ರಾಜಕೀಯ ಅವಕಾಶ ನಾವೇ ಸೃಷ್ಟಿಸಿಕೊಳ್ಳಬೇಕು

| Published : Mar 28 2024, 12:50 AM IST

ಸಾರಾಂಶ

ಬಡಕುಟುಂಬದಲ್ಲಿ ಹುಟ್ಟಿ ಸಮಾಜದಲ್ಲಿ ಎಷ್ಟೇ ಎತ್ತರಕ್ಕೆ ಬೆಳೆದರೂ ನಮಗೆ ರಾಜಕೀಯವಾಗಿ ಅವಕಾಶಗಳನ್ನು ಯಾರೂ ಕೊಡುವುದಿಲ್ಲ. ನಾವೇ ಸಮಯ, ಸಂದರ್ಭಕ್ಕೆ ಅನುಗುಣವಾಗಿ ಅವಕಾಶಗಳನ್ನು ಸೃಷ್ಠಿ ಮಾಡಿಕೊಳ್ಳಬೇಕು ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಐಎಎಸ್ ಇನ್ಸೈಟ್ಸ್ ಸಂಸ್ಥಾಪಕ ಜಿ.ಬಿ. ವಿನಯಕುಮಾರ್ ಹೊನ್ನಾಳಿಯಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ, ಹೊನ್ನಾಳಿ

ಬಡಕುಟುಂಬದಲ್ಲಿ ಹುಟ್ಟಿ ಸಮಾಜದಲ್ಲಿ ಎಷ್ಟೇ ಎತ್ತರಕ್ಕೆ ಬೆಳೆದರೂ ನಮಗೆ ರಾಜಕೀಯವಾಗಿ ಅವಕಾಶಗಳನ್ನು ಯಾರೂ ಕೊಡುವುದಿಲ್ಲ. ನಾವೇ ಸಮಯ, ಸಂದರ್ಭಕ್ಕೆ ಅನುಗುಣವಾಗಿ ಅವಕಾಶಗಳನ್ನು ಸೃಷ್ಠಿ ಮಾಡಿಕೊಳ್ಳಬೇಕು ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಐಎಎಸ್ ಇನ್ಸೈಟ್ಸ್ ಸಂಸ್ಥಾಪಕ ಜಿ.ಬಿ. ವಿನಯಕುಮಾರ್ ಹೇಳಿದರು.

ತಾಲೂಕಿನ ಹೊಳೆಹರಳಹಳ್ಳಿ ಗ್ರಾಮದ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಮಂಗಳವಾರ ಗ್ರಾಮದ ಮುಖಂಡರನ್ನು ಉದ್ದೇಶಿಸಿ ಅವರು ಮಾತನಾಡಿದರು.

ದೇಶದ ಏಳೆಂಟು ಕಡೆಗಳಲ್ಲಿ ಐಎಎಸ್ ಕೋಚಿಂಗ್ ಸೆಂಟರ್‌ಗಳನ್ನು ತೆರೆದಿದ್ದೆನೆ. ಆ ಮೂಲಕ ಬಡವರು, ಅಸಹಾಯಕರು, ಆಸಕ್ತ ಎಲ್ಲ ಜಾತಿ- ಜನಾಂಗದವರಿಗೆ ಸಹಾಯಹಸ್ತ ಚಾಚಿದ್ದೇನೆ, ಉಚಿತ ತರಬೇತಿಗೆ ವ್ಯವಸ್ಥೆ ಮಾಡಿದ್ದೇನೆ. ಅತ್ಯಂತ ಪ್ರಾಮಾಣಿಕತೆಯಿಂದ ಬೆಳೆದು ಬಂದಿದ್ದೇನೆ ಎಂದರು.

ಸಾಧನೆ, ಪರಿಶ್ರಮದಿಂದಲೇ ನನ್ನ ಹೆಸರು ಕಾಂಗ್ರೆಸ್ ಹೈಕಮಾಂಡ್‍ನ ಆಯ್ಕೆ ಸಮಿತಿಗೆ ಹೋಗಿತ್ತು, ಕೊನೆ ಗಳಿಗೆವರೆಗೂ ನನ್ನ ಹೆಸರು ಇತ್ತು. ಆದರೀಗ ಬೇರೆಯವರ ಹೆಸರು ಘೋಷಣೆಯಾಗಿ, ಗೊಂದಲದಲ್ಲಿದ್ದೇನೆ. ನಿಮ್ಮ ಸಲಹೆ, ಸೂಚನೆ ಪಡೆದು ಮುಂದಿನ ಹೆಜ್ಜೆ ಇಡಲಿದ್ದೇನೆ ಎಂದರು.

