ಸಾರಾಂಶ
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದರೆ ನಾವು ರೆಡಿ. ನಮ್ಮ ಗುಂಪಿನ ಪರ ಒಬ್ಬರನ್ನು ಅಭ್ಯರ್ಥಿ ಮಾಡಲು ಈಗಾಗಲೇ ನಿರ್ಣಯ ಮಾಡಿದ್ದೇವೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು
ವಿಜಯಪುರ : ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದರೆ ನಾವು ರೆಡಿ. ನಮ್ಮ ಗುಂಪಿನ ಪರ ಒಬ್ಬರನ್ನು ಅಭ್ಯರ್ಥಿ ಮಾಡಲು ಈಗಾಗಲೇ ನಿರ್ಣಯ ಮಾಡಿದ್ದೇವೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಾನು ನಿಲ್ಲುತ್ತೀನೋ ಅಥವಾ ಯಾರು ಸ್ಪರ್ಧೆ ಮಾಡುತ್ತಾರೋ ನೋಡೋಣ. ಆದರೆ, ಕಲುಷಿತ ವ್ಯಕ್ತಿಗಳಿಂದ ಬಿಜೆಪಿಯನ್ನು ದೂರವಿಡಲು ನಮ್ಮ ತಂಡ ನಿರ್ಣಯಿಸಿದೆ ಎಂದರು. ಕಾಂಗ್ರೆಸ್ ಸಚಿವ ಸತೀಶ ಜಾರಕಿಹೊಳಿ ಸಿದ್ದರಾಮಯ್ಯ ಪರವಾಗಿರುವ ವ್ಯಕ್ತಿ. ಇದರ ಹಿಂದೆ ಸಿದ್ದರಾಮಯ್ಯನವರೇ ಇರಬಹುದೆಂಬ ಶಂಕೆ. ಕಳೆದ ವರ್ಷವೇ ಸತೀಶ ಜಾರಕಿಹೊಳಿ ಬೆಂಬಲಿಗರು ದುಬೈಗೆ ಹೋಗುವ ಪ್ಲಾನ್ ಇತ್ತು. ಸತೀಶ ಜಾರಕಿಹೊಳಿ ಹಾಗೂ ಸಿದ್ದರಾಮಯ್ಯನವರು ಎಲ್ಲರೂ ಒಂದೇ. ಅದು ಸಿದ್ದರಾಮಯ್ಯನವರ ನಿರ್ದೇಶನದಂತೆ ನಡೆಯುತ್ತದೆ. ಒಟ್ಟಾರೆ ಕಾಂಗ್ರೆಸ್‌ನಲ್ಲಿ ಗುಂಪು ರಾಜಕೀಯವಿದೆ. ಅಲ್ಲಿ, ರಾಷ್ಟ್ರೀಯ ಅಧ್ಯಕ್ಷರು ಎಚ್ಚರಿಕೆ ಕೊಟ್ಟರೂ ಕೇರ್ ಮಾಡುತ್ತಿಲ್ಲ ಎಂದರೆ ಅವರವರಲ್ಲೇ ಅಸಮಾಧಾನದ ಹೊಗೆ ಇದೆ ಎಂದರ್ಥ ಎಂದು ಹೇಳಿದರು.
