ಬದಲಾದ ಕಾನೂನಿಗೆ ನಾವು ಹೊಂದಿಕೊಳ್ಳಬೇಕು

| Published : Aug 26 2024, 01:36 AM IST

ಸಾರಾಂಶ

ಪ್ರಸ್ತುತ ದಿನಗಳಲ್ಲಿ ಕಾನೂನು‌ ಬದಲಾಗಿದೆ. ಬದಲಾದ ಕಾನೂನಿಗೆ ನಾವು ಹೊಂದುಕೊಳ್ಳಬೇಕು. ಯುವ ವಕೀಲರು ನಾನು ಎಂಬ ಆಹಂ ಬಿಡಬೇಕು. ಕಕ್ಷಿದಾರನು ವಕೀಲರ ಮೇಲೆ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳಬೇಕು. ಅಕ್ಷರಶಃ ಕಕ್ಷಿದಾರನು ಮುಗ್ಧ ಮನಸ್ಸಿನವರಾಗಿರುತ್ತಾರೆ. ಹೊಸದಾಗಿ ಬಂದಿರುವ ಯುವ ವಕೀಲರು ಹಿರಿಯ ವಕೀಲರ ಸಹಕಾರ, ಮಾರ್ಗದರ್ಶನ ಮತ್ತು ಅನುಭವವನ್ನು ಪಡೆಯಲು ಮುಂದಾಗಬೇಕು ಎಂದು ಹಾಸನ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿಗಳಾದ ಎಚ್.ಟಿ ನರೇಂದ್ರ ಪ್ರಸಾದ್ ಸಲಹೆ ನೀಡಿದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ವಕೀಲ ವೃತ್ತಿಯು ಸಾರ್ವಜನಿಕ ಸೇವಾ ಕ್ಷೇತ್ರದಲ್ಲಿ ತನ್ನದೇ ಗೌರವ ಹೊಂದಿದೆ. ಈ ಕ್ಷೇತ್ರಕ್ಕೆ ಬರುವವರಿಗೆ ನಿವೃತ್ತಿ ಎಂಬುದಿಲ್ಲ. ಹಿರಿಯ ವಕೀಲರ ಮಾರ್ಗದರ್ಶದೊಂದಿಗೆ ಈಗಾಗಲೇ ಬದಲಾಗಿರುವ ಕಾನೂನುಗಳನ್ನು ಅರಿತು ಸಾಧನೆ ಮಾಡುವುದರ ಮೂಲಕ ನ್ಯಾಯಾಂಗ ಇಲಾಖೆ ಮತ್ತು ಸಾರ್ವಜನಿಕ ಕ್ಷೇತ್ರದಲ್ಲಿ ವ್ಯಕ್ತಿತ್ವ ರೂಪಿಸಿಕೊಳ್ಳಲು ಮುಂದಾಗಬೇಕು ಎಂದು ಕರ್ನಾಟಕ ಉಚ್ಛ ನ್ಯಾಯಾಲಯ ನ್ಯಾಯಾಧೀಶರು ಹಾಗೂ ಹಾಸನ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿಗಳಾದ ಎಚ್.ಟಿ ನರೇಂದ್ರ ಪ್ರಸಾದ್ ಕರೆ ನೀಡಿದರು.

ನಗರದ ನ್ಯಾಯಾಲಯ ಆವರಣದಲ್ಲಿರುವ ಸಭಾಂಗಣದಲ್ಲಿ ಕಳೆದ ಮೂರು ದಿನಗಳಿಂದ ಕರ್ನಾಟಕ ರಾಜ್ಯ ವಕೀಲರ ಪರಿಷತ್ತು, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಅರಸೀಕೆರೆ ವಕೀಲರ ಸಂಘ, ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ ಸಂಯುಕ್ತಾಶ್ರಯದಲ್ಲಿ ವಕೀಲರಿಗಾಗಿ ಆಯೋಜಿಸಲಾಗಿದ್ದ ಮೂರು ದಿನಗಳ ಕಾನೂನು ಕಾರ್ಯಾಗಾರ ಸಮಾರೋಪ ಸಮಾರಂಭ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಉತ್ತಮ ವಿಷಯಗಳನ್ನಾಧರಿಸಿ ಆಯೋಜಿಸಿರುವ ಕಾನೂನು ಕಾರ್ಯಾಗಾರ ಸದುಪಯೋಗ ಮಾಡಿಕೊಳ್ಳಿ ಒಂದು ದಿನಕ್ಕೆ ಮಾತ್ರ ಇಂತಹ ಕಾರ್ಯಾಗಾರಗಳು ಸೀಮಿತವಾಗಬಾರದು, ಪ್ರತಿ ದಿನಗಳೂ ಕಲಿಕಾ ದಿನಗಳಾಗಬೇಕು. ಸಾರ್ವಜನಿಕ ಕ್ಷೇತ್ರದ ಹಕ್ಕುಗಳನ್ನು ಸಂರಕ್ಷಿಸಲು ಕಾನೂನು ಅರಿವು ಮೂಡಿಸಿಕೊಳ್ಳುವುದು ಅನಿವಾರ್ಯವಾಗಿದೆ ಎಂದರು.

