ಕನ್ನಡಪ್ರಭ ವಾರ್ತೆ ಹಾಸನ

ಶಿಕ್ಷಣ ಸಂಸ್ಥೆಗಳಲ್ಲಿ ಧಾರ್ಮಿಕ ಆಚರಣೆ ಹೆಸರಿನಲ್ಲಿ ಹಿಜಾಬ್‌ಗೆ ಅನುಮತಿ ನೀಡುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ವ ಶ್ರೀರಾಮ ಸೇನಾ ಸಂಘಟನೆ, ಸಮವಸ್ತ್ರ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ಒತ್ತಾಯಿಸಿ ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.ಶ್ರೀರಾಮ ಸೇನಾ ರಾಜ್ಯ ದಕ್ಷಿಣ ಪ್ರಾಂತ್ಯ ಸಹ ಕಾರ್ಯದರ್ಶಿ ಜಾನೆಕೆರೆ ಹೇಮಂತ್ ಮಾತನಾಡಿ, ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆ, ಶಿಸ್ತು ಹಾಗೂ ಏಕತೆಯನ್ನು ಕಾಪಾಡುವ ಉದ್ದೇಶದಿಂದ ಜಾರಿಗೆ ಬಂದಿರುವ ಸಮವಸ್ತ್ರ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ಸರ್ಕಾರವನ್ನು ಆಗ್ರಹಿಸಿದರು. ಮನವಿಯಲ್ಲಿ 2022ರಲ್ಲಿ ಕರ್ನಾಟಕ ಹೈಕೋರ್ಟ್ ನೀಡಿದ ಮಹತ್ವದ ತೀರ್ಪನ್ನು ಉಲ್ಲೇಖಿಸಲಾಗಿದೆ. ಹಿಜಾಬ್ ಸಮವಸ್ತ್ರದ ಅವಿಭಾಜ್ಯ ಅಂಗವಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿರುವ ಹಿನ್ನೆಲೆಯಲ್ಲಿ, ಮತ್ತೆ ಹಿಜಾಬ್‌ಗೆ ಅವಕಾಶ ನೀಡಲು ಮುಂದಾಗಿರುವುದು ನ್ಯಾಯಾಂಗದ ತೀರ್ಪಿನ ಆತ್ಮಕ್ಕೆ ವಿರುದ್ಧವಾಗಿದೆ ಎಂದರು. ಒಮ್ಮೆ ನ್ಯಾಯಾಲಯ ಸ್ಪಷ್ಟ ನಿಲುವು ವ್ಯಕ್ತಪಡಿಸಿರುವ ಸಂದರ್ಭದಲ್ಲಿ ಅದನ್ನು ಕಡೆಗಣಿಸಿ ಹೊಸ ರೀತಿಯ ಅನುಮತಿಗಳಿಗೆ ಅವಕಾಶ ನೀಡುವುದು ಗೊಂದಲಕ್ಕೆ ಕಾರಣವಾಗಬಹುದು.ಎಸ್‌ಡಿಎಂಸಿ ಹಕ್ಕಿಗೆ ಧಕ್ಕೆ: ಶಾಲೆ ಮತ್ತು ಕಾಲೇಜುಗಳ ಸಮವಸ್ತ್ರ, ಶಿಸ್ತು ಹಾಗೂ ಆಡಳಿತ ಸಂಬಂಧಿತ ವಿಚಾರಗಳನ್ನು ನಿರ್ಧರಿಸುವ ಅಧಿಕಾರ ಎಸ್‌ಡಿಎಂಸಿ ಹಾಗೂ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳಿಗೆ ಸೇರಿದೆ. ಸರ್ಕಾರ ನೇರವಾಗಿ ಮಧ್ಯಪ್ರವೇಶಿಸುವುದು ಈ ಸಮಿತಿಗಳ ಅಧಿಕಾರವನ್ನು ದುರ್ಬಲಗೊಳಿಸುವಂತಾಗಿದೆ ಎಂದು ದೂರಿದರು.