27ರಲ್ಲೂ ಕಮಲ, ಮೋದಿಗೆ ನನ್ನದು 28ನೇ ಬಲ: ಕೆ.ಎಸ್‌.ಈಶ್ವರಪ್ಪ

| Published : Apr 26 2024, 12:52 AM IST / Updated: Apr 26 2024, 11:47 AM IST

ಸಾರಾಂಶ

ಶಿವಮೊಗ್ಗ ನಗರದ ವಿವಿಧೆಡೆ ಸ್ವತಂತ್ರ ಅಭ್ಯರ್ಥಿ ಕೆ.ಎಸ್‌.ಈಶ್ವರಪ್ಪ ಬಿರುಸಿನ ಪ್ರಚಾರ ಮತಯಾಚನೆ ಮಾಡಿದರು. ಇದೇ ವೇಳೆ ನಿರೀಕ್ಷೆ ಮೀರಿದ ಬೆಂಬಲಕ್ಕೆ ಹರ್ಷ ವ್ಯಕ್ತಪಡಿಸಿದರು.

 ಶಿವಮೊಗ್ಗ :  ಐದು ಬಾರಿ ನಾನು ಶಾಸಕನಾಗಿದ್ದಾಗಲೂ ಇಷ್ಟು ಬೆಂಬಲ ನನಗೆ ಸಿಕ್ಕಿರಲಿಲ್ಲ. ಜನ ನನ್ನ ಎಳೆದುಕೊಂಡು ಬಂದು ಪ್ರಚಾರ ಮಾಡುತ್ತಿದ್ದಾರೆ. ನಿಮಗೇ ಮತ ಹಾಕುತ್ತೇವೆ ಎಂದು ಹೇಳುತ್ತಿದ್ದಾರೆ. ಜನರ ಬೆಂಬಲ ಕಂಡು ತುಂಬಾ ಸಂತೋಷವಾಗಿದೆ ಎಂದು ಲೋಕಸಭಾ ಚುನಾವಣೆ ಸ್ವತಂತ್ರ ಅಭ್ಯರ್ಥಿ, ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದರು.

ನಗರದಲ್ಲಿ ಗುರುವಾರ ಪ್ರಚಾರದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದವರು ಒಂದಷ್ಟು ಜನ ನಮ್ಮ ಜೊತೆ ಸೇರಿದ್ದಾರೆ ಮತ್ತೆ ಕೆಲವರು ಪಕ್ಷ ಬಿಡಲು ಆಗುವುದಿಲ್ಲ ಪಕ್ಷದಲ್ಲಿ ಇದ್ದುಕೊಂಡು ನಿಮಗೆ ಬೆಂಬಲ ಕೊಡುತ್ತೇವೆ ಎಂದು ಹೇಳಿದ್ದಾರೆ.

ಜೆಡಿಎಸ್‌ನಿಂದ ನಿರೀಕ್ಷೆ ಮೀರಿದ ಬೆಂಬಲ ಸಿಕ್ಕಿದೆ. ಬಿಜೆಪಿ ಪಕ್ಷದಿಂದ ಶೇ.60 ಇದ್ದ ಬೆಂಬಲ ಈಗ ಶೇ.79 ಆಗಿದೆ. ಎಲ್ಲಾ ಪಕ್ಷದವರು ನನಗೆ ಬೆಂಬಲ ನೀಡುತ್ತಿದ್ದಾರೆ ಎಂದರು.

