ನಮ್ಮದೇ ಜಾತಿಯ ಬಡವರಿಗೆ ಮೀಸಲಾತಿ ಕಲ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ-ನಿರಂಜನಾನಂದಪುರಿ ಶ್ರೀ

| Published : Oct 28 2024, 01:03 AM IST

ನಮ್ಮದೇ ಜಾತಿಯ ಬಡವರಿಗೆ ಮೀಸಲಾತಿ ಕಲ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ-ನಿರಂಜನಾನಂದಪುರಿ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

‘ಕುರುಬ’ ಎಂಬ ಪದ ಸ್ವಾಭಿಮಾನದ ಸಂಕೇತ, ವಿಧಾನಸಭೆ ನಡುಗಿಸುವ ಶಕ್ತಿ ಸಮುದಾಯಕ್ಕಿದ್ದರೂ ನಮ್ಮದೇ ಜಾತಿಯ ಬಡವರಿಗೆ ಮೀಸಲಾತಿ ಕಲ್ಪಿಸಿಕೊಳ್ಳಲು ಸಾಧ್ಯವಾಗದೇ ಇರುವುದು ಖೇದಕರ ಸಂಗತಿ ಎಂದು ಕಾಗಿನೆಲೆ ಕನಕಗುರುಪೀಠದ ನಿರಂಜನಾನಂದಪುರಿಶ್ರೀ ಖೇದ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಬ್ಯಾಡಗಿ

‘ಕುರುಬ’ ಎಂಬ ಪದ ಸ್ವಾಭಿಮಾನದ ಸಂಕೇತ, ವಿಧಾನಸಭೆ ನಡುಗಿಸುವ ಶಕ್ತಿ ಸಮುದಾಯಕ್ಕಿದ್ದರೂ ನಮ್ಮದೇ ಜಾತಿಯ ಬಡವರಿಗೆ ಮೀಸಲಾತಿ ಕಲ್ಪಿಸಿಕೊಳ್ಳಲು ಸಾಧ್ಯವಾಗದೇ ಇರುವುದು ಖೇದಕರ ಸಂಗತಿ ಎಂದು ಕಾಗಿನೆಲೆ ಕನಕಗುರುಪೀಠದ ನಿರಂಜನಾನಂದಪುರಿಶ್ರೀ ಖೇದ ವ್ಯಕ್ತಪಡಿಸಿದರು.

ಪಟ್ಟಣದ ಬೀರೇಶ್ವರ ಸಮುದಾಯ ಭವನದಲ್ಲಿ ಕನಕ ನೌಕರರ ಸಂಘ ತಾಲೂಕು ಘಟಕ ಹಾಗೂ ಬೀರೇಶ್ವರ ಪಂಚ ಸಮಿತಿ ಇವರ ಸಂಯುಕ್ತಾಶ್ರಯದಲ್ಲಿ ದಾಸಶ್ರೇಷ್ಠ ಕನಕದಾಸರ 5ನೇ ಜಯಂತ್ಯುತ್ಸವ, ಪ್ರತಿಭಾ ಪುರಸ್ಕಾರ, ನಿವೃತ್ತ ನೌಕರರಿಗೆ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು. ದೇಶದ ಉದ್ದಗಲಕ್ಕೂ ಕುರುಬ ಸಮುದಾಯ ಜನರಿದ್ದಾರೆ. ಬೇರೆ ಬೇರೆ ಹೆಸರುಗಳಿಂದ ಅವರನ್ನು ಸಂಬೋಧಿಸಲಾಗುತ್ತಿದೆ. ಆದರೆ ಸಂಘಟನೆ ಕೊರತೆಯಿಂದ ಕುರುಬ ಎಂಬ ಅಸ್ಮಿತೆಯನ್ನು ಕಾಯ್ದುಕೊಂಡು ಬರುವುದು ಕಷ್ಟ ಸಾಧ್ಯವಾಗಿದೆ ಎಂದರು.

ಕುರಿ ಕಾಯುವ ಕಾಯಕದಿಂದ ಹಿಡಿದು ಕೃಷಿ, ಶಿಕ್ಷಣ, ವ್ಯಾಪಾರ, ರಾಜಕೀಯ ಕ್ಷೇತ್ರ ಸೇರಿದಂತೆ ಎಲ್ಲ ಕಡೆಗಳಲ್ಲಿ ತನ್ನದೇ ಆದ ಕೊಡುಗೆಯನ್ನು ಕುರುಬ ಸಮುದಾಯದ ಜನರು ನೀಡುತ್ತಾ ಬಂದಿದ್ದಾರೆ. ಹೀಗಿದ್ದರೂ ಸಹ ನೌಕರರ ಶ್ರೆಯೋಭಿವೃದ್ಧಿಗೆ ಯಾವುದೇ ಕಾರ್ಯಕ್ರಮಗಳು ಪ್ರಕಟವಾಗದಿರುವುದು ವಿಷಾದಕರ ಸಂಗತಿ ಎಂದರು.

