ಸಾರಾಂಶ
ಡಿ.ಕೆ. ಸಹೋದರರು ಅಪೂರ್ವ ಸಹೋದರರು ಎಂದು ವ್ಯಂಗ್ಯವಾಡಿದ್ದಾರೆ. ಹೌದು, ನಾನು ಹಾಗೂ ನನ್ನ ಅಣ್ಣ ಅಪೂರ್ವ ಸಹೋದರರೆ. ನಾವು ದೇವೇಗೌಡರ ವಂಶದಂತೆ ಅಲ್ಲ. ಕುಮಾರಸ್ವಾಮಿ ಬ್ರದರ್ಸ್ ರೀತಿ ಅಲ್ಲ- ಮಾಜಿ ಸಂಸದ ಡಿ.ಕೆ. ಸುರೇಶ್ ತಿರುಗೇಟು
ಚನ್ನಪಟ್ಟಣ: ಡಿ.ಕೆ. ಸಹೋದರರು ಅಪೂರ್ವ ಸಹೋದರರು ಎಂದು ವ್ಯಂಗ್ಯವಾಡಿದ್ದಾರೆ. ಹೌದು, ನಾನು ಹಾಗೂ ನನ್ನ ಅಣ್ಣ ಅಪೂರ್ವ ಸಹೋದರರೆ. ನಾವು ದೇವೇಗೌಡರ ವಂಶದಂತೆ ಅಲ್ಲ. ಕುಮಾರಸ್ವಾಮಿ ಬ್ರದರ್ಸ್ ರೀತಿ ಅಲ್ಲ. ಬೇಕಾದಾಗ ಸಂಬಂಧ, ಬೇಡವಾದಾಗ ಬೇರೆ ಎನ್ನುವಂತಹವರಲ್ಲ. ಕಷ್ಟದಲ್ಲಿದ್ದರೂ ಜತೆಯಲ್ಲಿ ಇರುತ್ತೇವೆ, ಸುಖದಲ್ಲೂ ಒಟ್ಟಿಗೆ ಇದ್ದೇನೆ, ಸಾಯುವಾಗಲೂ ಜತೆಯಲ್ಲೇ ಇರುತ್ತೇನೆ ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ತಿರುಗೇಟು ನೀಡಿದರು.
ಚನ್ನಪಟ್ಟಣ ಉಪಚುನಾವಣೆ ಹಿನ್ನೆಲೆಯಲ್ಲಿ ತಾಲೂಕಿನ ದೊಡ್ಡ ಮಳೂರಿ ಗ್ರಾಮದ ಬಳಿ ನಡೆದ ಕಾಂಗ್ರೆಸ್ ಬಹಿರಂ ಸಭೆಯಲ್ಲಿ ಮಾತನಾಡಿದ ಅವರು, ನಿಮ್ಮಂತೆ ಅಣ್ಣ ಹಾಗೂ ಆತಮ ಮಕ್ಕಳು ಕಷ್ಟದಲ್ಲಿರುವಾಗ ಅವನು ಬೇರೆ, ನಾನು ಬೇರೆ ಎಂದು ಹೇಳುವ ನೀಚ ಪ್ರವೃತ್ತಿ ನನ್ನದಲ್ಲ ಎಂದು ಟಾಂಗ್ ನೀಡಿದರು.
ಸುಳ್ಳು ಹೇಳುವುದೇ ಅವರ ಚಾಳಿ:
ಕುಮಾರಸ್ವಾಮಿ ಏನೂ ಮಾಡದೇ, ಬೆಳಗ್ಗೆ, ಮಧ್ಯಾಹ್ನ, ರಾತ್ರಿ ಒಂದೊಂದು ಸುಳ್ಳು ಹೇಳಿಕೊಂಡು ಓಡಾಡುತ್ತಿದ್ದಾರೆ. ಅದು ಅವರ ವಂಶಕ್ಕೆ ಅಂಟಿಕೊಂಡಿರುವ ಚಾಳಿ. ಕುಮಾರಸ್ವಾಮಿ ಅವರು ಇಲ್ಲಿ ಸ್ಪರ್ಧೆ ಮಾಡಿದಾಗ ಸಿಎಂ ಆಗುವುದಾಗಿ ಪ್ರಚಾರ ಮಾಡಿ ಜನರನ್ನು ನಂಬಿಸಿದರು. ಆ ಕಾರಣಕ್ಕೆ ಜನ ಯೋಗೇಶ್ವರ್ ಸೋಲಿಸಿದರು ಎಂದರು.
ಒಂದು ದಿನ ಬಂದು ನಿಮ್ಮ ಕಷ್ಟ ಕೇಳಲಿಲ್ಲ:
ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಈ ಕ್ಷೇತ್ರದ ಜನರ ಕಷ್ಟ ಕೇಳಲು ಒಂದೇ ಒಂದು ದಿನ ಬರಲಿಲ್ಲ. ಜನರ ಕಷ್ಟ ಕೇಳುವುದಿರಲಿ, ಜೆಡಿಎಸ್ ಪಕ್ಷದ ಕಾರ್ಯಕರ್ತರ ಸಮಸ್ಯೆಯನ್ನು ಆಲಿಸಲಿಲ್ಲ. ಅವರ ಬಗ್ಗೆ ನಿಮಗೆ ಇಷ್ಟು ಅಂಧ ಅಭಿಮಾನ ಯಾಕೆ? ಎಂದು ಜೆಡಿಎಸ್ ಕಾರ್ಯಕರ್ತರನ್ನು ಪ್ರಶ್ನಿಸಿದರು.
ಎಚ್ಡಿಕೆಗೆ ಸಿದ್ಧಾಂತವಿಲ್ಲ:
ಕುಮಾರಸ್ವಾಮಿ ಯೋಗೇಶ್ವರ್ ಅವರನ್ನು ಪಕ್ಷಾಂತರಿ ಅನ್ನುತ್ತಾರೆ. ಆದರೆ, ಅವರು ಮಾಡುತ್ತಿರುವುದೇನು? ನಿಮಗೆ ಯಾರು ಅಧಿಕಾರ ನೀಡುತ್ತಾರೋ ಅವರ ಜತೆ ಕೈ ಜೋಡಿಸುತ್ತೀರಿ. ಇದರ ಹೊರತಾಗಿ ನಿಮ್ಮ ಬಳಿ ಯಾವ ಸಿದ್ಧಾಂತವಿದೆ? ನಮ್ಮ ಗ್ಯಾರಂಟಿ ಯೋಜನೆ ನಿಲ್ಲುತ್ತದೆ ಎಂದು ಬಹಿರಂಗ ಹೇಳಿಕೆ ನೀಡುತ್ತೀರಲ್ಲಾ, ನಿಮಗೆ ಈ ಯೋಜನೆಗಳು ಇಷ್ಟವಿಲ್ಲದಿದ್ದರೆ ಈ ಯೋಜನೆಗಳನ್ನು ನಿಲ್ಲಿಸಿ ಎಂದು ನೇರವಾಗಿ ಹೇಳಿ ನಿಮ್ಮ ತಾಕತ್ತು ಪ್ರದರ್ಶಿಸಿ ಎಂದು ಸವಾಲು ಹಾಕಿದರು.
ಅಭಿವೃದ್ಧಿ ಬಗ್ಗೆ ಮಾತನಾಡದ ಕುಮಾರಸ್ವಾಮಿ: ಈ ಉಪಚುನಾವಣೆಗೆ ಬಂದಿರುವ ಕುಮಾರಸ್ವಾಮಿ ಅವರು ಎಲ್ಲಾದರೂ ಈ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಮಾತನಾಡಿದ್ದಾರಾ? ಅವರಿಗೆ ಕನಸಲ್ಲೆಲ್ಲಾ ಡಿ.ಕೆ. ಶಿವಕುಮಾರ್, ಡಿ.ಕೆ. ಸುರೇಶ್ ಹಾಗೂ ಯೋಗೇಶ್ವರ್, ಸಿದ್ದರಾಮಯ್ಯ ಅವರದ್ದೇ ಕನವರಿಕೆ. ಕುಮಾರಸ್ವಾಮಿ ಅವರು ತಮ್ಮ ಕೆಲಸದ ಬಗ್ಗೆ ಚರ್ಚೆ ಮಾಡಿ ಮತ ಕೇಳುತ್ತಿದ್ದಾರಾ? ಎಂದರು.
ಕಣ್ಣೀರು ಎಲ್ಲಿ ಹೋಗಿತ್ತು?: ಕಣ್ಣೀರು ಹಾಕುವವರಿಗೆ ಹೃದಯ ಇರಬೇಕು ಎಂದಿದ್ದೀರಿ. ಹಾಸನ ವಿಚಾರದಲ್ಲಿ ನಿಮ್ಮ ಮಗ, ಮೊಮ್ಮಗ ಹೆಣ್ಣು ಮಕ್ಕಳ ಕಣ್ಣೀರು ಹಾಕಿದಾಗ ನಿಮ್ಮ ಕಣ್ಣೀರು ಎಲ್ಲಿ ಹೋಗಿತ್ತು. ನನ್ನ ಮೊಮ್ಮಕ್ಕಳು ತಪ್ಪು ಮಾಡಿದ್ದಾರೆ. ನನ್ನನ್ನು ಕ್ಷಮಿಸಿ ಎಂದು ಕೇಳಬೇಕಿತ್ತು. ಆಗ ನಿಮ್ಮ ಆತ್ಮಗೌರವ ಉಳಿದು, ಘನತೆ ಹೆಚ್ಚುತ್ತಿತ್ತು ಎಂದರು.
ಕಾಂಗ್ರೆಸ್ ನವರು ನನ್ನನ್ನು ಮೂರು ತಿಂಗಳು ಕೂಡಿಹಾಕಿದ್ದರು ಎಂದು ಹೇಳಿದ್ದೀರಿ. ದೇವೇಗೌಡರೇ ನಿಮ್ಮನ್ನು ಕೂಡಿ ಹಾಕಿದ್ದು ಕಾಂಗ್ರೆಸ್‌ನವರಲ್ಲ. ನಿಮ್ಮ ಮಕ್ಕಳು ಹಾಗೂ ಮೊಮ್ಮಕ್ಕಳು ಎಂಬುದನ್ನು ಮರೆಯಬೇಡಿ. ನಿಮ್ಮ ಮೊಮ್ಮಗ ಹಾಸನದಲ್ಲಿ ಅಪಚಾರ ಮಾಡಿದಾಗ ಒಂದು ದಿನ ಹೋಗಿ ಅಲ್ಲಿನ ಜನರ ಬಳಿ ಕ್ಷಮೆ ಕೇಳಲಿಲ್ಲ. ಇಲ್ಲಿ ಬಂದು ೮ ದಿನಗಳಿಂದ ಚುನಾವಣಾ ಪ್ರಚಾರ ಮಾಡುತ್ತಿದ್ದೀರಲ್ಲಾ ನಿಮ್ಮ ನೈತಿಕತೆ ಎಲ್ಲಿ ಹೋಯಿತು? ಎಂದರು.
ನಿಮ್ಮ ಮಕ್ಕಳು ಹಾಗೂ ಮೊಮ್ಮಕ್ಕಳನ್ನು ಬಿಟ್ಟರೆ ಬೇರೆ ಯಾರನ್ನೂ ನೀವು ರಾಜಕೀಯವಾಗಿ ಬೆಳೆಸಲೇ ಇಲ್ಲ. ನಿಮ್ಮ ಪಕ್ಷದವರ ಏಳಿಗೆಯನ್ನೇ ಸಹಿಸದ ನೀವು, ನನ್ನ ಹಾಗೂ ಡಿ.ಕೆ. ಶಿವಕುಮಾರ್ ಏಳಿಗೆ ಸಹಿಸುತ್ತೀರಾ? ರಾಮಕೃಷ್ಣ ಹೆಗಡೆ, ಜೆ.ಎಚ್. ಪಟೇಲ್, ಎಸ್.ಆರ್ ಬೊಮ್ಮಾಯಿ, ಅಂಬರೀಶ್, ಚಲುವರಾಯಸ್ವಾಮಿ, ಜಮೀರ್, ಬಾಲಕೃಷ್ಣ, ವರದೇಗೌಡರು ಹೀಗೆ ಎಷ್ಟು ಜನರನ್ನು ತುಳಿದಿದ್ದೀರಿ. ಈಗ ಈ ಪಟ್ಟಿಯಲ್ಲಿ ಕೊನೆಯ ಹೆಸರು ಸಿ.ಪಿ ಯೋಗೇಶ್ವರ್. ಸಿದ್ದರಾಮಯ್ಯ ಅವರನ್ನೇ ಬಿಡದ ನೀವು ಯೋಗೇಶ್ವರ್ ಅವರನ್ನು ನನ್ನನ್ನು ಸಹಿಸುತ್ತೀರಾ? ಎಂದರು.
ನಿಮ್ಮ ರಾಜಕಾರಣದ ವ್ಯವಸ್ಥೆಯಲ್ಲಿ ನೀವು ಎಲ್ಲರನ್ನು ಒಟ್ಟಿಗೆ ಕರೆದುಕೊಂಡು ಹೋಗಿದ್ದರೆ ಇಂದು ರಾಜ್ಯದಲ್ಲಿ ಅತ್ಯುತ್ತಮ ಪ್ರಾದೇಶಿಕ ಪಕ್ಷ ಅಲ್ಲಾಡಿಸಲು ಸಾಧ್ಯವಾಗಿರುತ್ತಿರಲಿಲ್ಲ. ನಿಮ್ಮ ಮಕ್ಕಳ ಜತೆಗೆ ಬೆಳೆಯುವವರನ್ನು ಒಬ್ಬೊಬ್ಬರಾಗಿ ತುಳಿಯುತ್ತಾ ಬಂದಿರಿ ಎಂದು ಆರೋಪಿಸಿದರು.
ಅಪಮಾನ ಸಹಿಸಿಕೊಂಡಿದ್ದೇನೆ: ಅವರು ಪರಮಪೂಜ್ಯ ಬಾಲಗಂಗಾಧರನಾಥ ಸ್ವಾಮೀಜಿಗಳನ್ನೇ ಬಿಡಲಿಲ್ಲ, ಇನ್ನು ಈ ಸಮಾಜದ ಬೇರೆಯವರನ್ನು ಬಿಡುತ್ತಾರಾ. ಜೆಡಿಎಸ್ ಕಾರ್ಯಕರ್ತರೇ ಜಾತಿ ವ್ಯಾಮೋಹಕ್ಕೆ ಹೋಗಬೇಡಿ. ಯೋಗೇಶ್ವರ್ ಕೂಡ ಒಕ್ಕಲಿಗನೇ. ನಾನು ಒಕ್ಕಲಿಗನೇ. ಬಾಲಕೃಷ್ಣ ಅವರೂ ಒಕ್ಕಲಿಗರೇ ಎಂದರು.
ಸಿ.ಪಿ. ಯೋಗೇಶ್ವರ್ ಶಾಸಕರಾಗಿ ಈ ತಾಲೂಕಿನ ಕೆರೆ ತುಂಬಿಸಿ, ರೈತರ ಬದುಕು ರಕ್ಷಣೆ ಮಾಡಿದರು. ಪಕ್ಷಬೇಧ, ಜಾತಿ ಧರ್ಮ ಮರೆತು ಜನ ಯೋಗೇಶ್ವರ್ ಅವರಿಗೆ ಬೆಳ್ಳಿ ಕಿರೀಟ, ಕತ್ತಿ, ಗದೆ ಕೊಟ್ಟು ಸನ್ಮಾನ ಮಾಡಿ, ರಥದಲ್ಲಿ ಮೆರವಣಿಗೆ ಮಾಡಿದರು. ಆಗ ಯೋಗೇಶ್ವರ್ ಅವರನ್ನು ಸೋಲಿಸಲು ಸಾಧ್ಯವಿಲ್ಲ ಎಂಬ ಮಾತುಗಳಿದ್ದವು. ಆದರೆ ಎರಡು ಬಾರಿ ಸೋತರು ಎಂದು ಬೇಸರ ವ್ಯಕ್ತಪಡಿಸಿದರು.
ನಾಟಕ: ನನ್ನ ಹಾಗೂ ಡಿ.ಕೆ. ಶಿವಕುಮಾರ್ ಅವರ ಮೇಲಿನ ಕೋಪಕ್ಕೆ ಸಿ.ಪಿ ಯೋಗೇಶ್ವರ್ ಅವರನ್ನು ತಬ್ಬಿಕೊಂಡರು. ನನ್ನನ್ನು ಸಂಸದ ಸ್ಥಾನದಿಂದ ತೆಗೆಯಲು ಮಂಜುನಾಥ್ ಅವರನ್ನು ಕರೆತಂದು ಸಂಸದರನ್ನಾಗಿ ಮಾಡಿದರು. ಯೋಗೇಶ್ವರ್ ಅವರಿಗೆ ಟಿಕೆಟ್ ನೀಡುವುದಾಗಿ ಜೊತೆಯಲ್ಲಿ ಇಟ್ಟುಕೊಂಡರು. ಅಪ್ಪ ಒಂದು ರೀತಿ ಹೇಳಿದರೆ, ಮಗ ಒಂದು ರೀತಿ ಹೇಳುತ್ತಾ ಬಂದರು. ಇದು ಅವರ ನಾಟಕವಲ್ಲವೇ? ಎಂದರು.
