ಸಾರಾಂಶ
ಶೆಟ್ಟಿಕೊಪ್ಪದ ಗಣಪತಿ ಕಲಾ ಮಂದಿರದಲ್ಲಿ ಅರಣ್ಯ ಇಲಾಖೆ ಆಶ್ರಯದಲ್ಲಿ ಕಾಡಿನ ಬೆಂಕಿ ಬಗ್ಗೆ ಜಾನಪದ ಗೀತೆಗಳ ಗಾಯನ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಅರಣ್ಯ ಸಂಪತ್ತು ಹಾಗೂ ಪರಿಸರ ನಮ್ಮೆಲ್ಲರ ಜೀವನಾಡಿಯಾಗಿದೆ ಎಂದು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಹಾಗೂ ರಾಜ್ಯ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಗರದ ಜಾನಪದ ಕಲಾವಿದ ಗುಡ್ಡೆ ಜೋಗಪ್ಪ ಹೇಳಿದರು.
ಮಂಗಳವಾರ ಎನ್.ಆರ್.ಪುರ ಅರಣ್ಯ ಇಲಾಖೆಯಿಂದ ಶೆಟ್ಟಿಕೊಪ್ಪದ ಶ್ರೀ ಸಿದ್ಧಿ ವಿನಾಯಕ ಕಲಾ ಮಂದಿರದಲ್ಲಿ ಆಯೋಜಿಸಿದ್ದ ಕಾಡಿನ ಬೆಂಕಿ ಯಿಂದಾಗುವ ಅನಾಹುತಗಳ ಬಗ್ಗೆ ಸಾಗರದ ಶ್ರೀ ಕಾಲ ಭೈರವ ಜೋಗಿ ತಂಡದವರ ಜಾನಪದ ಗೀತೆಗಳಿಂದ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿ, ಅರಣ್ಯ ಸಂಪತ್ತು ಸಂರಕ್ಷಿಸುವುದು ನಮ್ಮ ನಿಮ್ಮೆಲ್ಲರ ಹೊಣೆ. ಕಾಡಿಗೆ ಮನುಷ್ಯನ ಮೋಜು ಮಸ್ತಿಯಿಂದ, ಬೀಡಿ, ಸಿಗರೇಟ್ ಸೇದಿ ಬಿಸಾಕುವುದರಿಂದ, ರೈತರು ಗದ್ದೆಗಳ ಅಂಚನ್ನು ಸ್ವಚ್ಛಗೊಳಿಸುವಾಗ ಆಕಸ್ಮಿಕವಾಗಿ ಬೆಂಕಿ ಬೀಳ ಬಹುದು. ಕಾಡಿಗೆ ಬೆಂಕಿ ಬಿದ್ದರೆ ಸಸ್ಯರಾಶಿ, ಕಾಡಿನ ಜೀವರಾಶಿ, ಅರಣ್ಯದಲ್ಲಿನ ವನ್ಯ ಸಂಪತ್ತುಗಳು ಸಂಪೂರ್ಣ ನಾಶವಾಗುತ್ತವೆ. ಇವುಗಳನ್ನೆಲ್ಲ ಮನುಷ್ಯ ಕಳೆದುಕೊಂಡರೆ, ಮುಂದೊಂದು ದಿನ ಪರಿತಪಿಸಬೇಕಾಗಿತ್ತದೆ. ಆದ್ದರಿಂದ ಕಾಡಿಗೆ ಬೆಂಕಿ ಬೀಳದ ಹಾಗೆ ನಾವೆಲ್ಲರೂ ಎಚ್ಚರ ವಹಿಸಬೇಕಿದೆ. ಎಚ್ಚರಿಕೆ ವಹಿಸುವುದು ಕೇವಲ ಅರಣ್ಯ ಇಲಾಖೆಯ ಕರ್ತವ್ಯ ಮಾತ್ರವಲ್ಲ. ನಮ್ಮೆಲ್ಲರ ಕರ್ತವ್ಯವೂ ಆಗಿದೆ ಎಂದರು. ಉಪ ವಲಯ ಅರಣ್ಯಾಧಿಕಾರಿ ಗೌಸ್ ಮೊಹಿಯುದ್ದೀನ್ ಮಾತನಾಡಿ, ಕಾಡಿಗೆ ಬೆಂಕಿ ಬೀಳದ ಹಾಗೆ ನೋಡಿಕೊಳ್ಳಲು ಅರಣ್ಯ ಇಲಾಖೆ ಯೊಂದಿಗೆ ರೈತರು, ಸಾರ್ವಜನಿಕರು ಕೈ ಜೋಡಿಸಬೇಕು. ಅರಣ್ಯ ಸಂಪತ್ತು ಮಾನವನ ಬದುಕಿಗೆ ನಿರಂತರವಾಗಿ ಬೇಕಾಗುತ್ತದೆ ಎಂದರು.ಗ್ರಾಪಂ ಉಪಾಧ್ಯಕ್ಷ ಸುನೀಲ್ ಕುಮಾರ್ ಮಾತನಾಡಿ, ಮುಂದುವರಿದ ಶ್ರೀಮಂತ ರಾಷ್ಟಗಳು ಈಗ ಕಾಡ್ಗಿಚ್ಚಿಗೆ ಬಲಿಯಾಗುತ್ತಿದೆ. ಕಾಡಿನ ಬೆಂಕಿ ಬೀಳದಂತೆ ಅರಣ್ಯ ಇಲಾಖೆ ಜೊತೆ ಗ್ರಾಮಸ್ಥರು ಕೈ ಜೋಡಿಸೋಣ ಎಂದು
ಕಸಾಪ ಮಾಜಿ ಅಧ್ಯಕ್ಷ ಎನ್.ಎಂ.ಕಾಂತರಾಜ್ ಮಾತನಾಡಿ, ಅಳಿವಿನಂಚಿನ ಜಾನಪದ ಕಲೆ ಉಳಿಸಲು ಗುಡ್ಡೆಜೋಗಪ್ಪನವರ ಶ್ರಮ ಮತ್ತು ಸೇವೆ ನಿಜಕ್ಕೂ ಶ್ಲಾಘನೀಯ. ಅರಣ್ಯ ಇಲಾಖೆ, ಆರೋಗ್ಯ ಇಲಾಖೆ ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ತಮ್ಮ ಜಾನಪದ ಗೀತ ಗಾಯನದ ಮೂಲಕ ಜಾಗೃತಿ ಮೂಡಿಸುತ್ತಿರುವ ಇವರ ಕಾರ್ಯ ಮೆಚ್ಚುವಂತಹದ್ದು ಎಂದರು.ಊರಿನ ಪರವಾಗಿ ಎನ್.ಎಂ.ಕಾಂತರಾಜ್ ಹಾಗೂ ಗ್ರಾಪಂ ಸದಸ್ಯರು ಜಾನಪದ ಕಲಾವಿದ ಗುಡ್ಡೆಜೋಗಪ್ಪ ಅವರನ್ನು ಅಭಿನಂದಿಸಿದರು. ಈ ಸಂದರ್ಭದಲ್ಲಿ ಕಡಹಿನಬೈಲು ಗ್ರಾಪಂ ಅಧ್ಯಕ್ಷೆ ಅಶ್ವಿನಿ, ಸದಸ್ಯರಾದ ವಾಣಿ ನರೇಂದ್ರ, ಚಂದ್ರಶೇಖರ್,ಎ.ಬಿ.ಮಂಜುನಾಥ್, ಉಪ ವಲಯ ಅರಣ್ಯಾಧಿಕಾರಿ ಅರುಣ್ ಬಾರಂಗಿ, ಅಕ್ಷತಾ, ವನಪಾಲಕರಾದ ಮಂಜಯ್ಯ, ಸತೀಶ್, ರಾಘವೇಂದ್ರ, ಶಂಕರ್, ಲೋಹಿತ್ ಮತ್ತು ಶಾಲಾ ಮಕ್ಕಳು ಹಾಗೂ ಶಿಕ್ಷಕ ವೃಂದ ಉಪಸ್ಥಿತರಿದ್ದರು.