ನಾವ್ಯಾರೂ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ವಿರೋಧಿಗಳಲ್ಲ. ರಾಜ್ಯ, ರಾಷ್ಟ್ರೀಯ ನಾಯಕರೂ ಯತ್ನಾಳ್ ವಿರೋಧಿಗಳಲ್ಲ. ಮತ್ತೆ ಮತ್ತೆ ಹೇಳಿಕೆಗಳು ಮರು ಕಳಿಸಬಾರದಷ್ಟೇ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದ್ದಾರೆ.
- ಎಲ್ಲ ಚುನಾವಣೆ ವಿಜಯೇಂದ್ರ ನೇತೃತ್ವದಲ್ಲೇ ಎದುರಿಸಿ ಬಿಜೆಪಿ ಅಧಿಕಾರಕ್ಕೆ: ವಿಶ್ವಾಸ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ನಾವ್ಯಾರೂ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ವಿರೋಧಿಗಳಲ್ಲ. ರಾಜ್ಯ, ರಾಷ್ಟ್ರೀಯ ನಾಯಕರೂ ಯತ್ನಾಳ್ ವಿರೋಧಿಗಳಲ್ಲ. ಮತ್ತೆ ಮತ್ತೆ ಹೇಳಿಕೆಗಳು ಮರು ಕಳಿಸಬಾರದಷ್ಟೇ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದ್ದಾರೆ.ನಗರದಲ್ಲಿ ಶುಕ್ರವಾರ ವಿಧಾನ ಪರಿಷತ್ತು ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆ ಹಿನ್ನೆಲೆ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಬಿಜೆಪಿಗೆ ಯಾರೂ ಅನಿವಾರ್ಯವಲ್ಲ. ಎಲ್ಲರೂ ಒಂದಾಗಿ ಹೋಗಬೇಕು. ವಿಧಾನಸೌಧದದಲ್ಲಿ ಯತ್ನಾಳ್ ಭೇಟಿಯಾಗುತ್ತಿರುತ್ತೇವೆ, ಮಾತನಾಡುತ್ತೇವೆ. ಹಿರಿಯ ಪತ್ರಕರ್ತ ಅಜಿತ್ ಹನುಮಕ್ಕನವರ್ ನಿವಾಸದಲ್ಲಿ ಬಸನಗೌಡ ಪಾಟೀಲ ಯತ್ನಾಳ, ಬಿ.ವೈ.ವಿಜಯೇಂದ್ರ ಭೇಟಿಯಾಗಿದ್ದರು. ಹನುಮಕ್ಕನವರ್ ನನಗೂ ಆಹ್ವಾನಿಸಿದ್ದರು. ಯತ್ನಾಳ್, ಕೆ.ಎಸ್.ಈಶ್ವರಪ್ಪ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳಿ. ಯಾರು ಬೇಡ ಅಂದಿದ್ದಾರೆ ಎಂದು ಪ್ರಶ್ನಿಸಿದರು.
