ಸಾರಾಂಶ
ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಸಾಹೇಬರು ಈ ವಿಷಯದ ಬಗ್ಗೆ ಮಾತನಾಡಲು ಹೋಗಬೇಡಿ ಎಂದು ಹೇಳಿರುವುದರಿಂದ ನಾನು ಮಾತನಾಡಿದರೆ ತಪ್ಪಾಗುತ್ತದೆ, ಪಕ್ಷ ನಮಗೆ ಏನು ಹೇಳುತ್ತದೆಯೋ ಅದನ್ನು ನಾವೆಲ್ಲರೂ ಕೇಳುತ್ತೇವೆ .
ಕನಕಪುರ: ಪಕ್ಷದ ಕಾರ್ಯಕರ್ತರು, ಶ್ರೀಗಳು, ಜನತೆ ಬಯಸುತ್ತಾರೆ, ಯಾರು ಏನೇ ಬಯಸಿದರೂ ಅದನ್ನು ತಪ್ಪು ಎಂದು ಹೇಳಲಾಗುವುದಿಲ್ಲ, ನಾವೆಲ್ಲ ಪಕ್ಷ ಕಟ್ಟಿರುವವರು, ಪಕ್ಷದ ಶಿಸ್ತಿನ ಸಿಪಾಯಿಗಳು. ನಾನಾಗಲಿ, ಸಿದ್ದರಾಮಯ್ಯ ಅವರಾಗಲಿ, ಯಾರೇ ಆಗಿರಲಿ, ನಾವೆಲ್ಲರೂ ಪಕ್ಷ ಏನು ಹೇಳುತ್ತದೆಯೋ ಅದನ್ನು ಕೇಳುತ್ತೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
ತಾಲೂಕಿನ ಕೋಡಿಹಳ್ಳಿ ನಿವಾಸದಲ್ಲಿ ತಮ್ಮ ತಾಯಿ ಗೌರಮ್ಮನವರ ಯೋಗಕ್ಷೇಮ ವಿಚಾರಿಸಿ, ಸ್ವಲ್ಪ ಕಾಲ ವಿಶ್ರಾಂತಿ ಪಡೆದ ನಂತರ ಮಾಧ್ಯಮಗಳಿಗೆ ಭಾನುವಾರ ಪ್ರತಿಕ್ರಿಯೆ ನೀಡಿದ ಅವರು, ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಸಾಹೇಬರು ಈ ವಿಷಯದ ಬಗ್ಗೆ ಮಾತನಾಡಲು ಹೋಗಬೇಡಿ ಎಂದು ಹೇಳಿರುವುದರಿಂದ ನಾನು ಮಾತನಾಡಿದರೆ ತಪ್ಪಾಗುತ್ತದೆ, ಪಕ್ಷ ನಮಗೆ ಏನು ಹೇಳುತ್ತದೆಯೋ ಅದನ್ನು ನಾವೆಲ್ಲರೂ ಕೇಳುತ್ತೇವೆ ಎಂದು ತಿಳಿಸಿದರು.ಬಾಯಿ ಚಪಲಕ್ಕೆ ಮಾತನಾಡುತ್ತಾರೆ:
ಈ ವಿಷಯದ ಬಗ್ಗೆ ಈಗಾಗಲೇ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನೇಕ ಬಾರಿ ಹೇಳಿದ್ದು, ಪದೇಪದೇ ಮಾಧ್ಯಮಗಳು, ವಿರೋಧ ಪಕ್ಷದವರು, ನಮ್ಮ ಪಕ್ಷದಲ್ಲಿನ ಕೆಲವರು ಚಪಲಕ್ಕೆ ಮಾತನಾಡುತ್ತಾರೆ. ಈಗ ಅದರ ಅವಶ್ಯಕತೆಯಿಲ್ಲ, ಜನರು ನಮ್ಮನ್ನು ನಂಬಿ ಮತ ನೀಡಿದ್ದಾರೆ, ಅವರ ಆಶೋತ್ತರಗಳನ್ನು ಮೊದಲು ನಾವು ಒಂದೊಂದಾಗಿ ಈಡೇರಿಸುವ ಮೂಲಕ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತೇವೆ, ಇನ್ನೂ ಅನೇಕ ಯೋಜನೆಗಳಿದ್ದು ಅದಕ್ಕೂ ನಾವು ತಯಾರು ಮಾಡಿಕೊಳ್ಳುತ್ತಿದ್ದೇವೆ. ದೇವರು ಹಾಗೂ ವರುಣನ ಕೃಪೆಯಿಂದ ಉತ್ತಮ ಮಳೆ ಬೀಳುತ್ತಿದ್ದು, ಜಲಾಶಯಗಳು ಭರ್ತಿಯಾಗಿರುವುದು ಸಂತಸ ತಂದಿದೆ ಎಂದರು.ಒಡಂಬಡಿಕೆಯಂತೆ ನೀವು ಸಿಎಂ ಆಗಬೇಕು ಎನ್ನುವ ರಂಭಾಪುರಿ ಶ್ರೀಗಳ ಮಾತಿನ ಬಗ್ಗೆ ಕೇಳಿದಾಗ, ಬಹಿರಂಗವಾಗಿ ನಾನು ಏಕೆ ಮಾತನಾಡಲಿ? ನಾನುಂಟು, ಪಕ್ಷವುಂಟು. ನಾವೆಲ್ಲರೂ ಒಟ್ಟಿಗೆ ಪಕ್ಷದಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದರು.