ಪೊಲೀಸರ ಲಾಠಿಗೆ ನಾವು ಹೆದರುವುದಿಲ್ಲ

| Published : Dec 13 2024, 12:47 AM IST

ಸಾರಾಂಶ

ಸ್ವತಃ ಲಾಠಿ ಹಿಡಿದುಕೊಂಡು ಪಂಚಮಸಾಲಿಗಳ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಪೊಲೀಸ ಮಹಾನಿರ್ದೇಶಕ ಆರ್.ಹಿತೆಂದ್ರ ಅವರನ್ನು ಕೂಡಲೇ ಸೇವೆಯಿಂದ ವಜಾಗೊಳಿಸಬೇಕು

ನರಗುಂದ: ಕಿತ್ತೂರ ರಾಣಿ ಚೆನ್ನಮ್ಮನ ವಂಶಸ್ಥರಾದ ನಾವು ಬ್ರಿಟಿಷರ ಗುಂಡಿಗೆ ಹೆದರದೇ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ್ದೇವೆ. ಇನ್ನೂ ಪೊಲೀಸರ ಲಾಠಿಗೆ ಹೆದರುವದಿಲ್ಲ. ನಮಗೆ 2ಎ ಮೀಸಲಾತಿ ಸಿಗುವರೆಗೆ ಹೋರಾಟ ನಿಲ್ಲಿಸುವದಿಲ್ಲ ಎಂದು ಪಂಚಮಸಾಲಿ ಯುವ ಮುಖಂಡ ಉಮೇಶಗೌಡ ಪಾಟೀಲ ಹೇಳಿದರು.

ಅವರು ಗುರುವಾರ ಪಟ್ಟಣದ ರಾಣಿ ಕಿತ್ತೂರ ರಾಣಿ ಚೆನ್ನಮ್ಮ ವೃತ್ತದಿಂದ ಶಾಂತಿಯುತವಾಗಿ ಪಂಚಮಸಾಲಿ ಸಮಾಜ 2ಮೀಸಲಾತಿಗಾಗಿ ಹೋರಾಟ ಮಾಡುವರ ಮೇಲೆ ಬೆಳಗಾವಿಯಲ್ಲಿ ಲಾಠಿ ಜಾರ್ಜ ಮಾಡಿದ್ದನ್ನು ಖಂಡಿಸಿ ಛತ್ರಪತಿ ಶಿವಾಜಿ ಮಹಾರಾಜರ ವೃತ್ತದವರಗೆ ಪಾದಯಾತ್ರೆ ಮಾಡಿ ಆ ನಂತರ 2 ಗಂಟೆಗೆ ಹುಬ್ಬಳ್ಳಿ-ಸೋಲ್ಲಾಪುರ ರಾಷ್ಟ್ರೀಯ ಹೆದ್ದಾರಿ ಬಂದ ಮಾಡಿ ಲಿಂಗಾಯತ ವಿರೋಧಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕೃತಿ ದಹನ ಮಾಡಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಮಾತನಾಡಿದರು.

ಕೂಡಲಸಂಗಮದ ಪಂಚಮಸಾಲಿ ಜಗದ್ಗುರು ಬಸವ ಜಯ ಮೃತ್ಯುಂಜಯ ಮಹಾಸ್ವಾಮಿಗಳ ನೇತೃತ್ವದಲ್ಲಿ ಲಿಂಗಾಯತ ಪಂಚಮಸಾಲಿ ಸಮುದಾಯದ 2ಎ ಮೀಸಲಾತಿ ಹೋರಾಟವನ್ನು ಬೆಳಗಾವಿಯ ಸುವರ್ಣ ವಿಧಾನಸೌಧ ಮುಂಭಾಗದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಪೊಲೀಸರು ಪ್ರತಿಭಟನೆ ನಿಯಂತ್ರಿಸಲು ಲಾಠಿಚಾರ್ಜ್ ನೆಪದಲ್ಲಿ ಮಾರಣಾಂತಿಕ ಹಲ್ಲೆ ನಡೆಸಿದ ಹಿನ್ನೆಲೆಯಲ್ಲಿ ಸುಮಾರು ಸಾವಿರಾರು ಜನರಿಗೆ ಗಂಭೀರ ಗಾಯಗಳಾಗಿದ್ದು, ನೂರಕ್ಕೂ ಹೆಚ್ಚು ಹೋರಾಟಗಾರರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು.