ಸೂರ್ಯ, ಚಂದ್ರ ಇರುವುದು ಎಷ್ಟು ಸತ್ಯವೋ, ಬಿ.ವೈ.ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ಮುಂದುವರಿಯುವುದು ಅಷ್ಟೇ ಸತ್ಯ. ವಿಜಯೇಂದ್ರ ನೇತೃತ್ವದಲ್ಲೇ ಮುಂಬರುವ ಗ್ರಾಪಂ, ತಾಪಂ, ಜಿಪಂ, ಪಪಂ, ಪುರಸಭೆ, ನಗರಸಭೆ, ಮಹಾನಗರ ಪಾಲಿಕೆ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆ, ವಿಧಾನಸಭೆ ಚುನಾವವಣೆ-2028ಕ್ಕೂ ಹೋಗುತ್ತೇವೆ. ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೂ ತರುತ್ತೇವೆ ಎಂದು ಅವರು ಹೇಳಿದರು.ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಪಕ್ಷವು ಎನ್‌ಡಿಎ ಭಾಗವಾಗಿದೆ. ನಮ್ಮ ಪಕ್ಷಕ್ಕಾಗಿ ನಮ್ಮೆಲ್ಲಾ ಕಾರ್ಯಕರ್ತರು ಬೆವರು ಸುರಿಸಿ, ಪಕ್ಷವನ್ನು ಕಟ್ಟಿದ್ದಾರೆ. ಬಿಜೆಪಿ ಸರ್ಕಾರ ರಚನೆಗೆ ಬೇಕಾದ 125-130 ಕ್ಷೇತ್ರಗಳಲ್ಲಿ ನಾವು ಗೆದ್ದೇ ಗೆಲ್ಲುತ್ತೇವೆ. ರಾಷ್ಟ್ರೀಯ ಮತ್ತು ರಾಜ್ಯ ನಾಯಕರ ನೇತೃತ್ವದಲ್ಲಿ ಎನ್‌ಡಿಎ ಮೈತ್ರಿಕೂಟ ರಾಜ್ಯದಲ್ಲಿ ಜಯ ಸಾಧಿಸಲಿದೆ. ಈಗಾಗಲೇ ಉಭಯ ಪಕ್ಷಗಳು ಜಂಟಿಯಾಗಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟಗಳನ್ನೂ ನಡೆಸುತ್ತಿವೆ ಎಂದು ತಿಳಿಸಿದರು.
ಮೀಸಲಾತಿಯೇ ಅವೈಜ್ಞಾನಿಕವಾಗಿದ್ದು, ಎಲ್ಲ ಸಮಾಜಕ್ಕೂ ಸಾಮಾಜಿಕ ನ್ಯಾಯ ಕೊಡಬೇಕಾಗಿತ್ತು. ಆದರೆ, ರಾಜ್ಯದ ಕಾಂಗ್ರೆಸ್ ಸರ್ಕಾರ ಈ ವಿಚಾರದಲ್ಲಿ ಗೊಂದಲ ಮೂಡಿಸಿದೆ. ಮುಖ್ಯಮಂತ್ರಿಗಳು ಆನೆ ನಡೆದಿದ್ದೇ ದಾರಿ ಎಂಬಂತೆ ಹೊರಟಿದ್ದಾರೆ. ರಾಜ್ಯದಲ್ಲಿ ಇಂತಹದ್ದೆಲ್ಲಾ ನಡೆಯುವುದಿಲ್ಲ. ಮತದಾರನೆಂಬ ಮಾವುತನು ಮದಿಸಿದ ಆನೆಯನ್ನು ಹೇಗೆ ನಿಯಂತ್ರಿಸಬೇಕು ಎಂಬುದನ್ನೂ ಬಲ್ಲವನೆಂಬುದನ್ನು ಮರೆಯಬಾರದು ಎಂದು ಸೂಚ್ಯವಾಗಿ ಸಿಎಂಗೆ ಎಚ್ಚರಿಸಿದರು.