ಸಾರಾಂಶ
ಕನ್ನಡಪ್ರಭ ವಾರ್ತೆ ಹಾನಗಲ್ಲ
ಮನೆಗಳ ಮಾಲೀಕತ್ವ ಇಲ್ಲದೆ ತಾಲೂಕಿನಲ್ಲಿ ಸಾವಿರಾರು ಕುಟುಂಬಗಳು ಸರ್ಕಾರದ ಸೌಲಭ್ಯಗಳಿಂದ ವಂಚಿತವಾಗಿವೆ. ಸಮೀಕ್ಷೆ ಕೈಗೊಂಡು ಚುನಾವಣೆ ಸಂದರ್ಭದಲ್ಲಿ ನೀಡಿದ ಭರವಸೆಯಂತೆ ಇಂಥ ಕುಟುಂಬಗಳಿಗೆ ಇ-ಸ್ವತ್ತು, ಹಕ್ಕುಪತ್ರ ವಿತರಣೆಗೆ ಮುಂದಾಗುವ ಮೂಲಕ ನುಡಿದಂತೆ ನಡೆದಿದ್ದೇವೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.ತಾಲೂಕಿನ ಅಕ್ಕಿಆಲೂರಿನ ಮಕ್ಬೂಲಿಯಾ ನಗರದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಕಳೆದ ೪೦ ವರ್ಷಗಳಿಂದ ದಾಖಲೆ ರಹಿತವಾಗಿ ವಾಸಿಸುತ್ತಿರುವ ೧೫೦ ಕುಟುಂಬಗಳಿಗೆ ಇ-ಸ್ವತ್ತು ವಿತರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಸರ್ಕಾರಿ, ಖಾಸಗಿ ಜಮೀನಿನಲ್ಲಿ ಮನೆಗಳನ್ನು ನಿರ್ಮಿಸಿಕೊಂಡಿರುವ ತಾಲೂಕಿನ ೧೩,೬೦೦ ಕುಟುಂಬಗಳಿಗೆ ಇ-ಸ್ವತ್ತು, ಹಕ್ಕುಪತ್ರ ಇಲ್ಲ. ಕಾನೂನಿನಲ್ಲಿ ಬದಲಾವಣೆ ಬಂದು, ಜಿಪಿಎಸ್ ವ್ಯವಸ್ಥೆ ಜಾರಿಯಾದ ಬಳಿಕ ಸರ್ಕಾರದ ಸೌಲಭ್ಯಗಳಿಂದ ಈ ಎಲ್ಲ ಕುಟುಂಬಗಳೂ ವಂಚಿತವಾಗಿವೆ. ಅತಿವೃಷ್ಟಿಯಿಂದ ಮನೆ ಕಳೆದುಕೊಂಡವರಿಗೂ ಪರಿಹಾರ ಸಿಗುತ್ತಿಲ್ಲ. ಬ್ಯಾಂಕಿನ ಸಾಲ ಸೌಲಭ್ಯವೂ ಸಿಗದೇ ಪರಿತಪಿಸುವ ಅತಂತ್ರ ಸ್ಥಿತಿ ಇದೆ. ಇದೀಗ ಈ ಕುಟುಂಬಗಳಿಗೆ ಹಕ್ಕುಪತ್ರ, ಇ-ಸ್ವತ್ತು ವಿತರಿಸುವ ಕೆಲಸ ಅಕ್ಕಿಆಲೂರಿನಿಂದ ಆರಂಭವಾಗಿದೆ. ಅಕ್ಕಿಆಲೂರಿನಲ್ಲಿ ಸುದೀರ್ಘ ೪೦ ವರ್ಷಗಳಿಂದ ಸರಕಾರಿ ನಿವೇಶನದಲ್ಲಿ ಮನೆ ನಿರ್ಮಿಸಿಕೊಂಡು ವಾಸಿಸುತ್ತಿದ್ದ ೧೫೦ ಕುಟುಂಬಗಳಲ್ಲೀಗ ಮಂದಹಾಸ ಮೂಡಿದೆ. ಸಾಂಕೇತಿಕವಾಗಿ ಇ-ಸ್ವತ್ತು ವಿತರಣೆಗೆ ಚಾಲನೆ ನೀಡಲಾಗಿದ್ದು, ಪ್ರತಿ ಕುಟುಂಬಗಳಿಗೂ ಖುದ್ದು ಇ-ಸ್ವತ್ತು ತಲುಪಿಸುವ ವ್ಯವಸ್ಥೆ ಮಾಡಲಾಗುವುದು ಎಂದರು.
