ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಸ್ವರ್ಗದಂತಹ ಭೂಮಿಯನ್ನು ನಾವಿಂದು ನರಕವನ್ನಾಗಿಸಿ ಅದರೊಳಗೆ ಬದುಕುತ್ತಿದ್ದೇವೆ ಎಂದು ಕೃಷಿ ವಿಶ್ವವಿದ್ಯಾಲಯದ ವಿಶೇಷಾಧಿಕಾರಿ ಪ್ರೊ.ಕೆ.ಎಂ.ಹರಿಣಿಕುಮಾರ್ ವಿಷಾದಿಸಿದರು.ತಾಲೂಕಿನ ಗೋಪಾಲಪುರ ಗ್ರಾಮ ಪಂಚಾಯ್ತಿ ವತಿಯಿಂದ ಎಚ್.ಕೋಡಿಹಳ್ಳಿ ನೂತನವಾಗಿ ಸ್ಥಾಪಿಸಿರುವ ಗ್ರಂಥಾಲಯ ಉದ್ಘಾಟಿಸಿ ಮಾತನಾಡಿ, ಸುಂದರವಾದ ಪರಿಸರವನ್ನು ನಾವೇ ಹಾಳು ಮಾಡಿದ್ದೇವೆ. ಪರಿಸರವನ್ನು ಕಲುಷಿತಗೊಳಿಸಿ ನರಕಸದೃಶ ಜೀವನ ನಡೆಸುತ್ತಿದ್ದು, ಇಂದಿನ ನಮ್ಮ ಪರಿಸ್ಥಿತಿಗೆ ನಾವೇ ಕಾರಣ ಎಂದು ಬೇಸರ ವ್ಯಕ್ತಪಡಿಸಿದರು.
ಭಾರತದ ವಿಜ್ಞಾನಿಗಳು, ತಂತ್ರಜ್ಞರಿಗೆ ವಿದೇಶಗಳಲ್ಲಿ ಹೆಚ್ಚಿನ ಮನ್ನಣೆ ಇದೆ. ಆದರೆ, ಇಲ್ಲಿನ ರಾಜಕಾರಣಿಗಳು, ವ್ಯವಸ್ಥೆ ಅಂತಹ ಜ್ಞ್ಞಾನಿಗಳನ್ನು ಉಪಯೋಗಿಸಿಕೊಂಡು ದೇಶದ ಪ್ರಗತಿಗೆ ಬಳಸಿಕೊಳ್ಳುವಲ್ಲಿ ಹಿಂದೆ ಬಿದ್ದಿದ್ದಾರೆ. ಆದ್ದರಿಂದಲೇ ನಾವು ಇನ್ನೂ ಮುಂದುವರಿಯುತ್ತಿರುವ ರಾಷ್ಟ್ರವಾಗಿ ಭಾರತವನ್ನು ನೋಡುತ್ತಿದ್ದೇವೆ ಎಂದರು.ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಬೇಕು. ಜ್ಞಾನ ಎಂಬುದು ಸಂಪತ್ತು ಇದ್ದಂತೆ. ಹಬ್ಬ- ಹರಿದಿನಗಳಿಗೆ ಕೊಡುವಷ್ಟು ಪ್ರಾಮುಖ್ಯತೆಯನ್ನು ನಾವು ಜ್ಞಾನಕ್ಕೆ ಕೊಡುವುದಿಲ್ಲ. ತಂದೆ-ತಾಯಂದಿರು ಹೆಚ್ಚು ಓದಿದರೆ ಮಕ್ಕಳೂ ಸಹ ಓದುತ್ತಾರೆ. ಪೋಷಕರು ಮಕ್ಕಳೊಂದಿಗೆ ಪುಸ್ತಕ ಓದುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಇದರಿಂದ ಮಕ್ಕಳೂ ಸಹ ಓದುವುದನ್ನು ರೂಢಿಸಿಕೊಳ್ಳುತ್ತಾರೆ ಎಂದರು.