ಚನ್ನಪಟ್ಟಣದ ಮತದಾರರಿಗೆ ಕುಮಾರಸ್ವಾಮಿ ಅಪಮಾನ: ಸುರೇಶ್
ಕುಮಾರಸ್ವಾಮಿಯವರು ಶಾಸಕರಾಗಿ ಆಯ್ಕೆಯಾದ ನಂತರ ಐದು ವರ್ಷಗಳ ಕಾಲ ಜನರ ಮಧ್ಯೆ ಇರಬಾರದು. ಚುನಾವಣೆಗೆ ಎಂಟು ಹತ್ತು ದಿನ ಇದೆ ಎನ್ನುವಾಗ ಈಗಿನ ಚುನಾವಣಾ ಪದ್ದತಿಗೆ ತಕ್ಕಂತೆ ತಯಾರಾಗಿ ಹೋಗಿ ಕೆಲಸ ಮಾಡಿದರೆ ಚುನಾವಣೆ ಗೆಲ್ಲಬಹುದು ಎಂದು ವಿಧಾನಸಭೆಯಲ್ಲಿಯೇ ಹೇಳಿದ್ದಾರೆ. ಇದು ಡಿ.ಕೆ. ಡಿ.ಕೆ. ಸಹೋದರರ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರೋಪವಲ್ಲ. ಇದು ಕುಮಾರಸ್ವಾಮಿ ಮಾತುಗಳು ಎಂದು ಕುಮಾರಸ್ವಾಮಿ ಮಾತನಾಡಿರುವ ವಿಡಿಯೋವನ್ನು ಸುರೇಶ್ ಪ್ರದರ್ಶಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹದಿನೈದು ದಿನಕ್ಕೆ ಒಮ್ಮೆಯಾದರೂ ಮೈಸೂರಿನ ತಮ್ಮ ಕ್ಷೇತ್ರಕ್ಕೆ ಹೋಗುತ್ತಿರುತ್ತಾರೆ. ಅದೇ ರೀತಿ ಡಿಸಿಎಂ ಡಿ.ಕೆ.ಶಿವಕುಮಾರ್ ಸಹ ಕನಕಪುರಕ್ಕೆ ಹೋಗುತ್ತಾರೆ.
ಆದರೆ, ಕುಮಾರಸ್ವಾಮಿ ಚುನಾವಣೆ ಸಮಯದಲ್ಲಿ ತಂತ್ರಗಾರಿಕೆ ಮಾಡಿ ಕಣ್ಣೀರು ಹಾಕಿ ಮತ ಕೇಳಿದರೆ ಸಾಕು ಎಂಬ ಧೋರಣೆ ಹೊಂದಿದ್ದಾರೆ. ಇದು ಈ ತಾಲೂಕಿನ ಜನತೆಗೆ ಮಾಡಿರುವ ಅಪಮಾನ. ಅವರು ಹೇಳಿದಂತೆ ಕಳೆದ ೮-೧೦ ದಿನಗಳಿಂದ ಚುನಾವಣಾ ತಂತ್ರಗಾರಿಕೆ ಮಾಡಿಕೊಂಡು ಈಗ ಬಂದಿದ್ದಾರೆ. ಇಂಥವರಿಗೆ ಮತ ಹಾಕಬೇಕಾ ಎಂದು ನೀವೇ ತೀರ್ಮಾನಿಸಿ.
ಯೋಗೇಶ್ವರ್ ಹಾಗೂ ನಾನು ೩೦ ವರ್ಷಗಳ ಹಳೇ ಸ್ನೇಹಿತರು. ಆತ ನನ್ನ ಬೈಯ್ಯುತ್ತಾನೆ. ನಾನು ಆತನಿಗೆ ಬೈಯ್ಯುತ್ತೇನೆ. ಆದರೆ, ಕುಮಾರಸ್ವಾಮಿ ನೀವು ಮತದಾರರನ್ನು ನಿಂದಿಸಿದ್ದೀರಿ. ನಮ್ಮ ವಾಗ್ವಾದ ವೈಯಕ್ತಿಕವಾದುದ್ದು. ನೀವು ಟೀಕೆ ಮಾಡಿರುವುದು ನಿಮಗೆ ಆಶೀರ್ವಾದ ಮಾಡಿರುವ ಜನರಿಗೆ ಎಂದು ವಾಗ್ದಾಳಿ ನಡೆಸಿದರು.