ಕಾಂಗ್ರೆಸ್ ಶಾಸಕರಿಂದಲೇ ಸರ್ಕಾರ ಉರುಳಿಸುವ ಯತ್ನ:
ಕಾಂಗ್ರೆಸ್‌ನ ಸಾಕಷ್ಟು ಜನ ನಮಗೆ ಅಪ್ರೋಚ್ ಮಾಡಿದ್ದರು. ನಾವು ಒಂದಿಷ್ಟು ಜನ ಕಾಂಗ್ರೆಸ್ ಬಿಟ್ಟು ಬರ್ತೀವಿ ಕಾಂಗ್ರೆಸ್ ಸರ್ಕಾರವನ್ನು ತೆಗೆದು ಹಾಕೋಣ ಎಂದಿದ್ದರು. ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಆಗುತ್ತಿಲ್ಲ. ನಮ್ಮ ಕ್ಷೇತ್ರಕ್ಕೆ ದುಡ್ಡು ಸಿಗುತ್ತಿಲ್ಲ ಎಂದು ನನ್ನ ಜೊತೆ ಸಾಕಷ್ಟು ಜನ ಮಾತನಾಡಿದ್ದರು. ಕಾಂಗ್ರೆಸ್‌ನ 40-50 ಶಾಸಕರನ್ನು ತೆಗೆದುಕೊಂಡು ಮತ್ತದೇ ಹೊಲಸು ಕೆಲಸ ಮಾಡುವುದು ಬೇಡ, ಅವರಾಗಿಯೇ ಎಷ್ಟು ದಿನ ಕೆಲಸ ಮಾಡುತ್ತಾರೆ, ಮಾಡಲಿ ಎಂದು ಬಿಟ್ಟಿದ್ದೇವೆ ಎಂದರು.
ಜನರು ಐದು ವರ್ಷ ಅಧಿಕಾರ ಕೊಟ್ಟಿದ್ದಾರೆ. ಅವರಿಗೆ ತೊಂದರೆ ಮಾಡುವುದು ಬೇಡ ಎಂದು ಯಾವುದೇ ಆಪರೇಷನ್ ಮಾಡಲು ನಾವು ಮುಂದೆ ಬಂದಿಲ್ಲ. ಅವರಲ್ಲಿಯೇ ಜಗಳ ಹತ್ತಿದೆ. ಸಿಎಂ ಅಧಿಕಾರ ಹಂಚಿಕೆ ಬಗ್ಗೆ ಸಿದ್ದರಾಮಯ್ಯ- ಡಿಕೆಶಿ ಮಧ್ಯ ಒಪ್ಪಂದ ಆಗಿದೆ ಎಂದು ಹೇಳಲಾಗುತ್ತಿದೆ. ಇವೆಲ್ಲ ಗೊಂದಲಗಳಿಂದ ಕಾಂಗ್ರೆಸ್ ಸರ್ಕಾರ ಕೆಲವೇ ದಿನಗಳಲ್ಲಿ ಪತನ ಆಗುವುದು ನಿಶ್ಚಿತ ಎಂದು ಭವಿಷ್ಯ ನುಡಿದ ಅವರು, ಮಧ್ಯಂತರ ಚುನಾವಣೆಯಾದರೂ ಆಶ್ಚರ್ಯವಿಲ್ಲ. ಯಾವ ಶಾಸಕರು ನಮಗೆ ಬೆಂಬಲ ನೀಡಲು ಬಂದಿದ್ದಾರೆ ಎಂದು ಬಹಿರಂಗಪಡಿಸೋದು ಬೇಡ. ಅರ್ಹತೆ ಇರುವವರು ಕಾಂಗ್ರೆಸ್ ಸರ್ಕಾರದಲ್ಲಿ ಮಂತ್ರಿ ಆಗಲಿಲ್ಲ ಎಂದು ಬೇಸರ ಹೊರಹಾಕಿದರು.
ನಿಗಮ ಮಂಡಳಿಗಳಲ್ಲಿ ಅವ್ಯವಹಾರ:
ಹಣವನ್ನೆಲ್ಲ ಗ್ಯಾರಂಟಿ ಯೋಜನೆಗಳಿಗೆ ಹಾಕಿಕೊಂಡಿದ್ದಿರಿ. ಅಂಬೇಡ್ಕರ್ ಬಗ್ಗೆ ಗೌರವ ತೋರಿಸುವ ಫೋಟೋ ಮತ್ತು ಸಂವಿಧಾನ ಪ್ರತಿ ಹಿಡಿಯುವ ನಿಮಗೆ ನಾಚಿಕೆಯಾಗಬೇಕು. ಎಲ್ಲ ನಿಗಮ ಮಂಡಳಿಗಳಲ್ಲಿ ಅವ್ಯವಹಾರ ನಡೆದಿದೆ. ಕಾಂಗ್ರೆಸ್ ಪಕ್ಷ ಎಸ್ಸಿ, ಎಸ್ಟಿ ಸಮಾಜಗಳ ವಿರೋಧಿ. ಹಾಗಾಗಿ ಎಸ್ಸಿ,ಎಸ್ಟಿ ಸಮಾಜದ ಶಾಸಕರೇ ನಮ್ಮನ್ನು ಸಂಪರ್ಕಿಸಿದ್ದರು ಎಂದು ಶಾಸಕ ಯತ್ನಾಳ ಹೇಳಿದರು.
