ಕನ್ನಡಪ್ರಭ ವಾರ್ತೆ ಪಾಂಡವಪುರ

ದೇಶದ ಅಡಿಪಾಯವಾಗಿರುವ ಸಂವಿಧಾನದ ಅಡಿ ನಾವೆಲ್ಲರೂ ಬದುಕು ನಡೆಸಬೇಕು ಎಂದು ಸಿವಿಲ್ ನ್ಯಾಯಾಧೀಶರಾದ ಎನ್.ದೀಪಿಕಾ ಹೇಳಿದರು.

ಪಟ್ಟಣದ ಟಿಎಪಿಸಿಎಂಎಸ್ ರೈತ ಸಭಾಂಗಣದಲ್ಲಿ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆಯೋಜಿಸಿದ್ದ ಶೈಕ್ಷಣಿಕ ಸಾಲಿನ ಸಾಂಸ್ಕೃತಿಕ, ರಾಷ್ಟ್ರೀಯ ಸೇವಾ ಯೋಜನೆ, ಕ್ರೀಡಾ, ಯುವ ರೆಡ್‌ಕ್ರಾಸ್, ರೇಂಜರ್ಸ್ ಮತ್ತು ರೋವರ್ಸ್ ಘಟಕಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಸಂವಿಧಾನದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ಸಾಕಷ್ಟು ಅವಕಾಶ, ಅನುಕೂಲಗಳನ್ನು ಕಲ್ಪಿಸಿಕೊಟ್ಟಿವೆ. ಹಾಗಾಗಿ ಪ್ರತಿಯೊಬ್ಬ ವಿದ್ಯಾರ್ಥಿಗಳು ಸಂವಿಧಾನವನ್ನು ಅಧ್ಯಯನ ಮಾಡಿ ಅವರ ಆಶಯಗಳ ಬಗ್ಗೆ ಅರಿವು ಮೂಡಿಸಿಕೊಳ್ಳಬೇಕು ಎಂದರು.

ನಮ್ಮೊಡನೆ ಒಳ್ಳೆಯ ಗುರು ಇದ್ದರೆ ನಾವು ಗುರಿ ತಲುಪಲು ಕಷ್ಟವಾಗುವುದಿಲ್ಲ. ಹಾಗಾಗಿ ಪ್ರತಿಯೊಬ್ಬ ವಿದ್ಯಾರ್ಥಿಗಳು ಸಹ ಓದಿನ ದಿನಗಳಲ್ಲಿ ಮತ್ತು ಓದು ಮುಗಿದ ನಂತರವು ಸಹ ಗುರು, ಅಧ್ಯಾಪಕರೊಂದಿಗೆ ಉತ್ತಮ ಸಂಬಂಧ, ಬಾಂಧವ್ಯ ಹೊಂದಿರಬೇಕು. ಕಷ್ಟದ ಸನ್ನಿವೇಶಗಳನ್ನು ಧೈರ್ಯವಾಗಿ ಎದುರಿಸಿ ಮುನ್ನಡೆದರೆ ಗುರಿ ತಲುಪಲು ಸಾಧ್ಯವಾಗುತ್ತದೆ ಎಂದರು.


ಗಣಿತಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕಿ ಜಿ.ಬಿ.ಪವಿತ್ರ ಮಾತನಾಡಿ, ಓದಿನ ದಿನಗಳಲ್ಲಿ ಸಿಕ್ಕಂತಹ ಅವಕಾಶಗಳನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಬೇಕು, ಒಂದು ವೇಳೆ ಅವಕಾಶವನ್ನು ಕಳೆದುಕೊಂಡರೆ ಮತ್ತೆ ಅವಕಾಶಗಳು ದೊರೆಯುವುದಿಲ್ಲ ಎಂದರು.

