ಸಾರಾಂಶ
ಧಾರವಾಡ: ಕನ್ನಡ ನಾಡು- ನುಡಿಗೋಸ್ಕರ ಜನ್ಮ ತಾಳಿದ ಕರ್ನಾಟಕ ವಿದ್ಯಾವರ್ಧಕ ಸಂಘವನ್ನು ಕಳೆದ 3 ವರ್ಷಗಳ ಕಾಲ ಸಮರ್ಥವಾಗಿ ನಡೆಸಿದ್ದು, ಬೌದ್ಧಿಕ ಹಾಗೂ ಭೌತಿಕವಾಗಿ ಬದಲಾಯಿಸಿದ್ದೇವೆ ಎಂದು ಚಂದ್ರಕಾಂತ ಬೆಲ್ಲದ ನೇತೃತ್ವದ ಗುಂಪು ಪ್ರತಿಪಾದಿಸಿತು.
ಮೇ 25ರಂದು ನಡೆಯಲಿರುವ ಕರ್ನಾಟಕ ವಿದ್ಯಾವರ್ಧಕ ಸಂಘದ ತ್ರೈವಾರ್ಷಿಕ ಚುನಾವಣೆ ಹಿನ್ನೆಲೆಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಚಂದ್ರಕಾಂತ ಬೆಲ್ಲದ ನೇತೃತ್ವದ ಗುಂಪಿನ ಪರವಾಗಿ ಕಾರ್ಯಾಧ್ಯಕ್ಷ ಸ್ಥಾನದ ಅಭ್ಯರ್ಥಿ ಡಾ. ಬಸವಪ್ರಭು ಹೊಸಕೇರಿ, ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ಡಾ. ಸಂಜೀವ ಕುಲಕರ್ಣಿ ಹಾಗೂ ಪ್ರಧಾನ ಕಾರ್ಯದರ್ಶಿ ಅಭ್ಯರ್ಥಿ ಶಂಕರ ಹಲಗತ್ತಿ, ಈ ಹಿಂದಿನ ಆಡಳಿತ ಮಂಡಳಿಯೇ ಬಹುತೇಕ ಮರು ಸ್ಪರ್ಧೆ ಮಾಡಿದ್ದು, ತಾವು ಮೂರು ವರ್ಷಗಳ ಕಾಲ ಮಾಡಿದ ಶೈಕ್ಷಣಿಕ, ಸಾಂಸ್ಕೃತಿಕ, ಭೌತಿಕ ಕಾರ್ಯಗಳ ದಾಖಲೆಯು ಸಾಮಾಜಿಕ ಮಾಧ್ಯಮದಲ್ಲಿ ಲಭ್ಯವಿದೆ. ಆಡಳಿತ ಮಂಡಳಿಯು ಬರೀ ದತ್ತಿಗೆ ಮಾತ್ರ ಸೀಮಿತ, ನಿಷ್ಕ್ರಿಯ ಎಂದು ಆರೋಪಿಸಿರುವ ಎದುರು ಗುಂಪಿನ ಅಭ್ಯರ್ಥಿಗಳು ನೋಡಿಕೊಳ್ಳಲಿ ಎಂದು ಟಾಂಗ್ ನೀಡಿದರು.ಯುವ ಸಮ್ಮೇಳನ, ನಾಡು ಕಟ್ಟಿರುವ ಮಹನೀಯರ ಜನ್ಮಶತಮಾನೋತ್ಸವ, ಹಳೆಗನ್ನಡ ಕಾವ್ಯ ರಸಸ್ವಾದ (25 ಸರಣಿ ಉಪನ್ಯಾಸ), ನಾಥ ಪಂಥಗಳು (ಐದು ಉಪನ್ಯಾಸಗಳು), ಸಂತಾನೋತ್ಪತ್ತಿ ವಿಸ್ಮಯಗಳು ಗೋಷ್ಠಿ, ಜುಲೈ 20ರಂದು ಸಂಸ್ಥಾಪನಾ ದಿನ ಅಂಗವಾಗಿ ಕಲೆ, ಸಾಂಸ್ಕೃತಿಕ, ನಾಟಕಗಳು, ನವೆಂಬರ್ ಇಡೀ ತಿಂಗಳು ರಾಜ್ಯೋತ್ಸವ ನಿಮಿತ್ತ ರಂಗಚಿಂತನೆ, ರಂಗಸನ್ಮಾನ, ನಾಟಕೋತ್ಸವ, ಸಾಹಿತ್ಯಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದೇವೆ. ಈ ಎಲ್ಲ ಕಾರ್ಯಕ್ರಮಗಳನ್ನು ಶಿಸ್ತು ಹಾಗೂ ಸಮಯಪಾಲನೆ ಮೂಲಕ ಮಾಡಿದ್ದೇವೆ ಎಂದರು.
