ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ, ಶ್ರೀ ಬಸವೇಶ್ವರ ಜಯಂತಿಯಲ್ಲಿ ಡಾ.ವೀರಸೋಮೇಶ್ವರ ಶ್ರೀ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಯುವ ಪೀಳಿಗೆಗೆ ಶಿಕ್ಷಣದೊಂದಿಗೆ ಸಂಸ್ಕಾರ, ಸದ್ವಿಚಾರಗಳನ್ನು ಮನವರಿಕೆ ಮಾಡಿಕೊಡುವುದರಲ್ಲಿ ಹಿಂದುಳಿದ್ದೇವೆ ಎಂದು ಬಾಳೆಹೊನ್ನೂರಿನ ಶ್ರೀ ರಂಭಾಪುರಿ ಪೀಠದ ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.

ನಗರದ ಶ್ರೀ ಜಗದ್ಗುರು ರೇಣುಕಾಚಾರ್ಯ ಸಮುದಾಯ ಭವನದಲ್ಲಿ ಬುಧವಾರ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಭಕ್ತಿ ಭಂಡಾರಿ ಶ್ರೀ ಬಸವೇಶ್ವರ ಜಯಂತಿ ಅಂಗವಾಗಿ ಜನ ಜಾಗೃತಿ ಧರ್ಮ ಸಮಾರಂಭದಲ್ಲಿ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದ ಶ್ರೀಗಳು ಇತ್ತೀಚಿನ ದಿನಗಳಲ್ಲಿ ಬಣ್ಣದ ಮಾತುಗಳ ಮೂಲಕ ಧರ್ಮದ ಸ್ವಾಸ್ಥ್ಯ ಹಾಳು ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಧರ್ಮ, ಸಂಸ್ಕೃತಿ, ಪರಂಪರೆ ಬಗ್ಗೆ ಸ್ವಲ್ಪವಾದರೂ ಚಿಂತನೆ ಪರಿಪಾಲಿಸದಿದ್ದರೆ, ಮುಂದಿನ ಪೀಳಿಗೆ ಏನೆಲ್ಲಾ ಸಮಸ್ಯೆ ಆಗಬಹುದು ಎಂಬುದನ್ನು ಆಲೋಚನೆ ಮಾಡಬೇಕಾಗಿದೆ ಎಂದು ಎಚ್ಚರಿಸಿದರು.

ಜನಮನ ಜಾಗೃತಗೊಳಿಸಲು ಧರ್ಮ ಬೇಕು. ಗುರುವಿನ ದರ್ಶನ ಪಡೆಯಲು ಭಾಗ್ಯಬೇಕು. ಗುರು ದರ್ಶನ ಸಂಸ್ಕಾರದಿಂದ ಭವ ಬಂಧನ ದೂರವಾಗುತ್ತದೆ. ಪ್ರಾಪಂಚಿಕ ಸಂಬಂಧಗಳು ಕಾಲಾಂತರದಲ್ಲಿ ಶಿಥಿಲಗೊಳ್ಳಬಹುದು. ಆದರೆ ಗುರು ಶಿಷ್ಯರ ಸಂಬಂಧ ಚಿರಂತನ ನಿತ್ಯ ನೂತನ. ನೊಂದವರ ಬಾಳಿನ ಬೆಳಕು ಶ್ರೀ ಗುರು. ಅರಿವಿನ ಚೈತನ್ಯದ ಪ್ರತೀಕ. ವೀರಶೈವ ಧರ್ಮ ವೃಕ್ಷದ ತಾಯ್ಬೇರು ಶ್ರೀ ಜಗದ್ಗುರು ರೇಣುಕಾಚಾರ್ಯರು. ಆ ಧರ್ಮ ವೃಕ್ಷದ ಹೂ ಹಣ್ಣು ಬಸವಾದಿ ಶರಣರು ಇದ್ದಂತೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಕರ್ಮ ಕಳೆದು ಧರ್ಮ ಬಿತ್ತಿ ಬದುಕನ್ನು ಬಂಗಾರಗೊಳಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಶಿವಪಥವನರಿಯಲು ಗುರು ಪಥವೇ ಮೊದಲು ಎಂದು ಸಾರಿದವರು ಬಸವಣ್ಣ ಎಂದರು.


ಸಮಾರಂಭ ಉದ್ಘಾಟಿಸಿದ ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ, ತಂದೆ ಮೆಚ್ಚಿದರೆ ಮಗನ ಶ್ರೇಯಸ್ಸು. ಗುರು ಮೆಚ್ಚಿದರೆ ಶಿಷ್ಯನ ಉದ್ಧಾರ ಸಾಧ್ಯ. ಗುರುದೇವನ ಕರುಣೆ ಕಿರಿದಲ್ಲ. ಆ ಹೃದಯ ಹರಕೆಗೆ ಸಮಾನವಾದುದು ಇನ್ನೊಂದಿಲ್ಲ ಎಂದರು.