ಶೋರೂಮ್‌ ಗಳಿಗೆ ಭೇಟಿ ನೀಡಿದ್ದಾಗ ಎಲ್ಲರೂ ಬೆಂಬಲ ಕೊಡುತ್ತೇವೆ ಎಂದು ಹೇಳಿದ್ದಾರೆ. ಶೋರೂಮ್ ಮಾಲೀಕರು ನನ್ನ ಪರ ಪ್ರಚಾರ ಮಾಡಲು ಸಿಬ್ಬಂದಿ ಗಳಿಗೆ ಒಂದು ದಿನ ರಜೆ ಕೊಡುವುದಾಗಿ ಹೇಳಿ ಬೆಂಬಲ ಸೂಚಿಸಿದ್ದಾರೆ. ಮುಸಲ್ಮಾನರು ನನಗೆ ಬೆಂಬಲ ಕೊಡುತ್ತಿದ್ದಾರೆ. ನೀವು ರಾಷ್ಟ್ರದ್ರೋಹಿಗಳ ಬಗ್ಗೆ ಮಾತ್ರ ಮುಸಲ್ಮಾನ ಗೂಂಡಾಗಳು ಎಂದು ಹೇಳುತ್ತೀರಿ, ರಾಷ್ಟ್ರಪ್ರೇಮಿ ಮುಸಲ್ಮಾನರ ಬಗ್ಗೆ ನಿಮಗೆ ಗೌರವ ಇದೆ ಎಂದು ಹೇಳಿದ್ದಾರೆ. ಸಾಗರದಲ್ಲಿ ಕ್ರಿಶ್ಚಿಯನ್ ಧರ್ಮ ಪಾದ್ರಿಗಳು ನನಗೆ ಆಶೀರ್ವಾದ ಮಾಡುವುದಾಗಿ ಹೇಳಿ ಬರಲು ತಿಳಿಸಿದ್ದಾರೆ. ಏ.27ರಂದು ಪಾದ್ರಿಗಳ ಆಶೀರ್ವಾದ ಪಡೆಯಲು ಹೋಗುತ್ತಿದ್ದೇನೆ. ನನಗೆ ಎಲ್ಲಾ ಧರ್ಮದವರ ಬೆಂಬಲ ಇದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಬಿಜೆಪಿ 27 ಕ್ಷೇತ್ರದಲ್ಲಿ ಗೆಲ್ಲಲಿದೆ. 28ನೇ ಕ್ಷೇತ್ರವಾಗಿ ಶಿವಮೊಗ್ಗದಲ್ಲಿ ನಾನು ಗೆಲ್ಲುವ ಮೂಲಕ ಮೋದಿಯವರನ್ನು ಪ್ರಧಾನಿ ಮಾಡಲಿದ್ದೇವೆ. ಭಾರತೀಯ ಜನತಾ ಪಕ್ಷದಲ್ಲಿರುವ ನೋವು ಜನರ ಮುಂದೆ ಇಡುತ್ತಿದ್ದೇನೆ. ಅಪ್ಪ-ಮಕ್ಕಳ ಹಿಡಿತದಿಂದ ಪಕ್ಷವನ್ನು ಶುದ್ಧೀಕರಣ ಮಾಡುವ ಸಿದ್ಧಾಂತ ಇಟ್ಟುಕೊಂಡು ಚುನಾವಣೆ ಗೆ ಸ್ಪರ್ಧೆ ಮಾಡುತ್ತಿದ್ದೇನೆ. ಯಾರ ಬಗ್ಗೆಯೂ ವೈಯಕ್ತಿಕ ಟೀಕೆ ಮಾಡುತ್ತಿಲ್ಲ ಎಂದರು.

ಅಕ್ಷೋಭ್ಯ ತೀರ್ಥ ಮಠಕ್ಕೆ ಭೇಟಿ

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಇಂದು ಶಿವಮೊಗ್ಗ ನಗರದ ವಿವಿಧ ಭಾಗಗಳಲ್ಲಿ ಮತಯಾಚಿಸಿದರು.

ಬೆಂಕಿನಗರ, ಅಶೋಕ ನಗರ, ಗಾಡಿಕೊಪ್ಪ, ಗಾಂಧಿ ಬಜಾರ್, ಕುಂಬಾರ ಗುಂಡಿ, ಮಲ್ಲಿಕಾರ್ಜುನ ನಗರಗಳಲ್ಲಿ ಕಾರ್ಯಕರ್ತರ ಜೊತೆ ಮನೆ ಮನೆಗೆ ತೆರಳಿ ಮತ ಯಾಚನೆ ಮಾಡಿದರು ಗಾಂಧಿ ಬಜಾರ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಆಗಮಿಸಿ ಬಿಸಿಲನ್ನು ಲೆಕ್ಕಿಸದೆ ಈಶ್ವರಪ್ಪರವರಿಗೆ ಬೆಂಬಲ ಸೂಚಿಸಿದರು.

