ಜೀವ ಬಿಟ್ಟೆವು, ಕಪ್ಪತಗುಡ್ಡ ಎಂದಿಗೂ ಬಿಡಲ್ಲ

| Published : Nov 30 2024, 12:46 AM IST

ಸಾರಾಂಶ

ಕೇಂದ್ರ ಸರ್ಕಾರ ಇದನ್ನು ಜಾರಿಗೆ ತರಬಾರದು ಮತ್ತು ಕಬ್ಬಿಣದ ಅದಿರುವ ಸಿಗುವ ಸ್ಥಳವನ್ನು ಅರಣ್ಯ ಉತ್ಪನ್ನಗಳ ವ್ಯಾಪ್ತಿಯಿಂದ ಹೊರಗಿಡುವ ಹುನ್ನಾರ

ಮುಂಡರಗಿ: ಕಪ್ಪತಗುಡ್ಡ ವನ್ಯಜೀವಿಧಾಮ ಪ್ರದೇಶದ 10 ಕಿಮೀ ವ್ಯಾಪ್ತಿಯು ಸೂಕ್ಷ್ಮ ಅರಣ್ಯ ಪ್ರದೇಶವಾಗಿದ್ದರೂ ಅದನ್ನು 1 ಕಿಮೀಗೆ ಕಡಿತಗೊಳಿಸಲು ಹೊರಟಿರುವ ಸರ್ಕಾರದ ನೀತಿ ಖಂಡನೀಯ. ನಾವು ನಮ್ಮ ಜೀವ ಬಿಟ್ಟೆವು ಆದರೆ ಕಪ್ಪತಗುಡ್ಡ ಎಂದಿಗೂ ಬಿಟ್ಟುಕೊಡುವುದಿಲ್ಲ ಎಂದು ತಾಲೂಕು ಅಭಿವೃದ್ಧಿ ಹೋರಾಟ ವೇದಿಕೆ ಅಧ್ಯಕ್ಷ ವೈ.ಎನ್.ಗೌಡರ ಹೇಳಿದರು.

ಅವರು ಶುಕ್ರವಾರ ಪಟ್ಟಣದ ಹೇಮರಡ್ಡಿ ಮಲ್ಲಮ್ಮ ವೃತ್ತದಲ್ಲಿ ಕಪ್ಪತಗುಡ್ಡ ಸಂರಕ್ಷಣಾ ಸಂಘ, ತಾಲೂಕು ಅಭಿವೃದ್ಧಿ ಹೋರಾಟ ವೇದಿಕೆ, ಶ್ರೀ ಜ.ಅ. ಸಂಸ್ಥಾನಮಠ ಹಾಗೂ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಕಪ್ಪತಗುಡ್ಡ ಉಳಿಸಿ ಸಹಿ ಸಂಗ್ರಹ ಆಂದೋಲನದಲ್ಲಿ ತಹಸೀಲ್ದಾರರ ಮುಖಾಂತರ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿ ಮಾತನಾಡಿದರು.

ಕಪ್ಪತಗುಡ್ಡದ ವನ್ಯಜೀವಿಧಾಮ ಪ್ರದೇಶದಿಂದ ಸುಮಾರು 10 ಕಿಮೀ ವ್ಯಾಪ್ತಿಯವರೆಗೆ ಯಾವುದೇ ಗಣಿಗಾರಿಕೆಗೆ ಅವಕಾಶ ನೀಡಬಾರದೆನ್ನುವ ನಿಯಮವಿದ್ದರೂ ಅದನ್ನು ಸರ್ಕಾರ ಬಂಡವಾಳ ಶಾಹಿಗಳ ಒತ್ತಡಕ್ಕೆ ಮಣಿದು 1 ಕಿಮೀ ಕಡಿತಗೊಳಿಸಕೂಡದು. ಕೇಂದ್ರ ಸರ್ಕಾರ ಇದನ್ನು ಜಾರಿಗೆ ತರಬಾರದು ಮತ್ತು ಕಬ್ಬಿಣದ ಅದಿರುವ ಸಿಗುವ ಸ್ಥಳವನ್ನು ಅರಣ್ಯ ಉತ್ಪನ್ನಗಳ ವ್ಯಾಪ್ತಿಯಿಂದ ಹೊರಗಿಡುವ ಹುನ್ನಾರ ನಡೆಯುತ್ತಿದ್ದು, ಇದಕ್ಕೂ ಸಹ ನಮ್ಮ ವಿರೋಧವಿದೆ ಎಂದರು.