ಬೇರುಗಂಡಿ ಬೃಹನ್ಮಠದ ಶ್ರೀ ರೇಣುಕ ಮಹಾಂತ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಭಕ್ತಿ ಭಂಡಾರಿ ಶ್ರೀ ಬಸವೇಶ್ವರರು ಕೆಡಕುಗಳನ್ನು ಮೆಟ್ಟಿ ನಿಂತು ಒಳಿತಿನತ್ತ ಹೆಜ್ಜೆ ಹಾಕಲು ಪ್ರೇರೇಪಿಸಿದ ಮಹಾನುಭಾವರು. ಬಾಳಿಗೊಂದು ಗುರಿ ಮತ್ತು ಗುರು ಇರಬೇಕೆಂಬುದನ್ನು ಮನವರಿಕೆ ಮಾಡಿ ಕೊಟ್ಟವರು ಎಂದು ಅಭಿಪ್ರಾಯಪಟ್ಟರು.

ಶ್ರೀ ಶಂಕರದೇವರಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ಶ್ರೀ ಜಗದ್ಗುರು ರೇಣುಕಾಚಾರ್ಯರ ಧಾರ್ಮಿಕ ಮತ್ತು ಸಾಮಾಜಿಕ ಮೌಲ್ಯಗಳ ವಿಚಾರಧಾರೆ ಎಂದೆಂದಿಗೂ ಎಲ್ಲರಿಗೂ ಅಗತ್ಯ. ಅಹಿಂಸಾದಿ ಧ್ಯಾನ ಪರ್ಯಂತರ ದಶಧರ್ಮ ಸೂತ್ರಗಳು ಬಾಳಿನ ವಿಕಾಸಕ್ಕೆ ಅಡಿಪಾಯ. ಭೌತಿಕ ಬದುಕಿಗೆ ಶ್ರೀ ಜಗದ್ಗುರು ರೇಣುಕಾಚಾರ್ಯರ ಚಿಂತನೆ ಭಾಗ್ಯೋದಯದ ಬೆಳಕಿಗೆ ಮೂಲ ಎಂದು ಹೇಳಿದರು.

ಬಾಳೆಹೊನ್ನೂರು ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲ ಸಾಧಕರಿಂದ ವೇದಘೋಷ ಜರುಗಿತು. ಶ್ರೀ ರಂಭಾಪುರಿ ಜಗದ್ಗುರು ಇಷ್ಟಲಿಂಗ ಮಹಾಪೂಜಾ ನೆರವೇರಿಸಿ ಸರ್ವರಿಗೂ ಶುಭ ಹಾರೈಸಿದರು. ಶಂಕರದೇವರಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯರು 16 ವಟುಗಳಿಗೆ ಶಿವದೀಕ್ಷಾ ಅಯ್ಯಾಚಾರ ಸಂಸ್ಕಾರ ನೀಡಿ ಮಂತ್ರೋಪದೇಶ ಮಾಡಿದರು. ಪಾರ್ವತಿ ಮಹಿಳಾ ಬಳಗ ಮತ್ತು ಅಕ್ಕಮಹಾದೇವಿ ಸಂಘದ ಸದಸ್ಯರು ಪ್ರಾರ್ಥನೆ ಸಲ್ಲಿಸಿದರು.

ಹುಲಿಕೆರೆ ದೊಡ್ಡಮಠದ ಶ್ರೀ ವಿರೂಪಾಕ್ಷಲಿಂಗ ಶಿವಾಚಾರ್ಯ ಸ್ವಾಮಿಜಿ, ಶ್ರೀ ಜಗದ್ಗುರು ರೇಣುಕಾಚಾರ್ಯ ಟ್ರಸ್ಟಿನ ಪದಾಧಿಕಾರಿ ಯು.ಎಂ.ಬಸವರಾಜ್, ಎಂ.ಡಿ.ಪುಟ್ಟಸ್ವಾಮಿ, ಎಸ್.ಎಂ.ದೇವಣ್ಣಗೌಡ, ಎಚ್.ಎನ್.ನಂಜೇಗೌಡ, ಬಿ.ಎ.ಶಿವಶಂಕರ್, ಸಿ.ವಿ.ಮಲ್ಲಿಕಾರ್ಜುನ್ ಮೊದಲಾದವರಿದ್ದರು.-- ಕೋಟ್‌--ರವಿ ಕಿರಣದಿಂದ ಪುಷ್ಪ ಅರಳಿದರೆ ಗುರು ಕರುಣದಿಂದ ಆತ್ಮ ಅರಳುತ್ತದೆ. ಜಗ ಬೆಳಗಲು ಸೂರ್ಯ ಬದುಕು ಬೆಳಗಲು ಗುರು ಬೇಕು. ಗುರುವಿನ ಆಧ್ಯಾತ್ಮ ಶಕ್ತಿ ಅದ್ಭುತ. ಶ್ರೀ ಜಗದ್ಗುರು ರೇಣುಕಾಚಾರ್ಯರ ತತ್ವ ಸಿದ್ಧಾಂತಗಳು ಮತ್ತು ಬಸವಣ್ಣನವರ ಸಾಮಾಜಿಕ ಚಿಂತನಗಳು ಬದುಕಿನ ವಿಕಾಸಕ್ಕೆ ಅವಶ್ಯಕ

ಎ.ಬಿ. ಸುದರ್ಶನ ಉಪಾಧ್ಯಕ್ಷ, ಜಗದ್ಗುರು ರೇಣುಕಾಚಾರ್ಯ ಟ್ರಸ್ಟ್‌, ಚಿಕ್ಕಮಗಳೂರು