ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ರಸಗೊಬ್ಬರ ದಾಸ್ತಾನಿನ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷರಿಂದ ನಾವು ಪಾಠ ಕಲಿಯಬೇಕಿಲ್ಲ. ಅವರ ತಂದೆ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಬಿತ್ತನೆ ಬೀಜ, ರಸಗೊಬ್ಬರ ಕೇಳಿದ ರೈತರಿಗೆ ಗುಂಡಿಕ್ಕಿ ಕೊಂದಂತೆ ನಾವು ಗುಂಡಿಕ್ಕಲಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿ.ವೈ.ವಿಜಯೇಂದ್ರ ಅವರಿಗೆ ತಿರುಗೇಟು ನೀಡಿದರು.ಪಟ್ಟಣದ ಹೊರವಲಯದಲ್ಲಿರುವ ಕೆಸ್ತೂರು ಸರ್ಕಲ್‌ನಲ್ಲಿ ಮದ್ದೂರು ತಾಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ ರಸಗೊಬ್ಬರದ ಅಭಾವವಿಲ್ಲ. ಕೇಂದ್ರದಿಂದ ಬೇಡಿಕೆಯಷ್ಟು ರಸಗೊಬ್ಬರ ಪೂರೈಕೆಯಾಗಿಲ್ಲ. ಗೊಬ್ಬರವನ್ನು ಉತ್ಪಾದಿಸುವವರು ನಾವಲ್ಲ, ಸರಬರಾಜು ಮಾಡುವವರೂ ನಾವಲ್ಲ. ರಸಗೊಬ್ಬರ ಕೊರತೆಯಾಗಿದ್ದರೆ ಅದಕ್ಕೆ ಕೇಂದ್ರವೇ ಹೊಣೆ ಎಂದು ಹೇಳಿದರು.ಕೇಂದ್ರ ಸರ್ಕಾರ ರೈತ ವಿರೋಧಿ:
ಬಿಜೆಪಿ ಅಧಿಕಾರದಲ್ಲಿರುವ ಹರಿಯಾಣ, ಮಧ್ಯಪ್ರದೇಶದಲ್ಲಿ ಗೊಬ್ಬರ, ಯೂರಿಯಾ, ಡಿಎಪಿ ಸಿಗುತ್ತಿಲ್ಲ. ಅದನ್ನು ಬಿಜೆಪಿಯವರು ಏಕೆ ಪ್ರಶ್ನಿಸುತ್ತಿಲ್ಲ. ರಾಜ್ಯಕ್ಕೆ ಕೇಂದ್ರ 6.82 ಲಕ್ಷ ಮೆಟ್ರಿಕ್ ಟನ್ ಗೊಬ್ಬರ ಪೂರೈಸಬೇಕಿತ್ತು. ಆದರೆ, ಕೇವಲ 5.27 ಲಕ್ಷ ಮೆಟ್ರಿಕ್ ಟನ್ ಗೊಬ್ಬರ ಸರಬರಾಜು ಮಾಡಿದೆ. ಇನ್ನೂ 1.50 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ಪೂರೈಕೆಯಾಗಬೇಕಿದೆ. ರಾಜ್ಯಕ್ಕೆ ಕೊಡಬೇಕಾದಷ್ಟು ಗೊಬ್ಬರವನ್ನು ಕೇಂದ್ರ ಕೊಟ್ಟಿಲ್ಲ. ಅದೊಂದು ರೈತ ವಿರೋಧಿ ಸರ್ಕಾರ. ನಾನೂ ಕೇಂದ್ರಕ್ಕೆ ಪತ್ರ ಬರೆದು ಗೊಬ್ಬರ ಸರಬರಾಜು ಮಾಡುವಂತೆ ಮನವಿ ಮಾಡಿದ್ದೇನೆ. ಒಂದು ವಾರ ಕಳೆದರೂ ಇದುವರೆಗೂ ಕೊಟ್ಟಿಲ್ಲ. ಬಿಜೆಪಿ ಸಂಸದರು ಮತ್ತು ರಾಜ್ಯ ಪ್ರತಿನಿಧಿಸುವ ಕೇಂದ್ರ ಸಚಿವರು ಕೇಂದ್ರದ ಜೊತೆ ಮಾತನಾಡಿ ಗೊಬ್ಬರ ಕೊಡಿಸಲಿ ಎಂದು ಸವಾಲು ಹಾಕಿದರು. ಪ್ರತಿಭಟನೆಗೆ ನಾವು ಹೆದರುವುದಿಲ್ಲ:ರಸಗೊಬ್ಬರಕ್ಕಾಗಿ ಪ್ರತಿಭಟನೆ ಮಾಡಿದರೆ ನಾವು ಹೆದರುವುದಿಲ್ಲ. ಜನರೆದುರು ಬಿಜೆಪಿ-ಜೆಡಿಎಸ್‌ನವರ ಬೂಟಾಟಿಕೆ ನಾಟಕ ನಡೆಯುವುದಿಲ್ಲ. ಕುಮಾರಸ್ವಾಮಿ ಅವರು ಕೇಂದ್ರದಲ್ಲಿ ಪ್ರಮುಖ ಇಲಾಖೆಯ ಮಂತ್ರಿಯಾಗಿದ್ದಾರೆ. ಮಣ್ಣಿನ ಮಗ ಎಂದು ಕರೆಸಿಕೊಳ್ಳುವವರು ಗೊಬ್ಬರ ಕೊಡಿಸುವ ಕೆಲಸ ಮಾಡಲಿ. ಬಿಜೆಪಿ-ಜೆಡಿಎಸ್‌ನವರು ಏನೇ ಆಟವಾಡಿದರೂ, ತಿಪ್ಪರಲಾಗ ಹಾಕಿದರೂ 2028ರಲ್ಲಿ ಮತ್ತೆ ನಾವೇ ಗೆದ್ದು ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಭವಿಷ್ಯ ನುಡಿದರು.