ಜನರ ಮುಂದೆ ಹೋಗಿ 130 ಸೀಟ್ ಪಡೆಯೋ ಶಕ್ತಿ ನಮಗೂ ಇದೆ, ನರೇಂದ್ರ ಮೋದಿಯವರ ಶಕ್ತಿ ಇದೆ. ಲೀಡರ್ ಮನೆಗೆ ಹೋಗಿ ಕೈ ಹಿಡಿದು ಕರೆದುಕೊಂಡು ಬರುವುದಿಲ್ಲ, ಅಂತಹ ಪರಿಸ್ಥಿತಿ ಇಲ್ಲ. ನಮ್ಮ ಕಾರ್ಯಕರ್ತರನ್ನೇ ಶಾಸಕರನ್ನಾಗಿ ಮಾಡುತ್ತೇವೆ. ನೋ ಆಪರೇಷನ್, ಓನ್ಲಿ ಕಾಂಗ್ರೆಸ್ ಡೈವರ್ಷನ್. ಬಿಜೆಪಿಗೆ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಜನ ಪರ್ಮಿಷನ್ ಕೊಡುತ್ತಾರೆ. ನಾವು ಸೆಲೆಕ್ಷನ್ ಆಗುತ್ತೇವೆ, ಸರ್ಕಾರ ನಡೆಸುತ್ತೇವೆ.
ಬಸನಗೌಡ ಪಾಟೀಲ ಯತ್ನಾಳ, ನಗರ ಶಾಸಕ
ಯತ್ನಾಳ ಮತ್ತೊಂದು ಬಾಂಬ್
ಈಗಲೂ 60 ಮಂದಿ ಬಿಜೆಪಿಗೆ ಬರಲು ರೆಡಿಯಾಗಿದ್ದಾರೆ ಎನ್ನುವ ಮೂಲಕ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮತ್ತೊಂದು ಬಾಂಬ್ ಹಾಕಿದ್ದಾರೆ. ದೇವರಾಣೆ ಮಾಡಿ ಹೇಳುತ್ತೇನೆ, ಕಾಂಗ್ರೆಸ್ ಶಾಸಕರು ಬರಬೇಕು ಎನ್ನುವ ಇಚ್ಛೆ ನಮಗೆ ಇಲ್ಲ ಎಂದರು. ಅವರು ಬಂದ್ರೆ ಬಿಜೆಪಿಯ ಸಿದ್ಧಾಂತಗಳು ಹಾಳಾಗುತ್ತವೆ. ಹಿಂದೂಗಳ ಮೇಲೆ ಅತ್ಯಾಚಾರವಾಗುತ್ತದೆ. ಲವ್ ಜಿಹಾದ್ ನಡೆಯುತ್ತದೆ. ಎಲ್ಲರನ್ನು ತೆಗೆದುಕೊಂಡರೆ ನಮ್ಮ ಸಿದ್ಧಾಂತ ಬಲಿಯಾಗುತ್ತದೆ. ಹಾಗಾಗಿ ಈ ಬಾರಿ ಬಲಿಯಾಗುವುದು ಬೇಡ ಎಂದು ಸುಮ್ಮನಿರುವುದಾಗಿ ಯತ್ನಾಳ ಹೇಳಿದರು.