ಕೇಂದ್ರ ಸಚಿವ ಕುಮಾರಸ್ವಾಮಿ ಹಾಗೂ ವಿಪಕ್ಷ ನಾಯಕ ಆರ್.ಅಶೋಕ್ ಇಬ್ಬರನ್ನು ದಾಸಯ್ಯನ ತರಹ ಡಂಗೂರ ಹೊಡ್ಕೊಂಡ್ ಓಡಾಡೋಕೆ ಬಿಟ್ಟಿದ್ದೀವಿ ಎಂದು ಪೌರಾಡಳಿತ ಸಚಿವ ಬಾಲಕೃಷ್ಣ ಟಾಂಗ್ ನೀಡಿದರು.
ಕನ್ನಡಪ್ರಭ ವಾರ್ತೆ ರಾಮನಗರ
ಕೇಂದ್ರ ಸಚಿವ ಕುಮಾರಸ್ವಾಮಿ ಹಾಗೂ ವಿಪಕ್ಷ ನಾಯಕ ಆರ್.ಅಶೋಕ್ ಇಬ್ಬರನ್ನು ದಾಸಯ್ಯನ ತರಹ ಡಂಗೂರ ಹೊಡ್ಕೊಂಡ್ ಓಡಾಡೋಕೆ ಬಿಟ್ಟಿದ್ದೀವಿ ಎಂದು ಪೌರಾಡಳಿತ ಸಚಿವ ಬಾಲಕೃಷ್ಣ ಟಾಂಗ್ ನೀಡಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ನೈಸ್ ರಸ್ತೆ ಸಂತ್ರಸ್ತರೊಂದಿಗೆ ಸಂವಾದ ಮಾಡಿದ್ದರೆ ಅಭಿನಂದನೆ ಸಲ್ಲಿಸುತ್ತಿದ್ದೆ. ಈಗ ರಾಜಕೀಯ ಕಾರಣಕ್ಕೆ ಸಂವಾದದ ನಾಟಕ ಆಡುತ್ತಿದ್ದಾರೆ. ಎರಡು ಬಾರಿ ಮುಖ್ಯಮಂತ್ರಿ ಆಗಿದ್ದಾಗ ಒಂದು ದಿನವೂ ಹೋಗಿ ಸಂತ್ರಸ್ತರಿಂದ ಅಹವಾಲು ಸ್ಬೀಕರಿಸಲಿಲ್ಲ. ವೆಸ್ಟ್ ಎಂಡ್ ಹೋಟೆಲ್ ರೂಂನಲ್ಲಿ ಮಲಗಿಕೊಳ್ಳುತ್ತಿದ್ದರು. ಅವರು ಮಲಗಿಕೊಂಡಿದ್ದಿದ್ದಕ್ಕೆ ಮುಂದೆ ಬಿಜೆಪಿ ಅಧಿಕಾರಕ್ಕೆ ಬಂದಿತು. ಆಗ ನಾವು ಎಚ್ಚರಗೊಳಿಸಿದರೂ ಎದ್ದೇಳಲಿಲ್ಲ. ನಿಜವಾಗಿ ಮಲಗಿದ್ದರೆ ಎಚ್ಚರ ಮಾಡಬಹುದು. ಮಲಗಿರುವ ಹಾಗೆ ನಾಟಕ ಮಾಡಿದರೆ ಎಚ್ಚರಿಸಲು ಆಗಲ್ಲ ಎಂದು ವಾಗ್ದಾಳಿ ನಡೆಸಿದರು.