ಗಾಂಧಿ ಬಜಾರ್‌ನಲ್ಲಿ ಮತಯಾಚನೆ ವೇಳೆ ಮಾವಿನ ಹಣ್ಣು ಮಾರುವ ಮಹಿಳೆ ಈಶ್ವರಪ್ಪರವರಿಗೆ ಮಾವಿನ ಹಣ್ಣು ನೀಡಿ ಶುಭ ಕೋರಿದರು. ಇದೇ ಸಂದರ್ಭ ಅಭಿಮಾನಿಯೊಬ್ಬರು ಈಶ್ವರಪ್ಪರವರಿಗೆ ಕಬ್ಬಿನ ಜಲ್ಲೆ ನೀಡಿ ಶುಭ ಕೋರಿದರು. ಶಿವಮೊಗ್ಗ ನಗರದ ಬಿ.ಬಿ.ರಸ್ತೆಯಲ್ಲಿರುವ ಶ್ರೀ ಕೂಡಲಿ ಆರ್ಯ ಅಕ್ಷೋಭ್ಯತೀರ್ಥ ಮಠಕ್ಕೆ ಭೇಟಿ ನೀಡಿ ಶ್ರೀ ರಘು ವಿಜಯತೀರ್ಥ ಮಹಾಸ್ವಾಮಿಗಳ ಆಶೀರ್ವಾದ ಪಡೆದರು.

1 ಲಕ್ಷ ಮತಗಳ ಅಂತರದಲ್ಲಿ ಗೆಲುವು: ಈಶ್ವರಪ್ಪ ವಿಶ್ವಾಸ

ಶಿವಮೊಗ್ಗ: ಶೇ.60ರಷ್ಟು ಬಿಜೆಪಿ ಕಾರ್ಯಕರ್ತರು, ಕಾಂಗ್ರೆಸ್‌, ಜೆಡಿಎಸ್‌ ನಾಯಕರು ನನಗೆ ಬೆಂಬಲ ನೀಡುತ್ತಿದ್ದಾರೆ. ಜನರಿಂದ ನಿರೀಕ್ಷೆಗೆಗೂ ಮೀರಿ ಬೆಂಬಲ ಸಿಗುತ್ತಿರು ವುದು ನೋಡಿದರೆ ನನ್ನ ಗೆಲುವು ನಿಶ್ಚಿತವಾಗಿದೆ ಎಂದು ಲೋಕಸಭಾ ಚುನಾವಣೆ ಸ್ವತಂತ್ರ ಅಭ್ಯರ್ಥಿ ಕೆ.ಎಸ್‌.ಈಶ್ವರಪ್ಪ ಹೇಳಿದರು.

ನಗರದಲ್ಲಿ ವಿಪ್ರ ಟ್ರಸ್ಟ್, ವಿಪ್ರ ಮಹಿಳೆಯರಿಂದ ಬುಧವಾರ ಸಂಜೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ಕ್ಷೇತ್ರದ ಯಾವುದೇ ಊರಿಗೆ ಹೋದರು ಜನ ನಿರೀಕ್ಷೆ ಮೀರಿ ಬೆಂಬಲ ಕೊಡುತ್ತಿದ್ದಾರೆ. ಜನರ ಬೆಂಬಲ ನೋಡುತ್ತಿದ್ದರೆ ಇವತ್ತೇ ಚುನಾವಣೆ ನಡೆದರೆ ಒಂದು ಲಕ್ಷ ಮತ ಅಂತರದಲ್ಲಿ ಗೆಲ್ಲುವುದು ಖಚಿತವಾಗಿದೆ ಎಂದರು.

