ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಹೈಕಮಾಂಡ್ ನನಗೆ ಮತ್ತೊಮ್ಮೆ ಅವಕಾಶ ನೀಡುವ ವಿಶ್ವಾಸ ಹೊಂದಿದ್ದೇನೆ ಎಂದು ಬಾಗಲಕೋಟೆ ಲೋಕಸಭಾ ಮತಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ವೀಣಾ ಕಾಶಪ್ಪನವರ ಹೇಳಿದರು.ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಬಾರಿ ಲೋಕಸಭೆ ಚುನಾವಣೆಯಲ್ಲಿ ಐದು ಲಕ್ಷಕ್ಕೂ ಹೆಚ್ಚು ಮತಗಳನ್ನು ಪಡೆದಿದ್ದೇನೆ. ಸ್ಪಲ್ಪ ಮತಗಳ ಅಂತರದಿಂದ ನಾನು ಸೋತಿದ್ದು, ಈ ಬಾರಿ ಮತ್ತೆ ನನಗೆ ಹೈಕಮಾಂಡ್ ಟಿಕೆಟ್ ನೀಡುವ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಮಹಿಳಾ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವುದಾಗಿ ಹೈಕಮಾಂಡ್ ಹೇಳಿದ್ದು, ಈ ವಿಷಯದಲ್ಲಿ ಮಹಿಳಾ ಕೋಟಾದಡಿಯಲ್ಲಿ ನನಗೆ ಟಿಕೆಟ್ ಸಿಗುವ ವಿಶ್ವಾಸ ಇದೆ. ಈಗಾಗಲೇ ಬಾಗಲಕೋಟೆ ಲೋಕಸಭಾ ಮತಕ್ಷೇತ್ರದ ಜನರ ಒತ್ತಾಸೆಯಾಗಿದ್ದು ನೀವು ಸ್ಪರ್ಧೆ ಮಾಡಬೇಕು ಎಂದಿದ್ದಾರೆ. ಆ ನಿಟ್ಟಿನಲ್ಲಿ ಮತ್ತೆ ನಾನು ಸ್ಪರ್ಧೆ ಮಾಡಲು ಬಯಸುತ್ತೇನೆ ಎಂದು ಹೇಳಿದರು.ಬಾಗಲಕೋಟೆ ಜಿಪಂ ಅಧ್ಯಕ್ಷೆಯಾಗಿ ಜನಪರ ಕಾರ್ಯಗಳನ್ನು ಮಾಡಿದ್ದು, ಪಕ್ಷದಲ್ಲಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದೇನೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಶ್ರಮಿಸಿದ್ದೇನೆ. ಜನಸಂಪರ್ಕ ಸಭೆಯ ಮೂಲಕ ಜನರ ಬಳಿ ಸಮಸ್ಯೆಗಳನ್ನು ತಿಳಿದುಕೊಂಡಿದ್ದೇನೆ. ವಿವಿಕೆ ಫೌಂಡೇಷನ್‌ನಿಂದ ವಿವಿಧ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರಿಗೆ ತಲುಪಿಸುವಂತಹ ಕೆಲಸ ಮಾಡುತ್ತಿದ್ದು, ಲೋಕಸಭಾ ಮತಕ್ಷೇತ್ರದಾದ್ಯಂತ ಈಗಾಗಲೇ ನಾನು ಚಿರಪರಿತವಾಗಿದ್ದೇನೆ. ಕಳೆದ ಬಾರಿ ಚುನಾವಣೆಯಲ್ಲಿ ನಾನು ಸೋತರು ಜನರ ಒಡನಾಡ ಹೊಂದಿದ್ದೇನೆ ಎಂದು ತಿಳಿಸಿದರು.
ಲೋಕಸಭಾ ಮತಕ್ಷೇತ್ರದಲ್ಲಿ ಕಳೆದ 20 ವರ್ಷಗಳಿಂದ ಯಾವುದೇ ಕೆಲಸಗಳು ಆಗಿಲ್ಲ. ನಾನು ಸಂಸದೆಯಾಗಿ ಆಯ್ಕೆಯಾದರೆ ಒಂದು ಮಾದರಿ ಕ್ಷೇತ್ರವನ್ನಾಗಿ ಮಾಡುತ್ತೇನೆ ಎಂದರು.ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ವಕ್ತಾರ ಚಂದ್ರಶೇಖರ ರಾಠೋಡ ಇದ್ದರು.