ಅಕ್ಕಿಆಲೂರಿನಲ್ಲಿ ₹ ೫೫ ಲಕ್ಷ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ಹಾಗೂ ₹೫೦ ಲಕ್ಷ ವೆಚ್ಚದಲ್ಲಿ ಗಟಾರ ನಿರ್ಮಾಣಕ್ಕೆ ಶೀಘ್ರದಲ್ಲಿ ಚಾಲನೆ ನೀಡಲಾಗುವುದು. ಇಲ್ಲಿ ಈಗಾಗಲೇ ಶೇ. ೭೫ರಷ್ಟು ರಸ್ತೆಗಳನ್ನು ಕಾಂಕ್ರೀಟ್ ರಸ್ತೆಗಳನ್ನಾಗಿ ಪರಿವರ್ತಿಸಲಾಗಿದೆ ಎಂದ ಅವರು, ಅನ್ನಭಾಗ್ಯ, ಗೃಹಲಕ್ಷ್ಮೀ, ಗೃಹಜ್ಯೋತಿ, ಶಕ್ತಿ ಮತ್ತು ಯುವನಿಧಿ ಗ್ಯಾರಂಟಿ ಯೋಜನೆಗಳು ಜಾರಿಗೆ ಬಂದು ಜನತೆಯ ಬಾಳಲ್ಲಿ ಭರವಸೆ ಮೂಡಿಸಿವೆ. ಆದರೆ ಪ್ರಧಾನಿ ಮೋದಿ ಅವರ ₹೧೫ ಲಕ್ಷ ಖಾತೆಗೆ ಹಾಕುವ ಗ್ಯಾರಂಟಿ ಮಾತ್ರ ಹುಸಿಯಾಗಿದೆ ಎಂದು ಕುಟುಕಿದರು.ಗ್ರಾಪಂ ಅಧ್ಯಕ್ಷ ಮಕ್ಬೂಲ್‌ಅಹ್ಮದ್ ರುಸ್ತುಂಖಾನವರ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಶೇಕವ್ವ ತಳವಾರ, ಜಿಪಂ ಮಾಜಿ ಸದಸ್ಯರಾದ ಟಾಕನಗೌಡ ಪಾಟೀಲ, ಕೊಟ್ರಪ್ಪ ಕುದರಿಸಿದ್ದನವರ, ತಾಪಂ ಮಾಜಿ ಅಧ್ಯಕ್ಷ ಎಲ್.ಕೆ. ಶೇಷಗಿರಿ, ಮಾಜಿ ಸದಸ್ಯರಾದ ಬಷೀರಖಾನ ಪಠಾಣ, ಮೆಹಬೂಬಅಲಿ ಬ್ಯಾಡಗಿ, ತಾಪಂ ಇಒ ದೇವರಾಜ, ಟಿಎಪಿಸಿಎಂಎಸ್ ನಿರ್ದೇಶಕ ಬಸವರಾಜ ಹಾಲಬಾವಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜು ಗೊರಣ್ಣನವರ, ಮುಖಂಡರಾದ ಯಾಸೀರ್‌ಅರಾಫತ್ ಮಕಾನದಾರ, ಖ್ವಾಜಾಮೊಹಿದ್ದೀನ ಅಣ್ಣಿಗೇರಿ, ಮುಸ್ತಾಕಅಹ್ಮದ್ ಕಾರಡಗಿ, ಪುಟ್ಟಪ್ಪ ನರೇಗಲ್, ಪಿಡಿಒ ಕುಮಾರ ಮಕರವಳ್ಳಿ ಭಾಗವಹಿಸಿದ್ದರು.