ಸಾರಾಂಶ
ಬೆಳ್ಳಿಹಬ್ಬ ಸಂಭ್ರಮದ ಈ ಬಾರಿಯ ಹಾಕಿ ನಮ್ಮೆ, ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ನಡೆಯಲಿದ್ದು, ಆಯೋಜಕರು ಬಿರುಸಿನ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಮಾರ್ಚ್ ೫ರಂದು ಭೂಮಿಪೂಜೆಯೊಂದಿಗೆ ಮೈದಾನ ಕೆಲಸ ಹಾಗೂ ಗ್ಯಾಲರಿ ನಿರ್ಮಾಣ ಕಾಮಗಾರಿಗೆ ಚಾಲನೆ ದೊರೆತ್ತಿದ್ದು, ನಗರದ ಫೀಲ್ಡ್ ಮಾರ್ಷಲ್ ಕಾಲೇಜಿನ ಎರಡು ಮೈದಾನ ಹಾಗೂ ಜಿಲ್ಲಾ ಪೊಲೀಸ್ ಮೈದಾನ ಸೇರಿದಂತೆ ಒಟ್ಟು ಮೂರು ಮೈದಾನಗಳಲ್ಲಿ ಹಾಕಿ ಪಂದ್ಯಾವಳಿ ನಡೆಯಲಿದೆ.
ಕನ್ನಡಪ್ರಭ ವಾರ್ತೆ ಮಡಿಕೇರಿ
ಕೊಡವ ಕೌಟುಂಬಿಕ ಹಾಕಿ ಉತ್ಸವ ಮುದ್ದಂಡ ಕಪ್ ಹಾಕಿ ನಮ್ಮೆ ಮಾರ್ಚ್ ೨೮ರಿಂದ ಆರಂಭಗೊಳ್ಳಲಿದ್ದು, ದಿನಗಣನೆ ಶುರುವಾಗಿದೆ.ಬೆಳ್ಳಿಹಬ್ಬ ಸಂಭ್ರಮದ ಈ ಬಾರಿಯ ಹಾಕಿ ನಮ್ಮೆ, ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ನಡೆಯಲಿದ್ದು, ಆಯೋಜಕರು ಬಿರುಸಿನ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಮಾರ್ಚ್ ೫ರಂದು ಭೂಮಿಪೂಜೆಯೊಂದಿಗೆ ಮೈದಾನ ಕೆಲಸ ಹಾಗೂ ಗ್ಯಾಲರಿ ನಿರ್ಮಾಣ ಕಾಮಗಾರಿಗೆ ಚಾಲನೆ ದೊರೆತ್ತಿದ್ದು, ನಗರದ ಫೀಲ್ಡ್ ಮಾರ್ಷಲ್ ಕಾಲೇಜಿನ ಎರಡು ಮೈದಾನ ಹಾಗೂ ಜಿಲ್ಲಾ ಪೊಲೀಸ್ ಮೈದಾನ ಸೇರಿದಂತೆ ಒಟ್ಟು ಮೂರು ಮೈದಾನಗಳಲ್ಲಿ ಹಾಕಿ ಪಂದ್ಯಾವಳಿ ನಡೆಯಲಿದೆ.
ಕಾರ್ಯಪ್ಪ ಕಾಲೇಜಿನ ಎರಡು ಮೈದಾನಗಳನ್ನು ಸಮತಟ್ಟುಗೊಳಿಸಲಾಗುತ್ತಿದೆ. ಮುಖ್ಯ ಮೈದಾನದ ಸುತ್ತಲೂ ಸುಮಾರು ೨೫ ಸಾವಿರಕ್ಕೂ ಅಧಿಕ ಮಂದಿಗೆ ಪಂದ್ಯಾವಳಿ ವೀಕ್ಷಿಸಲು ಅನುಕೂಲವಾಗುವಂತೆ ೧೧ ಮೆಟ್ಟಿಲುಗಳ ಗ್ಯಾಲರಿ ಮತ್ತು ವಿಐಪಿ ಗ್ಯಾಲರಿ ನಿರ್ಮಾಣ ಕಾಮಗಾರಿ ಭರದಿಂದ ಸಾಗುತ್ತಿದೆ. ಪುಚ್ಚಿಮಾಡ ಚಂಗಪ್ಪ ಉಸ್ತುವಾರಿಯಲ್ಲಿ ಗ್ಯಾಲರಿ ನಿರ್ಮಾಣ ಕೆಲಸ ಸಾಗುತ್ತಿದೆ. ಮೈದಾನದಲ್ಲಿ ಹಾಗೂ ಸುತ್ತಮುತ್ತಲಿನ ಖಾಸಗಿ ಜಾಗದಲ್ಲಿ ಸುಮಾರು ೨ ಸಾವಿರ ವಾಹನಗಳ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಮುದ್ದಂಡ ಹಾಕಿ ಕಪ್‌ಗೆ ಇಲ್ಲಿಯವರೆಗೆ ೨೮೦ ಕುಟುಂಬಗಳು ನೋಂದಣಿಯಾಗಿದ್ದು, ಸುಮಾರು ೪೦೦ ಕುಟುಂಬಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಮುದ್ದಂಡ ಕುಟುಂಬಸ್ಥರಾದ ಡೀನ್ ಬೋಪಣ್ಣ ತಿಳಿಸಿದ್ದಾರೆ.೨೫ನೇ ವರ್ಷದ ಹಾಕಿ ಉತ್ಸವದ ಹಿನ್ನೆಲೆಯಲ್ಲಿ ಈ ಬಾರಿ ಒಲಂಪಿಕ್ ಕ್ರೀಡಾಜ್ಯೋತಿ ಮಾದರಿಯಲ್ಲಿ ಇಲ್ಲಿವರೆಗೆ ಉತ್ಸವ ಆಯೋಜಿಸಿದ ೨೪ ಕುಟುಂಬಗಳಿಂದ ಜ್ಯೋತಿಯನ್ನು ತರಲಾಗುವುದು. ಮಾರ್ಚ್ ೨೮ರಂದು ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದಿಂದ ಸಾಂಪ್ರಾದಾಯಿಕ ಮೆರವಣಿಗೆಯೊಂದಿಗೆ ಕಾರ್ಯಪ್ಪ ಕಾಲೇಜು ವರೆಗೆ ಕ್ರೀಡಾಜ್ಯೋತಿಯನ್ನು ತರಲಾಗುವುದು ಎಂದರು.