ಕನ್ನಡಪ್ರಭ ವಾರ್ತೆ ಪಾಂಡವಪುರ
ಮೌಢ್ಯತೆ, ಅಜ್ಞಾನ, ಅಂಧಕಾರಗಳು ಹೆಣ್ಣನ್ನು ಬಂಧಿಸಿವೆ. ಎಲ್ಲ ಕಟ್ಟುಪಾಡುಗಳು, ಬಂಧನಗಳು ಹೆಣ್ಣಿನ ಮೇಲೆ ಏಕೆ ಎಂಬುದನ್ನು ನಾವೆಲ್ಲರೂ ಗಂಭೀರವಾಗಿ ಚರ್ಚಿಸಬೇಕಿದೆ ಎಂದು ಚಲನಚಿತ್ರ ನಟಿ, ಫಿಲಂಫೇರ್ ಪ್ರಶಸ್ತಿ ಪುರಸ್ಕೃತೆ ಅಕ್ಷತಾ ಪಾಂಡವಪುರ ಹೇಳಿದರು.ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ತಿನ ಭವನದಲ್ಲಿ ಕಸಾಪ, ಮಕ್ಕಳ ಸಾಹಿತ್ಯ ಪರಿಷತ್ತು ಹಾಗೂ ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ಆಶ್ರಯದಲ್ಲಿ ಫಿಲಂಫೇರ್ ಪ್ರಶಸ್ತಿ ಲಭಿಸಿದ ಹಿನ್ನೆಲೆ ನೀಡಿದ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ರಂಗಭೂಮಿ ಅಥವಾ ಚಲನಚಿತ್ರವಾಗಲಿ ನಿರ್ದೇಶಕನೇ ನಿಜವಾದ ನಾಯಕ. ಇವತ್ತು ಅಭಿನಯದ ನಡುವೆ ಗ್ಲಾಮರ್ ಕೂಡ ಮುಖ್ಯವಾಗಿ. ಪಾತ್ರ ಯಾವುದೇ ಆಗಲಿ ಗಟ್ಟಿತನ ಮುಖ್ಯ. ರಂಗಭೂಮಿಯಿಂದ ಬಂದ ನಟ, ನಟಿಯರಲ್ಲಿ ನಟನೆಯ ಗಟ್ಟಿತನವಿದೆ ಎಂದರು.ನಟನೆಗೆ ಸಾಹಿತ್ಯ ಸಂಸ್ಕೃತಿ, ರಂಗಭೂಮಿ, ಚಿತ್ರರಂಗದ ಇತಿಹಾಸದ ಓದು ಗಂಭೀರತೆಯನ್ನು ತಂದು ಕೊಡುತ್ತದೆ. ಸಾಹಿತ್ಯ ಮತ್ತು ರಂಗಭೂಮಿ ಒದಕ್ಕೊಂದು ಅವಿನಾಭಾವ ಸಂಬಂಧವಿದೆ. ಜನರು ನಮ್ಮ ನಟನೆಯನ್ನು ನೋಡಿ ಶಭಾಷ್ ಗಿರಿ ಕೊಡುವುದೇ ನಿಜವಾದ ಪ್ರಶಸ್ತಿ ಎಂದರು.
ಪಾಂಡವಪುರದ ನೆಲ ನನ್ನನ್ನು ರಂಗಭೂಮಿ ಕಲಾವಿದೆಯಾಗಿ ಬೆಳೆಸಿದೆ. ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯರನ್ನು ನೀಡಿದ ಈ ನೆಲದ ಮೇಲೆ ನನಗೆ ಅಪಾರ ಅಭಿಮಾನ ಮತ್ತು ಗೌರವವಿದೆ. ನಾನೀಗ ಚಲನಚಿತ್ರ ನಟಿಯಾಗಿ ಒಂದಿಷ್ಟು ಹೆಸರು ಮಾಡಿದರೂ ನನಗೆ ರಂಗಭೂಮಿಯಲ್ಲಿರುವ ಪ್ರೀತಿ, ಗೌರವ, ಆಸಕ್ತಿ ಕಿಂಚಿತ್ತೂ ಕಡಿಮೆಯಾಗಿಲ್ಲ. ನಟನೆಯ ತಾಯಿ ಬೇರು ರಂಗಭೂಮಿಯಾಗಿದೆ ಎಂದರು.
ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ಪಟ್ಟಣದಲ್ಲಿ ರಂಗಮಂದಿರ ನಿರ್ಮಾಣ ಸಂಬಂಧ ಸರ್ಕಾರದೊಂದಿಗೆ ಚರ್ಚಿಸಿದ್ದು, ಸಂಬಂಧಪಟ್ಟ ಸಚಿವರು ಅನುದಾನ ಬಿಡುಗಡೆ ಮಾಡಲು ಒಪ್ಪಿದ್ದಾರೆ. ಜಾಗವನ್ನು ಈಗಾಗಲೇ ಅಂತಿಮಗೊಳಿಸಲಾಗಿದೆ. ಇಷ್ಟರಲ್ಲಿಯೇ ಜನರ ಆಶಯ ನೆರವೇರಲಿದೆ ಎಂದರು.
ಮಾಜಿ ಶಾಸಕ ಸಿ.ಎಸ್.ಪುಟ್ಟರಾಜು ಮಾತನಾಡಿ, ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ಕಲಾವಿದೆ ಅಕ್ಷತಾ ನಮ್ಮೂರಿನ ಹೆಣ್ಣುಮಗಳು ಎಂಬುದೇ ನಮ್ಮೆಲ್ಲರ ಹೆಮ್ಮೆ. ಅಕ್ಷತಾ ಅವರಿಗೆ ಎಲ್ಲ ರೀತಿಯ ಬೆಂಬಲ, ಸಹಕಾರ ನೀಡಲಾಗುವುದು ಎಂದರು.ಇದೇ ವೇಳೆ ನಟಿ ಅಕ್ಷತಾರಿಗೆ ಮೈಸೂರು ಪೇಟ ತೊಡಿಸಿ ಹೂಹಾರ ಹಾಕಿ ಸನ್ಮಾನಿಸಲಾಯಿತು. ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ಮಕ್ಕಳ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಎಚ್.ಆರ್.ಧನ್ಯಕುಮಾರ್, ಕಸಾಪ ತಾಲೂಕು ಅಧ್ಯಕ್ಷ ಮೇನಾಗರ ಪ್ರಕಾಶ್, ಚಲನಚಿತ್ರ ನಿರ್ದೇಶಕಿ ಚಂಪಕ ಶೆಟ್ಟಿ, ನಟರಾದ ಪ್ರಕಾಶ್ ಪಿ.ಶೆಟ್ಟಿ, ನಟನ ಮಂಜು ಇತರರು ಇದ್ದರು.
ನಂತರ ಫಿಲಂಫೇರ್ ಪ್ರಶಸ್ತಿ ವಿಜೇತ ಚಲನ ಚಿತ್ರ ‘ಕೋಳಿ ಎಸ್ರು’ ಚಿತ್ರ ಪ್ರದರ್ಶನಗೊಂಡಿತು. ಬಳಿಕ ಚಲನಚಿತ್ರದ ಸಂಬಂಧ ಸಂವಾದ ನಡೆಯಿತು.