ನುಡಿದಂತೆ ನಡೆದಿದ್ದೇವೆ ಕಾಂಗ್ರೆಸ್ ಗೆ ಮತ ನೀಡಿ: ಸಚಿವ ರಾಜಣ್ಣ

| Published : Apr 25 2024, 01:01 AM IST

ನುಡಿದಂತೆ ನಡೆದಿದ್ದೇವೆ ಕಾಂಗ್ರೆಸ್ ಗೆ ಮತ ನೀಡಿ: ಸಚಿವ ರಾಜಣ್ಣ
Share this Article
  • FB
  • TW
  • Linkdin
  • Email

ಸಾರಾಂಶ

ಮೋದಿ ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿ, ಗೆದ್ದ 100 ದಿನಗಳೊಳಗೆ ವಿದೇಶದಲ್ಲಿರುವ ಕಪ್ಪು ಹಣ ತಂದು ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರು.ಹಣ ಹಾಕುತ್ತೇನೆ ಎಂದು ಸುಳ್ಳು ಹೇಳಿ ಅಧಿಕಾರಕ್ಕೆ ಬಂದರು, ಮೋದಿ ಒಂದು ನೈಯಾಪೈಸೆಯನ್ನೂ ಕೊಡಲಿಲ್ಲ. ಸುಳ್ಳು ಹೇಳುವುದೇ ಇವರ ಕೆಲಸ, ಯಾವುದೇ ಕಾರಣಕ್ಕೂ ಇವರನ್ನು ನಂಬಬೇಡಿ, ಸೋಮಣ್ಣ ಸೋಲು ಖಚಿತ.

ಕನ್ನಡಪ್ರಭ ವಾರ್ತೆ ಮಧುಗಿರಿ

ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಚುನಾವಣಾ ಪೂರ್ವದಲ್ಲಿ ನೀಡಿದ್ದ ಎಲ್ಲ ಭರವಸೆಗಳನ್ನು ಈಡೇರಿಸುವ ಮೂಲಕ ನುಡಿದಂತೆ ನಡೆದಿದ್ದೇವೆ. ಆದ್ದರಿಂದ ಏ.26ರಂದು ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಎಸ್‌.ಪಿ.ಮುದ್ದಹನುಮೇಗೌಡರಿಗೆ ಅತ್ಯಧಿಕ ಮತ ನೀಡಿ ಗೆಲ್ಲಿಸಬೇಕು ಎಂದು ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಮನವಿ ಮಾಡಿದರು. ಮಧುಗಿರಿಯಲ್ಲಿ ಬುಧವಾರ ರೋಡ್ ಶೋ ನಡೆಸಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳಿಂದ ಕುಟುಂಬ ನಿರ್ವಹಣೆ ಮತ್ತು ನೆಮ್ಮದಿಯ ಜೀವನ ನಡೆಸಲು ಹೆಣ್ಣುಮಕ್ಕಳಿಗೆ ಅನುಕೂಲವಾಗಿದ್ದು, ಇವುಗಳನ್ನು ಸದ್ಬಳಕೆ ಮಾಡಿಕೊಂಡು ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವಂತೆ ಸಲಹೆ ನೀಡಿದರು.

ಮೋದಿ ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿ, ಗೆದ್ದ 100 ದಿನಗಳೊಳಗೆ ವಿದೇಶದಲ್ಲಿರುವ ಕಪ್ಪು ಹಣ ತಂದು ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರು.ಹಣ ಹಾಕುತ್ತೇನೆ ಎಂದು ಸುಳ್ಳು ಹೇಳಿ ಅಧಿಕಾರಕ್ಕೆ ಬಂದರು, ಮೋದಿ ಒಂದು ನೈಯಾಪೈಸೆಯನ್ನೂ ಕೊಡಲಿಲ್ಲ. ಸುಳ್ಳು ಹೇಳುವುದೇ ಇವರ ಕೆಲಸ, ಯಾವುದೇ ಕಾರಣಕ್ಕೂ ಇವರನ್ನು ನಂಬಬೇಡಿ, ಸೋಮಣ್ಣ ಸೋಲು ಖಚಿತ ಎಂದರು.