ಗುರಿ ಸಾಧನೆಗಾಗಿ ಹಠ, ಛಲದೊಂದಿಗೆ ಮುನ್ನಡೆದರೆ ಜೀವನದಲ್ಲಿ ಖಂಡಿತ ಯಶಸ್ಸು ದೊರೆಯುತ್ತದೆ. ನಿರಂತರವಾಗಿ ಅಧ್ಯಾಪಕರ ಸಂಪರ್ಕ ಹೊಂದಿ ಸಲಹೆ ಪಡೆದುಕೊಳ್ಳಬೇಕು. ನಮ್ಮ ಕಾಲೇಜಿನ ಹಿರಿಯ ವಿದ್ಯಾರ್ಥಿನಿ ದೀಪಿಕಾ ಅವರು ವಿಜ್ಞಾನ ವಿಷಯದಲ್ಲಿ ಪದವಿ ಮುಗಿಸಿ ಬಳಿಕ ಕಾನೂನು ಪದವಿ ಮಾಡಿ ನ್ಯಾಯಾಧೀಶರಾಗಿರುವುದು ಕಾಲೇಜಿಗೆ ಕೀರ್ತಿ ವಿಷಯವಾಗಿದೆ ಎಂದರು.

ಪತ್ರಕರ್ತರ ಸಂಘದ ಅಧ್ಯಕ್ಷ ಚನ್ನಮಾದೇಗೌಡ ಮಾತನಾಡಿ, ಸ್ಪರ್ಧಾತ್ಮಕ ಜಗತ್ತಿನಲ್ಲಿ ಪದವಿ ಎನ್ನುವುದು ವಿದ್ಯಾರ್ಥಿಗಳಿಗೆ ಬಹುಮುಖ್ಯ ಘಟ್ಟ. ಇಲ್ಲಿ ಶ್ರಮಪಟ್ಟು ಓದಿದರೆ ಮುಂದೆ ಅವರ ಭವಿಷ್ಯರೂಪಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದರು.

ಇದೇ ವೇಳೆ ಹಲವು ಕ್ರೀಡೆ ಮತ್ತು ಸಾಂಸ್ಕೃತಿಕ ಚಟುಚಟಿಕೆ ಹಾಗೂ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಬಳಿಕ ಕಾಲೇಜು ವಿದ್ಯಾರ್ಥಿಗಳಿಂದ ಹಲವು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

ಸಮಾರಂಭದಲ್ಲಿ ಅರ್ಥಶಾಸ್ತ್ರ ವಿಭಾದ ಮುಖ್ಯಸ್ಥ ಡಾ.ಎಂ.ಸಿ.ರಮೇಶ್ ಅಧ್ಯಕ್ಷತೆ ವಹಿಸಿದ್ದರು, ಮಂಡ್ಯ ವಿವಿ ರಾಷ್ಟ್ರೀಯ ಸೇವಾ ಯೋಜನೆ ಸಂಯೋಜನಾಧಿಕಾರಿ ಪ್ರಮೀಳಾ, ಸಾಂಸ್ಕೃತಿಕ ಮತ್ತು ಎನ್‌ಎಸ್‌ಎಸ್ ಸಂಚಾಲಕ ಡಾ.ಶಂಕರ್ ಎಸ್.ಎಲ್., ದೈಹಿಕ ಶಿಕ್ಷಣ ನಿರ್ದೇಶಕ ಡಾ.ಶ್ರೀನಿವಾಸ್ ವಿ., ಐಕ್ಯೂಎಸಿ ಘಟಕ ಸಂಚಾಲಕ ಡಾ.ತ್ರಿಣೇಶ್, ಯುವ ರೆಡ್‌ಕ್ರಾಸ್ ಸಮಿತಿ ಸಂಚಾಲಕ ಡಾ.ರವಿಕುಮಾರ್, ರೇಂಜರ್ಸ್ ಸಂಚಾಲಕಿ ಆಶಾರಾಣಿ ವಿ., ರಾಜ್ಯಶಾಸ್ತ್ರ ಉಪನ್ಯಾಕ ಕೆ.ಸಿ.ಪುಟ್ಟರಾಮೇಗೌಡ ಸೇರಿದಂತೆ ಉಪನ್ಯಾಸಕರು, ಸಿಬ್ಬಂದಿ ಹಾಜರಿದ್ದರು.