ಸಾರಾಂಶ
ಚನ್ನಪಟ್ಟಣ: ಕ್ಷೇತ್ರದಲ್ಲಿ ಈಗ ಶಾಸಕರು ಇಲ್ಲ. ನಾನು ರಾಮಲಿಂಗಾರೆಡ್ಡಿಯವರೇ ನಿಮಗೆ ಉಸ್ತುವಾರಿ, ನಾವೇ ನಿಮ್ಮ ಸೇವಕರು, ನಿಮ್ಮ ಶಾಸಕರು, ನಿಮ್ಮ ಮಂತ್ರಿಗಳು, ನಾವೇ ನಿಮ್ಮ ಸರ್ಕಾರ. ಸರ್ಕಾರವೇ ನಿಮ್ಮ ಸಮಸ್ಯೆ ಪರಿಹರಿಸಲು ನಿಮ್ಮ ಮನೆ ಬಾಗಿಲಿಗೆ ಬಂದಿದೆ. ಈ ಅವಕಾಶವನ್ನು ಕಳೆದುಕೊಳ್ಳಬೇಡಿ, ಏನು ಬೇಕೋ ಕೆಲಸ ಮಾಡಿಸಿಕೊಳ್ಳಿ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮನವಿ ಮಾಡಿದರು.
ತಾಲೂಕಿನ ಅರಳಾಳುಸಂದ್ರದಲ್ಲಿ ಆಯೋಜಿಸಿದ್ದ ಜನಸ್ಪಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಿಮ್ಮ ಮನೆ ಬಾಗಿಲಿಗೆ ಅರ್ಜಿ ತಲುಪಿಸಲಾಗಿದ್ದು, ನಿಮ್ಮ ಸಮಸ್ಯೆ ಕೇಳುತ್ತಿದ್ದೇವೆ. ಈ ಹಿಂದೆ ನಾನು ಈ ಭಾಗದ ಶಾಸಕನಾಗಿದ್ದಾಗ ಇದೇ ರೀತಿ ಅಧಿಕಾರಿಗಳನ್ನು ನಿಮ್ಮ ಮನೆ ಬಾಗಿಲಿಗೆ ಕರೆದುಕೊಂಡು ಬರುತ್ತಿದ್ದೆ. ನಾನು ಇಲ್ಲಿಂದ ಬೇರಡೆ ಹೋದ ಮೇಲೆ, ಈ ಹಿಂದೆ ಇಲ್ಲಿನ ಶಾಸಕರಾಗಿದ್ದವರು, ಜೆಡಿಎಸ್‌ನವರು ಇರಬಹುದು, ಬಿಜೆಪಿಯವರು ಇರಬಹುದು, ಈ ರೀತಿ ಅಧಿಕಾರಿಗಳನ್ನು ಕರೆದುಕೊಂಡು ಬಂದಿದ್ದರಾ ಎಂದು ಪ್ರಶ್ನಿಸಿದರು.ಕಾಂಪಿಟೇಷನ್‌ಗೆ ಬಂದಿಲ್ಲ:
ನಾನು ಯಾರ ಮೇಲು ಕಾಂಪಿಟೇಷನ್ ಮಾಡಲು ಇಲ್ಲಿಗೆ ಬಂದಿಲ್ಲ. ನಾನು ಬಂದಿರುವುದು ನಿಮ್ಮ ಸಮಸ್ಯೆ ಪರಿಹರಿಸಲು. ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ನಾನು ಕ್ಷೇತ್ರಕ್ಕೆ ಹೆಚ್ಚಾಗಿ ಬರದಿದ್ದರೂ ನಮಗೆ ಹೆಚ್ಚಿನ ಶಕ್ತಿ ನೀಡಿದ್ದೀರಾ. ನನ್ನ ತಮ್ಮನ ಬೆಂಬಲಕ್ಕೆ ನೀವೆಲ್ಲ ನಿಂತಿದ್ದೀರಾ. ವಿಧಾನಸಭೆ ಚುನಾವಣೆಯಲ್ಲಿ ನಮಗೆ ಕೇವಲ ೧೭ ಸಾವಿರ ಮತ ಬಂದಿತ್ತು. ಆದರೆ, ಲೋಕಸಭಾ ಚುನಾವಣೆಯಲ್ಲಿ ೮೫ ಸಾವಿರ ಮತ ನೀಡಿದ್ದೀರಾ. ನಿಮ್ಮ ಋಣ ತೀರಿಸಲೇಬೇಕು ಎಂಬ ಉದ್ದೇಶದಿಂದ ನಾನು ಇಲ್ಲಿಗೆ ಬಂದಿದ್ದೇನೆ ಎಂದು ತಿಳಿಸಿದರು.ಈಗಾಗಲೇ ಮೂರು ಹೋಬಳಿಗಳಲ್ಲಿ ಜನಸ್ಪಂದನಾ ಕಾರ್ಯಕ್ರಮ ನಡೆಸಲಾಗಿದೆ. ೪,೬೧೯ ಅರ್ಜಿಗಳು ಸ್ವೀಕೃತವಾಗಿದೆ. ಯಾರು ಯಾವ ವಿಚಾರಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂಬ ಪಟ್ಟಿ ಮಾಡಲಾಗಿದೆ. ಸಾವಿರಾರು ಜನ ವಸತಿಗಾಗಿ, ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಸರ್ಕಾರಿ ಜಮೀನು ಲಭ್ಯವಿಲ್ಲದ ಕಡೆ ಖಾಸಗಿ ಜಮೀನು ಗುರುತಿಸಿ ಖರೀದಿ ಮಾಡಿ ನಿವೇಶನ ನೀಡಲಾಗುವುದು ಎಂದು ತಿಳಿಸಿದರು.
