ಕಾಂಗ್ರೆಸ್ ನವರು ಮಹಾರಾಜ ಹಾಗೂ ಸಾಮಾನ್ಯ ಅಭ್ಯರ್ಥಿ ನಡುವಿನ ಚುನಾವಣೆ ಎನ್ನುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಮ್ಮ ಅಭ್ಯರ್ಥಿ ಕೂಡ ಜನಸಾಮಾನ್ಯ. ನಮ್ಮ ಅಭ್ಯರ್ಥಿ ಜನಸಾಮಾನ್ಯರ ಜೊತೆಯೇ ಇದ್ದಾರೆ. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಮಹಾರಾಜರು. ಆ ಮಹಾರಾಜರ ವಿರುದ್ಧ ನಮ್ಮ ಸಾಮಾನ್ಯ ಅಭ್ಯರ್ಥಿ ಹೋರಾಡುತ್ತಿದ್ದಾರೆ
ಕನ್ನಡಪ್ರಭ ವಾರ್ತೆ ಮೈಸೂರು
ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಸಂಸದ ಪ್ರತಾಪ್ ಸಿಂಹ ಅವರಿಗಿಂತಲೂ ಉತ್ತಮಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದೇವೆ ಎಂದು ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ರಾಧಾಮೋಹನ್ ದಾಸ್ ತಿಳಿಸಿದರು.ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರಿನ ಆಳರಸರು ಅಪಾರ ಕೊಡುಗೆ ನೀಡಿದ್ದಾರೆ. ಆಳರಸರ ದೂರದೃಷ್ಟಿಯ ಫಲವಾಗಿ ಈ ಭಾಗದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಆಗಿವೆ. ಮೈಸೂರಿನ ಮಹಾರಾಜರು ಮೇಲ್ಪಂಲಕ್ತಿ ಹಾಕಿಕೊಟ್ಟಿದ್ದಾರೆ. ಇದೆಲ್ಲವನ್ನೂ ಪರಿಗಣಿಸಿ ರಾಜಮನೆತನದ ಯದುವೀರ ಅವರಿಗೆ ಬಿಜೆಪಿ ಟಿಕೆಟ್ ನೀಡಿದ್ದೇವೆ ಎಂದರು.
ಕಾಂಗ್ರೆಸ್ ನವರು ಮಹಾರಾಜ ಹಾಗೂ ಸಾಮಾನ್ಯ ಅಭ್ಯರ್ಥಿ ನಡುವಿನ ಚುನಾವಣೆ ಎನ್ನುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಮ್ಮ ಅಭ್ಯರ್ಥಿ ಕೂಡ ಜನಸಾಮಾನ್ಯ. ನಮ್ಮ ಅಭ್ಯರ್ಥಿ ಜನಸಾಮಾನ್ಯರ ಜೊತೆಯೇ ಇದ್ದಾರೆ. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಮಹಾರಾಜರು. ಆ ಮಹಾರಾಜರ ವಿರುದ್ಧ ನಮ್ಮ ಸಾಮಾನ್ಯ ಅಭ್ಯರ್ಥಿ ಹೋರಾಡುತ್ತಿದ್ದಾರೆ ಎಂದು ಹೇಳಿದರು.ಟಿಕೆಟ್ ಸಿಗದೇ ಬಂಡಾಯದ ಬಾವುಟ ಹಾರಿಸಿರುವ ಹಿರಿಯ ನಾಯಕರ ಮನವೊಲಿಕೆ ಕಾರ್ಯ ಮುಂದುವರಿದಿದೆ. ಎಲ್ಲವೂ ಸರಿ ಹೋಗಲಿದೆ, ಬಿಜೆಪಿ- ಜೆಡಿಎಸ್ ಮೈತ್ರಿಕೂಟ ಕರ್ನಾಟಕದ ಎಲ್ಲಾ 28 ಕ್ಷೇತ್ರಗಳಲ್ಲೂ ಜಯ ಗಳಿಸಲಿದೆ ಎಂದು ಅವರು ತಿಳಿಸಿದರು.
