ಸಾರಾಂಶ
ಕನ್ನಡಪ್ರಭ ವಾರ್ತೆ ಹೊಳೆಹೊನ್ನೂರು
ವೈಜ್ಞಾನಿಕವಾಗಿ ಇತಿಹಾಸವನ್ನು ಗಮನಿಸಿದರೆ ಸೂರ್ಯ, ನಕ್ಷತ್ರ, ಗ್ರಹಗಳ ಚಲನೆಯ ಬಗ್ಗೆ ನಮ್ಮ ಹಿರಿಯರಿಗೆ ಗೊತ್ತಿದ್ದು, ಅವರಲ್ಲಿ ಸಾವಿರಾರು ವರ್ಷಗಳ ತನ್ಮತೆಯನ್ನು ಕಾಣುತ್ತೇವೆ. ಬಾಹ್ಯಾಕಾಶದ ಎಲ್ಲಾ ಚಟುವಟಿಕೆಗಳಲ್ಲಿ ವಿಕಸನ ಸಾಧಿಸಿದ್ದೇವೆ ಎಂದು ಇಸ್ರೋ ವಿಜ್ಞಾನಿ ಡಾ.ಹನುಮಂತರಾಯ್ ಬಳೂರಗೆ ತಿಳಿಸಿದರು.ಸಮೀಪದ ಜಾವಳ್ಳಿಯ ಜ್ಞಾನದೀಪದ ಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬಾಹ್ಯಾಕಾಶ ಅಧ್ಯಯನ ಕುರಿತ ಸಂವಾದ ಮತ್ತು ಕ್ರಾಫ್ಟ್ ಕಾರ್ನಿವಲ್ ಕಾರ್ಯಕ್ರಮವನ್ನು ಉಧ್ಘಾಟಿಸಿ ಮಾಡನಾಡಿದರು.
ಬಾಹ್ಯಾಕಾಶದಲ್ಲಿ ಭಾರತ ಶ್ರೇಷ್ಠತೆ ಸಾಧಿಸುತ್ತಿರುವುದು ಉತ್ತಮವಾಗಿದೆ. ಸಾವಿರಾರು ವರ್ಷಗಳಿಂದ ಮನುಷ್ಯನ ಜೀವನವನ್ನು ಗಮನಿಸುತ್ತಾ ಬಂದಿದ್ದೇವೆ. ನಿರಂತರವಾಗಿ ಒಂದೇ ಸ್ಥಳದಲ್ಲಿ ವಾಸಿಸಲು ಸಾಧ್ಯವಿಲ್ಲ. ಈ ಸಂದರ್ಭದಲ್ಲಿ ಮನುಷ್ಯನ ಗಮನ ಬಾಹ್ಯಾಕಾಶದ ಕಡೆಗೆ ಚಲಿಸಿತು ಎಂದರು.ತಂತ್ರಜ್ಞಾನ ಮುಂದುವರೆದಂತೆ ಕೃತಕ ಬುದ್ಧಿಮತ್ತೆ ಬಳಸಿಕೊಂಡು ಇಂದು ನಾವು ಬಾಹ್ಯಾಕಾಶದ ಅಧ್ಯಯನ ಮಾಡುತ್ತಿದ್ದೇವೆ. ಬಾಹ್ಯಾಕಾಶಕ್ಕೆ ಚಲಿಸಲು ಆಂತರಿಕ ಒತ್ತಡ ನಿಭಾಯಿಸಬೇಕು ಎಂದರು.