====ಗ್ಯಾರಂಟಿಗಳಿಂದ ರಾಜ್ಯದ ಆರ್ಥಿಕತೆಗೆ ಶಕ್ತಿ:ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಆರ್ಥಿಕತೆಗೆ ಹೊಸ ಶಕ್ತಿ ಬಂದಿದೆ. ದೇಶದ ತಲಾದಾಯದಲ್ಲಿ ಕರ್ನಾಟಕ ರಾಜ್ಯ ನಂಬರ್ 1 ಸ್ಥಾನದಲ್ಲಿದೆ. ಜನರ ಕೊಂಡುಕೊಳ್ಳುವ ಶಕ್ತಿ ಹೆಚ್ಚಿದೆ. ಶಕ್ತಿ ಯೋಜನೆಯಿಂದ ಮಹಿಳೆಯರ ಉದ್ಯೋಗದ ದರ ಹೆಚ್ಚಿದೆ. ಬೆಂಗಳೂರಿನಲ್ಲಿ ಶೇ.23, ಹುಬ್ಬಳ್ಳಿ-ಧಾರವಾಢದಲ್ಲಿ ಶೇ.21ರಷ್ಟು ಹೆಚ್ಚಳವಾಗಿದೆ. ಇದರಿಂದ ಮಹಿಳೆಯರಿಗೆ ಶಕ್ತಿ ತುಂಬಲು ಸಹಾಯವಾಗಿದೆ ಎಂದರು.
ಗ್ಯಾರಂಟಿ ಯೋಜನೆಗಳನ್ನು ವಿಪಕ್ಷಗಳಿಂದ ಸಹಿಸಲಾಗುತ್ತಿಲ್ಲ. ಸರ್ಕಾರದ ಬಳಿ ಅಭಿವೃದ್ಧಿಗೆ ಹಣಕಾಸಿನ ಕೊರತೆ ಇಲ್ಲ. ಗ್ಯಾರಂಟಿ ಯೋಜನೆಗಳ ನಡುವೆಯೂ ಅಭಿವೃದ್ಧಿ ಕಾರ್ಯಗಳಿಗೆ ನೂರಾರು ಕೋಟಿ ರು.ಹಣವನ್ನು ಖರ್ಚು ಮಾಡುತ್ತಿದ್ದೇವೆ. ಇದನ್ನು ಸಹಿಸದ ವಿಪಕ್ಷಗಳು ಸರ್ಕಾರದ ಬಳಿ ದುಡ್ಡಿಲ್ಲವೆಂದು ಸುಳ್ಳು ಹೇಳುತ್ತಿವೆ ಎಂದು ಆರೋಪಿಸಿದರು.(ಬಾಕ್ಸ್):
ಸಿಎಂ, ಡಿಸಿಎಂಗೆ ಬೆಲ್ಲ, ಕಬ್ಬಿನ ಹಾರದ ಸ್ವಾಗತ:ಬೆಳಗ್ಗೆ 10 ಗಂಟೆಗೆ ನಿಗದಿಯಾಗಿದ್ದ ಸಮಾವೇಶ ಶುರುವಾದಾಗ ಮಧ್ಯಾಹ್ನ 1 ಗಂಟೆಯಾಗಿತ್ತು. ಮದ್ದೂರು ಟಿಫಾನೀಸ್‌ನಲ್ಲಿ ಮದ್ದೂರು ವಡೆ ಸವಿದು ಸಮಾರಂಭಕ್ಕೆ ಆಗಮಿಸಿದ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರಿಗೆ ಬೆಲ್ಲ ಮತ್ತು ಕಬ್ಬಿನ ಬೃಹತ್ ಹಾರಗಳನ್ನು ಕ್ರೇನ್ ಸಹಾಯದಿಂದ ಸಮರ್ಪಿಸಿ ಗೌರವಿಸಲಾಯಿತು.ಸಮಾರಂಭದ ಪ್ರವೇಶದ್ವಾರವನ್ನು ಶಿವಪುರ ಧ್ವಜ ಸತ್ಯಾಗ್ರಹದ ರೀತಿಯಲ್ಲಿ ನಿರ್ಮಿಸಲಾಗಿತ್ತು. ಪ್ರವೇಶದ್ವಾರದಿಂದ ವೇದಿಕೆಯವರೆಗೆ ನೇರವಾಗಿ ರತ್ನಗಂಬಳಿ ಹಾಸಲಾಗಿತ್ತು. ಅದರ ಮೇಲೆ ನಡೆದುಬಂದ ನಾಯಕರಿಗೆ ವೇದಿಕೆಯ ಎರಡೂ ಕಡೆಯಿಂದ ಪುಷ್ಪವೃಷ್ಟಿ ಮಾಡಲಾಯಿತು. ಸಮಾರಂಭದಲ್ಲಿ ಸಾಧುಕೋಕಿಲಾ ತಂಡದವರಿಂದ ಗಾಯನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಮಾರಂಭಕ್ಕೆ ಆಗಮಿಸಿದ್ದ ಜನರೆಲ್ಲರಿಗೂ ಬಾತ್, ಲಾಡು, ಪಕೋಡಾವನ್ನು ಪ್ಯಾಕ್ ರೂಪದಲ್ಲಿ ನೀಡಲಾಯಿತು.