ಮಕ್ಕಳಿಗೆ ಜ್ಞಾನ ಕೊಟ್ಟರೆ ಏನು ಬೇಕಾದರೂ ಸಾಧಿಸಬಹುದು. ಮಕ್ಕಳನ್ನು ಜ್ಞಾನವಂತರನ್ನಾಗಿ ಮಾಡಿದಷ್ಟೂ ಊರು, ಜಿಲ್ಲೆ, ರಾಜ್ಯ, ರಾಷ್ಟ್ರದ ಕೀರ್ತಿ ಪತಾಕೆ ಹೆಚ್ಚುತ್ತದೆ. ನೀತಿ ಕಥೆಗಳನ್ನು ಓದಿ ಮಕ್ಕಳಿಗೆ ಅದರಲ್ಲಿರುವ ಸಾರವನ್ನು, ಒಳ್ಳೆಯ ಅಂಶಗಳನ್ನು ಹೇಳುವ ಕೆಲಸವನ್ನು ಪೋಷಕರು ಮಾಡಬೇಕು. ಮಕ್ಕಳಲ್ಲಿ ಸಂಸ್ಕೃತಿ, ಸಂಸ್ಕಾರವನ್ನು ಬೆಳೆಸುವುದರೊಂದಿಗೆ ಸನ್ಮಾರ್ಗದಲ್ಲಿ ನಡೆಸಿ ದೇಶದ ಸತ್ಪ್ರಜೆಗಳನ್ನಾಗಿ ಮಾಡಬೇಕು ಎಂದರು.ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಎಚ್.ಎಸ್.ಸವಿತಾ ಮಾತನಾಡಿ, ಗ್ರಾಮದಲ್ಲಿ ಇದುವರೆಗೆ ಗ್ರಂಥಾಲಯ ಇರಲಿಲ್ಲ. ನಾವು ಮತ್ತು ನಮ್ಮ ಮಕ್ಕಳು ಗೋಪಾಲಪುರಕ್ಕೆ ಹೋಗಬೇಕಿತ್ತು. ಇದನ್ನು ಮನಗಂಡು ನಾವೇ ಇಲ್ಲಿ ಗ್ರಂಥಾಲಯ ತೆರೆದಿದ್ದೇವೆ. ಪ್ರತಿಯೊಬ್ಬರೂ ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಅದರಲ್ಲೂ ಮುಖ್ಯವಾಗಿ ವಿದ್ಯಾರ್ಥಿಗಳು ಆಟ, ಪಾಠದ ಜೊತೆಗೆ ಗ್ರಂಥಾಲಯದಲ್ಲಿರುವ ಪುಸ್ತಕಗಳನ್ನು ಓದುವ ಮೂಲಕ ಜ್ಞಾನಾರ್ಜನೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಇದೇ ವೇಳೆ ಶಿಕ್ಷಕ ನಾಗರಾಜು ಅವರನ್ನು ಅಭಿನಂದಿಸಿ ಗೌರವಿಸಲಾಯಿತು. ಗ್ರಾಮ ಪಂಚಾಯ್ತಿ ಸದಸ್ಯರಾದ ನಾಗರಾಜು, ಕವಿತಾ, ಮುಖ್ಯಶಿಕ್ಷಕಿ ಅಗಸ್ಟಿನ್ ಮೇರಿ, ಗ್ರಾಮಸ್ಥರಾದ ಸರೋಜಮ್ಮ, ನಾಗಣ್ಣ, ಮಲ್ಲಿಕಾರ್ಜುನ, ಸೋಮಶೇಖರ, ಆನಂದ, ಚಂದ್ರಶೇಖರ್, ರಮೇಶ, ಗ್ರಾ.ಪಂ. ಕಾರ್ಯದರ್ಶಿ ಜವರೇಗೌಡ ಇತರರು ಸಮಾರಂಭದಲ್ಲಿ ಭಾಗವಹಿಸಿದ್ದರು.