ಸಾರಾಂಶ
ಕನ್ನಡಪ್ರಭ ವಾರ್ತೆ ರಾಮದುರ್ಗ
ತಾಲೂಕಿನಲ್ಲಿ ಜನಪ್ರತಿನಿಧಿಗಳ ಮಾತಿಗೆ ಮನ್ನಣೆ ನೀಡದೆ ತಮಗೆ ಬೇಕಾದವರನ್ನು ಆಡಳಿತ ಕಚೇರಿಯಲ್ಲಿ ಇಟ್ಟುಕೊಂಡು ಅಂಗವೈಕಲ್ಯ ಇರುವ ಸಿಬ್ಬಂದಿಯನ್ನು ನಿಷ್ಕರುಣಿಯಾಗಿ ಗ್ರಾಮೀಣ ಪ್ರದೇಶದಲ್ಲಿ ಕೆಲಸಕ್ಕೆ ಕಳಿಸುತ್ತಿದ್ದಾರೆ. ಇಂತಹ ಅಧಿಕಾರಿಗಳ ಅಗತ್ಯ ರಾಮದುರ್ಗಕ್ಕೆ ಬೇಡವೆಂದು ಶಾಸಕ ಅಶೋಕ ಪಟ್ಟಣ ಸಿಡಿಮಿಡಿಗೊಂಡರು.ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಸೋಮವಾರ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಏರುಧ್ವನಿಯಲ್ಲಿ ಮಾತನಾಡಿದ ಅವರು, ಕಳೆದ ಹಲವಾರು ವರ್ಷಗಳಿಂದ ಕಚೇರಿಯಲ್ಲಿ ಠಿಕಾಣಿ ಹೂಡಿರುವ ನೌಕರರನ್ನು ಬೇರೆ ಕೆಲಸಕ್ಕೆ ನೇಮಕ ಮಾಡಲು ಸೂಚನೆ ನೀಡಿದ್ದರೂ ಶಾಸಕರ ಮಾತಿಗೆ ಮನ್ನಣೆ ನೀಡುತ್ತಿಲ್ಲ. ನಾಳೆ ನಾಳೆ ಎನ್ನುತ್ತ ಕಾಲಹರಣ ಮಾಡುತ್ತ ಸುಳ್ಳು ಹೇಳುತ್ತಿರುವುದಕ್ಕೆ ಸಿಡಿಪಿಒ ಶಂಕರ ಕುಂಬಾರರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ನೋಡಲ್ ಅಧಿಕಾರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಎಂ.ಎನ್. ಚೇತನಕುಮಾರ ಮಧ್ಯ ಪ್ರವೇಶಿಸಿ ಸರಿಪಡಿಸುವ ಭರವಸೆ ನೀಡಿದ ನಂತರವೇ ಶಾಸಕರ ಕೋಪ ತಣ್ಣಗಾಯಿತು. ಕಾರ್ಮಿಕ ಇಲಾಖೆ ಅಧಿಕಾರಿ ನಾಗರಾಜ ಸರಿಯಾಗಿ ಕಚೇರಿಯಲ್ಲಿ ಇರುವುದಿಲ್ಲ. ಶಾಸಕರು ಖುದ್ದಾಗಿ ಕಚೇರಿಗೆ ಹೋದಾಗಲೂ ಕಚೇರಿಯಲ್ಲಿ ಇರುವುದಿಲ್ಲ. ಆಗೊಮ್ಮೆ ಈಗೊಮ್ಮೆ ಬಂದು ಹೋಗುವ ಅವರು ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಕಾರ್ಮಿಕರಿಗೆ ನ್ಯಾಯ ಸಿಗುತ್ತಿಲ್ಲ. ಕಾರ್ಮಿಕರು ಕಾರ್ಡ್‌ಗಳನ್ನು ಕೇಳಲು ಬಂದರೆ ಏಜೆಂಟರ್ ಮೂಲಕ ಲಂಚ ಪಡೆಯುತ್ತಾರೆ. ಈ ಬಗ್ಗೆ ಲೋಕಾಯುಕ್ತರಿಗೆ ದೂರು ನೀಡಲಾಗುವುದು ಎಂದು ಎಚ್ಚರಿಸಿದರು.ಕಳೆದ ಹಲವಾರು ದಶಕಗಳಿಂದ ಗ್ರಾಮದ ಪಕ್ಕದಲ್ಲಿರುವ ಅರಣ್ಯ ಪ್ರದೇಶದಲ್ಲಿ ಮನೆ ನಿರ್ಮಾಣ ಮಾಡಿದ ಗ್ರಾಮಸ್ಥರ ಮನೆಗಳನ್ನು ತೆರವುಗೊಳಿಸುವುದಕ್ಕೆ ಅರಣ್ಯಾಧಿಕಾರಿ ಭಾಗ್ಯಶ್ರೀ ಮಸಳಿ ದರ್ಪದಿಂದ ಮುಂದಾಗಿದ್ದಾರೆ. ಹಳೆ ಮನೆಗಳನ್ನು ತೆರವು ಮಾಡುವಂತಿಲ್ಲ. ಹೊಸ ಮನೆಗಳ ನಿರ್ಮಾಣಕ್ಕೆ ಅವಕಾಶ ನೀಡಬಾರದು ಎಂದು ತಾಕೀತು ಮಾಡಿದರು.
