ತಲಾ ಆದಾಯದಲ್ಲಿ ನಾವು ದೇಶದಲ್ಲೇ ನಂಬರ್ ಒನ್ ಆಗಿದ್ದೇವೆ. ತೆರಿಗೆ ಸಂಗ್ರಹದಲ್ಲಿ ರಾಜ್ಯ ಎರಡನೇ ಸ್ಥಾನದಲ್ಲಿದೆ. ಇದಕ್ಕಾಗಿ ನೀವು ಕಾಂಗ್ರೆಸ್ ಗೆಲ್ಲಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ತಲಾ ಆದಾಯದಲ್ಲಿ ನಾವು ದೇಶದಲ್ಲೇ ನಂಬರ್ ಒನ್ ಆಗಿದ್ದೇವೆ. ತೆರಿಗೆ ಸಂಗ್ರಹದಲ್ಲಿ ರಾಜ್ಯ ಎರಡನೇ ಸ್ಥಾನದಲ್ಲಿದೆ. ಇದಕ್ಕಾಗಿ ನೀವು ಕಾಂಗ್ರೆಸ್ ಗೆಲ್ಲಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದರು.

ಬೇವಿನಮಟ್ಟಿ ಗ್ರಾಮದಲ್ಲಿ ಶುಕ್ರವಾರ ನಡೆದ ಉಪಚುನಾವಣೆ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಉಮೇಶ ಮೇಟಿ ಗೆದ್ದು ಬಂದರೆ ನಿಮ್ಮ ಪ್ರತಿನಿಧಿಯಾಗಿ ಉತ್ತಮ ಕೆಲಸ ಮಾಡುತ್ತಾರೆ ಎನ್ನುವ ವಿಶ್ವಾಸ ನನಗಿದೆ. ಮೇಟಿ ಅವರು ಐದು ಬಾರಿ ಶಾಸಕರಾಗಿ, ಎರಡು ಬಾರಿ ಸಚಿವರಾಗಿ, ಸಂಸದರಾಗಿ ತಳ ಸಮುದಾಯ ಮತ್ತು ಬಡವರ ಪರವಾಗಿ ಕೆಲಸ ಮಾಡುತ್ತಿದ್ದರು. ಇದೇ ಕೆಲಸವನ್ನು ಉಮೇಶ ಮೇಟಿ ಮುಂದುವರಿಸುತ್ತಾರೆ ಎಂದು ಭರವಸೆ ನೀಡಿದರು.

ಅಧಿಕಾರದಲ್ಲಿದ್ದಾಗ ಅಭಿವೃದ್ಧಿ ಕೆಲಸ ಮಾಡದ ಬಿಜೆಪಿ ಈಗ ಕಾಂಗ್ರೆಸ್ ಸರಕಾರದ ವಿರುದ್ಧ ಅಪಪ್ರಚಾರ ಮಾಡುತ್ತಿದೆ. ಈ ಸುಳ್ಳುಗಳನ್ನು ನೀವು ಅರ್ಥ ಮಾಡಿಕೊಳ್ಳಬೇಕು. ನಮ್ಮ ಸರ್ಕಾರ ಸಾಲ ಮಾಡಿದೆ ಎಂದು ಬಿಜೆಪಿ ನಾಯಕರು ಟೀಕಿಸುತ್ತಿದ್ದಾರೆ. ಆರ್ಥಿಕ ನಿರ್ವಹಣೆ ಕಾಯ್ದೆಯ ಮಾನದಂಡ ಮೀರಿ ನಾವು ಸಾಲ ಮಾಡಿಲ್ಲ. ಈ ಸತ್ಯವನ್ನು ಬಿಜೆಪಿ ಹೇಳುತ್ತಿಲ್ಲ. ರಾಜ್ಯಕ್ಕೆ ಬರಬೇಕಾದ ಜಿಎಸ್‌ಟಿ ಪಾಲು ಬರಲಿಲ್ಲ. ಜೊತೆಗೆ ಜಿಎಸ್‌ಟಿ ಮೂಲಕ ನಮಗೆ ಬರಬೇಕಿದ್ದ ತೆರಿಗೆ ಕೇಂದ್ರದ ಅವೈಜ್ಞಾನಿಕ ನೀತಿಯಿಂದಾಗಿ ₹10 ಸಾವಿರ ಕೋಟಿ ಕಡಿಮೆಯಾಯಿತು. ಆದರೂ ನಾವು ಗ್ಯಾರಂಟಿ ಯೋಜನೆ ನಿಲ್ಲಿಸಲಿಲ್ಲ. ಜೊತೆಗೆ ಅಭಿವೃದ್ಧಿ ಕೆಲಸಗಳನ್ನೂ ಮುಂದುವರೆಸಿದ್ದೇವೆ. ಹೀಗಾಗಿ ನಮ್ಮದು ನುಡಿದಂತೆ ನಡೆದ ಪಕ್ಷ. ಅಧಿಕಾರ ಇದ್ದಾಗ ಕೆಲಸ ಮಾಡದೆ ಈ ಸುಳ್ಳು ಹೇಳಿಕೊಂಡು ತಿರುಗುತ್ತಿರುವ ಬಿಜೆಪಿಗೆ ನಿಮ್ಮ ಮತ ಪಡೆಯುವ ಯೋಗ್ಯತೆ ಇಲ್ಲ. ಯೋಗ್ಯತೆ ಇಲ್ಲದವರಿಗೆ ನಿಮ್ಮ ಮತ ಕೊಡಬೇಡಿ ಎಂದರು.

ಚನ್ನಪಟ್ಟಣ, ಶಿಗ್ಗಾಂವ್, ಸಂಡೂರು ಉಪಚುನಾವಣೆಯಲ್ಲಿ ಬಿಜೆಪಿಯ ಎಲ್ಲಾ ಅಪಪ್ರಚಾರ ನಡುವೆಯೂ ಗೆದ್ದಿದ್ದು ಕಾಂಗ್ರೆಸ್ ಪಕ್ಷವೇ. ಈ ಚುನಾವಣೆಯಲ್ಲೂ ಎರಡೂ ಕ್ಷೇತ್ರದಲ್ಲೂ ನಾವೇ ಗೆಲ್ಲುತ್ತೇವೆ. ಜೊತೆಗೆ 2028ಕ್ಕೂ ನಾವೇ ಗೆದ್ದು ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.