾಮ್‌ ಜೈ ಶ್ರೀರಾಮ್‌ ಎಂದು ನಮಸ್ಕರಿಸಿದರು. ಈ ವೇಳೆ ಮುಖ್ಯಮಂತ್ರಿಗಳು ಯಾಕೆ ಕೇಸರಿ ಶಾಲು ಹಾಕಿದ್ದೀರಿ ಎಂದು ಪ್ರಶ್ನಿಸಿದರು. ಇದಕ್ಕೆ ನಾವು ರಾಮಭಕ್ತರು ಸರ್‌ ಎಂದು ಶಾಸಕರು ಉತ್ತರಿಸಿದರು. ಆಗ ಮುಖ್ಯಮಂತ್ರಿಗಳು ನೀವು ಮಾತ್ರ ರಾಮ ಭಕ್ತರು, ನಾವು ಅಲ್ವಾ ಎಂದರು? ಮತ್ತೆ ಶಾಸಕರು ನಿಮ್ಮ ಬಾಯಲ್ಲೂ ಅದೇ (ಜೈ ಶ್ರೀರಾಮ್‌) ಬರಲಿ ಎಂದು ನಾವು ಆಶಿಸುತ್ತೇವೆ ಎಂದಾಗ ಮುಖ್ಯಮಂತ್ರಿ ಅವರು ‘ನೀವು ತೋರಿಸಿಕೊಳ್ಳುತ್ತೀರಿ, ನಾವು ತೋರಿಸಿಕೊಳ್ಳುವುದಿಲ್ಲ ಅಷ್ಟೆ ವ್ಯತ್ಯಾಸ’ ಎಂದರು.

ರಾಜ್ಯಪಾಲರನ್ನು ಬೀಳ್ಕೊಡುವಾಗ ಮುಗ್ಗರಿಸಿದ ಸಿಎಂ:ಜಂಟಿ ಅಧಿವೇಶನವನ್ನುದ್ದೇಶಿಸಿ ಭಾಷಣ ಮಾಡಿದ ಬಳಿಕ ಸದನದಿಂದ ನಿರ್ಗಮಿಸಿದ ರಾಜ್ಯಪಾಲರನ್ನು ಬೀಳ್ಕೊಡಲು ಬಂದ ಮುಖ್ಯಮಂತ್ರಿಗಳು ವಿಧಾನಸೌಧದ ಮುಂಭಾಗದ ಮೆಟ್ಟಿಲುಗಳನ್ನು ಇಳಿಯುವಾಗ ಕೊಂಚ ಮುಗ್ಗರಿಸಿದ ಪ್ರಸಂಗ ನಡೆಯಿತು. ಈ ವೇಳೆ ರಾಜ್ಯಪಾಲರ ಗನ್‌ಮ್ಯಾನ್‌ ಸಿದ್ದರಾಮಯ್ಯ ಅವರನ್ನು ತಡೆದು ಅವರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಂಡರು. ಮೆಟ್ಟಿಲು ಇಳಿಯುವಾಗ ಕೊಂಚ ಆಯ ತಪ್ಪಿದ ಅವರು ಪಕ್ಕದಲ್ಲಿದ್ದ ಸಚಿವ ಎಚ್‌.ಕೆ.ಪಾಟೀಲ್‌ ಅವರ ಕೈ ಹಿಡಿದುಕೊಂಡರು. ಕೂಡಲೇ ಅಲ್ಲೇ ಪಕ್ಕದಲ್ಲೇ ಇದ್ದ ರಾಜ್ಯಪಾಲರ ಭದ್ರತಾ ಸಿಬ್ಬಂದಿ ಕೂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೈ ಹಿಡಿದುಕೊಂಡು ಬೀಳದಂತೆ ತಡೆದರು.