ಸಮವಸ್ತ್ರ ಎಂಬುದು ಕೇವಲ ಉಡುಪು ಮಾತ್ರವಲ್ಲ. ಅದು ವಿದ್ಯಾರ್ಥಿಗಳಲ್ಲಿ ಏಕತೆಯ ಭಾವನೆ ಬೆಳೆಸುವ ಸಾಧನವಾಗಿದೆ. ವಿದ್ಯಾರ್ಥಿಗಳ ನಡುವೆ ಧರ್ಮ, ಜಾತಿ ಹಾಗೂ ಆರ್ಥಿಕ ಅಸಮಾನತೆ ಗೋಚರಿಸದಂತೆ ಮಾಡುವ ಉದ್ದೇಶದಿಂದಲೇ ದೇಶದಲ್ಲಿ ಸಮವಸ್ತ್ರ ಪದ್ಧತಿ ಜಾರಿಗೆ ತರಲಾಯಿತು ಎಂದು ಮನವಿಯಲ್ಲಿ ಹೇಳಲಾಗಿದೆ.ಹಿಜಾಬ್‌ಗೆ ಅನುಮತಿ ನೀಡುವ ವಿಚಾರದ ಹಿಂದೆ ರಾಜಕೀಯ ದುರುದ್ದೇಶವಿದೆ ಎಂಬ ಅನುಮಾನ ಸಾರ್ವಜನಿಕರಲ್ಲಿ ಮೂಡಿದೆ. ಕೇವಲ ಮುಸ್ಲಿಂ ಸಮುದಾಯವನ್ನು ತೃಪ್ತಿಪಡಿಸುವ ನಿಟ್ಟಿನಲ್ಲಿ ಸರ್ಕಾರ ನಡೆದುಕೊಳ್ಳುತ್ತಿದೆ ಎಂಬ ಅಭಿಪ್ರಾಯವೂ ವ್ಯಕ್ತಪಡಿಸಿದರು. ಶಿವದಾರ, ಜನಿವಾರ ವಿಚಾರ ಪ್ರಸ್ತಾಪಕೆಲವು ವಲಯಗಳು ಶಿವಧಾರ, ಜನಿವಾರ, ರುದ್ರಾಕ್ಷಿ ಮುಂತಾದ ಆಚರಣೆಗಳನ್ನು ಹಿಜಾಬ್ ವಿಚಾರಕ್ಕೆ ಹೋಲಿಕೆ ಮಾಡುತ್ತಿರುವುದು ಸರಿಯಲ್ಲ. ಇವು ವೈಯಕ್ತಿಕ ಧಾರ್ಮಿಕ ಆಚರಣೆಗಳಾಗಿದ್ದು, ಸಾಮಾನ್ಯವಾಗಿ ಬಟ್ಟೆಯ ಒಳಭಾಗದಲ್ಲಿ ಧರಿಸಲಾಗುತ್ತದೆ. ಸಮವಸ್ತ್ರದ ಹೊರಾಂಗಣ ನಿಯಮಗಳಿಗೆ ಅವುಗಳಿಗೆ ಯಾವುದೇ ಸಂಬಂಧವಿಲ್ಲ ಎಂದರು.ರಾಜ್ಯದ ಶಾಂತಿ, ಶಿಕ್ಷಣ ವ್ಯವಸ್ಥೆಯ ಶಿಸ್ತು ಹಾಗೂ ವಿದ್ಯಾರ್ಥಿಗಳ ಏಕತೆಯ ಹಿತದೃಷ್ಟಿಯಿಂದ ಸರ್ಕಾರ ಈ ಕುರಿತು ಯಾವುದೇ ಸಡಿಲಿಕೆ ನೀಡಬಾರದು. ಈಗಾಗಲೇ ಹೊರಡಿಸಿರುವ ಸುತ್ತೋಲೆ ಅಥವಾ ಪ್ರಸ್ತಾವನೆಗಳಿದ್ದರೆ ಅವುಗಳನ್ನು ತಕ್ಷಣ ಹಿಂಪಡೆಯಬೇಕು ಎಂದು ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಮನವಿ ಸಲ್ಲಿಸುವ ಸಂದರ್ಭದಲ್ಲಿ ಶ್ರೀರಾಮಸೇನೆಯ ಧರ್ಮ ನಾಯಕ್, ಮಹೇಶ್ ಬಾಗಲಕೋಟೆ, ಜಗದೀಶ್, ದರ್ಶನ್, ಮಂಜುನಾಥ್, ಉಮೇಶ್, ಸಾಹಿತಿ ಶ್ರೀಮತಿ ಪ್ರತಿಮಾ ಸೇರಿದಂತೆ ಹಲವು ಮುಖಂಡರು ಮತ್ತು ಕಾರ್ಯಕರ್ತರು ಇದ್ದರು.