ಲಂಚಬಾಕ ಅಧಿಕಾರಿಗಳು ನಮಗೆ ಬೇಕಿಲ್ಲ

| Published : Jul 09 2024, 12:45 AM IST

ಸಾರಾಂಶ

ಕೆಲವು ದಿನಗಳಿಂದ ಕ್ಷೇತ್ರದ ಗ್ರಾಮೀಣ ಭಾಗಗಳಲ್ಲಿ ಅಭಿವೃದ್ಧಿ ಕಾಮಗಾರಿಗಳು ಕುಂಠಿತವಾಗುತ್ತಿದ್ದು, ಅವುಗಳಿಗೆ ಅಧಿಕಾರಿಗಳು ವೇಗ ನೀಡಬೇಕು. ಅಲ್ಲದೇ, ಸಾರ್ವಜನಿಕರಿಂದ ಹಣ ಪಡೆದು ಅಧಿಕಾರಿಗಳು ಕೆಲಸ ಮಾಡಿಕೊಡುತ್ತಿರುವ ದೂರುಗಳು ಬಂದಿವೆ. ಅಂತವರ ವಿರುದ್ಧ ಕ್ರಮಕೈಗೊಳ್ಳುವಂತೆ ಹಿರಿಯ ಅಧಿಕಾರಿಗಳಿಗೆ ಶಾಸಕ ರಮೇಶ ಜಾರಕಿಹೊಳಿ ಖಡಕ್ ಎಚ್ಚರಿಕೆ ನೀಡಿದರು.

ಕನ್ನಡಪ್ರಭ ವಾರ್ತೆ ಗೋಕಾಕ

ಕೆಲವು ದಿನಗಳಿಂದ ಕ್ಷೇತ್ರದ ಗ್ರಾಮೀಣ ಭಾಗಗಳಲ್ಲಿ ಅಭಿವೃದ್ಧಿ ಕಾಮಗಾರಿಗಳು ಕುಂಠಿತವಾಗುತ್ತಿದ್ದು, ಅವುಗಳಿಗೆ ಅಧಿಕಾರಿಗಳು ವೇಗ ನೀಡಬೇಕು. ಅಲ್ಲದೇ, ಸಾರ್ವಜನಿಕರಿಂದ ಹಣ ಪಡೆದು ಅಧಿಕಾರಿಗಳು ಕೆಲಸ ಮಾಡಿಕೊಡುತ್ತಿರುವ ದೂರುಗಳು ಬಂದಿವೆ. ಅಂತವರ ವಿರುದ್ಧ ಕ್ರಮಕೈಗೊಳ್ಳುವಂತೆ ಹಿರಿಯ ಅಧಿಕಾರಿಗಳಿಗೆ ಶಾಸಕ ರಮೇಶ ಜಾರಕಿಹೊಳಿ ಖಡಕ್ ಎಚ್ಚರಿಕೆ ನೀಡಿದರು.

ನಗರದ ತಾಪಂ ಸಭಾ ಭವನದಲ್ಲಿ ಸೋಮವಾರ ಜರುಗಿದ ತಾಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಡೆಂಘೀ ಜ್ವರ ಸದ್ದು ಮಾಡುತ್ತಿದ್ದು, ಆರೋಗ್ಯ ಇಲಾಖೆ ಮತ್ತು ಸ್ಥಳೀಯ ಸಂಸ್ಥೆಗಳು ರೋಗ ಹರಡದಂತೆ ಮುನ್ನೆಚ್ಚರಿಕೆ ವಹಿಸಬೇಕು. ಮಳೆಯ ಪ್ರಮಾಣ ಹೆಚ್ಚಿರುವುದರಿಂದ ಪ್ರವಾಹದ ಬಗ್ಗೆ ಮತ್ತು ರೋಗರುಜಿನಗಳು ಹರಡದಂತೆ ಕ್ರಮಕೈಗೊಳ್ಳಬೇಕು. ನಗರಸಭೆ ಪಟ್ಟಣ ಪಂಚಾಯತಿಗಳಲ್ಲಿ ಮನೆಗಳ ಉತಾರ ಪಡೆಯಲು ಬೇಕಾಬಿಟ್ಟಿಯಾಗಿ ಹಣ ವಸೂಲಿ ಮಾಡಲಾಗುತ್ತಿದೆ. ಅಂತವರನ್ನು ಕೂಡಲೇ ಸಸ್ಪೆಂಡ್‌ ಮಾಡುವಂತೆ ಮೇಲಾಧಿಕಾರಿಗಳಿಗೆ ಸೂಚಿಸಿದರು.