ನನಗೆ ಲಿಂಗಾಯಿತರು, ವೀರಶೈವರು ಸೇರಿದಂತೆ ಎಲ್ಲ ಸಮುದಾಯದವರು ನನ್ನ ಪರ ಪ್ರಚಾರ ಮಾಡುತ್ತಿದ್ದಾರೆ. ಸುಮಾರು ಶೇ.60ರಷ್ಟು ಬಿಜೆಪಿ ಕಾರ್ಯ ಕರ್ತರು, ಕಾಂಗ್ರೆಸ್‌, ಜೆಡಿಎಸ್‌ ನಾಯಕರು ನನಗೆ ಬೆಂಬಲ ನೀಡುತ್ತಿದ್ದಾರೆ. ನಾನು ಯಾವ ವಿಚಾರ ಇಟ್ಟುಕೊಂಡು ಈ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿ ದ್ದೇನೋ ಅದಕ್ಕೆ ಎಲ್ಲರೂ ಬೆಂಬಲ ಸಿಗುತ್ತಿರುವುದು ನೋಡಿದರೆ ನೂರಕ್ಕೆ ನೂರು ಗೆಲ್ಲುತ್ತೇನೆ ಎಂಬ ವಿಶ್ವಾಸ ಹೆಚ್ಚಿಸಿದೆ ಎಂದರು.ನಾನು ಸ್ಪರ್ಧೆ ಮಾಡುತ್ತೇನೆ ಎಂದಾಗ ಈಶ್ವರಪ್ಪ ಸ್ಪರ್ಧೆ ಮಾಡಲ್ಲ, ನಾಮಪತ್ರ ಸಲ್ಲಿಸಲ್ಲ ಎಂದು ಅಪ್ಪ-ಮ್ಕಕಳು ಇದೇ ರೀತಿ ಅಪಪ್ರಚಾರ ಮಾಡಿಕೊಂಡು ಬಂದರು. ಆದರೆ, ಹಲವರು ನನ್ನ ಸಿದ್ಧಾಂತವನ್ನು ಮೆಚ್ಚಿದರು ಎಂದು ತಿಳಿಸಿದರು.

ಚುನಾವಣೆ ಬಳಿಕ ಬಿಜೆಪಿಯಲ್ಲಿ ಶುದ್ದೀಕರಣ ಆಗಲಿದೆ. ಹಿಂದುತ್ವ ಪರವಾಗಿರುವವರು ನನಗೆ ಹೆಚ್ಚಿನ ಬೆಂಬಲ ನೀಡುತ್ತಿದ್ದಾರೆ. ಅನೇಕರಿಗೆ ಇನ್ನೂ ನನ್ನ ಚಿಹ್ನೆ ಕಮಲ ಎಂದುಕೊಂಡಿದ್ದಾರೆ. ಬಿಜೆಪಿಯಿಂದ ನನ್ನ ದೂರ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಆದರೆ, ಈ ಚುನಾವಣೆಯಲ್ಲಿ ನನ್ನ ಚಿಹ್ನೆ ಕಮಲ ಅಲ್ಲ. ಕಬ್ಬಿನ ಜಲ್ಲೆ ಜೊತೆ ನಿಂತಿರುವ ರೈತ ಚಿಹ್ನೆ ನನ್ನದು. ರೈತನ ಚಿಹ್ನೆ ಸಿಕ್ಕಿರುವುದು ತುಂಬಾನೇ ಸಂತೋಷವಾಗಿದೆ. 

ನನ್ನ ಚಿಹ್ನೆ ರೈತ ಎಂದು ತಿಳಿಸಿ ನನ್ನ ಪರ ಪ್ರಚಾರ ಮಾಡಬೇಕು ಎಂದು ಕರೆ ನೀಡಿದರು.ಕಾರ್ಯಕ್ರಮದಲ್ಲಿ ರಮೇಶ್ ಹೊಯ್ಸಳ, ವಿಪ್ರ ಸಹಕಾರ ಸಂಘದ ಸದಸ್ಯೆ ಉಮಾ ಮೂರ್ತಿ, ವಿಜಯ ಲಕ್ಷ್ಮಿ ಹೊಯ್ಸಳ ಸೇರಿದಂತೆ ಹಲವರು ಉಪಸ್ಥಿತರಿದ್ದರು.ಕೆ.ಎಸ್‌.ಈಶ್ವರಪ್ಪಗೆ ಕನ್ಸಟ್ರಕ್ಷನ್ ವರ್ಕರ್ಸ್ ಯೂನಿಯನ್ ಬೆಂಬಲಶಿವಮೊಗ್ಗ: ಲೋಕಸಭೆ ಚುನಾವಣೆಗೆ ಶಿವಮೊಗ್ಗ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಮಾಜಿ ಸಚಿವ ಕೆ.ಎಸ್‌. ಅವರಿಗೆ ಟ್ಟಡ ಕಾರ್ಮಿಕರ ಸಂಘವು ಸಂಪೂರ್ಣ ಬೆಂಬಲ ನೀಡಲಿದೆ ಎಂದು ಕರ್ನಾಟಕ ಕನ್ನಟ್ರಕ್ಷನ್ ವರ್ಕರ್ಸ್ ಯೂನಿಯನ್ ಅಧ್ಯಕ್ಷ ಆರ್. ವಾಸುದೇವನ್ ಹೇಳಿದರು.ಇಲ್ಲಿನ ಪ್ರೆಸ್‌ಟ್ರಸ್ಟ್‌ನಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಕಬ್ಬು ಮತ್ತು ರೈತ’ ಚಿಹ್ನೆಯಡಿ ಸ್ಪರ್ಧಿಸುತ್ತಿರುವ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರಿಗೆ ಕಟ್ಟಡ ಕಾರ್ಮಿಕರ ಸಂಘವು ಸಂಪೂರ್ಣ ಬೆಂಬಲವನ್ನು ಸೂಚಿಸಿದೆ ಎಂದರು.

