ಗ್ಯಾರಂಟಿ ಯೋಜನೆ ಬಗ್ಗೆ ವಿಪಕ್ಷಗಳು ನಾನಾ ರೀತಿಯಲ್ಲಿ ಟೀಕಿಸಿದರೂ ಅಭಿವೃದ್ಧಿ ಜೊತೆಗೆ ಗ್ಯಾರಂಟಿ ಯೋಜನೆ ಜಾರಿ ಮಾಡುವ ಮೂಲಕ ಇಡೀ ದೇಶಕ್ಕೆ ಮಾದರಿಯಾಗಿದೆ. ಬಿಜೆಪಿ ಸೇರಿದಂತೆ ಹಲವು ವಿರೋಧ ಪಕ್ಷಗಳ ಅವರ ರಾಜ್ಯದಲ್ಲಿಯೇ ಈಗ ನಮ್ಮ ಗ್ಯಾರಂಟಿ ಯೋಜನೆ ಜಾರಿಗೊಂಡಿದೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ರಾಜ್ಯದಲ್ಲಿ ತೀವ್ರ ಬರಗಾಲವಿದ್ದರೂ ಗ್ಯಾರಂಟಿ ಯೋಜನೆಯಿಂದ ಬರದ ತೀವ್ರತೆ ಜನರನ್ನು ಕಾಡುತ್ತಿಲ್ಲ ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಉಪಾಧ್ಯಕ್ಷ, ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳೀಗೌಡ ಹೇಳಿದರು.ಪಟ್ಟಣದ ತಾಲೂಕು ಪಂಚಾಯ್ತಿಯಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸಭೆ ನಡೆಸಿ ಮಾತನಾಡಿದ ನಂತರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಕಾಂಗ್ರೆಸ್ ಚುನಾವಣೆ ಸಂದರ್ಭದಲ್ಲಿ ನೀಡಿದ ವಾಗ್ದಾನದಂತೆ ಪಂಚ ಗ್ಯಾರಂಟಿ ಯೋಜನೆ ಜಾರಿಗೊಳಿಸಿದೆ. ಅಭಿವೃದ್ಧಿ ಜೊತೆಗೆ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವ ಮೂಲಕ ರಾಜ್ಯದ ಜನರ ಅರ್ಥಿಕ ಮಟ್ಟ ವೃದ್ಧಿಸಿದೆ ಎಂದರು.

ಗ್ಯಾರಂಟಿ ಯೋಜನೆ ಬಗ್ಗೆ ವಿಪಕ್ಷಗಳು ನಾನಾ ರೀತಿಯಲ್ಲಿ ಟೀಕಿಸಿದರೂ ಅಭಿವೃದ್ಧಿ ಜೊತೆಗೆ ಗ್ಯಾರಂಟಿ ಯೋಜನೆ ಜಾರಿ ಮಾಡುವ ಮೂಲಕ ಇಡೀ ದೇಶಕ್ಕೆ ಮಾದರಿಯಾಗಿದೆ. ಬಿಜೆಪಿ ಸೇರಿದಂತೆ ಹಲವು ವಿರೋಧ ಪಕ್ಷಗಳ ಅವರ ರಾಜ್ಯದಲ್ಲಿಯೇ ಈಗ ನಮ್ಮ ಗ್ಯಾರಂಟಿ ಯೋಜನೆ ಜಾರಿಗೊಂಡಿದೆ ಎಂದರು.

ನಾವು ನುಡಿದಂತೆ ನಡೆದಿದ್ದೇವೆ. ಶಕ್ತಿ ಸಾರಿಗೆ ಯೋಜನೆ ಮಹಿಳೆಯರು ಮೆಚ್ಚಿದ ಯೋಜನೆಯಾಗಿದೆ. ಅತೀ ಹೆಚ್ಚು ಬಳಕೆಯಾಗಿ ದಾಖಲೆ ನಿರ್ಮಾಣವಾಗಿದೆ. ಮಹಿಳೆಯರಿಗೆ ನೀಡಲಾಗುತ್ತಿರುವ ಗೃಹಲಕ್ಷ್ಮಿ ಯೋಜನೆಯಡಿ ಈವರೆವಿಗೆ 32 ತಿಂಗಳ ಹಣ ಬಿಡುಗಡೆ ಮಾಡಲಾಗಿದೆ. 33ನೇ ಕಂತು 2482 ಕೋಟಿ ರು. ಹಣ ಬಿಡುಗಡೆಯಾಗುತ್ತಿದೆ ಎಂದರು.

