ಸಾರಾಂಶ
ಕೂಡ್ಲಿಗಿ: ಈ ವರ್ಷ ರಾಜ್ಯದಲ್ಲಿ 347 ಬಾಣಂತಿಯರು ಮೃತಪಟ್ಟಿರುವುದು ಯಾವ ಕಾರಣದಿಂದ ಎಂಬುದರ ಬಗ್ಗೆ ತನಿಖೆ ಮಾಡಲಾಗುತ್ತಿದೆ, ನಾವು ಟಿವಿಗೋಸ್ಕರ ತೋರಿಕೆಗೆ ಮಾಡುವುದಿಲ್ಲ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಇದರ ಹೊಣೆಗಾರಿಕೆ ನಮಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಶನಿವಾರ ಸಂಜೆ ಪಟ್ಟಣದ 5ನೇ ವಾರ್ಡ್‌ನಲ್ಲಿರುವ ಮೃತ ಬಾಣಂತಿ ಸುಮಯ್ಯಾಬಾನು ಮನೆಗೆ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ನಂತರ ಸುದ್ದಿಗಾರರ ಜತೆ ಮಾತನಾಡಿದರು.ಬಳ್ಳಾರಿಯಲ್ಲಿ ಮೃತಪಟ್ಟ ಬಾಣಂತಿಯರ ಕುಟುಂಬಕ್ಕೆ ಸರಕಾರ ₹2 ಲಕ್ಷ ಘೋಷಿಸಿದ್ದು, ಹೆಚ್ಚಿನ ಪರಿಹಾರ ನೀಡುವ ಕುರಿತು ಸಿಎಂ ಸಿದ್ದರಾಮಯ್ಯ ಜತೆ ಚರ್ಚಿಸಲಾಗುವುದು. ಬಾಣಂತಿಯರ ಸಾವಿನ ಪ್ರಕರಣಗಳು ನಡೆಯಬಾರದಿತ್ತು. ಆದರೆ, ಎಲ್ಲಿ ತಪ್ಪಾಗಿದೆ ಅದನ್ನು ಸರಿಮಾಡುವ ಕೆಲಸವಾಗಬೇಕು. ಈಗಾಗಲೇ, ಒಂದು ಸಮಿತಿ ತನಿಖೆ ನಡೆಸುತ್ತಿದ್ದು, ತನಿಖೆಗೆ ಇನ್ನೊಂದು ತಂಡವನ್ನು ಕಳಿಸಲಾಗುವುದು ಎಂದರು.
ಬಳ್ಳಾರಿಯಲ್ಲಿ ವಿಪಕ್ಷದವರು ಪ್ರತಿಭಟನೆ ಮಾಡಲಿ ನಮ್ಮದೇನೂ ಅಭ್ಯಂತರವಿಲ್ಲ. ಆದರೆ, ಹೊಣೆಗಾರಿಕೆ ನಮ್ಮದಾಗಿದ್ದು ಅದನ್ನು ನಿಭಾಯಿಸುತ್ತೇವೆ ಎಂದರು.ನಂತರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಚಂದ್ರಶೇಖರಪುರ ಗ್ರಾಮದ ಮೃತ ಬಾಣಂತಿ ಮಹಾಲಕ್ಷ್ಮೀಯ ಮಗು ಹಾಗೂ ಅವರ ಕುಟುಂಬದವರನ್ನು ಸಚಿವ ದಿನೇಶ್ ಗುಂಡೂರಾವ್ ಮತ್ತು ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ಅವರು ಭೇಟಿಯಾಗಿ ಅವರಿಗೆ ಧೈರ್ಯ ತುಂಬಿದರು. ಅಲ್ಲದೆ, ಸರಕಾರದ ಪರಿಹಾರವನ್ನು ಕೊಡಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶಂಕರ್ ನಾಯ್ಕ, ಜಿಲ್ಲಾ ಆರ್‌ಸಿಎಚ್ ಡಾ. ಜಂಬಯ್ಯ ನಾಯಕ, ತಾಲೂಕು ಆರೋಗ್ಯಾಧಿಕಾರಿ ಡಾ. ಪ್ರದೀಪ್ ಕುಮಾರ್, ಪಪಂ ಅಧ್ಯಕ್ಷ ಕಾವಲ್ಲಿ ಶಿವಪ್ಪನಾಯಕ, ಮುಖ್ಯಾಧಿಕಾರಿ ಎಂ.ಕೆ. ಮುಗಳಿ, ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ಶುಕೂರ್ ಸೇರಿ ಹಲವರಿದ್ದರು.ಶಾಸಕರಿಂದ ₹50 ಸಾವಿರದ ಚೆಕ್
ಬಳ್ಳಾರಿಯಲ್ಲಿ ಮೃತಪಟ್ಟ ಕೂಡ್ಲಿಗಿ ಪಟ್ಟಣದ ಆಜಾದ್ ನಗರದ ಮೃತ ಬಾಣಂತಿ ಸುಮಯ್ಯಾ ಬಾನು ಅವರ ಮನೆಗೆ ಶನಿವಾರ ಭೇಟಿ ನೀಡಿದ್ದ ಸಂದರ್ಭ ಕುಟುಂಬದವರಿಗೆ ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ಅವರು ವೈಯಕ್ತಿಕವಾಗಿ ₹50 ಸಾವಿರ ಚೆಕ್ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ, ತಾಲೂಕಿನಲ್ಲಿ ಇಬ್ಬರು ಬಾಣಂತಿಯರು ಮೃತಪಟ್ಟಿದ್ದು, ಎರಡೂ ಕುಟುಂಬಗಳಿಗೆ ತಲಾ ₹50 ಸಾವಿರ ಪರಿಹಾರ ನೀಡಿದ್ದೇನೆ. ಮಕ್ಕಳ ಹೆಸರಿನಲ್ಲಿ ಠೇವಣಿ ಇಟ್ಟು ಅವರ ಭವಿಷ್ಯಕ್ಕೆ ನೆರವಾಗಲು ಇದು ಸಹಕಾರಿಯಾಗಲಿದೆ. ಹೆಚ್ಚಿನ ಪರಿಹಾರ ಸರಕಾರ ನೀಡಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡುತ್ತೇನೆ. ಹೆಚ್ಚಿನ ಪರಿಹಾರಕ್ಕೆ ಮಾಜಿ ಸಚಿವ ಶ್ರೀರಾಮುಲು ಧರಣಿ ಮಾಡುವುದರಲ್ಲಿ ತಪ್ಪಿಲ್ಲ ಎಂದರಲ್ಲದೆ, ಬಾಣಂತಿಯರ ಸಾವಿಗೆ ವೈದ್ಯರ ನಿರ್ಲಕ್ಷ್ಯದ ಬಗ್ಗೆ ಮಾಹಿತಿಯಿಲ್ಲ. ಯಾರೇ ತಪ್ಪು ಮಾಡಿದ್ದರೂ ಅವರ ವಿರುದ್ಧ ಕ್ರಮವಾಗಲಿ ಎಂದು ತಿಳಿಸಿದರು.