ನರಸಿಂಹರಾಜಪುರದಲ್ಲಿ ಅತಿ ಹೆಚ್ಚು ಹಕ್ಕು ಪತ್ರ ನೀಡಿದ್ದೇವೆ: ಇ.ಸಿ.ಜೋಯಿ

| Published : Jul 18 2025, 12:45 AM IST

ನರಸಿಂಹರಾಜಪುರದಲ್ಲಿ ಅತಿ ಹೆಚ್ಚು ಹಕ್ಕು ಪತ್ರ ನೀಡಿದ್ದೇವೆ: ಇ.ಸಿ.ಜೋಯಿ
Share this Article
  • FB
  • TW
  • Linkdin
  • Email

ಸಾರಾಂಶ

ನರಸಿಂಹರಾಜಪುರ, ಶೃಂಗೇರಿ ಕ್ಷೇತ್ರದ 3 ತಾಲೂಕುಗಳಿಗೆ ಹೋಲಿಕೆ ಮಾಡಿದರೆ ನರಸಿಂಹರಾಜಪುರ ತಾಲೂಕಿನಲ್ಲಿ 94 ಸಿ ಅಡಿ ಅತಿ ಹೆಚ್ಚು ಹಕ್ಕು ಪತ್ರ ನೀಡಲಾಗಿದೆ ಎಂದು ತಾಲೂಕು ಬಗರ್ ಹುಕುಂ ಸಮಿತಿ ಅಧ್ಯಕ್ಷ ಇ.ಸಿ.ಜೋಯಿ ತಿಳಿಸಿದರು.

- ತಾಲೂಕು ಕಚೇರಿಯಲ್ಲಿ ಬಗರ್ ಹುಕುಂ ಸಮಿತಿ ಸಭೆ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಶೃಂಗೇರಿ ಕ್ಷೇತ್ರದ 3 ತಾಲೂಕುಗಳಿಗೆ ಹೋಲಿಕೆ ಮಾಡಿದರೆ ನರಸಿಂಹರಾಜಪುರ ತಾಲೂಕಿನಲ್ಲಿ 94 ಸಿ ಅಡಿ ಅತಿ ಹೆಚ್ಚು ಹಕ್ಕು ಪತ್ರ ನೀಡಲಾಗಿದೆ ಎಂದು ತಾಲೂಕು ಬಗರ್ ಹುಕುಂ ಸಮಿತಿ ಅಧ್ಯಕ್ಷ ಇ.ಸಿ.ಜೋಯಿ ತಿಳಿಸಿದರು.

ಗುರುವಾರ ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ಬಗರ್ ಹುಕುಂ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. 94 ಸಿ ಹಾಗೂ ಫಾರಂ 50,53 ಹಾಗೂ 57 ರ ಅಡಿ ಅರ್ಜಿ ನೀಡಿದ ಅರ್ಹ ಫಲಾನುಭವಿಗಳಿಗೆ ಹಕ್ಕು ಪತ್ರ ನೀಡಬೇಕು ಎಂದು ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತಿದ್ದೇವೆ. ತಾಲೂಕು ಕಚೇರಿಯಲ್ಲಿ ಕೆಲಸ ವೇಗವಾಗಿ ನಡೆಯುತ್ತಿದ್ದು ಮುಂದಿನ ಸಭೆಯಲ್ಲಿ ಶಾಸಕರ ಮುಖಾಂತರ ಹಕ್ಕು ಪತ್ರ ನೀಡಲಾಗುವುದು .ಇಂದು 16 ಕಡತಗಳು ಸಿದ್ಧ ವಾಗಿದ್ದು ಮುಂದಿನ ಸಭೆಯಲ್ಲಿ ಹಕ್ಕು ಪತ್ರ ನೀಡಬಹುದು ಎಂದರು.