ತಂತ್ರಜ್ಞಾನ ಹೊರತುಪಡಿಸಿ ಮನಶಾಸ್ತ್ರ, ಆರೋಗ್ಯಶಾಸ್ತ್ರ, ಔಷಧ ಕ್ಷೇತ್ರ ಹಾಗೂ ಆಹಾರ ಕ್ಷೇತ್ರ ಸೇರಿ ಮುಂತಾದ ಸಂಶೋಧನಾ ಕ್ಷೇತ್ರಗಳ ಅಧ್ಯಯನ ಪೂರಕವಾಗಿ ಮಾಡಬೇಕಾಗಿದೆ. ಬಾಹ್ಯಾಕಾಶದ ಅಧ್ಯಯನಕ್ಕಾಗಿ ಪೂರ್ವ ತರಬೇತಿಗಳ ಅವಶ್ಯಕತೆ ಮತ್ತು ಅವುಗಳ ಪ್ರಾಮುಖ್ಯತೆ ಗಮನಿಸಬೇಕಾಗಿದೆ. ಭವಿಷ್ಯದ ಬಾಹ್ಯಾಕಾಶದ ಉಡಾವಣೆಗಳು 2047ರ ಕಡೆಗೆ ಭಾರತದ ಬಾಹ್ಯಾಕಾಶದ ಅಧ್ಯಯನದ ದೃಷ್ಟಿ ವಿಭಿನ್ನವಾಗಿದೆ ಎಂದು ತಿಳಿಸಿದರು.ನಿಮ್ಮ ಬಗ್ಗೆ ನೀವು ಕಲ್ಪಿಸಿಕೊಳ್ಳಿ ಆಗ ಬೇರೆಯವರಿಗಿಂತ ವಿಭಿನ್ನರಾಗಿ ನೀವು ಕಾಣಿಸಿಕೊಳ್ಳುತ್ತೀರಿ, ಒಂದು ತಂಡವಾಗಿ ಕಾರ್ಯ ಮಾಡಿ, ಎಲ್ಲರ ಜೊತೆ ಆತ್ಮೀಯತೆಯಿಂದ ಬೆರೆತು ಅಧ್ಯಯನ ಮಾಡಿದಾಗ ಗೆಲುವು ಸಹಜ. ಒಗ್ಗಟ್ಟಾಗಿ ಕಾರ್ಯನಿರ್ವಹಿಸಿ ಸಾಧನೆ ಎಂಬುದನ್ನು ಮಕ್ಕಳು ಮನಗಾಣಬೇಕು ಎಂದು ಮಕ್ಕಳಿಗೆ ಕರೆಕೊಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜ್ಞಾನದೀಪ ಶಾಲೆಯ ಪ್ರಾಚಾರ್ಯ ಶ್ರೀಕಾಂತ್ ಎಂ.ಹೆಗಡೆ ಮಾತನಾಡಿ, ವಿಜ್ಞಾನಿಯಾಗಲಿಕ್ಕೆ ಯಾವುದೇ ಅಡೆತಡೆಗಳಿಲ್ಲ, ಅಂಕಗಳು ಮುಖ್ಯವಲ್ಲ, ಮಕ್ಕಳಲ್ಲಿ ಆಸಕ್ತಿ ಇರಬೇಕು ಮಕ್ಕಳು ತಮ್ಮ ಆಸಕ್ತಿಯ ಕ್ಷೇತ್ರವನ್ನು ಗುರುತಿಸಿಕೊಂಡು ಪೋಷಕರನ್ನು ಒಪ್ಪಿಸಿ ಅದರಲ್ಲಿ ಮುಂದುವರಿಯಬೇಕು ಸಾಧನೆಗೆ ಯಾವುದೇ ಅಡ್ಡಿ ಆತಂಕಗಳಿರುವುದಿಲ್ಲ ಎಂದು ಹೇಳಿದರು.ಈ ಸಂದರ್ಭದಲ್ಲಿ ಜ್ಞಾನದೀಪ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಬಿ.ಎಲ್.ನೀಲಕಂಠ ಮೂರ್ತಿ, ಅರಬಿಂದೊ ಪಿಯು ಕಾಲೇಜಿನ ಪ್ರಾಚಾರ್ಯ ಡಾ.ಕೆ.ನಾಗರಾಜ್, ಶಾಲೆಯ ಹಿರಿಯ ಉಪಪ್ರಾಚಾರ್ಯ ಡಾ.ರಜಿ ಜೋಸೆಫ್, ಉಪ ಪ್ರಾಚಾರ್ಯ ವಾಣಿ ಕೃಷ್ಣಪ್ರಸಾದ್, ಶಿಕ್ಷಕಿ ಪ್ರಿಯ ಕೆಎಸ್ ಉಪಸ್ಥಿತರಿದ್ದರು.