ನಮ್ಮದು ಸಂವಿಧಾನದಡಿ ನಡೆಯುವ ಸರ್ಕಾರ: ಖರ್ಗೆ

| Published : Dec 28 2023, 01:46 AM IST

ಸಾರಾಂಶ

ಸರಕಾರಗಳು ನಡೆಯುವುದು ಭಗವದ್ಗೀತೆ, ಬೈಬಲ್‌, ಕುರಾನ್‌ ಆಧಾರದ ಮೇಲಲ್ಲ. ಸಂವಿಧಾನದ ಅಡಿಯಲ್ಲಿ ನಡೆಯುವಂಥದ್ದು. ಅದನ್ನು ಕಾಂಗ್ರೆಸ್‌ ಮಾಡುತ್ತಿದೆ ಎಂದು ರಾಜ್ಯ ಗ್ರಾಮೀಣಾಭಿವೃದ್ಧಿ, ಪಂಚಾಯತ್‌ ರಾಜ್‌ ಹಾಗೂ ಐಟಿ, ಬಿಟಿ ಖಾತೆ ಸಚಿವ ಪ್ರಿಯಾಂಕ ಖರ್ಗೆ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ರಾಜ್ಯದಲ್ಲಿರುವುದು ಸಂವಿಧಾನ, ಬಸವ ಹಾಗೂ ಅಂಬೇಡ್ಕರ್‌ ತತ್ವದ ಎಲ್ಲರನ್ನು ಒಳಗೊಂಡ ಸರಕಾರ. ಆದರೆ ಹಿಂದಿನ ಬಿಜೆಪಿ ಸರ್ಕಾರ ಸಂವಿಧಾನ ಬದಿಗೊತ್ತಿ ಹಿಂದುತ್ವದ ಅಡಿಯಲ್ಲಿ ನಡೆಯುತ್ತಿತ್ತು ಎಂದು ರಾಜ್ಯ ಗ್ರಾಮೀಣಾಭಿವೃದ್ಧಿ, ಪಂಚಾಯತ್‌ ರಾಜ್‌ ಹಾಗೂ ಐಟಿ, ಬಿಟಿ ಖಾತೆ ಸಚಿವ ಪ್ರಿಯಾಂಕ ಖರ್ಗೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಬಾಗಲಕೋಟೆಗೆ ತೆರಳುವ ಮುನ್ನ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಗ ಸ್ಪೀಕರ್‌ ಹುದ್ದೆಯಲ್ಲಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ನಾನು ಆರ್‌ಎಸ್‌ಎಸ್‌ನಿಂದ ಬಂದವನು ಎಂದು ಪದೇ ಪದೇ ಹೇಳುತ್ತಿದ್ದರು. ಸರಕಾರಗಳು ನಡೆಯುವುದು ಭಗವದ್ಗೀತೆ, ಬೈಬಲ್‌, ಕುರಾನ್‌ ಆಧಾರದ ಮೇಲಲ್ಲ. ಸಂವಿಧಾನದ ಅಡಿಯಲ್ಲಿ ನಡೆಯುವಂಥದ್ದು. ಅದನ್ನು ಕಾಂಗ್ರೆಸ್‌ ಮಾಡುತ್ತಿದೆ ಎಂದರು.

ಉತ್ತರ ಕೊಡಲಿ:

ಕೋವಿಡ್‌ ಕಾಲದಲ್ಲಿ ₹40 ಸಾವಿರ ಕೋಟಿ ಹಗರಣ ನಡೆದಿದೆ ಎಂಬುದನ್ನು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ನೇರ ಆರೋಪ ಮಾಡಿದ್ದಾರೆ. ಶೇ. 40 ಪರ್ಸೆಂಟೇಜ್‌ ಸರಕಾರ ಬಿರುದು ಬಿಜೆಪಿಯಿಂದ ಬಂದಿದೆ. ಯತ್ನಾಳ ಅವರು ಹಗರಣ ದಾಖಲೆಗಳನ್ನು ನ್ಯಾ. ಮೈಕಲ್‌ ಕುನೋ ಅವರ ನೇತೃತ್ವದ ತನಿಖಾ ಸಮಿತಿಗೆ ಸಲ್ಲಿಸಬೇಕು. ಕೋವಿಡ್‌ ಭ್ರಷ್ಟಾಚಾರದ ಹಣ ಕೇಂದ್ರಕ್ಕೂ ಹೋಗಿರಬಹುದು. ಯತ್ನಾಳ ಆರೋಪಕ್ಕೆ ಬಿಜೆಪಿ ರಾಜ್ಯಾಧ್ಯಕ್ಷರು, ಪ್ರತಿಪಕ್ಷ ನಾಯಕರು ಉತ್ತರ ಕೊಡಬೇಕೆಂದು ಆಗ್ರಹಿಸಿದರು.

ವೀರ ಹೆಸರು ಕೊಟ್ಟವರು ಯಾರು?

ಬಿಜೆಪಿ ಮತ್ತು ಆರ್‌ಎಸ್‌ಎಸ್‌ಗೆ ಇತಿಹಾಸ ಇಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ಅವರ ಕೊಡುಗೆ ಶೂನ್ಯ. ಸಾವರಕರ್‌ಗೆ ‘ವೀರ’ ಎಂಬ ಬಿರುದು ಹೇಗೆ ಬಂತು? ಇದಕ್ಕೆ ಯಾರೂ ಉತ್ತರ ಕೊಡುತ್ತಿಲ್ಲ. ಬಿಜೆಪಿ, ಆರ್‌ಎಸ್‌ಎಸ್‌ನವರು ಇತಿಹಾಸ ಸೃಷ್ಟಿಬೇಕಿದೆ. ಅದಕ್ಕಾಗಿ ವಾಟ್ಸಾಪ್‌ ಯುನಿರ್ವಸಿಟಿಯಲ್ಲಿ ಸುಳ್ಳುಗಳನ್ನು ಹಬ್ಬಿಸಿ ಯುವಕರ ದಾರಿ ತಪ್ಪಿಸುತ್ತಿದ್ದಾರೆ. ವಾಟ್ಸಾಪ್‌ಗಳಲ್ಲಿ ಬರುವುದನ್ನು ಯುವಕರು ನಂಬುತ್ತಿರುವುದು ಖೇದಕರ ಸಂಗತಿ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಬಿಜೆಪಿಗರು ಬ್ರಿಟಿಷರ ಬೂಟು ನೆಕ್ಕಿದವರು ಎಂಬ ಬಿ.ಕೆ. ಹರಿಪ್ರಸಾದ್‌ ಹೇಳಿಕೆಗೆ ಪ್ರತಿಕ್ರಿಯಿಸಿದ ಖರ್ಗೆ, ಅವರು ಹೇಳಿರುವುದರಲ್ಲಿ ತಪ್ಪೇನಿದೆ? ಅಲ್ಲದೆ, ಕ್ಷಮಾಪಣಾ ಪತ್ರ ಬರೆದಿದ್ದು ಯಾರು? ಬ್ರಿಟಿಷರ ಬಳಿ ಪೆನ್ಶನ್‌ ತೆಗೊಂಡಿದ್ದು ಯಾರು? ಎಂದು ಪ್ರಶ್ನಿಸಿದರು.