30 ವರ್ಷಗಳ ನಂತರ ಹಿಂದುಳಿದ ವರ್ಗದಿಂದ ಬಂದ ನಾನು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದು ತಪ್ಪೇ? ಕ್ಷೇತ್ರದಲ್ಲಿ ಕೇವಲ 2 ಕುಟುಂಬಗಳು ಮಾತ್ರ ಸದಾ ಚಾಲ್ತಿಯಲ್ಲಿವೆ. ಒಮ್ಮೆ ಒಂದು ಕುಟುಂಬ ಸೋತರೆ, ಮತ್ತೊಮ್ಮೆ ಇನ್ನೊಂದು ಕುಟುಂಬ ಗೆಲ್ಲುವ ತಂತ್ರಗಾರಿಕೆ ಇಲ್ಲಿದೆ. ಹಾಗಾದರೆ ಈ ಕ್ಷೇತ್ರದಲ್ಲಿ ಅಹಿಂದ ವರ್ಗದವರು ಬೆಳೆಯಬಾರದೇ? ನಮ್ಮ ಸಮಾಜಮುಖಿ ಕಾರ್ಯಕ್ರಮಗಳನ್ನು ಇಲ್ಲಿ ಮಾಡಬಾರದೇ? ಅದಕ್ಕೆ ಅವಕಾಶ ಕೇಳುವುದು ತಪ್ಪೇ ಎಂದು ಬಿಜಿವಿ ಪ್ರಶ್ನಿಸಿದರು.

ಹೊಳೆಹರಳಹಳ್ಳಿ ಗ್ರಾಮ ಸೇರಿದಂತೆ ಹತ್ತಾರು ಗ್ರಾಮಗಳಲ್ಲಿ 100ರಿಂದ 150 ಮತಗಳನ್ನು ಹಾಕಿಸುವ ಭರವಸೆ ನೀಡಿರುವುದು ವಿಶ್ವಾಸ ಹೆಚ್ಚಿಸಿದೆ. ಎಂಟ್ಹತ್ತು ದಿನಗಳಲ್ಲಿ ಮತದಾರರ ಅಭಿಪ್ರಾಯ ಸಂಗ್ರಹ ಆಧಾರದ ಮೇಲೆ ನನ್ನ ಗಟ್ಟಿ ನಿರ್ಧಾರ ತಿಳಿಸುತ್ತೇನೆ. ಒಂದುವೇಳೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾದರೆ ಕ್ಷೇತ್ರದ ಎಲ್ಲ ಗ್ರಾಮಗಳ ಮತದಾರರು, ಅಭಿಮಾನಿಗಳ ಅನಿಸಿಕೆ ಸಂಗ್ರಹಿಸಿ ಕೊನೆಯಲ್ಲಿ ನಿರ್ಧಾರ ತೆಗೆದುಕೊಳ್ಳುವುದಾಗಿ ವಿನಯಕುಮಾರ್‌ ತಿಳಿಸಿದರು.

ವಿನಯ್‍ಕುಮಾರ್ ಹೋದಲೆಲ್ಲಾ ನೂರಾರು ಜನರು ಅವರನ್ನು ಸನ್ಮಾನಿಸಿ ಗೌರವಿಸಿ, ಆಧರಿಸುತ್ತಿದ್ದ ರೀತಿ ಎಲ್ಲೆಡೆ ಕಂಡುಬಂತು.

- - -

ಟಾಪ್‌ ಕೋಟ್‌ ಕಾಂಗ್ರೆಸ್ ಪಕ್ಷದ ಯಾರನ್ನು ವಿರೋಧಿಸುತ್ತಿಲ್ಲ. ಆದರೆ, ನನಗೆ ಅವಕಾಶಗಳ ಕೊಡಿ ಎಂದು ಕೇಳುತ್ತಿದ್ದೇನೆ. ಕಾಂಗ್ರೆಸ್ ಪಕ್ಷ ಎಲ್ಲ ವರ್ಗದ ಹಿತಾಸಕ್ತಿ ಬಯಸುತ್ತಿರುವುದರಿಂದ ಅದನ್ನು ಒಪ್ಪಿಕೊಂಡು ಬಂದಿದ್ದೇನೆ. ಇನ್ನೂ ಸಮಯವಿದೆ, ಅಲ್ಲಿಯವರೆಗೂ ಜನಾಭಿಪ್ರಾಯಗಳನ್ನು ಕೇಳಿ, ಒಂದು ನಿರ್ಧಾರಕ್ಕೆ ಬರಬೇಕಾಗಿದೆ

- ಜಿ.ಬಿ.ವಿನಯಕುಮಾರ್‌, ಕಾಂಗ್ರೆಸ್‌ ಟಿಕೆಟ್‌ ವಂಚಿತ

- - -

-26ಎಚ್.ಎಲ್.ಐ2:

ಹೊಳೆಹರಳಹಳ್ಳಿ ಗ್ರಾಮದಲ್ಲಿ ಮತದಾರರನ್ನು ಉದ್ದೇಶಿಸಿ ಕಾಂಗ್ರೆಸ್ ಟಿಕೆಟ್ ವಂಚಿತ ಜಿ.ಬಿ. ವಿನಯಕುಮಾರ್ ಮಾತನಾಡಿದರು.