ಪ್ರತಿ ಪಕ್ಷದ ನಾಯಕ ಆರ್.ಅಶೋಕ ಯಾವ ಕಾರಣಕ್ಕಾಗಿ ದೆಹಲಿಗೆ ಹೋಗಿದ್ದಾರೆಂಬುದು ನನಗೆ ಮಾಹಿತಿ ಇಲ್ಲ. ರಾಜ್ಯದ ವಿಚಾರವಾಗಿ ಹೋಗಿರಬಹುದು. ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವವಣೆಯಂತೂ ಸಾಧ್ಯವಿಲ್ಲ. ಇದನ್ನು ಘಂಟಾಘೋಷವಾಗಿ ನಾನು ಹೇಳುತ್ತೇನೆ. ಬಿ.ವೈ.ವಿಜಯೇಂದ್ರರನ್ನು ರಾಜ್ಯಾಧ್ಯಕ್ಷರಾಗಿ ಮಾಡಿದ್ದು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಜೆ.ಪಿ.ನಡ್ಡಾ ಹಾಗೂ ಸಂತೋಷ್ ಜೀಯವರು. ಹಾಗಾಗಿ ವಿಜಯೇಂದ್ರ ಅವರೇ ಮುಂದುವರಿಯುತ್ತಾರೆ ಎಂದು ಎಂ.ಪಿ.ರೇಣುಕಾಚಾರ್ಯ ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಮುಖಂಡರಾದ ಬಿ.ಜಿ.ಅಜಯಕುಮಾರ, ಬಿ.ಎಸ್.ಜಗದೀಶ, ಚೇತನಾ ಬಾಯಿ, ಶಾಂತಾ ದೊರೆ, ಅಶ್ವಿನಿ ಕೃಷ್ಣ, ರಾಜು ವೀರಣ್ಣ, ಪ್ರವೀಣ ಜಾಧವ್, ಪಂಜು ಪೈಲ್ವಾನ್ ಇತರರು ಇದ್ದರು.- - -
(ಬಾಕ್ಸ್-1)* ವಿಪ 4 ಕ್ಷೇತ್ರಗಳಲ್ಲೂ ಎನ್‌ಡಿಎ ಗೆಲವು ನಿಶ್ಚಿತ
ದಾವಣಗೆರೆ: ವಿಧಾನ ಪರಿಷತ್‌ನ ಆಗ್ನೇಯ ಪದವೀಧರರ ಕ್ಷೇತ್ರವೂ ಸೇರಿದಂತೆ ನಾಲ್ಕೂ ಕ್ಷೇತ್ರಗಳಲ್ಲಿ ಬಿಜೆಪಿ-ಜೆಡಿಎಸ್‌ನ ಎನ್‌ಡಿಎ ಗೆಲುವು ನಿಶ್ಚಿತವಾಗಿದೆ. ಮೈತ್ರಿ ಅಭ್ಯರ್ಥಿಗಳ ಗೆಲುವಿಗಾಗಿ ಉಭಯ ಪಕ್ಷಗಳ ಮುಖಂಡರು, ಕಾರ್ಯಕರ್ತರು ಪರಿಣಾಮಕಾರಿಯಾಗಿ ಕೆಲಸ ಮಾಡಿದ್ದಾರೆ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಗ್ನೇಯ ಪದವೀಧರರ ಕ್ಷೇತ್ರದಲ್ಲಿ ಬಿಜೆಪಿಯ ಕೆ.ಎಂ.ಸುರೇಶ ಗೆಲುವು ನೂರಕ್ಕೆ ನೂರು ನಿಶ್ಚಿತವಾಗಿದೆ. ಉಳಿದ 3 ಕ್ಷೇತ್ರದಲ್ಲೂ ಎನ್‌ಡಿಎ ಅಭ್ಯರ್ಥಿಗಳು ಜಯ ದಾಖಲಿಸಲಿದ್ದಾರೆ ಎಂದರು.