ಕರ್ನಾಟಕದಲ್ಲಿ ಬಿಜೆಪಿಯನ್ನು ಲಿಂಗಾಯತ, ಒಕ್ಕಲಿಗರ ಪಕ್ಷ ಎನ್ನುತ್ತಿದ್ದರು. ಆದರೆ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಇಡೀ ರಾಜ್ಯದ ಎಲ್ಲಾ ಸಮುದಾಯದ ಜನರು ಬಿಜೆಪಿ ಪರ ಒಲವು ವ್ಯಕ್ತಪಡಿಸುತ್ತಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮಾಡಿದ ತಪ್ಪನ್ನು ಕರ್ನಾಟಕದ ಜನ ಲೋಕಸಭಾ ಚುನಾವಣೆಯಲ್ಲಿ ಮಾಡುವುದಿಲ್ಲ. ಜನರಿಗೆ ತಪ್ಪಿನ ಅರಿವಾಗಿದ್ದು, ರಾಷ್ಟ್ರದ ಹಿತದೃಷ್ಟಿಯಿಂದ ಬಿಜೆಪಿಗೆ ಮತ ನೀಡಲಿದ್ದಾರೆ. ಮೋದಿ ಅಲೆ ಇಲ್ಲ ಎನ್ನುತ್ತಿರುವ ಕಾಂಗ್ರೆಸ್ ನಾಯಕರಿಗೆ ಚುನಾವಣಾ ಫಲಿತಾಂಶ ತಕ್ಕ ಉತ್ತರ ನೀಡಲಿದೆ ಎಂದು ಅವರು ತಿಳಿಸಿದರು.ಸುಮಲತಾಗೆ ಪಕ್ಷ ಸೂಕ್ತ ಸ್ಥಾನಮಾನ ನೀಡಲಿದೆ
ಜೆಡಿಎಸ್ ಜೊತೆ ಮೈತ್ರಿ ಏರ್ಪಟ್ಟ ಕಾರಣ ಸುಮಲತಾ ಅವರಿಗೆ ಬಿಜೆಪಿ ಟಿಕೆಟ್ ನೀಡಲಾಗಲಿಲ್ಲ. ಮಂಡ್ಯ, ಹಾಸನ, ಕೋಲಾರ ಕ್ಷೇತ್ರಗಳನ್ನು ಜೆಡಿಎಸ್ ಗೆ ಬಿಟ್ಟು ಕೊಟ್ಟಿದ್ದೇವೆ. ಹೀಗಾಗಿ ಸುಮಲತಾಗೆ ಬಿಜೆಪಿ ಟಿಕೆಟ್ ಕೈತಪ್ಪಿದೆ. ಸುಮಲತಾ ಜೊತೆ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ, ಪ್ರಧಾನಿ ಮೋದಿ, ಕೇಂದ್ರ ಸಚಿವ ಅಮಿತ್ ಶಾ ಮಾತನಾಡಿದ್ದಾರೆ. ಸುಮಲತಾ ಅವರಿಗೆ ಮುಂದಿನ ದಿನಗಳಲ್ಲಿ ಪಕ್ಷ ಸೂಕ್ತ ಸ್ಥಾನಮಾನ ನೀಡಲಿದೆ ಎಂದು ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ರಾಧಾ ಮೋಹನ್ ದಾಸ್ ತಿಳಿಸಿದರು.ಸುಮಲತಾ ನಮ್ಮ ಜೊತೆಯಲ್ಲೇ ಇರುತ್ತಾರೆ. ಕಳೆದ ಐದು ವರ್ಷ ಅವರು ನಮ್ಮ ಜೊತೆಯೇ ಇದ್ದರು, ಮುಂದಿನ ಐದು ವರ್ಷವೂ ನಮ್ಮ ಜೊತೆಯಲ್ಲೇ ಇರುತ್ತಾರೆ. ಚುನಾವಣಾ ಪ್ರಚಾರ ಮಾಡುವ ವಿಚಾರದಲ್ಲಿ ಜೆಡಿಎಸ್ ನಾಯಕರನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ. ಸೀಟು ಹಂಚಿಕೆ ಅಂತಿಮವಾಗದ ಕಾರಣ ಅವರನ್ನು ಆಹ್ವಾನಿಸಿರಲಿಲ್ಲ. ಇದೀಗ ಸೀಟು ಹಂಚಿಕೆ ಅಂತಿಮಗೊಂಡಿದೆ. ಮುಂದೆ ನಡೆಯುವ ಚುನಾವಣಾ ಪ್ರಚಾರ ಸಭೆಗಳಲ್ಲಿ ಬಿಜೆಪಿ ಜೆಡಿಎಸ್ ಪ್ರಮುಖ ನಾಯಕರುಒಟ್ಟಿಗೆ ಭಾಗಿಯಾಗಲಿದ್ದಾರೆ ಎಂದು ಅವರು ತಿಳಿಸಿದರು.