ಪ್ರಸ್ತುತ ದಿನಗಳಲ್ಲಿ ಕಾನೂನು‌ ಬದಲಾಗಿದೆ. ಬದಲಾದ ಕಾನೂನಿಗೆ ನಾವು ಹೊಂದುಕೊಳ್ಳಬೇಕು. ಯುವ ವಕೀಲರು ಇಂತಹ ಕಾರ್ಯಕ್ರಮ ಸದುಪಯೋಗ ಮಾಡಿಕೊಂಡು, ಕಿರಿಯ ವಕೀಲರಿಗಿಂತ ಹಿರಿಯ ವಕೀಲರಿಗೆ ಕಾನೂನು ಕಾರ್ಯಾಗಾರ ಅವಶ್ಯಕತೆ ಇದೆ. ವಕೀಲ ವೃತ್ತಿಯವರು ನಾನು ಎಂಬ ಆಹಂ ಬಿಡಬೇಕು. ಕಕ್ಷಿದಾರನು ವಕೀಲರ ಮೇಲೆ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳಬೇಕು. ಅಕ್ಷರಶಃ ಕಕ್ಷಿದಾರನು ಮುಗ್ಧ ಮನಸ್ಸಿನವರಾಗಿರುತ್ತಾರೆ.

ಹೊಸದಾಗಿ ಬಂದಿರುವ ಯುವ ವಕೀಲರು ಹಿರಿಯ ವಕೀಲರ ಸಹಕಾರ, ಮಾರ್ಗದರ್ಶನ ಮತ್ತು ಅನುಭವವನ್ನು ಪಡೆಯಲು ಮುಂದಾಗಬೇಕು. ಯುವ ವಕೀಲರು ನ್ಯಾಯಾಧೀಶರಾಗಲು ಪ್ರಯತ್ನಿಸಿ. ಅನೇಕ ತರಬೇತಿ ಪಡೆದು ನ್ಯಾಯಧೀಶರಾಗಬಹುದು. ನ್ಯಾಯಾಲಯಗಳಲ್ಲಿ ಗ್ರಾಮೀಣ ಪ್ರದೇಶಗಳ ಜನತೆ ಪ್ರಕರಣಗಳು ಹೆಚ್ಚಾಗಿರುತ್ತದೆ. ಅವರ ಪ್ರಕರಣಗಳಲ್ಲಿ ನ್ಯಾಯ ಸಿಗುವ ಮಟ್ಟದಲ್ಲಿ ನೂತನ ಕಾನೂನುಗಳ ಅನುಷ್ಠಾನ ಅರಿವು ಮೂಡಿಸಿಕೊಳ್ಳಲು ಎಲ್ಲ ವಕೀಲರು ಮುಂದಾಗಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಬೆಂಗಳೂರು ಉಚ್ಛ ನ್ಯಾಯಾಲಯ ನ್ಯಾಯಧೀಶರಾದ ಎಚ್.ಪಿ ಸಂದೇಶ್ ಮಾತನಾಡಿ, ಅರಸೀಕೆರೆಗೆ ಲಾ ಕಾಲೇಜು ಅವಶ್ಯಕತೆ ಇದೆ. ಲಾ ಬಗ್ಗೆ ಆಸಕ್ತರು ಹೆಚ್ಚಾಗಬೇಕು. ವಕೀಲ ವೃತ್ತಿಯಲ್ಲಿ ಸಂಖ್ಯೆ ಕಡಿಮೆ ಇದ್ದರೂ, ವೃತ್ತಿ ಆಸಕ್ತರು ಹೆಚ್ಚಿರಬೇಕು. ಸಂವಿಧಾನದಲ್ಲಿ ಕಾನೂನು ಇಲಾಖೆಯು ತನ್ನದೇ ಪಾತ್ರ ವಹಿಸುತ್ತಿದೆ. ಸಮಾಜ ಸದೃಢಗೊಳಿಸುವ ಜವಾಬ್ದಾರಿ ಪ್ರತಿ ವಕೀಲರ ಮೇಲಿದೆ. ನ್ಯಾಯಾಂಗ ಇಲಾಖೆ ನ್ಯಾಯಾಧೀಶರು, ವಕೀಲರು ಮತ್ತು ಸಿಬ್ಬಂದಿ ಕೂಡ ಕಾನೂನು ಕಾರ್ಯಗಾರ ಸದುಪಯೋಗ ಮಾಡಿಕೊಳ್ಳಬೇಕು. ಇಂತಹ ಕಾರ್ಯಾಗಾರಗಳಲ್ಲಿ ಬಾರ್ ಕೌನ್ಸಿಲ್ ತನ್ನದೇ ಪಾತ್ರವಹಿಸುತ್ತಿದೆ. ನಿವೃತ್ತ ನ್ಯಾಯಾಧೀಶರಾದ ಬಿಲ್ಲಪ್ಪ ನವರ ಮಾರ್ಗದರ್ಶನ ಮತ್ತು ಅವರಲ್ಲಿ ನಾನು ಕೂಡ ತರಬೇತಿ ಪಡೆದಿದ್ದೇನೆ. ವರ್ಕ್‌ಶಾಪ್‌ನಲ್ಲಿ ಸಂಗ್ರಹವಾಗುವ ಮಾಹಿತಿಯನ್ನು ಒಂದು ಕಿವಿಯಲ್ಲಿ ಕೇಳಿ ಮತ್ತೊಂದು ಕಿವಿಯಲ್ಲಿ ಬಿಡಬಾರದು ಎಂದು ಹೇಳಿದರು.