ಮೇಲ್ಮನೆಯೆಂದರೆ ಚಿಂತಕರ ಚಾವಡಿಯಾಗಿದೆ. ಆಗ್ನೇಯ ಪದವೀಧರರ ಕ್ಷೇತ್ರದಲ್ಲಿ ಬಿಜೆಪಿ ಜಯ ಗಳಿಸಿಕೊಂಡು ಬಂದಿದೆ. ಬಿಜೆಪಿ ಹೊರತುಪಡಿಸಿದರೆ ಈ ಕ್ಷೇತ್ರವನ್ನು ಜೆಡಿಎಸ್ ಗೆದ್ದಿದೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ಸಿಗೆ ಅಡ್ರೆಸ್ಸೇ ಇಲ್ಲ. ಹಾಗಾಗಿ, ನಾಲ್ಕೂ ವಿಪ ಕ್ಷೇತ್ರಗಳಲ್ಲೂ ನಾವು ಗೆದ್ದೇ ಗೆಲ್ಲುತ್ತೇವೆ ಎಂದು ತಿಳಿಸಿದರು.ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನರಿಗೂ ಸ್ವಲ್ಪ ಹೊತ್ತಿನ ಹಿಂದಷ್ಟೇ ಆಗ್ನೇಯ ಪದವೀಧರರ ಕ್ಷೇತ್ರ ಸೇರಿದಂತೆ ನಾಲ್ಕೂ ವಿಪ ಕ್ಷೇತ್ರಗಳಲ್ಲೂ ನಮ್ಮದೇ ಗೆಲುವು, ನಮ್ಮ ಅಭ್ಯರ್ಥಿಗಳೇ ಗೆಲ್ಲುತ್ತಾರೆಂದು ಹೇಳಿದ್ದೇವೆ. ತಾವು ಗೆಲ್ಲುತ್ತೇವೆಂದು ಎಸ್.ಎಸ್. ಮಲ್ಲಿಕಾರ್ಜುನ ಹೇಳಿದರು. ನಮ್ಮೆಲ್ಲಾ ಮುಖಂಡರು, ಮಹಿಳಾ ಮುಖಂಡರು, ಎಲ್ಲ ಕಾರ್ಯಕರ್ತರು ಕೆಲಸ ಮಾಡಿದ್ದಾರೆ. ಹಾಗಾಗಿ, ಇಲ್ಲಿ ನಮ್ಮದೇ ಗೆಲುವು ನಿಶ್ಚಿತ ಎಂದು ತಿಳಿಸಿದರು.
ಪ್ರಜ್ಞಾವಂತ ಪದವೀಧರರ ಚುನಾವಣೆ ಇದಾಗಿದೆ. ಆದರೆ, ಕಾಂಗ್ರೆಸ್ ಸರ್ಕಾರವು ತೋಳ್ಬಲ, ಹಣಬಲವನ್ನೆಲ್ಲಾ ಇಡೀ ರಾಜ್ಯದಲ್ಲಿ ಬಳಸುತ್ತಿದೆ. ಡಿ.ಕೆ.ಶಿವಕುಮಾರ ನೇತೃತ್ವದ ಕಾಂಗ್ರೆಸ್ ಸರ್ಕಾರ ಇದೇ ಹಣಬಲ, ತೋಳ್ಬಲದ ಆದಾರದ ಮೇಲೆ ರಾಜಕಾರಣ ಮಾಡಲು ಹೊರಟಿದೆ. ನಾಡಿನ ಪ್ರಜ್ಞಾವಂತ ಮತದಾರರು ಯಾವುದಕ್ಕೂ ಬಲಿಯಾಗುವುದಿಲ್ಲ. ವಿಪ ನಾಲ್ಕೂ ಕ್ಷೇತ್ರಗಳಲ್ಲೂ ನಾವೇ ಎನ್‌ಡಿಎ ಅಭ್ಯರ್ಥಿಗಳೇ ಗೆಲ್ಲುತ್ತೇವೆ. ಮುಂದೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಶೇ.100ಕ್ಕೆ ನೂರು ಗೆಲ್ಲುತ್ತೇವೆ. ಆಗ ನಮ್ಮ ಪಕ್ಷಕ್ಕೂ ಶಕ್ತಿ ಬರಲಿದೆ ಎಂದು ಅವರು ಹೇಳಿದರು.ರಾಜ್ಯ ಸರ್ಕಾರ ಮೀಸಲಾತಿ ಘೋಷಿಸಿದೆ. 