ಸಂಘದ ಆವರಣದಲ್ಲಿ ಸಿರಿಗನ್ನಡ ಪುಸ್ತಕ ಮಳಿಗೆ ಸ್ಥಾಪನೆ, ಕಲಾ ಗ್ಯಾಲರಿ ನಿರ್ಮಾಣ, ಕನ್ನಡ ಅಂಕಿಗಳುಳ್ಳ ದಿನದರ್ಶಿಕೆ, 20 ಸಾವಿರ ಪುಸ್ತಕಗಳ ಸಂಗ್ರಹದ ಸುಸಜ್ಜಿತ ಗ್ರಂಥಾಲಯ ನಿರ್ಮಾಣ, ಎಸ್ಸೆಸ್ಸೆಲ್ಸಿ ಫಲಿತಾಂತ ಸುಧಾರಣೆಗೆ 72 ಪ್ರೌಢಶಾಲೆಗಳಲ್ಲಿ ಭಯಮುಕ್ತ ಪರೀಕ್ಷೆ ಎದುರಿಸಿ ಕಾರ್ಯಕ್ರಮ, ವಾಗ್ಭೂಷಣ ಪತ್ರಿಕೆ ಮರು ಆರಂಭ, ಒಳನಾಡು- ಹೊರನಾಡು ಹಾಗೂ ಗಡಿನಾಡುಗಳಲ್ಲಿ ಕನ್ನಡದ ಕಾರ್ಯಕ್ರಮಗಳನ್ನು ಸಹ ಮಾಡಲಾಗಿದೆ. ದತ್ತಿ ಕಾರ್ಯಕ್ರಮಗಳಿಗೆ ಹೊಸ ರೂಪ ನೀಡಲಾಗಿದೆ. ಖ್ಯಾತನಾಮರ ಹೆಸರಿನ ಪ್ರಶಸ್ತಿಗಳನ್ನು ಇರಿಸಲಾಗಿದೆ. ಜತೆಗೆ ಸಂಘಕ್ಕೆ ಐದು ಎಕರೆ ಜಾಗ ನೀಡುತ್ತೇವೆ ಎಂದು ರಾಜ್ಯ ಸರ್ಕಾರ ಹೇಳಿದ್ದು, ಈ ಕುರಿತು ಪ್ರಯತ್ನ ನಡೆಯುತ್ತಿದೆ ಎಂದು ಮೂರು ವರ್ಷಗಳ ಸಾಧನೆ ಪಟ್ಟಿ ನೀಡಿದರು.ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಚಂದ್ರಕಾಂತ ಬೆಲ್ಲದ, ಖಜಾಂಚಿ ಅಭ್ಯರ್ಥಿ ಸತೀಶ ತುರಮರಿ, ಕಾರ್ಯಕಾರಿ ಸಮಿತಿ ಅಭ್ಯರ್ಥಿಗಳಾದ ವಿಶ್ವೇಶ್ವರಿ ಹಿರೇಮಠ, ಡಾ. ಧನವಂತ ಹಾಜವಗೋಳ, ವೀರಣ್ಣ ಒಡ್ಜೀನ, ಡಾ. ಶೈಲಜಾ ಅಮರಶೆಟ್ಟಿ, ಗುರು ಹಿರೇಮಠ, ಪ್ರೊ. ಮಹೇಶ ಹೊರಕೇರಿ ಹಾಗೂ ಶಿವಾನಂದ ಭಾವಿಕಟ್ಟಿ ಇದ್ದರು.
ತಿಳಿವಳಿಕೆಯಿಂದ ಟೀಕಿಸಲಿ: ನಮ್ಮ ಆಡಳಿತ ಟೀಕಿಸಿರುವುದನ್ನು ಸ್ವಾಗತಿಸುತ್ತೇವೆ. ಸಂಘಕ್ಕೆ ಅನುದಾನ ತರುವ ವಿಷಯವಾಗಿ ಟೀಕಿಸಿದ್ದು ತಿಳಿವಳಿಕೆ ಇಲ್ಲದವರು ಎಂದೆನ್ನಬಹುದು. ಸಂಘಕ್ಕೆ ಅನುದಾನ ತರುವುದೇ ದೊಡ್ಡ ಕೆಲಸವಲ್ಲ. ಸಾಧ್ಯವಾದಷ್ಟು ಪರಿಸ್ಥಿತಿ ಅನುಗುಣವಾಗಿ ವಾರ್ಷಿಕವಾಗಿ ₹65 ಲಕ್ಷ ಅನುದಾನ ತಂದಿದ್ದು, ಇದ್ದ ಅನುದಾನದಲ್ಲಿಯೇ ಅಚ್ಚುಕಟ್ಟಾಗಿ ಕಾರ್ಯಕ್ರಮ ಮಾಡಿದ್ದೇವೆ ಎಂದು ಬೆಲ್ಲದ ಗುಂಪಿನ ಅಭ್ಯರ್ಥಿಗಳು ವಿರೋಧಿ ಗುಂಪನ್ನು ತರಾಟೆಗೆ ತೆಗೆದುಕೊಂಡಿತು.ಜನ ಉತ್ತರ ನೀಡುತ್ತಾರೆ: ಯಾರಿಗೆ ವಯಸ್ಸಾಗಿದೆ, ಯಾರು ಕ್ರಿಯಾಶೀಲರಾಗಿದ್ದಾರೆ ಎಂಬುದನ್ನು ಕರ್ನಾಟಕ ವಿದ್ಯಾವರ್ಧಕ ಸಂಘದ ಮತದಾರರು ಚುನಾವಣೆಯಲ್ಲಿ ಉತ್ತರ ನೀಡುತ್ತಾರೆ ಎಂದು ಚಂದ್ರಕಾಂತ ಬೆಲ್ಲದ ಅವರಿಗೆ ವಯಸ್ಸಾಗಿದೆ. ಚುನಾವಣೆಯಿಂದ ಹಿಂದೆ ಸರಿಯಲಿ ಎಂದಿರುವ ಸಂಘದ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಮೋಹನ ಲಿಂಬಿಕಾಯಿ ಅವರಿಗೆ ಚಂದ್ರಕಾಂತ ಬೆಲ್ಲದ ತಿರುಗೇಟು ನೀಡಿದರು.