ಡಿಸಿಸಿ ಬ್ಯಾಂಕ್‌ ನಿಮ್ಮದು. ನಾವು ರೈತರಿಗೆ, ಬಡವರಿಗೆ ಹಾಗೂ ಕೃಷಿ ಕೂಲಿ ಕಾರ್ಮಿಕರಿಗೆ ಜೀವನ ಮಟ್ಟ ಸುಧಾರಣೆಗೆ ಸಾಲ ಸೌಲಭ್ಯ ನೀಡಿದ್ದೇವೆ. ಆದರೆ ಮಾಜಿ ಸಿಎಂ ಕುಮಾರಸ್ವಾಮಿ ಡಿಸಿಸಿ ಬ್ಯಾಂಕನ್ನು ಅಪ್ಪನ ಆಸ್ತಿ ಮಾಡಿಕೊಂಡಿದ್ದಾರೆ ಎಂದು ಹೇಳುವುದು ಎಷ್ಟು ಸರಿ? ನಾನು ಮಧುಗಿರಿಯಲ್ಲಿ ಗೂಂಡಾಗಿರಿ ಮಾಡಿದ್ದೇನಾ? ಇವರು ಮಧುಗಿರಿಗೆ ಬಂದಾಗೆಲ್ಲಾ ಬರೀ ಸುಳ್ಳು ಹೇಳಿ ಹೋಗುತ್ತಾರಲ್ಲ, ಇದು ಸರಿಯಲ್ಲ. ಬಿಡಿ ಅವರು ಹೇಳಿದ್ದನ್ನೆಲ್ಲ ನಮ್ಮ ದಂಡಿಮಾರಮ್ಮನೇ ನೋಡಿಕೊಳ್ಳುತ್ತಾಳೆ ಎಂದರು.

ಎಚ್‌.ಡಿ.ದೇವೇಗೌಡರ ಬಗ್ಗೆ ನಮಗೆ ಗೌರವವಿದೆ. ಮುಂದಿನ ಜನ್ಮದಲ್ಲಿ ನಾನು ಮುಸಲ್ಮಾನನಾಗಿ ಹುಟ್ಟುತ್ತೇನೆ, ಮೋದಿ ಪ್ರಧಾನಿಯಾದರೆ ಈ ದೇಶ ಬಿಟ್ಟು ಹೋಗುತ್ತೇನೆ ಎಂದಿದ್ದರು. ಬಿಟ್ಟು ಹೋದರೇ? ತುಮಕೂರು ಕ್ಷೇತ್ರದಲ್ಲಿ ಇದುವರೆಗೂ ಹೊರಗಿವರು ಗೆದ್ದಿಲ್ಲ, ನಮ್ಮ ಮುದ್ದಹನುಮೇಗೌಡ ಗೆದ್ದು ಸಂಸದರಾದರೆ ಸ್ಥಳೀಯವಾಗಿ ಎಲ್ಲರಿಗೂ ಸಿಗುತ್ತಾರೆ. ಸುಳ್ಳು ಹೇಳಿಕೊಂಡು ಓಡಾಡುವವರನ್ನು ತಿರಸ್ಕರಿಸಿ, ಪ್ರತಿಯೊಬ್ಬರೂ ಮತ ಚಲಾಯಿಸಿ ಮುದ್ದಹನುಮೇಗೌಡರನ್ನು ಪುರಸ್ಕರಿಸಿ ಎಂದು ಮನವಿ ಮಾಡಿದರು.

ಬಿಜೆಪಿಯವರು ಸಂವಿಧಾನ ಬದಲಿಸುತ್ತೇವೆ ಎಂದು ಹೇಳುತ್ತಾರೆ, ಇದು ಸರಿನಾ? ಎಂದು ಪ್ರಶ್ನಿಸಿದ ಸಚಿವರು, ಇದರಿಂದ ಎಲ್ಲ ಸಮಾಜದ ಬಡವರಿಗೂ ಅನ್ಯಾಯವಾಗಲಿದೆ, ಆದ ಕಾರಣ ಜಾಗೃತರಾಗಿ ಬಡವರ ಪರ ಚಿಂತನೆ ನಡೆಸುವವರಿಗೆ ಮತ ನೀಡಿ ಗೆಲ್ಲಿಸಿ ಎಂದರು.

ಎಂಎಲ್ಸಿ ಆರ್‌.ರಾಜೇಂದ್ರ, ಜಿಪಂ ಮಾಜಿ ಅಧ್ಯಕ್ಷ ಜಿ.ಜೆ.ರಾಜಣ್ಣ, ಪುರಸಭೆ ಮಾಜಿ ಅಧ್ಯಕ್ಷ ಎನ್‌.ಗಂಗಣ್ಣ, ಎಂ.ಕೆ.ನಂಜುಂಡರಾಜು, ಕೆ.ಪ್ರಕಾಶ್‌, ಅಯೂಬ್‌, ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷ ಗೋಪಾಲಯ್ಯ, ಆದಿನಾರಾಯಣರೆಡ್ಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಆರ್‌.ರಮೇಶ್‌, ಉಪಾಧ್ಯಕ್ಷ ರಂಗಶ್ಯಾಮಯ್ಯ, ಆರೋಗ್ಯ ಸೇವಾ ಸಮಿತಿ ಸದಸ್ಯ ಪಾಂಡುರಂಗಯ್ಯ, ಮುಖಂಡರಾದ ಪಿ.ಸಿ.ಕೃಷ್ಣಾರೆಡ್ಡಿ, ತುಂಗೋಟಿ ರಾಮಣ್ಣ, ಎಂ.ಆರ್‌.ಖಲೀಲ್‌ ಸೇರಿ ಸಾವಿರಾರು ಜನರು ರೋಡ್‌ ಶೋನಲ್ಲಿ ಭಾಗವಹಿಸಿದ್ದರು.