ಶಿಕ್ಷಣದ ಉದ್ದೇಶಗಳನ್ನು ಸರಿಯಾಗಿ ಅರ್ಥೈಸುವಲ್ಲಿ ನಾವು ಸೋತಿದ್ದೇವೆ. ವಿದ್ಯಾರ್ಥಿ, ಸಮಾಜ, ಶಿಕ್ಷಕರ ನಡುವೆ ಉತ್ತಮ ಬಾಂಧವ್ಯ ವೃದ್ಧಿಯಾದಾಗ ಮಾತ್ರ ಶಿಕ್ಷಣದ ಉದ್ದೇಶ ಸಾರ್ಥಕವಾಗಲು ಸಾಧ್ಯ ಎಂದು ಕುವೆಂಪು ವಿವಿ ಕುಲಪತಿ ಪ್ರೊ. ಶರತ್‌ ಅನಂತಮೂರ್ತಿ ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಶಿಕ್ಷಣದ ಉದ್ದೇಶಗಳನ್ನು ಸರಿಯಾಗಿ ಅರ್ಥೈಸುವಲ್ಲಿ ನಾವು ಸೋತಿದ್ದೇವೆ. ವಿದ್ಯಾರ್ಥಿ, ಸಮಾಜ, ಶಿಕ್ಷಕರ ನಡುವೆ ಉತ್ತಮ ಬಾಂಧವ್ಯ ವೃದ್ಧಿಯಾದಾಗ ಮಾತ್ರ ಶಿಕ್ಷಣದ ಉದ್ದೇಶ ಸಾರ್ಥಕವಾಗಲು ಸಾಧ್ಯ ಎಂದು ಕುವೆಂಪು ವಿವಿ ಕುಲಪತಿ ಪ್ರೊ. ಶರತ್‌ ಅನಂತಮೂರ್ತಿ ಹೇಳಿದರು.

ಕುವೆಂಪು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಎನ್.ಎಸ್.ಎಸ್. ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಒಂದು ದಿನದ ವಿಚಾರ ಸಂಕಿರಣ ಹಾಗೂ ಪ್ರಾಂಶುಪಾಲರು ಮತ್ತು ಕಾರ್ಯಕ್ರಮಾಧಿಕಾರಿಗಳ ಸಮಾಲೋಚನಾ ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಶಿಕ್ಷಣವು ಪರಿಪೂರ್ಣವಾಗಬೇಕಾದರೆ ಅದು ವ್ಯಕ್ತಿತ್ವದ ಮೌಲ್ಯ, ಸತ್ವಗಳನ್ನು ಅನಾವರಣಗೊಳಿಸುವ ಅವಕಾಶ ನೀಡಬೇಕು ಎಂದರು.

ಎನ್.ಎಸ್.ಎಸ್. ಚಟುವಟಿಕೆಗಳ ಮೂಲಕ ಇಂದಿನ ವಿದ್ಯಾರ್ಥಿಗಳು ಕಲಿಯಬೇಕಾದುದು ತುಂಬಾ ಇದೆ. ಶ್ರಮದಾನ ಎನ್ನುವುದು ಕೇವಲ ದೈಹಿಕ ಚಟುವಟಿಕೆಯಲ್ಲ, ಅದರಲ್ಲಿ ವಿಶಾಲ ಅರ್ಥವಿದೆ. ಸ್ವಾವಲಂಬನೆ, ಸ್ವಸಾಮರ್ಥ್ಯ ವೃದ್ಧಿಯ ಕೌಶಲಗಳನ್ನು ಕಲಿಯಲು ಸಾಕಷ್ಟು ಅವಕಾಶಗಳಿವೆ ಎಂದು ಅಭಿಪ್ರಾಯಪಟ್ಟರು.

ಎನ್.ಎಸ್.ಎಸ್. ಕೇವಲ ಪಠ್ಯೇತರ ಚಟುವಟಿಕೆಯ ಭಾಗವಾಗದೆ ಶಿಕ್ಷಣದ ಒಂದು ಭಾಗವಾಗಬೇಕು ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಡಾ. ಕೇಶವ ಎಚ್. ಅವರು, ಎನ್.ಎಸ್.ಎಸ್. ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ಹೆಚ್ಚು ನಡೆಯಬೇಕಿದೆ. ಸೈಬರ್ ಅಪರಾಧಗಳ ಬಗ್ಗೆ ಆರೋಗ್ಯ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರೊಂದಿಗೆ ಸಾಮಾನ್ಯ ಜನರನ್ನು ತಲುಪಲು ಸಾಧ್ಯವಿದೆ ಎಂದು ಹೇಳಿದರು.

ಎನ್.ಎಸ್.ಎಸ್. ಒಂದು ಟೀಮ್ ವರ್ಕ್, ಸಮುದಾಯದೊಂದಿಗೆ ಬೆಸೆಯುವ ಕಾರ್ಯಕ್ರಮ. ಎನ್.ಎಸ್.ಎಸ್. ಚಟುವಟಿಕೆಗಳು ಹೆಚ್ಚು ಕ್ರಿಯಾಶೀಲಗೊಳ್ಳಬೇಕಾದರೆ ವಿದ್ಯಾರ್ಥಿಗಳಲ್ಲಿರುವ ಉತ್ಸಾಹ ಅದನ್ನು ನಿರ್ವಹಿಸುವ ಅಧಿಕಾರಿಗಳಲ್ಲೂ ಇರಬೇಕು ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಮೌಲ್ಯಮಾಪನ ಕುಲಸಚಿವ ಪ್ರೊ. ಆರ್. ತಿಮ್ಮರಾಯಪ್ಪ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ನಿಕಟಪೂರ್ವ ಸಂಯೋಜನಾಧಿಕಾರಿ ಡಾ. ನಾಗರಾಜ ಪರಿಸರ ಅವರನ್ನು ಅಭಿನಂದಿಸಲಾಯಿತು.

ವಿಚಾರ ಸಂಕಿರಣದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಡಾ. ಎಚ್.ಎಸ್. ಸುರೇಶ ಹಾಗೂ ಪ್ರೊ. ಬಿ.ವಿ. ವಸಂತ ಕುಮಾರ್ ಅವರು ಭಾಗಿಯಾಗಿದ್ದರು.

ಪ್ರಾಂಶುಪಾಲರಾದ ಡಾ. ಸಂಧ್ಯಾ ಕಾವೇರಿ ಮತ್ತು ಪ್ರೊ. ಅವಿನಾಶ್ ಟಿ. ಪ್ರತಿಕ್ರಿಯೆ ನೀಡಿದರು. ಕಾರ್ಯಕ್ರಮಾಧಿಕಾರಿಗಳ ಪರವಾಗಿ ಎಂ.ಜಿ. ನಾಗರಾಜ ಹಾಗೂ ಡಾ. ಎ.ಜಿ. ಪ್ರಶಾಂತ ಮಾತನಾಡಿದರು.

ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ. ಶುಭಾ ಮರವಂತೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಪ್ರವೀಣ್ ಬಿ.ಎನ್. ಮತ್ತು ಡಾ. ಶಂಕರ ನಾಯ್ಕ ಕಾರ್ಯಕ್ರಮ ನಿರೂಪಿಸಿದರು. ಡಾ. ರುದ್ರಮುನಿ ವಂದನಾರ್ಪಣೆ ಮಾಡಿದರು.