ಈ ಹಿಂದೆ ನಾನು ಪವರ್ ಮಿನಿಸ್ಟರ್ ಆಗಿದ್ದಾಗ ಇಡೀ ತಾಲೂಕಿನ ರೈತರಿಗೆ ೧೭ಸಾವಿರ ಟ್ರಾನ್ಸ್‌ಫಾರ್ಮರ್‌ಗಳನ್ನು ನಿರ್ಮಿಸಿಕೊಟ್ಟಿದ್ದೆ. ಆ ನಂತರ ಕೆಲವು ಕಡೆ ವಿದ್ಯುತ್ ಉಪಕೇಂದ್ರಗಳನ್ನು ನಿರ್ಮಿಸಿಕೊಟ್ಟಿದ್ದೆ. ಈಗ ಉಪಮುಖ್ಯಮಂತ್ರಿಯಾಗಿ ನಿಮ್ಮ ಋಣ ತೀರಿಸಲು ನಿಮ್ಮ ಮನೆ ಬಾಗಿಲಿಗೆ ಬಂದಿದ್ದೇನೆ ಎಂದು ಹೇಳಿದರು.ಲಂಚವಿಲ್ಲದೇ ಕೆಲಸ: ಗ್ಯಾರಂಟಿ ಯೋಜನೆಗಳಿಗೆ ಸಂಬಂಧಿಸಿದಂತೆ ವಿರೋಧಿಗಳು ಅಪಪ್ರಚಾರ ನಡೆಸಿದರು. ಆದರೆ, ಯೋಜನೆಯನ್ನು ಯಶಸ್ವಿಯಾಗಿ ಜಾರಿಗೊಳಿಸಲಾಗಿದೆ. ಯೋಜನೆಗಳು ಯಾವುದೇ ಲಂಚವಿಲ್ಲದೇ ನಿಮಗೆ ತಲುಪುತ್ತಿವೆ. ಚನ್ನಪಟ್ಟಣದಲ್ಲಿ ಕಂದಾಯ ಇಲಾಖೆಯಲ್ಲಿಯೇ ಆಗಲಿ ಇನ್ಯಾವುದೇ ಇಲಾಖೆಯಲ್ಲಿ ಆಗಲಿ ಹತ್ತು ರು. ಲಂಚವಿಲ್ಲದಂತೆ ನಿಮ್ಮ ಕೆಲಸ ಮಾಡಿಸಿಕೊಡುವುದು ನನ್ನ ಜವಾಬ್ದಾರಿ ಎಂದು ಘೋಷಿಸಿದರು.
ಇನ್ನೊಂದು ಎರಡು ದಿನಗಳಲ್ಲಿ ಮುಖ್ಯಮಂತ್ರಿ ಅವರನ್ನು ಭೇಟಿಯಾಗಲಿದ್ದೇನೆ. ಮೂರು ಕ್ಷೇತ್ರಗಳಿಗೂ ವಿಶೇಷ ಅನುದಾನ ಕಲ್ಪಿಸಲು ಮನವಿ ಮಾಡಲಿದ್ದೇನೆ. ಪಂಚಾಯಿತಿ ವ್ಯಾಪ್ತಿಯಲ್ಲಿ ಎಲ್ಲೆಲ್ಲಿ ಕೆಲಸವಾಗಬೇಕೋ ಅಲ್ಲಿಗೆ ನೀಡಲಾಗುವುದು. ರಸ್ತೆ, ಚರಂಡಿ ಸೇರಿದಂತೆ ಸಾಕಷ್ಟು ಮನವಿ ಸಲ್ಲಿಸಿದ್ದಾರೆ.ಯಾರೂ ಶಾಶ್ವತರಲ್ಲ: ದೇವರಾಜ ಅರಸು ನಿಗಮ ಸೇರಿದಂತೆ ಸಾಕಷ್ಟು ನಿಗಮಗಳಲ್ಲಿ ಸಾಲ ಸೌಲಭ್ಯ ನೀಡುವ ಕೆಲಸ ಮಾಡುಲಾಗುವುದು. ನಾವು ಕಾಂಗ್ರೆಸ್‌ಗೆ ಮತ ಹಾಕಲಿಲ್ಲ ಎಂದು ಅರ್ಜಿ ಸಲ್ಲಿಸಲು ಹಿಂಜರಿಯಬೇಡಿ. ಇಲ್ಲಿ ಯಾರು ಶಾಶ್ವತರಲ್ಲ. ಇಲ್ಲಿ ಅರ್ಜಿ ಸಲ್ಲಿಸಲು ಆಗದವರು ತಾಲೂಕು ಕಚೇರಿಯಲ್ಲಿ ಅರ್ಜಿ ಸಲ್ಲಿಸಿ, ನಾನು ನಿಮ್ಮ ಸೇವೆ ಮಾಡಲು ಬಂದಿದ್ದೇನೆ. ರಾಜಕಾರಣ ಇರುತ್ತದೆ. ಅದನ್ನು ನಾನು ಬಿಡುವುದಿಲ್ಲ ನೀವು ಬಿಡುವುದಿಲ್ಲ. ನಾಲ್ಕು ಬಾರಿ ಈ ಭಾಗದ ಜನ ನಾನು ವಿಧಾನಸಭೆಗೆ ಆಯ್ಕೆಯಾಗಲು ಸಹಕರಿಸಿದ್ದಾರೆ. ಕ್ಷೇತ್ರ ಮರುವಿಂಗಡನೆಯ ನಂತರ ಕನಕಪುರ ಕ್ಷೇತ್ರಕ್ಕೆ ಹೋಗಬೇಕಾಯಿತು. ಹಿಂದಿನಿಂದಲೂ ನನಗೆ ಚನ್ನಪಟ್ಟಣ ಕ್ಷೇತ್ರದ ಮೇಲೆ ಅಪಾರವಾದ ವಿಶ್ವಾಸವಿದೆ ಎಂದರು.
ಬ್ಯಾರಿಕೇಡ್ ನಿರ್ಮಾಣ: ಇಲ್ಲಿ ಆನೆ ದಾಳಿಗೆ ಜಾಸ್ತಿ ಇದ್ದು, ಆನೆ ತಡೆಗೆ ಬ್ಯಾರೀಕೇಡ್ ನಿರ್ಮಿಸುವ ಕೆಲಸ ಮಾಡಲಾಗುವುದು. ಎರಡು ಎಲಿಫೆಂಟ್ ಟಾಸ್ಕ್ ಫೋರ್ಸ್ ಅನ್ನು ರಚಿಸಲಾಗಿದೆ. ೧೮೦ ಕಿ.ಮಿ. ಬನ್ನೇರಘಟ್ಟದಿಂದ ಬ್ಯಾರೀಕೇಡ್ ನಿರ್ಮಿಸಲಾಗುತ್ತಿದೆ. ಸರ್ಕಾರ ನಿಮ್ಮ ಜತೆ ಇದೆ. ಯಾರು ಬರಲಿ ಹೋಗಲಿ ಯಾರೂ ಹೋಗಲಿ. ನಾನು ಉಪಕಾರ ಸ್ಪರಣೆ ಇಟ್ಟುಕೊಂಡವನು ನಿಮ್ಮ ಮನೆಯ ಮಗ. ನೀವು ನನ್ನನ್ನು ಈ ರಾಜ್ಯದ ಉಪಮುಖ್ಯಮಂತ್ರಿ ಮಾಡಿದ್ದಾರಾ. ಯಾವಾಗ ಬೇಕಾದರೂ ನನ್ನ ಮನೆಗೆ ಬನ್ನಿ, ನನ್ನ ಕಚೇರಿಗೆ ಬಂದು ಭೇಟಿ ಮಾಡಿ ನಿಮ್ಮ ಕೆಲಸ ಮಾಡಿಸಿಕೊಳ್ಳಿ. ನಿಮ್ಮ ಕೆಲಸ ಮಾಡಲು ನಾನು ಸಿದ್ಧನಿದ್ದೇನೆ ಎಂದರು. ನನ್ನ ಕರ್ತವ್ಯದಲ್ಲಿ ಎಂದಿಗೂ ನಾನು ಜಾತಿ ನೋಡಿಲ್ಲ. ನನ್ನ ಮನೆ ಬಾಗಿಲು ಯಾವಾಗಲು ತೆರೆದಿರುತ್ತದೆ ಎಂದು ಶಿವಕುಮಾರ್ ಹೇಳಿದರು.ಪೊಟೋ೭ಸಿಪಿಟಿ೧:
ಚನ್ನಪಟ್ಟಣ ತಾಲೂಕಿನ ಅರಳಾಳುಸಂದ್ರ ಗ್ರಾಮದಲ್ಲಿ ಆಯೋಜಿಸಿದ್ದ ಜನಸ್ಪಂದನಾ ಕಾರ್ಯಕ್ರಮವನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ಉದ್ಘಾಟಿಸಿದರು.