ನರಗುಂದ ಪಂಚಮಸಾಲಿ ಸಮುದಾಯದ ನ್ಯಾಯವಾದಿ ಎಸ್.ಆರ್.ಪಾಟೀಲ ಮೇಲೆ ಹಾಗೂ ರೈತರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಸರ್ಕಾರದ ಧೋರಣೆ ಸರಿಯಲ್ಲ. ಸ್ವತಃ ಲಾಠಿ ಹಿಡಿದುಕೊಂಡು ಪಂಚಮಸಾಲಿಗಳ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಪೊಲೀಸ ಮಹಾನಿರ್ದೇಶಕ ಆರ್.ಹಿತೆಂದ್ರ ಅವರನ್ನು ಕೂಡಲೇ ಸೇವೆಯಿಂದ ವಜಾಗೊಳಿಸಬೇಕು. ಕೂಡಲೇ ಮುಖ್ಯಮಂತ್ರಿಗಳು ಕ್ಷಮೆ ಕೇಳಿ, ಕುತಂತ್ರ ರಾಜಕಾರಣಕ್ಕೆ ಕಡಿವಾಣ ಹಾಕಬೇಕು ಎಂದರು.

ತಹಸೀಲ್ದಾರ್‌ ಶ್ರೀಶೈಲ ತಳವಾರ ಪ್ರತಿಭಟನಾಕಾರರ ಮನವಿ ಸ್ವೀಕರಿಸಿ ರಾಜ್ಯಪಾಲರಿಗೆ ರವಾನೆ ಮಾಡಲಾಗುವುದು ಎಂದರು.

ಸಾರ್ವಜನಿಕರ ಪರದಾಟ: ಸುಮಾರು 2 ಗಂಟೆಗಳ ಕಾಲ ರಸ್ತೆ ಬಂದ್‌ ಮಾಡಿದ್ದರಿಂದ ದೂರದ ಊರುಗಳಿಗೆ ತೆರಳುವ ಪ್ರಯಾಣಿಕರು ಪರದಾಡುವಂತಾಯಿತು.

ವಾಗ್ವಾದ: ಸಿಎಂ ಪ್ರತಿಕೃತ ದಹನ ಮಾಡಲು ಪಂಚಮಸಾಲಿ ಸಮಾಜದವರು ಮುಂದಾದ ವೇಳೆ ಡಿವೈಎಸ್ಪಿ ಹಾಗೂ ಸಿಪಿಐ ಅಡ್ಡಿಪಡಿಸಿದ್ದರಿಂದ ಪೊಲೀಸರು ಮತ್ತು ಪ್ರತಿಭಟಿನಾಕಾರರ ಮಧ್ಯ ಮಾತಿನ ಚಕಮಕಿ ನಡೆಯಿತು.

ತಾಲೂಕು ಪಂಚಮಸಾಲಿ ಅಧ್ಯಕ್ಷ ಡಾ. ಸಿ.ಕೆ. ರಾಚನಗೌಡ್ರ, ಡಾ. ಭದ್ರಗೌಡ, ಆರ್.ಎನ್. ಪಾಟೀಲ, ಶಿವಾನಂದ, ಮುತ್ತವಾಡ, ಅಪ್ಪಣ್ಣ ನಾಯ್ಕರ, ನ್ಯಾಯವಾದಿ ಎಸ್.ಆರ್. ಪಾಟೀಲ, ನಿಂಗಣ್ಣ ಗಾಡಿ, ಎಸ್.ಡಿ. ಕೊಳ್ಳಿ, ಪ್ರಕಾಶ ಪಟ್ಟಣಶೆಟ್ಟಿ, ವಿ.ಎನ್. ಕೊಳ್ಳಿ, ಈಶ್ವರಗೌಡ ಪಾಟೀಲ, ಎಂ.ಬಿ. ಅರಹುಣಿಸಿ, ಭೀಮಸಿ ಯಾವಗಲ್, ಮಹೇಶ ಹಟ್ಟಿ, ಸಂಗಪ್ಪ ಪೂಜಾರ, ಪರಪ್ಪ ಸಹಕಾರ, ನವೀನ ಪಾಟೀಲ, ಶಿವಾನಂದ ತೆಗ್ಗಿನಮನಿ, ಅಜೀತಗೌಡ ಪಾಟೀಲ, ಸೇರಿದಂತೆ ಸಮಾಜದ ಬಾಂಧವರು ಇದ್ದರು.