100 ಹಸುಗಳಿಗೆ ಮೇಯಲು 30 ಎಕರೆ ಗೋಮಾಳ ಜಾಗ ಮೀಸಲಿಡಬೇಕು ಎಂದು ನಿಯಮವಿದೆ. ಆದರೆ, ಗ್ರಾಮಗಳ ಅಕ್ಕಪಕ್ಕ ನೂರಾರು ಎಕರೆ ಅರಣ್ಯ ಪ್ರದೇಶವಿರುವುದರಿಂದ ನಿಯಮ ಬದಲಿಸಿ 30 ಎಕರೆಯಲ್ಲಿ 10 ಎಕರೆ ಮಾತ್ರ ಗೋಮಾಳಕ್ಕೆ ಮೀಸಲಿಟ್ಟು ಉಳಿದ ಜಾಗವನ್ನು ಕಂದಾಯ ಇಲಾಖೆ ಇತರ ಉಪಯೋಗಕ್ಕೆ ಬಳಸಬಹುದೇ ಎಂದು ಅಧಿಕಾರಿಗಳಿಗೆ ಪ್ರಶ್ನಿಸಿದರು. ಈ ಸಂದರ್ಭದಲ್ಲಿ ನರಸಿಂಹರಾಜಪುರ ವಲಯ ಅರಣ್ಯಾಧಿಕಾರಿ ಪ್ರವೀಣ್ ಮಾತನಾಡಿ, ಅರಣ್ಯದಲ್ಲಿ ಹಸು ಮೇಯಲು ಬಿಡಲು ಅವಕಾಶವಿಲ್ಲ ಎಂದರು.

ಸಮಸ್ಯೆ:

ತಾಲೂಕು ಬಗರ್ ಹುಕುಂ ಸಮಿತಿ ಅಧ್ಯಕ್ಷ ಇ.ಸಿ ಜೋಯಿ ಮಾತನಾಡಿ, ನರಸಿಂಹರಾಜಪುರ ಪಟ್ಟಣದ ಸಮೀಪವಿರುವ ರಾವೂರು, ಮೆಣಸೂರು, ನಾಗಲಾಪುರ ಗ್ರಾಮಗಳ ಜನರು ಒತ್ತುವರಿ ಮಾಡಿರುವ ಜಮೀನನ್ನು ಸಕ್ರಮಗೊಳಿಸುವಂತೆ ಫಾರಂ ನಂಬರ್ 50ರಲ್ಲಿ 35 ವರ್ಷದ ಹಿಂದೆಯೇ ಅರ್ಜಿ ಹಾಕಿದ್ದರು. ಆದರೆ ಕಾಲ ಕ್ರಮೇಣ ಪಟ್ಟಣ ಪಂಚಾಯಿತಿ ವ್ಯಾಪ್ತಿಯ 3 ಕಿ.ಮೀ. ದೂರದವರೆಗೆ ಜಾಗ ಮಂಜೂರು ಮಾಡಬಾರದು ಎಂಬ ನಿಯಮ ಬಂದಿದೆ. ಒತ್ತುವರಿದಾರರು ಅರ್ಜಿ ನೀಡುವಾಗ ಆ ನಿಯಮ ಇರಲಿಲ್ಲ. ಹಲವಾರು ವರ್ಷಗಳಿಂದ ರೈತರು ಜಮೀನಿನಲ್ಲಿ ಮನೆ ಕಟ್ಟಿಕೊಂಡು ವಾಸ ಮಾಡುತ್ತಿದ್ದಾರೆ ಎಂದು ಸಭೆ ಗಮನಕ್ಕೆ ತಂದರು.

ಬಗರ್ ಹುಕುಂ ಸಮಿತಿ ಸದಸ್ಯ ಸತೀಶ್ ಮಾತನಾಡಿ, ಮೂಡಿಗೆರೆ, ಕಡೂರು ಭಾಗದಲ್ಲಿ ಅಕ್ರಮ ಸಕ್ರಮ ಸಮಿತಿಯಿಂದ ಮಂಜೂರಾಗಿದ್ದ ಜಾಗ ಕಾನೂನು ಬದ್ಧವಾಗಿಲ್ಲ ಎಂದು ತನಿಖೆ ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗಿತ್ತು. ಆದ್ದರಿಂದ ಕಾನೂನು ವ್ಯಾಪ್ತಿಯಲ್ಲೇ ಭೂಮಿ ಮಂಜೂರು ಮಾಡಬೇಕು. ಇಲ್ಲದಿದ್ದರೆ ಬಗರ್ ಹುಕುಂ ಸಮಿತಿ ಸದಸ್ಯರು ಸಹ ತನಿಖೆ ಎದುರಿಸಬೇಕಾಗುತ್ತದೆ. ಅಲ್ಲದೆ ಪಾರಂ ನಂ 57 ರಲ್ಲಿ ಅರ್ಜಿ ಹಾಕಿದವರಿಗೆ ಮತ್ತೆ ನೆನಪು ಮಾಡಿ ನೋಟೀಸ್ ಕೊಡಬೇಕು ಎಂದು ಸೂಚಿಸಿದರು.

ತಹಸೀಲ್ದಾರ್ ತನುಜಾ ಟಿ. ಸವದತ್ತಿ ಮಾಹಿತಿ ನೀಡಿ, ಇದುವರೆಗೆ ಫಾರಂ ನಂ 50 ರಲ್ಲಿ 6339 ಅರ್ಜಿಗಳು ಬಂದಿತ್ತು. ಅದರಲ್ಲಿ 1293 ಅರ್ಜಿದಾರರ ಭೂಮಿ ಮಂಜೂರು ಮಾಡಲಾಗಿದೆ. 5046 ಅರ್ಜಿಗಳು ತಿರಸ್ಕೃತವಾಗಿವೆ. ಫಾರಂ ನಂ 53 ರಲ್ಲಿ 4620 ಅರ್ಜಿಗಳು ಬಂದಿತ್ತು. ಇದರಲ್ಲಿ 1052 ಅರ್ಜಿದಾರರ ಭೂಮಿ ಮಂಜೂರು ಮಾಡಲಾಗಿದೆ.1901 ಅರ್ಜಿಗಳು ತಿರಸೃತಗೊಂಡಿದೆ. 1667 ಅರ್ಜಿಗಳು ಬಾಕಿ ಉಳಿದಿವೆ. ಫಾರಂ 57 ರಲ್ಲಿ 9793 ಅರ್ಜಿಗಳು ಬಂದಿತ್ತು. ಇದರಲ್ಲಿ ಅನರ್ಹ ಅರ್ಜಿಗಳನ್ನು ತಿರಸ್ಕೃರಿಸಲು ಜಿಲ್ಲಾಧಿಕಾರಿಗಳಿಗೆ 8970 ಅರ್ಜಿಗಳನ್ನು ಕಳುಹಿಸಲಾಗಿದೆ ಎಂದರು.

94ಸಿಸಿ ಅಡಿ ಮನೆ ಮಂಜೂರಿಗೆ 443 ಅರ್ಜಿಗಳು ಬಂದಿತ್ತು. ಇದರಲ್ಲಿ 29 ಮಂಜೂರಾಗಿದೆ. 414 ತಿರಸ್ಕೃತಗೊಂಡಿದೆ.94 ಸಿ ಅಡಿ 11,432 ಅರ್ಜಿಗಳು ಬಂದಿದೆ. ಇದರಲ್ಲಿ 1422 ಜನರಿಗೆ ಮಂಜೂರಾಗಿದೆ. ಉಳಿದ 9020 ಅರ್ಜಿಗಳು ತಿರಸ್ಕೃತಗೊಂಡಿದೆ. 990 ಅರ್ಜಿಗಳು ಪರಿಶೀಲನೆಯಲ್ಲಿದೆ ಎಂದರು.

ಸಭೆಯ ಅಧ್ಯಕ್ಷತೆಯನ್ನು ತಾಲೂಕು ಬಗರ್ ಹುಕುಂ ಸಮಿತಿ ಅಧ್ಯಕ್ಷ ಇ.ಸಿ.ಜೋಯ್ ವಹಿಸಿದ್ದರು ಸಮಿತಿ ಕಾರ್ಯದರ್ಶಿ ತಹಸೀಲ್ದಾರ್ ತನುಜಾ ಟಿ.ಸವದತ್ತಿ, ಸಮಿತಿ ಸದಸ್ಯರಾದ ಶೇಖ್ ಅಬ್ದುಲ್ಲಾ, ಹೇಮಲತ, ಸತೀಶ್ ಇದ್ದರು.

ಸಭೆಯಲ್ಲಿ ರೆವಿನ್ಯೂ ಇನ್ಸಪೆಕ್ಟರ್, ವಲಯ ಅರಣ್ಯಾಧಿಕಾರಿಗಳು, ಗ್ರಾಮ ಆಡಳಿತಾಧಿಕಾರಿಗಳು ಭಾಗವಹಿಸಿ ಮಾಹಿತಿ ನೀಡಿದರು.