ರಾಜ್ಯಗಳ ಸಮಸ್ಯೆಗೆ ಸ್ಪಂದಿಸಲು ಕೇಂದ್ರ ಬದ್ಧ: ಎನ್‌ಡಿಎ ಸಂಸದರು

| Published : Jun 28 2024, 12:58 AM IST

ರಾಜ್ಯಗಳ ಸಮಸ್ಯೆಗೆ ಸ್ಪಂದಿಸಲು ಕೇಂದ್ರ ಬದ್ಧ: ಎನ್‌ಡಿಎ ಸಂಸದರು
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಸ್ಪಂದಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ. ಹೀಗಾಗಿ ರಾಜ್ಯ ಸರ್ಕಾರವು ನಿರ್ಣಾಯಕ ಸಮಸ್ಯೆಗಳನ್ನು ತುರ್ತಾಗಿ ಪರಿಹರಿಸಲು ಕ್ರಮ ಕೈಗೊಳ್ಳಬೇಕು ಎಂದು ರಾಜ್ಯದ ಬಿಜೆಪಿ-ಜೆಡಿಎಸ್‌ (ಎನ್‌ಡಿಎ) ಸಂಸದರು ಮತ್ತು ಕೇಂದ್ರ ಸಚಿವರು ಆಗ್ರಹಿಸಿದ್ದಾರೆ.

- ರಾಜ್ಯವು ತನ್ನ ಪಾಲಿನ ಕರ್ತವ್ಯ ಮಾಡಬೇಕು: ದಿಲ್ಲಿಯಲ್ಲಿ ಸಿದ್ದುಗೆ ಮನವಿ

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯದ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಸ್ಪಂದಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ. ಹೀಗಾಗಿ ರಾಜ್ಯ ಸರ್ಕಾರವು ನಿರ್ಣಾಯಕ ಸಮಸ್ಯೆಗಳನ್ನು ತುರ್ತಾಗಿ ಪರಿಹರಿಸಲು ಕ್ರಮ ಕೈಗೊಳ್ಳಬೇಕು ಎಂದು ರಾಜ್ಯದ ಬಿಜೆಪಿ-ಜೆಡಿಎಸ್‌ (ಎನ್‌ಡಿಎ) ಸಂಸದರು ಮತ್ತು ಕೇಂದ್ರ ಸಚಿವರು ಆಗ್ರಹಿಸಿದ್ದಾರೆ.

ಈ ಸಂಬಂಧ ಗುರುವಾರ ದೆಹಲಿಯಲ್ಲಿ ನಡೆದ ಸಂಸದರ ಸಭೆ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ರಾಜ್ಯದ ನಾಗರಿಕರಿಗೆ ಉತ್ತಮ ಸೇವೆಗಳನ್ನು ಒದಗಿಸಲು ಮತ್ತು ಅವರ ಆರ್ಥಿಕ ಹೊರೆಗಳನ್ನು ಕಡಿಮೆ ಮಾಡಲು ಹಾಗೂ ಆಡಳಿತದಲ್ಲಿ ನಂಬಿಕೆಯನ್ನು ಪುನಃಸ್ಥಾಪಿಸಲು ನಿರ್ಣಾಯಕ ಕ್ರಮದ ಅಗತ್ಯವಿದೆ. ಜಲ ವಿವಾದ, ಜಿಎಸ್‌ಟಿ ಸೇರಿದಂತೆ ಎಲ್ಲಾ ವಿಚಾರದಲ್ಲಿಯೂ ಕೇಂದ್ರಕ್ಕೆ ಅಗತ್ಯವಿರುವ ಕ್ರಮಗಳನ್ನು ಕೈಗೊಂಡು ಸಕಾರಾತ್ಮಕವಾಗಿ ಸ್ಪಂದಿಸಬೇಕಾಗಿದೆ. ಹಾಗಿದ್ದಲ್ಲಿ ಮಾತ್ರ ಕೇಂದ್ರವೂ ರಾಜ್ಯದ ಅಭಿವೃದ್ಧಿಗೆ ಕೈ ಜೋಡಿಸಲು ಸಾಧ್ಯ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಮೇಕೆದಾಟು ಯೋಜನೆ ವಿಚಾರವಾಗಿ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ವಿಚಾರಣೆ ನಡೆಯುತ್ತಿದೆ. ನ್ಯಾಯಾಲಯದಲ್ಲಿರುವ ಸ್ಪಷ್ಟ ಚಿತ್ರಣವನ್ನು ನೀಡಬೇಕಾಗಿದೆ. ಇದರಿಂದ ನಾವು ಮುಂದುವರಿಯಲು ಸಹಕಾರಿಯಾಗಲಿದೆ. ಭದ್ರಾ ಮೇಲ್ದಂಡೆ ಯೋಜನೆಗೆ ವಿಚಾರದಲ್ಲಿ ಕೇಂದ್ರವು ಬಜೆಟ್‌ನಲ್ಲಿ 5,300 ಕೋಟಿ ರು. ಅನುದಾನವನ್ನು ಘೋಷಿಸಿದೆ. ಜಲಶಕ್ತಿ ಸಚಿವಾಲಯದಲ್ಲಿ ರಾಜ್ಯದ ಪ್ರಸ್ತಾವನೆಯು ತಾಂತ್ರಿಕವಾಗಿ ಅಸಮರ್ಪಕವಾಗಿದೆ ಎಂಬುದು ನಮ್ಮ ಗಮನಕ್ಕೆ ಬಂದಿದೆ. ಹೀಗಾಗಿ ಇದನ್ನು ಸರಿಪಡಿಸಲು ಸೂಕ್ತ ಅಧಿಕಾರಿಗಳನ್ನು ನಿಯೋಜಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.

ಜನ ಸಾಮಾನ್ಯರ ಮೇಲೆ ಆರ್ಥಿಕ ಹೊರೆ ತಗ್ಗಿಸಲು ರಾಜ್ಯ ಸರ್ಕಾರವು ಸಾಕಷ್ಟು ಕ್ರಮಗಳನ್ನು ಕೈಗೊಂಡಿಲ್ಲ. ಬದಲಿಗೆ ಕಳೆದೊಂದು ವರ್ಷದಲ್ಲಿ ಕೈಗೊಂಡ ತೀರ್ಮಾನಗಳು ಜನರ ಮೇಲೆ ಆರ್ಥಿಕ ಹೊರೆ ಹೆಚ್ಚಿಸಿದೆ. ಪೆಟ್ರೋಲ್‌ ಬೆಲೆ ಹೆಚ್ಚಳ, ಹಾಲಿನ ದರ ಹೆಚ್ಚಳ, ಆಸ್ತಿ ಮೌಲ್ಯ ಹೆಚ್ಚಳ ಸೇರಿದಂತೆ ಕಳೆದ ಒಂದು ವರ್ಷದಲ್ಲಿ ರಾಜ್ಯದ ಕಂದಾಯ ಕೊರತೆ ದುಪ್ಪಟ್ಟಾಗಿರುವುದು ಹಣಕಾಸಿನ ದುರಾಡಳಿತದ ಸ್ಪಷ್ಟ ಸೂಚನೆಯಾಗಿದೆ ಎಂದು ಆರೋಪಿಸಲಾಗಿದೆ. ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕಾದ ಅಗತ್ಯತೆ ಇದೆ ಎಂದು ಪ್ರತಿಪಾದಿಸಲಾಗಿದೆ.