10 ದಿನ ಆಕ್ಷೇಪಣೆಗೆ ಅವಕಾಶ ನೀಡಿದೆ. ಚುನಾವಣೆಗೆ ಪಟ್ಟಿ ನೀಡಿಲ್ಲ. ಕಾಂಗ್ರೆಸ್ಸಿನ ಸಚಿವರು, ಶಾಸಕರು ಹೇಳಿರುವಂತೆ ಸದ್ಯಕ್ಕೆ ಈ ಸರ್ಕಾರಕ್ಕೆ ಸೋಲಿನ ಭೀತಿ ಕಾಡುತ್ತಿದ್ದು, ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಮಾಡುವ ಮನಸ್ಸಿಲ್ಲ. ಸ್ಥಳೀಯ ಸಂಸ್ಥೆ ಚುನಾವಣೆ ಮತ್ತಷ್ಟು ಮುಂದೆ ಹೋಗಲಿದೆ. ಕಾಂಗ್ರೆಸ್ಸಿಗೆ ಜನರ ಬಳಿ ಮತ ಕೇಳುವ ಹಕ್ಕು ಇಲ್ಲ. ಸ್ಥಳೀಯ ಸಂಸ್ಥೆಗಳಲ್ಲಿ ಸೋತರೆ ಮತ್ತೆ ಎಂದಿಗೂ ಅಧಿಕಾರಕ್ಕೆ ಬರುವುದಿಲ್ಲ. ಹಾಗಾಗಿ, ಚುನಾವಣೆ ನಡೆಸಲು ಕಾಂಗ್ರೆಸ್ ಸರ್ಕಾರ ಸಿದ್ಧವಿಲ್ಲ. ನಾವು ಚುನಾವಣೆಗಳಿಗೆ ಸಜ್ಜಾಗಿದ್ದೇವೆ. ಆದರೆ, ಕಾಂಗ್ರೆಸ್ ಸರ್ಕಾರಕ್ಕೆ ತಾಕತ್ತಿಲ್ಲ, ಚುನಾವಣೆ ಮಾಡುತ್ತಿಲ್ಲ ಅಷ್ಟೇ ಎಂದು ಅವರು ಕುಟುಕಿದರು.
- - -(ಬಾಕ್ಸ್-2)
* ಸ್ಟಿಂಗ್ ಆಪರೇಷನ್ ರಾಜ್ಯಕ್ಕೆ ಕಳಂಕಕಾಂಗ್ರೆಸ್ ಅಂದರೆ ಸಿಡಿ ಫ್ಯಾಕ್ಟರಿ ಇದ್ದಂತೆ. ಸಂತ್ರಸ್ತರೂ ಅವರೇ, ಫಲಾನುಭವಿಗಳೂ ಅವರೇ ಆಗಿದ್ದಾರೆ. ಸಿದ್ಧರಾಮಯ್ಯ ಅವರ ಸಿದ್ಧಾಂತವೇ ಬೇರೆ, ನಮ್ಮ ಸಿದ್ಧಾಂತವೇ ಬೇರೆ. ಅಟಲ್‌ಜೀ, ನರೇಂದ್ರ ಮೋದಿ ನಮಗೆ ಆದರ್ಶವಾಗಿದ್ದಾರೆ. ರೈತನಾಯಕ ಯಡಿಯೂರಪ್ಪ ನಮಗೆ ನಾಯಕರು. ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಸಿಎಂ ಸಿದ್ದರಾಮಯ್ಯ ಮಾಸ್ ಲೀಡರ್‌ಗಳು ಎಂಬುದನ್ನು ಒಪ್ಪಬೇಕು. ಕಾಂಗ್ರೆಸ್ಸಿನ ನಾಯಕರದ್ದೇ ಸ್ಟಿಂಗ್ ಆಪರೇಷನ್‌ಗೆ ಮಾಡಿದ್ದಾರೆಂದರೆ ರಾಜ್ಯ ಸರ್ಕಾರಕ್ಕೆ ಚುನಾವಣೆ ಮಾಡುವ ನೈತಿಕತೆಯೇ ಇಲ್ಲ. ಸ್ಟಿಂಗ್ ಆಪರೇಷನ್ ರಾಜ್ಯಕ್ಕೆ ಕಳಂಕ. ಇದು ಒಳ್ಳೆಯದೂ ಅಲ್ಲ ಎಂದು ಎಂ.ಪಿ.ರೇಣುಕಾಚಾರ್ಯ ಅಭಿಪ್ರಾಯಿಸಿದರು.
- - --(ಫೋಟೋ: ರೇಣುಕಾಚಾರ್ಯ)