ಕಟ್ಟಡ ಕಾರ್ಮಿಕ ಸಂಘಕ್ಕೆ ಈಶ್ವರಪ್ಪ ಅವರಿಂದ ತುಂಬಾ ಸಹಾಯ ಮತ್ತು ಅನುಕೂಲಗಳು ಆಗಿವೆ. ಸಂಘದ ಖಾಲಿ ನಿವೇಶನ ಸಿ.ಎ.ಸೈಟ್‌ನಿಂದ ಹಿಡಿದು ಕಟ್ಟಡ ನಿರ್ಮಾಣದವರೆಗೆ ಉಪ ಮುಖ್ಯಮಂತ್ರಿ ಹಾಗೂ ಉಸ್ತುವಾರಿ ಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಸರ್ಕಾರದ ಅನುದಾನದ ಅಡಿಯಲ್ಲಿ ಬೇಕಾದ ಸಹಾಯ ಹಸ್ತವನ್ನು ನೀಡಿದ್ದಾರೆ ಎಂದರು.ರಾಜ್ಯದಲ್ಲಿ ಯಾವುದೇ ಕಟ್ಟಡ ಕಾರ್ಮಿಕರ ಸಂಘದ ವತಿಯಿಂದ ಕಟ್ಟಡ ಕಾರ್ಮಿಕರ ಸೌಹಾರ್ದ ಸಹಕಾರಿ ಸಂಘ ಆಗಿರುವುದಿಲ್ಲ. ಆದರೆ, ನಮ್ಮ ಸಂಘದಲ್ಲಿ ಕಟ್ಟಡ ಕಾರ್ಮಿಕರ ಸೌಹಾರ್ದ ಸಹಕಾರಿ ಸಂಘದ ಸೊಸೈಟಿ ಮಾಡಿದ್ದೇವೆ. ಅದಕ್ಕೂ ಕಾರಣ ಈಶ್ವರಪ್ಪನವರು ಮತ್ತು ಅವರ ಪುತ್ರ ಕೆ.ಇ. ಕಾಂತೇಶ್ ರವರು ಕೊಟ್ಟಿರುವ ಧೈರ್ಯ ಮತ್ತು ಸಹಾಯ . ಅವರ ಮಾರ್ಗದರ್ಶನದಿಂದ ಬಡ ಕಟ್ಟಡ ಕಾರ್ಮಿಕರಿಗೆ ಅನುಕೂಲವಾಗಲೆಂದು ಸೊಸೈಟಿ ನಿರ್ಮಾಣವಾಗಿದೆ ಎಂದರು.

ಆದ್ದರಿಂದ ಎಲ್ಲಾ ಕಟ್ಟಡ ಕಾರ್ಮಿಕರು, ಜನಸಾಮಾನ್ಯರು ಎಲ್ಲರೂ ತಮ್ಮ ಮತವನ್ನು 8ನೇ ನಂಬರ್ ನ ‘ಕಬ್ಬು ಮತ್ತು ರೈತ‘ ಚಿಹ್ನೆಗೆ ಮತ ನೀಡುವಂತೆ ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಯೂನಿಯನ್ ಪದಾಧಿಕಾರಿಗಳಾದ ಮೋಹನ್, ಕುಮಾರ್, ಬಸವರಾಜ, ಬಾಲಕೃಷ್ಣ ಮೊದಲಾದವರಿದ್ದರು.