ಸಿಬ್ಬಂದಿ ನೇಮಕಕ್ಕೆ ಪ್ರಯತ್ನ:

ನಗರದ ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ಇದೆ. ಅದನ್ನು ಸರ್ಕಾರದ ಗಮನಕ್ಕೆ ತಂದು ಹೆಚ್ಚಿನ ಸಿಬ್ಬಂದಿ ನೇಮಿಸಲು ಪ್ರಯತ್ನಿಸುತ್ತೇನೆ. ಹೆರಿಗೆಗೆ ಬರುವ ಗರ್ಭಿಣಿಯರಿಗೆ ರಾತ್ರಿ ಸಮಯದಲ್ಲಿ ಸರಿಯಾದ ಚಿಕಿತ್ಸೆ ನೀಡುತ್ತಿಲ್ಲ. ಅಲ್ಲದೇ ಕರ್ತವ್ಯದಲ್ಲಿರುವ ವೈದ್ಯರಿಗೂ ತಿಳಿಸದೇ ಕಮೀಷನ್‌ ಆಸೆಗೆ ಖಾಸಗಿ ಆಸ್ಪತ್ರೆಗೆ ಕಳುಹಿಸುತ್ತಿರುವುದು ಗಮನಕ್ಕೆ ಬಂದಿದೆ. ಅಂತವರ ವಿರುದ್ಧ ಸೂಕ್ತ ಕ್ರಮ ವಹಿಸಲಾಗುವುದು ಎಂದು ಎಚ್ಚರಿಸಿದರು.ತಾಲೂಕಿನ ಕೆಲವು ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯರು ಸರಿಯಾಗಿ ಶಾಲೆಗೆ ಬಾರದಿರುವುದು ಮತ್ತು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ವಿಫಲರಾಗುತ್ತಿದ್ದಾರೆ. ಅಂತವರ ವಿರುದ್ಧ ಶಿಸ್ತುಕ್ರಮ ಜರುಗಿಸಿ. ಅಂಬೇಡ್ಕರ ವಸತಿ ಶಾಲೆಯಲ್ಲಿಯೂ ಗುಣಮಟ್ಟದ ಶಿಕ್ಷಣ, ಆಹಾರ ಒದಗಿಸುತ್ತಿಲ್ಲ ಎಂಬ ಮಾಹಿತಿ ಬಂದಿದ್ದು, ಸಂಬಂಧಿಸಿದ ಅಧಿಕಾರಿಗಳು ಕ್ರಮಕೈಗೊಳ್ಳುವಂತೆ ತಿಳಿಸಿದರು.ಏಜೆಂಟರ್‌ ಹಾವಳಿ ತಪ್ಪಿಸಿ:

ತಾಲೂಕಿನಲ್ಲಿ ಉತ್ತಮ ಮಳೆಯಾಗುತ್ತಿದ್ದು, ರೈತರಿಗೆ ಸರಿಯಾದ ಸಮಯಕ್ಕೆ ಕೃಷಿ, ತೋಟಗಾರಿಕೆ ಇಲಾಖೆಯಿಂದ ಸರ್ಕಾರಿ ಸೌಲಭ್ಯಗಳು ಸಿಗುವಂತಾಗಬೇಕು. ತಾಲೂಕಿನಲ್ಲಿ ರೈತರಿಗೆ ಕೃಷಿ ಇಲಾಖೆಯಿಂದ ಬರುವ ಯೋಜನೆಗಳ ಬಗ್ಗೆ ಮಾಹಿತಿ ಇಲ್ಲ. ಅಲ್ಲದೇ ಅದರ ಬಗ್ಗೆ ಪ್ರಚಾರ ಸಹ ಆಗುತ್ತಿಲ್ಲ. ಅಧಿಕಾರಿಗಳು ಯೋಜನೆಗಳನ್ನು ತಿಳಿಸಿ, ರೈತರು ಸದ್ಬಳಕೆಮಾಡಿಕೊಳ್ಳಲು ಸಹಕಾರ ನೀಡಬೇಕು. ಕೃಷಿ ಇಲಾಖೆಯಲ್ಲಿ ಕೃಷಿ ಪರಿಕರಗಳು ಅರ್ಹ ಫಲಾನುಭವಿಗಳಿಗೆ ಸೇರುತ್ತಿಲ್ಲ. ಕೃಷಿ ಇಲಾಖೆಯಲ್ಲಿ ಏಜೆಂಟರ ಹಾವಳಿ ಹೆಚ್ಚಾಗಿದ್ದು, ಅಂತವರ ಬಗ್ಗೆ ಕ್ರಮಕೈಗೊಳ್ಳಲು ಹೇಳಿದರು.ಮಳೆಗಾಲವಾಗಿರುವುದರಿಂದ ಕಾಲುವೆಗಳ ಸ್ವಚ್ಛತೆಗೆ ಕ್ರಮವಹಿಸಿ, ರೈತರಿಗೆ ಕಾಲುವೆ ನೀರು ಸರಿಯಾಗಿ ತಲುಪಿಸುವಂತೆ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ ಅವರು, ಹೆಸ್ಕಾಂನಿಂದ ರೈತರಿಗೆ ವಿದ್ಯುತ್ ಕಂಬ, ಟಿಸಿ ಸೇರಿದಂತೆ ರೈತರಿಗೆ ಅಗತ್ಯ ಸೇವೆಗಳನ್ನು ಒದಗಿಸಬೇಕೆಂದು ತಿಳಿಸಿದರು.ಸಭೆಯಲ್ಲಿ ತಹಸೀಲ್ದಾರ್‌ ಡಾ.ಮೋಹನ ಭಸ್ಮೆ, ಜಿಪಂ ಕಾರ್ಯನಿರ್ವಾಹಕ ಅಧಿಕಾರಿ ಉದಯ ಕಾಂಬಳೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.ಜನಸ್ನೇಹಿ ಆಡಳಿತ ನೀಡದವರು ನಮ್ಮ ತಾಲೂಕಿಗೆ ಅವಶ್ಯಕತೆ ಇಲ್ಲ. ಸ್ವತಃ ತಾವೇ ಬೇರೆಡೆಗೆ ವರ್ಗಾವಣೆ ಪಡೆದು ಹೋಗಬಹುದು. ತಾಲೂಕಿನ ಜನರ ಸೇವೆ ಮಾಡುವವರು ಮಾತ್ರ ಇಲ್ಲಿ ಇರಬೇಕು. ಇಲ್ಲವಾದರೆ ಕಠಿಣ ಕ್ರಮಕೈಗೊಳ್ಳಲಾಗುವುದು. ಸರ್ಕಾರಿ ಯೋಜನೆಗಳನ್ನು ಪಡೆಯಲು ಬರುವ ಜನರಿಂದ ಹಣ ವಸೂಲಿ ಮಾಡುವುದು, ಸರಿಯಾಗಿ ಕಾರ್ಯನಿರ್ವಹಿಸದೇ ಇರುವ ಅಧಿಕಾರಿಗಳನ್ನು ಕಾನೂನು ಶಿಕ್ಷೆಗೆ ಒಳಪಡಿಸಿ.

ರಮೇಶ ಜಾರಕಿಹೊಳಿ, ಶಾಸಕ.