ಶೋಷಿತ ಸಮುದಾಯಗಳ ಪಟ್ಟಿಗೆ:ಪರಿಶಿಷ್ಟ ಪಂಗಡ (ಎಸ್ಟಿ)ಮೀಸಲಾತಿ ಪಡೆಯುವ ನಿಟ್ಟಿನಲ್ಲಿ ಸಮುದಾಯದ ಮುಖಂಡರ ನೇತೃತ್ವದಲ್ಲಿ ಹೋರಾಟ ಆರಂಭಿಸಲಾಗಿದೆ. ಯಾವುದೋ ಒಂದು ರಾಜಕೀಯ ಪಕ್ಷವನ್ನು ನೆಚ್ಚಿ ನಾವು ಸದರಿ ಹೋರಾಟವನ್ನು ಆರಂಭಿಸಿಲ್ಲ ದೇಶದ ವಿವಿಧ ರಾಜ್ಯಗಳಲ್ಲಿ ನಮ್ಮ ಸಮುದಾಯಕ್ಕೆ ನೀಡಿರುವ ಅವಕಾಶ ಪರಿಗಣಿಸಿ ನಮ್ಮ ಹಕ್ಕನ್ನು ಕೇಳುತ್ತಿದ್ದೇವೆ. ಸೌಲಭ್ಯ ವಂಚಿತ ಸಮುದಾಯದ ಬಡವರು ಇಂದಿಗೂ ಅವಕಾಶ ವಂಚಿತರಾಗಿದ್ದು ಸಾಮಾಜಿಕ ನ್ಯಾಯದಡಿ ಶೋಷಿತ ಪಟ್ಟಿಗೆ ಸೇರುವ ಕಾಲ ದೂರವಿಲ್ಲ ಎಂದರು.

ಬೆರಳೆಣಿಕೆಯಷ್ಟು ಜನರಿಗೆ ಅಧಿಕಾರ: ಇದಕ್ಕೂ ಮುನ್ನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಬಸವರಾಜ ಶಿವಣ್ಣನವರ, ಸ್ವಾತಂತ್ರ್ಯದ ಬಳಿಕ ಕೇವಲ ಬೆರಳೆಣಿಕೆಯಷ್ಟು ಕುರುಬ ಸಮುದಾಯದ ಜನರು ರಾಜ್ಯದಲ್ಲಿ ಅಧಿಕಾರ ನಡೆಸಿದ್ದಾರೆ. ಸಾಮರ್ಥ್ಯವಿದ್ದರೂ ಸಹ ಅವಕಾಶಗಳನ್ನು ತಪ್ಪಿಸಲಾಗುತ್ತಿದೆ, ಸಮಾಜದ ನೌಕರರು ನಿರ್ಭಯವಾಗಿ ಕೆಲಸ ಮಾಡುವ ಮೂಲಕ ತಮ್ಮ ಹಕ್ಕುಗಳನ್ನು ಪ್ರತಿಪಾದಿಸಬೇಕು ಮತ್ತು ಅನ್ಯಾಯ ಎಂದು ಕಂಡುಬಂದಲ್ಲಿ ಸಂಘಟಿತರಾಗಿ ಹೋರಾಟ ನಡೆಸುವಂತೆ ಕರೆ ನೀಡಿದರು.

ಕನಕ ನೌಕರರ ಸಂಘದ ಅಧ್ಯಕ್ಷ ಎನ್.ಹೆಚ್. ಬಣಕಾರ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಡಾ. ಪ್ರವೀಣ ಖನ್ನೂರು, ಡಾ.ರಾಘವೇಂದ್ರ ಜಿಗಳಿಕೊಪ್ಪ, ಬೀರೇಶ್ವರ ಪಂಚ ಸಮಿತಿ ಅಧ್ಯಕ್ಷ ಚಿಕ್ಕಪ್ಪ ಹಾದಿಮನಿ, ಕನಕಗುರುಪೀಠ ಧರ್ಮದರ್ಶಿ ಶಂಕ್ರಣ್ಣ ಮಾತನವರ, ಕಸಾಪ ತಾಲೂಕಾಧ್ಯಕ್ಷ ಬಿ.ಎಂ. ಜಗಾಪೂರ, ಗುತ್ತಿಗೆದಾರ ನಾಗರಾಜ ಆನ್ವೇರಿ, ಬೀರೇಶ್ವರ ಪಂಚ ಸಮಿತಿ ಖಜಾಂಚಿ ರಾಮಣ್ಣ ಉಕ್ಕುಂದ, ಪಶು ವೈದ್ಯಾಧಿಕಾರಿ ಡಾ.ಎನ್.ಎಸ್. ಚವಡಾಳ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಅಶೋಕ ಕುರುಬರ, ಪಿಡಿಓ ಜಗದೀಶ ಮಣ್ಣಮ್ಮನವರ, ಮುಖಂಡ ಉಮೇಶ ಕರಿಗಾರ ಇನ್ನಿತರರಿದ್ದರು.