ಸ್ವಾಮಿ ವಿವೇಕಾನಂದ ಮತ್ತು ಬಸವೇಶ್ವರ ದಾರ್ಶನಿಕರ ಪಂಚ ಮಂತ್ರಗಳಾದ ಶಿಸ್ತು, ಶ್ರಮ, ಸಮಯ ಪ್ರಜ್ಞೆ, ಆತ್ಮ ವಿಶ್ವಾಸ, ನಿರ್ಭಯತೆ ಅಥವಾ ಧೈರ್ಯ ದೊಂದಿಗೆ ನೊಂದವರಿಗೆ ಕೆಡುಕು ಆಗದಂತೆ ಪ್ರಕರಣಗಳ ಸಂಬಂಧ ನ್ಯಾಯ ಸಿಕ್ಕಾಗ ಮಾತ್ರ ನ್ಯಾಯಾಂಗ ವ್ಯವಸ್ಥೆ ಮೇಲೆ ಕಕ್ಷಿಗಾರನಿಗೆ ನಂಬಿಕೆ ವಿಶ್ವಾಸ ಮೂಡುತ್ತದೆ. ಮೂರು ದಿನಗಳ ಕಾನೂನು ಕಾರ್ಯಗಾರ ಕೃಷಿ ತರಭೇತಿಯಲ್ಲಿ ಪಡೆದ ಮಾಹಿತಿ ಮತ್ತು ಜ್ಞಾನ ಸಂಪತ್ತು ಸದುಪಯೋಗ ಆಗಲಿ.ನಮ್ಮೇಲ್ಲರ ಕಾರ್ಯ ಚಟುವಟಿಗಳು ಭಾರತದ ಸಂವಿಧಾನ ಅಡಿಯಲ್ಲೇ ನಡೆಯುತ್ತದೆ. ಕಾನೂನು ಅರಿವು ನಿರಂತರವಾಗಲಿ, ಸದುಪಯೋಗ ಆಗಲಿ ಎಂದು ತಿಳಿಸಿದರು.

ಬೆಂಗಳೂರು ಉಚ್ಛ ನ್ಯಾಯಾಲಯ ನ್ಯಾಯಧೀಶರಾದ ಜಿ.ಟಿ ಶಿವಶಂಕರೇಗೌಡ ಮಾತನಾಡಿ, 2005ರಿಂದ ಅರಸೀಕೆರೆ ನಂಟು ಇದೆ. ಅರಸೀಕೆರೆ ಸಿವಿಲ್ ನ್ಯಾಯಾಲಯ ಸಾಕಷ್ಟು ಶಕ್ತಿಶಾಲಿಯಾಗಿದೆ. ಲೋಕ ಅದಾಲತ್‌ನಲ್ಲಿ ಅರಸೀಕೆರೆ ನ್ಯಾಯಾಲಯವು ಹೆಚ್ಚಿನ‌ ಸಾಧನೆ ಮಾಡಿದೆ. ಬದಲಾದ ಕಾನೂನುಗಳನ್ನು ಮೋದಲು ಅರಿಯಿರಿ. ನೂತನ ಸೆಕ್ಷನ್‌ಗಳನ್ನು ಮೊದಲು ಅರಿಯಬೇಕು. ಹಳೆಯ ಕಾನೂನು ಪ್ರಕರಣಗಳ ಜೊತೆಯಲ್ಲಿ ನೂತನ ಕಾನೂನು ಪ್ರಕರಣಗಳ ಗೊಂದಲ ಮುಂದಿನ ದಿನಗಳಲ್ಲಿ ಸಾಮಾನ್ಯವಾಗಿರುತ್ತದೆ. ಖಾಲಿ ಇರುವ ನ್ಯಾಯಾಧೀಶರ ಸ್ಥಾನಕ್ಕೆ ಶೀಘ್ರವೇ ನೇಮಕ‌ ಮಾಡಲಾಗುವುದು. ಆ ನಿಟ್ಟಿನಲ್ಲಿ ಆಡಳಿತಾತ್ಮಕ ನ್ಯಾಯಾಧೀಶರೊಂದಿಗೆ ಮಾತುಕತೆ ಕೂಡ ಆಗಿದೆ. ಅನೇಕ ಕಡೆ ಮುಚ್ಚಿರುವ ನ್ಯಾಯಾಲಗಳ ನ್ಯಾಯಾಧೀಶರನ್ನು ಖಾಲಿ ಇರುವ ಸ್ಥಾನಗಳಿಗೆ ವರ್ಗಾವಣೆ ಮಾಡಲಾಗುವುದು ಎಂದರು.

ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಉಷರಾಣಿ ಮಾತನಾಡಿ, ಹೆಣ್ಣುಮಕ್ಕಳು ವಕೀಲ ವೃತ್ತಿಗೆ ಹೊಂದುಕೊಳ್ಳದ ಕಾಲವೊಂದಿತ್ತು. ಮೊಬೈಲ್ ಕಂಪ್ಯೂಟರ್‌ ಇಂಟರ್ ನೆಟ್ ಇಲ್ಲದ ಕಾಲದ ವಕೀಲ ತರಬೇತಿ ಕಷ್ಟಕರವಾಗಿತ್ತು. ಇಂದು ಕಾಲ ಬದಲಾಗಿದೆ. ಹೆಣ್ಣುಮಕ್ಕಳು ವಕೀಲ ವೃತ್ತಿಗೆ ಹೆಚ್ಚು ಹೆಚ್ಚು ಬರುತ್ತಿದ್ದಾರೆ. ಎಲ್ಲ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿರುವ ಮಹಿಳೆಯರು ನ್ಯಾಯಾಂಗ ಕ್ಷೇತ್ರದಲ್ಲೂ ಮುಂಚೂಣಿಗೆ ಬರಬೇಕು. ಮೂರು ದಿನಗಳ ಕಾಲ ನಡೆದ ಕಾರ್ಯಾಗಾರವನ್ನು ಎಲ್ಲರೂ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಕಿರಣ್ ಕುಮಾರ್ ಡಿ.ವಡಿಗೇರ, ಸರ್ಕಾರಿ ಅಭಿಯೋಜಕರಾದ ಶಶಾಂಕ್ ಉಪಸ್ಥಿತರಿದ್ದರು. ರಾಜ್ಯ ವಕೀಲರ ಸಂಘದ ಅಧ್ಯಕ್ಷ ವಿಶಾಲ್ ರಘು, ಸದಸ್ಯ ಆರ್.ರಾಜಣ್ಣ, ತಾ. ವಕೀಲರ ಸಂಘದ ಅಧ್ಯಕ್ಷ ಕೆ.ಜಿ ಸದಾನಂದ, ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಾಶ್ , ಹಿರಿಯ ವಕೀಲರಾದ ಲೋಕೇಶ್, ಮಲ್ಲೇಶ್, ಸರ್ವೇಶ್ ಮಾತನಾಡಿದರು. ಸಂಘದ ನಿರ್ಧೇಶಕರಾದ ಪಿ.ಜಿ ಕುಮಾರ್, ಉಮಾದೇವಿ, ಕುಮಾರ್, ಮಂಜುನಾಥ್, ಹಿರಿಯ ನ್ಯಾಯವಾದಿಗಳಾದ ಮಲ್ಲೇಶ್, ಕಲ್ಗುಂಗುಡಿ ಹಿರಿಯಣ್ಣ, ಲೋಕೇಶ್, ಕೆ.ವಿಜಯಕುಮಾರ್, ಆದಿಹಳ್ಳಿ ಲೋಕೆಶ್, ಸಿದ್ದಮಲ್ಲಪ್ಪ, ವೈ.ಬಿ ಚಂದ್ರಶೇಖರಪ್ಪ, ಪ್ರಕಾಶ್, ಶಿವರಾಜ್ ಕೆಂಪುಸಾಗರ, ನಟರಾಜು, ಕೇಶವಮೂರ್ತಿ, ಸುಬ್ರಹ್ಮಣ್ಯ, ಎಚ್.ಎಸ್, ಗೀತಾ, ಶ್ವೇತಾ, ತನುಜಾ, ಪ್ರೀತಿ ಸಿಂಗ್, ಲೇಖನ, ಮಮತ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಸೇರಿದಂತೆ ಹಿರಿಯ ಕಿರಿಯ ವಕೀಲರು ಭಾಗವಹಿಸಿದ್ದರು.