ಸಾರಾಂಶ
ಗಜೇಂದ್ರಗಡ: ಪಟ್ಟಣದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ತಾಲೂಕಾಡಳಿತ ಅಗತ್ಯ ಸೌಲಭ್ಯಗಳ ಹಾಗೂ ಅನುದಾನ ನೀಡುತ್ತಿದ್ದರೂ ರೋಗಿಗಳಿಗೆ ಸೌಲಭ್ಯ ತಲುಪಿಸಲು ನಿರ್ಲಕ್ಷ್ಯ ತೋರುವವರ ಮೇಲೆ ಕಠೀಣ ಕ್ರಮಕ್ಕೆ ಶಾಸಕರಿಗೆ ಒತ್ತಾಯಿಸಲಾಗುವುದು ಎಂದು ಪುರಸಭೆ ಸದಸ್ಯ, ಆರೋಗ್ಯ ರಕ್ಷಾ ಸಮಿತಿ ಸದಸ್ಯ ರಾಜು ಸಾಂಗ್ಲೀಕರ ಹೇಳಿದರು.
ಸ್ಥಳೀಯ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಇತ್ತೀಚೆಗೆ ಲೋಕಾಯುಕ್ತ ಅಧಿಕಾರಿಗಳು ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಹಿನ್ನೆಲೆ ಗುರುವಾರ ವೈದ್ಯರು ಮತ್ತು ಸಿಬ್ಬಂದಿಯೊಂದಿಗೆ ತುರ್ತು ಸಭೆ ನಡೆಸಿ ಮಾತನಾಡಿದರು.ಪಟ್ಟಣದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸ್ಥಳೀಯರು ಸೇರಿ ಸುತ್ತಲಿನ ಗ್ರಾಮಗಳ ರೋಗಿಗಳು ಹಾಗೂ ಸಾರ್ವಜನಿಕರು ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆಗಾಗಿ ನೆಚ್ಚಿಕೊಂಡಿದ್ದಾರೆ. ಹೀಗಾಗಿ ಶಾಸಕ ಜಿ.ಎಸ್. ಪಾಟೀಲ ಅವರು ಆರೋಗ್ಯ ಕೇಂದ್ರದಲ್ಲಿ ಅಗತ್ಯ ಸೌಲಭ್ಯಗಳ ಜತೆಗೆ ಡಯಾಲಿಸಿಸ್ ಕೇಂದ್ರ, ಎಕ್ಸ್-ರೇ ಸೇರಿ ಅನೇಕ ಸೌಲಭ್ಯಗಳನ್ನು ಒದಗಿಸಿ ಸಾರ್ವಜನಿಕ ಸ್ನೇಹಿ ಆಡಳಿತಕ್ಕೆ ಒತ್ತು ನೀಡುತ್ತಿದ್ದಾರೆ. ಸಾರ್ವಜನಿಕರಿಗೆ ಮತ್ತು ರೋಗಿಗಳಿಗೆ ಉತ್ತಮ ಸೇವೆ ನೀಡುವುದು ತಾಲೂಕಾಡಳಿತ ಮುಖ್ಯ ಉದ್ದೇಶವಾಗಿದೆ. ಆದರೆ ಲೋಕಾಯುಕ್ತರು ಆರೋಗ್ಯ ಕೇಂದ್ರಕ್ಕೆ ಭೇಟಿ ವೇಳೆ ಕರ್ತವ್ಯನಿರತ ವೈದ್ಯರ ಗೈರು ಹಾಗೂ ಸಿಬ್ಬಂದಿಗಳು ಸಹಿ ಮಾಡದ್ದು ಕಂಡು ಬಂದಿದೆ. ಅಲ್ಲದೆ ಆಸ್ಪತ್ರೆಯಲ್ಲಿ ಅಸ್ವಚ್ಛತೆ ಹಾಗೂ ಸಮಸ್ಯೆಗಳ ವರದಿ ಮಾಡಿಕೊಂಡಿದ್ದಾರೆ. ಹೀಗಾಗಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸರ್ಕಾರದ ನಿಯಮಗಳಂತೆ ಕೆಲಸ ಮಾಡಬೇಕು, ಅಲಕ್ಷ್ಯ ಮಾಡಿದರೆ ಅಂತಹವರ ಮೇಲೆ ನಿರ್ದಾಕ್ಷಿಣ್ಯ ಕ್ರಮಕ್ಕೆ ಶಾಸಕರಿಗೆ ಮತ್ತು ಮೇಲಧಿಕಾರಿಗಳಿಗೆ ಆಗ್ರಹಿಸಲಾಗುವುದು ಎಂದು ಎಚ್ಚರಿಸಿದರು.ಆರೋಗ್ಯ ರಕ್ಷಾ ಸಮಿತಿ ಸದಸ್ಯ ಪುಷ್ಪರಾಜ ಬಾಗಮಾರ ಮಾತನಾಡಿ, ಗಜೇಂದ್ರಗಡ ಸೇರಿ ನೆರೆಯ ತಾಲೂಕಿನ ೧೦ಕ್ಕೂ ಅಧಿಕ ಗ್ರಾಮಗಳ ರೋಗಿಗಳ ಆರೋಗ್ಯ ದೃಷ್ಟಿಯಿಂದ ಶಾಸಕ ಜಿ.ಎಸ್.ಪಾಟೀಲ ಅವರು ಈಗಾಗಲೇ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸಲು ಸರ್ಕಾರ ಮಟ್ಟದಲ್ಲಿ ಶ್ರಮಿಸುವುದರ ಜತೆಗೆ ರು. ೬೦ ಲಕ್ಷ ವೆಚ್ಚದಲ್ಲಿ ಅನೇಕ ಸಾಮಗ್ರಿಗಳನ್ನು ಆರೋಗ್ಯ ಕೇಂದ್ರಕ್ಕೆ ತರುತ್ತಿದ್ದಾರೆ. ಈಗಾಗಲೇ ಡಯಾಲಿಸಿಸ್ ಕೇಂದ್ರ ಆರಂಭಿಸಿದ್ದು, ನೂರಾರು ರೋಗಿಗಳಿಗೆ ಪಾಲಿಗೆ ವರದಾನವಾಗಿದೆ. ಅಲ್ಲದೆ ಆಸ್ಪತ್ರೆಯಲ್ಲಿ ಕುಂದು, ಕೊರತೆ ಕುರಿತು ಗಮನಕ್ಕೆ ತಂದ ತಕ್ಷಣವೇ ಸಕಾರಾತ್ಮಕವಾಗಿ ಸ್ಪಂದಿಸುವ ಮೂಲಕ ಸಮಸ್ಯೆಗಳ ಪರಿಹಾರಕ್ಕೆ ಶ್ರಮಿಸುತ್ತಿದ್ದಾರೆ. ಹೀಗಿದ್ದರೂ ಸಹ ಆಸ್ಪತ್ರೆಗೆ ಲೋಕಾಯುಕ್ತರು ಭೇಟಿ ನೀಡಿದ ವೇಳೆ ಆಸ್ಪತ್ರೆಯಲ್ಲಿ ಅವ್ಯವಸ್ಥೆ ಕಂಡಿದೆ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ನಡೆಯದಂತೆ ಪ್ರತಿಯೊಬ್ಬರು ಎಚ್ಚರಿಕೆ ವಹಿಸಬೇಕು ಎಂದರು. ಈ ವೇಳೆ ವೈದ್ಯಾಧಿಕಾರಿಗಳಾದ ಅನೀಲಕುಮಾರ ತೋಟದ, ವೀರೇಶ ಪಟ್ಟಣಶೆಟ್ಟರ, ಆರೋಗ್ಯ ರಕ್ಷಾ ಸಮಿತಿ ಸದಸ್ಯೆ ರೇಣುಕಾ ಕುಂಬಾರ, ಆಸ್ಪತ್ರೆಯ ಸಿಬ್ಬಂದಿ ಡಿ.ಆರ್. ಬಡಿಗೇರ, ರಮೇಶ ರಾಠೋಡ, ಶರಣು ವದೆಗೋಳ, ಸತೀಶ ಹಿರೇಮನಿ, ಅಶೋಕ ಕೋಳಿವಾಡ, ಫ್ರಭು ರಾಯನಗೌಡರ, ರೇಣುಕಾ ಗೋಡಿ, ಶೋಭಾ ನಾರಾಯಿಣಿ, ಮಾಬುಬಿ ಐರಾನಿ ಸೇರಿ ಇತರರು ಇದ್ದರು.