ಸಾರಾಂಶ
ಮೀನು ಕದ್ದ ಆರೋಪದಲ್ಲಿ ಮರಕ್ಕೆ ಕಟ್ಟಿ ಹಾಕಿ, ಹಲ್ಲೆಗೊಳಗಾದ ಸಂತ್ರಸ್ತ ಮಹಿಳೆ ಲಕ್ಕಿ ಬಾಯಿ, ತಾನಾಗಿಯೇ ಪೊಲೀಸರಿಗೆ ದೂರು ನೀಡಿಲ್ಲ, ತಾವು ರಾಜಿ ಮಾಡಿಕೊಂಡಿದ್ದೇವು, ಆದರೇಪೊಲೀಸರೇ ಕರೆದುಕೊಂಡು ಹೋಗಿ ತನ್ನ ಕೈಯಲ್ಲಿ ಸಹಿ ಮಾಡಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ಮಲ್ಪೆ
ಮಲ್ಪೆ ಬಂದರಿನಲ್ಲಿ ಮೀನು ಕದ್ದ ಆರೋಪದಲ್ಲಿ ಮರಕ್ಕೆ ಕಟ್ಟಿ ಹಾಕಿ, ಹಲ್ಲೆಗೊಳಗಾದ ಸಂತ್ರಸ್ತ ಮಹಿಳೆ ಲಕ್ಕಿ ಬಾಯಿ, ತಾನಾಗಿಯೇ ಪೊಲೀಸರಿಗೆ ದೂರು ನೀಡಿಲ್ಲ, ತಾವು ರಾಜಿ ಮಾಡಿಕೊಂಡಿದ್ದೇವು, ಆದರೇಪೊಲೀಸರೇ ಕರೆದುಕೊಂಡು ಹೋಗಿ ತನ್ನ ಕೈಯಲ್ಲಿ ಸಹಿ ಮಾಡಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.ಮಾ.18ರಂದು ಆಕೆಯ ಮೇಲೆ ಹಲ್ಲೆಯ ಪ್ರಕರಣ ನಡೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ದಲಿತ ಮಹಿಳೆಯ ಮೇಲೆ ಈ ಹಲ್ಲೆಯ ಪ್ರಕರಣ ವೈರಲ್ ಆಗುತ್ತಿದ್ದಂತೆ, 19ರಂದು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು 4 ಮೀನುಗಾರ ಮಹಿಳೆಯರು ಮತ್ತು ಒಬ್ಬ ಬೋಟು ಮಾಲಕರನ್ನು ಬಂಧಿಸಿ, ಕರ್ತವ್ಯಲೋಪದ ಹಿನ್ನೆಲೆಯಲ್ಲಿ 2 ಪೊಲೀಸ್ ಸಿಬ್ಬಂದಿಗಳನ್ನೂ ಅಮಾನತುಗೊಳಿಸಿದ್ದಾರೆ.
ಘಟನೆಯ ನಂತರ ಶುಕ್ರವಾರ ಪ್ರಥಮ ಬಾರಿಗೆ ಹೇಳಿಕೆ ನೀಡಿರುವ ಸಂತ್ರಸ್ತೆ ಲಕ್ಕಿ ಬಾಯಿ, ತಾನು ಸ್ವಲ್ಪ ಮೀನು ತೆಗೆದದ್ದು ಹೌದು ಎಂದು ಒಪ್ಪಿಕೊಂಡಿದ್ದಾರೆ. ಮೊನ್ನೆಯ ಘಟನೆ ಬಗ್ಗೆ ನನಗೆ ಏನೂ ಹೇಳಲು ಇಲ್ಲ, ಘಟನೆ ಆದ ದಿನ ರಾತ್ರಿ ರಾಜಿ ಮಾಡಿಕೊಂಡಿದ್ದೆವು, ಕೇಸ್ ಬೇಡ ಎಂದು ಮಾತನಾಡಿ ಬಂದಿದ್ದೆವು. ನಂತರ ಪೊಲೀಸರು ಬಂದು ದೂರು ಕೊಡಲು ಬನ್ನಿ ಎಂದು ಕರೆದುಕೊಂಡು ಹೋದರು. ಅವರು ಹೇಳಿದ್ದಕ್ಕೆ ನಾನು ಸಹಿ ಮಾಡಿದ್ದೇನೆ ಎಂದು ಹೇಳಿದ್ದಾರೆ.ನಾನು ಸ್ವಲ್ಪ ಮೀನು ತೆಗೆದದ್ದು ಹೌದು, ಅದಕ್ಕೆ ಮೀನು ಕದ್ದಿದ್ದು ಎಂದು ಹೇಳಿ ಕೆಲವರು ಹೊಡೆದರು, ನಾನು ಮಲ್ಪೆಯಲ್ಲಿ ಆರೇಳು ವರ್ಷದಿಂದ ಕೆಲಸ ಮಾಡುತ್ತಿದ್ದೇನೆ. ಅವರನ್ನು ಬಂದರಿನಲ್ಲಿ ನಾನು ನೋಡಿ ಪರಿಚಯ ಇದೆ, ನನಗೆ ಅವರ ಮೇಲೆ ಏನು ದ್ವೇಷ ಇಲ್ಲ, ಅವರಿಗೆ ನನ್ನ ಮೇಲೆ ದ್ವೇಷ ಇಲ್ಲ, ಯಾರಿಗೂ ಏನೂ ಮಾಡುವುದು ಬೇಡ, ಅವರ ಪಾಡಿಗೆ ಅವರು, ನಮ್ಮ ಪಾಡಿಗೆ ನಾವು ಇರುತ್ತೇವೆ, ದುಡಿದು ತಿನ್ನುತ್ತೇವೆ. ಮೀನುಗಾರರು ನನಗೆ ಸಹಾಯ ಮಾಡಿದ್ದಾರೆ ಎಂದಿದ್ದಾರೆ
ಈ ಘಟನೆಯಾದ ಮೇಲೆ ನಾನು ಬಂದರಿಗೆ ಹೋಗಿಲ್ಲ, ಈಗ ಇರೋಕೆ ಒಂಥರ ಆಗುತ್ತಿದೆ. ಇನ್ನು ಇಲ್ಲಿ ಕೆಲಸ ಮಾಡೋದು ಕಷ್ಟ, ಊರಿಗೆ ಹೋಗುತ್ತೇನೆ ಎಂದವರು ಹೇಳಿದ್ದಾರೆ