ಗ್ರಾಮೀಣ ಪ್ರದೇಶದ ಪ್ರತಿ ಮನೆಗೆ ನೀರು ಪೂರೈಕೆ ಮಾಡುವ ಜೆಜೆಎಂ ಕಾಮಾಗಾರಿ ಆರಂಭವಾಗಿ ಹಲವು ವರ್ಷಗಳೆದರೂ ನಾಲ್ಕು ಹಂತದ ಕಾಮಗಾರಿಗಳಲ್ಲಿ ಹಲವು ಕಾಮಗಾರಿ ಇನ್ನು ಮುಗಿದಿಲ್ಲ. ಕಾಮಗಾರಿ ಮುಗಿದಲ್ಲಿ ರಸ್ತೆಗಳನ್ನು ಗುತ್ತಿಗೆದಾರರಿಂದ ರಸ್ತೆ ಮಾಡಿಸದಿರುವುದಕ್ಕೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಎಂಜನಿಯರನ್ನು ಶಾಸಕರು ತರಾಟಗೆ ತೆಗೆದುಕೊಂಡರು.ಮುದೇನೂರ ಗ್ರಾಮದಲ್ಲಿ ಮೇಲ್ಮಟ್ಟದ ಜಲಸಂಗ್ರಾಲಯ ಪಾಚಿಗಟ್ಟಿದ್ದು ಜನ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ತ್ವರಿತವಾಗಿ ಟ್ಯಾಂಕ್ ಸ್ವಚ್ಛಗೊಳಿಸಿ ಶುದ್ಧ ನೀರು ಪೂರೈಸಬೇಕು. ಅದೇ ಗ್ರಾಮದಲ್ಲಿ ಒಂದು ಕೊಳವೆ ಬಾವಿ ಕೊರೆಯಿಸಿ ನೀರಿನ ಸಮಸ್ಯೆ ನೀಗಿಸಬೇಕು ಎಂದು ಸೂಚಿಸಿದರು. ಸಭೆಯಲ್ಲಿ ತಾಪಂ ಆಡಳಿತಾಧಿಕಾರಿ ಎಂ.ಎನ್.ಚೇತನಕುಮಾರ, ತಾಪಂ ಇಒ ಬಸವರಾಜ ಐನಾಪೂರ, ತಹಸೀಲ್ದಾರ್ ಪ್ರಕಾಶ ಹೊಳೆಪ್ಪಗೋಳ ಇದ್ದರು.
ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ₹50 ಕೋಟಿ ಅನುದಾನ ಲಭ್ಯವಾಗಲಿದೆ. ಇದರಲ್ಲಿ ತಾಲೂಕಿನ ಮುಖ್ಯರಸ್ತೆಗಳ ಅಭಿವೃದ್ಧಿಗೆ ₹37 ಕೋಟಿ ಮತ್ತು ಗ್ರಾಮೀಣ ಮತ್ತು ರೈತರ ಜಮೀನುಗಳಿಗೆ ತೆರಳುವ ರಸ್ತೆಗೆ ₹12.50 ಕೋಟಿ ವೆಚ್ಚದ ಕ್ರಿಯಾಯೋಜನೆ ಸಿದ್ಧ ಪಡಿಸಲು ಲೋಕೋಪಯೋಗಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಶಾಸಕ ಅಶೋಕ ಪಟ್ಟಣ ಹೇಳಿದರು.;Resize=(128,128))
;Resize=(128,128))
;Resize=(128,128))
;Resize=(128,128))