ನೈಸ್ ವ್ಯಾಪ್ತಿಯಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜೊತೆಗೆ ಸಚಿವ ಬಾಲಕೃಷ್ಣ ಹಾಗೂ ಶಾಸಕ ರಂಗನಾಥ್ ಅವರದ್ದು ಜಮೀನಿದೆ ಎಂದು ಆರೋಪ ಮಾಡಿದ್ದಾರಲ್ಲ ಎಂಬ ಪ್ರಶ್ನೆಗೆ ಹೌದಾ..ನಂದೇನಾದರು ಜಮೀನು ಇದ್ದರೆ ಅವರಿಗೆ ಎಲ್ಲವನ್ನು ರಿಜಿಸ್ಟರ್ ಮಾಡಿಕೊಡುತ್ತೇನೆ. ದಾಖಲೆ ಕೊಟ್ಟರೆ ಕುಮಾರಸ್ವಾಮಿ ಮತ್ತು ಅವರ ಧರ್ಮಪತ್ನಿಗೆ ಹಾಗೂ ಮಕ್ಕಳ ಹೆಸರಿಗೆ ಬರೆದು ಕೊಡುತ್ತೇನೆ. ಈ ಹಿಂದೆ ತಾವರೆಕೆರೆ ಜಮೀನಿನ ಬಗ್ಗೆ ಆರೋಪ ಮಾಡಿದ್ದರು. ಅದಕ್ಕೆ ಸದನದಲ್ಲೇ ಉತ್ತರ ಕೊಟ್ಟಿದ್ದೇನೆ. ಸುಮ್ಮನೆ ಖಾಲಿ ಮಾತನಾಡೋದು ಬಿಟ್ಟು ದಾಖಲೆ ಬಿಡುಗಡೆ ಮಾಡಲು ಹೇಳಿ ಎಂದು ಸವಾಲು ಹಾಕಿದರು.ಕುಮಾರಸ್ವಾಮಿಯನ್ನು ಹಂದಿಗೆ ಹೋಲಿಸಿ ವ್ಯಂಗ್ಯ :
ನನ್ನ ಆಕ್ರಮ ಆಸ್ತಿ ಸಾಬೀತು ಮಾಡಿದರೆ ಸಾರ್ವಜನಿಕವಾಗಿ ನೇಣು ಹಾಕಿಕೊಳ್ಳುತ್ತೇನೆ ಎಂದು ಕುಮಾರಸ್ವಾಮಿ ಹೇಳಿದ್ದಾರಲ್ಲ ಎಂಬ ಪ್ರಶ್ನೆಗೆ, ಪಾಪ ಅವರು ನೇಣುಹಾಕಿಕೊಳ್ಳೋದು ಬೇಡ. ನಮ್ಮನ್ನ ಬೈಯೋದಕ್ಕಾದರು ಅವರು ಇರಬೇಕು. ಈಗಲೇ ನೇಣು ಹಾಕಿಕೊಳ್ಳೋದು ಬೇಡ. ಇನ್ನೂ ಸ್ವಲ್ಪ ದಿವಸ ಇರಲಿ ಎಂದರು.ನಿಂದಕರಿರಬೇಕು ಹಂದಿಯ ಹಾಗೆ ಅಂತ ದಾಸರು ಹೇಳಿಲ್ವಾ. ನಿಂದಕರು ಇದ್ದಾಗ ಮಾತ್ರ ನಾವು ಎಚ್ಚೆತ್ತುಕೊಳ್ಳಬಹುದು. ಹಂದಿ ಊರಿನಲ್ಲೆಲ್ಲಾ ಓಡಾಡಿಕೊಂಡು ಸ್ವಚ್ಛ ಮಾಡುತ್ತೆ. ಹಾಗೆ ನಿಂದಕರು ಇದ್ದರೆ ಎಲ್ಲಾ ಸ್ವಚ್ಛ ಆಗುತ್ತೆ. ಇದನ್ನು ಕುಮಾರಸ್ವಾಮಿಗೆ ಹೇಳಿಲ್ಲ, ದಾಸರ ಪದ ಅಷ್ಟೇ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಅವರನ್ನು ಹಂದಿಗೆ ಹೋಲಿಸಿ ಬಾಲಕೃಷ್ಣ ವ್ಯಂಗ್ಯವಾಡಿದರು.
ಎಸ್ಐಆರ್ ವಿರುದ್ಧ ಹೋರಾಟದ ವಿಚಾರವಾಗಿ ಮಾತನಾಡಿದ ಸಚಿವರು, ಈ ಬಗ್ಗೆ ತನಿಖೆ ಮಾಡಲು ಹೇಳಿದ್ದೇವೆ. ಫಾರಂ ನಂ.7 ಯಾರ್ಯಾರು ಕೊಟ್ಟಿದ್ದಾರೊ ಅದನ್ನು ಪರಿಶೀಲಿಸಲು ಹೇಳಿದ್ದೇವೆ. ನಮ್ಮ ಬಿಎಲ್ಎಗಳಿಗೂ ಪರಿಶೀಲನೆ ಮಾಡೋದಕ್ಕೆ ಹೇಳಿದ್ದೀವಿ. ಎಲ್ಲಾ ಕಡೆ ಮತ ಅಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ಎಲ್ಲೆಲ್ಲಿ ಕಾಂಗ್ರೆಸ್ ಪ್ರಬಲವಾಗಿದೆಯೋ ಅಲ್ಲೆಲ್ಲ ಷಡ್ಯಂತ್ರ ನಡೆದಿದೆ. ಇದರ ಬಗ್ಗೆ ಎಚ್ಚೆತ್ತುಕೊಂಡು ತನಿಖೆ ಮಾಡಲು ಮನವಿ ಮಾಡಿದ್ದೇವೆ. ಫಾರಂ ಅನ್ನು ಚುನಾವಣೆ ಆಯೋಗ ಕೊಟ್ಟಿದ್ದರೆ ನಾವು ಪ್ರಶ್ನೆ ಮಾಡುತ್ತಿರಲಿಲ್ಲ. ಆಯೋಗದ ಹೆಸರಿನಲ್ಲಿ ಬೇರೆಯವರು ಸಾವಿರಾರು ಫಾರಂಗಳನ್ನು ಕೊಟ್ಟಿದ್ದಾರೆ. ಇದನ್ನು ನಾವು ಪ್ರಶ್ನೆ ಮಾಡುತ್ತಿದ್ದೇವೆ ಎಂದ ಹೇಳಿದರು.ಕೇಂದ್ರದಿಂದ ಅನುದಾನ ಕೊಡಿಸಲಿ :
ಕೇಂದ್ರದಿಂದ ಬರ ಅಧ್ಯಯನ ತಂಡ ಆಗಮಿಸಿದೆಯಲ್ಲ ಎಂಬ ಪ್ರಶ್ನೆಗೆ ಹೌದು ಕೇಂದ್ರದಿಂದ ತಂಡ ಬಂದಿದೆ. ಇಂದು ಎಲ್ಲಾ ಕಡೆ ಪರಿಶೀಲನೆ ಮಾಡುತ್ತಿದೆ. ಆದರೆ, ಗ್ರಹಾಚಾರಕ್ಕೆ ಎರಡು ದಿನದಿಂದ ಮಳೆ ಬಂದು ಹಸಿರು ಕಾಣುತ್ತಿದೆ. ನೋಡೋಣ ಪರಿಶೀಲನೆ ಮಾಡಿಕೊಂಡು ಹೋಗಲಿ. ದೇಶದ 5ನೇ ಸ್ಥಾನದಲ್ಲಿರುವ ಕೇಂದ್ರ ಮಂತ್ರಿಗಳು ಪರಿಹಾರ ಕೊಡಿಸಲಿ. ಕೇವಲ ಭಾಷಣ ಮಾಡೊಕೊಂಡು ಓಡಾಡೋದು ಅಲ್ಲ. ಕೇಂದ್ರದಿಂದ ಅನುದಾನ ತಂದು ರೈತರ ಸಾಲಮನ್ನಾ ಮಾಡಲಿ. ನಮಗೆ 46 ಸಾವಿರ ಕೋಟಿ ನಷ್ಟ ಆಗಿದ್ದು, ಅದನ್ನು ಕೊಡಿಸಲಿ. ಸುಮ್ಮನೆ ಬೊಗಳೆ ಬಿಟ್ಟುಕೊಂಡು ತಿರುಗಾಡೋದಲ್ಲ ಎಂದು ವಾಗ್ದಾಳಿ ನಡೆಸಿದರು.ಗ್ಯಾರಂಟಿಯಿಂದ ಸಂಕಷ್ಟ ಎದುರಾಗಿದೆ ಅಂತ ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಗಿದೆಯಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ನಾನು ಹೊಸ ಯೋಜನೆಗೆ ಇತಿಮಿತಿ ಇದೆ ಅಂತ ಹೇಳಿದ್ದೆ. ಗ್ಯಾರಂಟಿಗೆ ನಮ್ಮ ಬಳಿ ಹಣ ಇದೆ. ಹೊಸ ಯೋಜನೆ ಬಂದಾಗ ಆಲೋಚನೆ ಮಾಡಬೇಕು ಅಂತ ಹೇಳಿದ್ದೇನೆ. ಬೇರೆಯವರ ರೀತಿ ಉಡಾಫೆಯಾಗಿ ನಾವು ಮಾತನಾಡಲು ಆಗಲ್ಲ ಎಂದು ಬಾಲಕೃಷ್ಣ ಹೇಳಿದರು.