ಸಾರಾಂಶ
ಶಿಗ್ಗಾಂವಿ: ಊಟ ಬೇಕಾದರೆ ನೀಡುತ್ತೇವೆ, ಆದರೆ ಕುಡಿಯುವ ನೀರು ಕೊಡಲು ಅಸಾಧ್ಯ...
ಇದು ಶ್ಯಾಡಂಬಿ ಗ್ರಾಮಸ್ಥರ ಹೇಳಿಕೆ. ಈ ಗ್ರಾಮದಲ್ಲಿ ಜನರು ನೀರಿಗಾಗಿ ಪರದಾಡುತ್ತಿದ್ದಾರೆ. ನಾಲ್ಕೈದು ದಿನಗಳಿಂದ ಕುಡಿಯುವ ನೀರಿಲ್ಲದೆ ಪರಿಸ್ಥಿತಿ ಗಂಭೀರವಾಗಿದೆ. ತಕ್ಷಣ ಕುಡಿಯುವ ನೀರಿನ ವ್ಯವಸ್ಥೆ ಮಾಡಿ ಎಂದು ಗ್ರಾಪಂ ಉಪಾಧ್ಯಕ್ಷೆ ಲಕ್ಷ್ಮವ್ವ ಕಲ್ಲಪ್ಪ ನಡಿಗೇರಿ ಹಾಗೂ ಸದಸ್ಯ ಬಸನಗೌಡ ವಿ. ಪಾಟೀಲ ಅವರು ತಾಪಂ ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ.ಗ್ರಾಮದಲ್ಲಿ 800ರಿಂದ 900 ಜನಸಂಖ್ಯೆ ಇದೆ. ಗ್ರಾಮಕ್ಕೆ ಜೆಜೆಎಂ ಯೋಜನೆಯಡಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಗ್ರಾಮದಲ್ಲಿ ಸುಮಾರು ೫ ಕೊಳವೆಬಾವಿಗಳಿವೆ. ಅದರಲ್ಲಿ ಎರಡರಲ್ಲಿ ಅಂತರ್‌ಜಲ ಮಟ್ಟ ಕಡಿಮೆ ಆಗಿದೆ. ಇನ್ನೂ ಎರಡು ನೀರಿಲ್ಲದೆ ಸಂಪೂರ್ಣ ಬರಿದಾಗಿದೆ. ಒಂದೇ ಒಂದು ಕೊಳವೆಬಾವಿ ಕಾರ್ಯನಿರ್ವಹಿಸುತ್ತಿದೆ. ಜನರ ಆ ಕೊಳವೆಬಾವಿ ಮುಂದೆ ಸರತಿಯಲ್ಲಿ ನಿಂತು ನೀರು ತರುತ್ತಾರೆ.
ಟ್ಯಾಂಕ್‌ಗೆ ಹೋಗುವ ಒಂದು ಕೊಳವೆ ಬಾವಿಯಲ್ಲಿಯ ಮೋಟಾರು ಕೆಟ್ಟಿದ್ದು, ವಿದ್ಯುತ್ ಸಮಸ್ಯೆಯಾಗಿದೆ. ಇದರಿಂದ ಟ್ಯಾಂಕರ್‌ಗೆ ನೀರು ಎತ್ತಲು ಸಾಧ್ಯವಾಗುತ್ತಿಲ್ಲ. ಈ ಕುರಿತು ಮೌಖಿಕವಾಗಿ ೬-೭ ದಿನಗಳಿಂದ ಪಿಡಿಒ ಅವರಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಇದಕ್ಕೆ ಸಂಬಂಧಿಸಿದ ತಾಪಂ ಕಾರ್ಯನಿರ್ವಾಕರಿಗೂ ಮನವಿ ಮಾಡಿದರೂ ಪ್ರಯೋಜನವಾಗುತ್ತಿಲ್ಲ.ಗ್ರಾಮದಲ್ಲಿ ಕೋಟ್ಯಂತರ ರು. ವೆಚ್ಚ ಮಾಡಿ ಜಲ ನಿರ್ಮಲ ಯೋಜನೆಯಲ್ಲಿ ನೀರು ಸರಬರಾಜು ವ್ಯವಸ್ಥೆ ಮಾಡಿದ್ದರೂ ನಲ್ಲಿಯಲ್ಲಿ ಸರಿಯಾಗಿ ನೀರು ಬರುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಹೀಗೆಯೇ ಮುಂದುವರಿದರೆ ಪ್ರತಿಭಟನೆಯ ಹಾದಿ ಹಿಡಿಯಬೇಕಾಗುತ್ತದೆ. ಆದ್ದರಿಂದ ಜಿಲ್ಲಾಧಿಕಾರಿ ಹಾಗೂ ಜಿಪಂ ಅಧಿಕಾರಿಗಳು ತಕ್ಷಣ ಕುಡಿಯುವ ನೀರಿನ ವ್ಯವಸ್ಥೆ ಮಾಡಿ ಪುಣ್ಯ ಕಟ್ಟಿಕೊಳ್ಳಬೇಕು ಎಂದು ಗ್ರಾಮಸ್ಥರಾದ ಕಲ್ಲಪ್ಪ ನಡಗೇರಿ, ಕೋಟೆಪ್ಪ ಸಂಜೀವಣ್ಣವರ, ರುದ್ರಪ್ಪ ಕಾಳಿ, ಹನುಮಂತಪ್ಪ ಈಟಿ ಇತರರು ಆಗ್ರಹಿಸಿದ್ದಾರೆ.
ಹಿಂದೆ ಈ ಭಾಗವೂ ಸಂಪೂರ್ಣವಾಗಿ ನೀರಿನ ಪ್ರದೇಶವಾಗಿತ್ತು. ಆದರೆ ಇದೀಗ ಸಂಪೂರ್ಣ ಅಂತರ್‌ಜಲಮಟ್ಟ ಕುಸಿದು ಹೋಗಿದ್ದರಿಂದ ಕೊಳವೆಬಾವಿಗಳಲ್ಲಿ ನೀರು ಬರುತ್ತಿಲ್ಲ. ನೀರಿಗಾಗಿ ಎಲ್ಲಿಗೆ ಹೋಗೋಣ ಎಂದು ಗ್ರಾಮಸ್ಥರು ಪ್ರಶ್ನಿಸುತ್ತಾರೆ.ಕುಡಿಯುವ ನೀರಿನ ವ್ಯವಸ್ಥೆ ಕುರಿತು ಪಿಡಿಒ ಅವರ ಜತೆ ಚರ್ಚೆ ಮಾಡಲಾಗಿದೆ. ಕುಡಿಯುವ ನೀರು ಸರಬರಾಜು ಮಾಡುವಂತೆ ಪಿಡಿಒಗೆ ಸೂಚಿಸಲಾಗಿದೆ. ಜೆಜೆಎಂ ಪೈಪ್‌ಲೈನ್ ಕೂಡ ಸರಿಪಡಿಸಲು ಹೇಳಿದ್ದೇನೆ ಎಂದು ಶಿಗ್ಗಾಂವಿ ತಾಪಂ ಕಾರ್ಯನಿರ್ವಹಣಾಧಿಕಾರಿ ಪಿ. ವಿಶ್ವನಾಥ ಹೇಳಿದರು.