ಜನಸಾಮಾನ್ಯರ ಬದುಕನ್ನು ಹಸನು ಮಾಡುತ್ತಿರುವ ಈ ಯೋಜನೆಯ ಅನುಷ್ಠಾನದ ಬಗ್ಗೆ ಸಲ್ಲದ ಮಾತುಗಳು ಕೇಳಿ ಬರುತ್ತಿವೆ. ಯಾವುದೇ ಕಾರಣಕ್ಕೂ ಯೋಜನೆ ನಿಲ್ಲಿಸುವದಿಲ್ಲ. ಈ ಯೋಜನೆಯಲ್ಲಿ ಸಮೀಕ್ಷೆಗಳ ನಿಜವಾದ ಫಲಾನುಭವಿಗಳನ್ನು ಗುರುತಿಸಿ ಲಾಭವನ್ನು ಒದಗಿಸುವಂತೆ ಮಾಡುವುದು ಉದ್ದೇಶವಾಗಿದೆ ಎಂದರು.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಕ್ಟೋಬರ್‌ನಲ್ಲಿ ಜಿಲ್ಲೆಗೆ ಎರಡು ಬಾರಿ ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಅ.16ರಂದು ಕಾವೇರಿ ಆರತಿ ಕಾರ್ಯಕ್ರಮ ಹಾಗೂ ಡಿ.31 ರಂದು ಸುಮಾರು ಒಂದು ಸಾವಿರ ಕೋಟಿ ಮೊತ್ತದ ವಿವಿಧ ಯೋಜನೆಗಳ ಶಿಲಾನ್ಯಾಸ ಮತ್ತು ಉದ್ಘಾಟನೆಗೆ ಆಗಮಿಸುತಿದ್ದಾರೆ ಎಂದರು.

ಈ ವೇಳೆ ಮೈಸೂರು ಲ್ಯಾಂಪ್ಸ್ ಮಾಜಿ ಅಧ್ಯಕ್ಷ ಬಿ.ಎಲ್.ದೇವರಾಜು, ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ನಾಗೇಂದ್ರ ಕುಮಾರ್. ಕೆಪಿಸಿಸಿ ಸದಸ್ಯ ಕಿಕ್ಕೇರಿ ಸುರೇಶ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಟಿ.ಎನ್.ದಿವಾಕರ್, ತಾಲೂಕು ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿ ಅಧ್ಯಕ್ಷ ಅಗ್ರಹಾರಬಾಚಹಳ್ಳಿ ಕುಮಾರ್, ಜಿಲ್ಲಾ ಕಮಿಟಿ ಸದಸ್ಯ ಐಚನಹಳ್ಳಿ ಶಿವಣ್ಣ, ಮುಖಂಡರಾದ ಡಿ.ಪ್ರೇಮಕುಮಾರ್, ರಾಜಯ್ಯ, ಬಸ್ತಿ ರಂಗಪ್ಪ, ಶಿವಮ್ಮ ಸೇರಿದಂತೆ ಸಮಿತಿ ಸದಸ್ಯರು ಇದ್ದರು.

ಥಿಯೇಟರ್‌ನಲ್ಲಿ ಕಳ್ಳತನ: ಎಫ್ಐಆರ್ ದಾಖಲಿಸಲು ಸೂಚನೆ

ಪ್ರದರ್ಶನ ಸ್ಥಗಿತಗೊಳಿಸಿರುವ ಪಟ್ಟಣದ ಶ್ರೀರಂಗಾ ಥಿಯೇಟರ್‌ನಲ್ಲಿ ಕಳ್ಳತನ ನಡೆದಿದ್ದು, ವ್ಯಕ್ತಿಯೊಬ್ಬರ ಸಿಕ್ಕಿ ಬಿದ್ದರೂ ಪಟ್ಟಣ ಪೊಲೀಸರು ಇದುವರೆಗೂ ಪ್ರಕರಣ ದಾಖಲಿಸಿಲ್ಲ.

ಈ ಬಗ್ಗೆ ಚಿತ್ರಮಂದಿರದವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದರೂ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸದೆ ಕಳ್ಳತನದ ವೇಳೆ ಸಿಕ್ಕಿಬಿದ್ದ ವ್ಯಕ್ತಿಯನ್ನು ಬಿಟ್ಟು ಕಳುಹಿಸಿದ್ದಾರೆ. ಕಳ್ಳರ ಮೇಲೆ ಕ್ರಮ ಜರುಗಿಸಿ ಬಂದ್ ಆಗಿರುವ ಚಿತ್ರಮಂದಿರಕ್ಕೆ ರಕ್ಷಣೆ ನೀಡುವಂತೆ ಚಿತ್ರ ಮಂದಿರದ ಮಾಲೀಕರು ದಿನೇಶ್ ಗೂಳೀಗೌಡ ಅವರಿಗೆ ಮನವಿ ಸಲ್ಲಿಸದರು.

ಕಳ್ಳನನ್ನು ಹಿಡಿದು ಕೊಟ್ಟರೂ ಪ್ರಕರಣ ದಾಖಲಿಸದ ಪಟ್ಟಣ ಪೊಲೀಸರ ಕ್ರಮಕ್ಕೆ ಆಶ್ಚರ್ಯ ವ್ಯಕ್ತಪಡಿಸಿದ ದಿನೇಶ್ ಗೂಳೀಗೌಡ ತಕ್ಷಣವೇ ಸ್ಥಳಕ್ಕೆ ಪಟ್ಟಣ ಪೊಲೀಸ್ ಇನ್ಸೆಪೆಕ್ಟರ್ ಸುನೀಲ್ ಕುಮಾರ್ ಅವರನ್ನು ಕರೆಸಿ ಪ್ರಕರಣ ದಾಖಲಿಸುವಂತೆ ಸೂಚಿಸಿ, ಪ್ರಕರಣ ದಾಖಲಿಸದಿದ್ದರೆ ಜಿಲ್ಲಾ ಎಸ್ಪಿ ಗಮನಕ್ಕೆ ತರುವುದಾಗಿ ಎಚ್ಚರಿಸಿದರು.