ಕಪ್ಪತಗುಡ್ಡ ಉತ್ತರ ಕರ್ನಾಟಕದ ಸಹ್ಯಾದ್ರಿ.ಇದೊಂದು ಔಷಧಿಯ ಸಸ್ಯಗಳ ಖಜಾನೆ. ಏಷ್ಯಾ ಖಂಡದಲ್ಲಿಯೇ ಶುದ್ಧ ಗಾಳಿ ನೀಡುವ ಪ್ರದೇಶ ಎಂಬ ಹೆಗ್ಗಳಿಕೆ ಕಪ್ಪತಗುಡ್ಡಕ್ಕೆ ಇದೆ. ಆದರೂ ಗಣಿ ಕುಳಗಳ ಒತ್ತಡಕ್ಕೆ ಮಣಿದು 10 ಕಿಮೀ ವ್ಯಾಪ್ತಿ ಪ್ರದೇಶ ಕಡಿತಗೊಳಿಸಿ ಒಂದು ಕಿಮೀಗೆ ಸೀಮಿತಗೊಳಿಸಲು ಹೊರಟಿರುವ ಸರ್ಕಾರದ ನೀತಿ ಖಂಡಿಸುತ್ತೇನೆ. ಇದಕ್ಕೆ ಜಿಲ್ಲೆಯ ಎಲ್ಲ ಪಕ್ಷಗಳ ರಾಜಕಾರಣಿಗಳ ಬೆಂಬಲವಿದ್ದು, ಈ ಹಿಂದೆ ಕಪ್ಪತ್ತಗುಡ್ಡಕ್ಕೆ ಕುತ್ತು ಬಂದಾಗಲೆಲ್ಲ ಅನೇಕ ರೀತಿಯ ಹೋರಾಟ ಮಾಡುವ ಮೂಲಕ ಉಳಿಸಿಕೊಂಡು ಬಂದಿದ್ದೇವೆ. ಮತ್ತೆ ಅದಕ್ಕೆ ಕೈಹಚ್ಚಿದರೆ ಉಗ್ರ ಹೋರಾಟಕ್ಕೂ ನಾವು ಮುಂದಾಗುತ್ತೇವೆ ಎಂದು ಎಚ್ಚರಿಸಿದರು. ಜ.ನಾಡೋಜ ಡಾ.ಅನ್ನದಾನೀಶ್ವರ ಮಹಾಸ್ವಾಮೀಜಿ ಪ್ರಥಮ ಸಹಿ ಮಾಡುವುದರ ಮೂಲಕ ಸಹಿ ಸಂಗ್ರಹ ಕಾರ್ಯಕ್ಕೆ ಚಾಲನೆ ನೀಡಿದರು.

ಎಸ್.ಬಿ.ಎಸ್ ಆಯುರ್ವೇದ ಮೆಡಿಕಲ್ ಕಾಲೇಜಿನ ಸಂಸ್ಥಾಪಕ ಅಧ್ಯಕ್ಷ ಗುರುಮೂರ್ತಿ ಸ್ವಾಮಿ ಇನಾಮದಾರ ಮಾತನಾಡಿ, ಕಪ್ಪತಗುಡ್ಡ ಉತ್ತರ ಕರ್ನಾಟಕದ ಜೀವನಾಡಿ. ಇದಕ್ಕೆ ಗಣಿಗಾರಿಕೆ ಸಂಕಷ್ಟ ಪದೇ-ಪದೇ ಎದುರಾಗುತ್ತಿದೆ. ಕಪ್ಪತಗುಡ್ಡವನ್ನು ಮತ್ತಷ್ಟು ಬೆಳೆಯಲು ಬಿಡಬೇಕೇ ವಿನಃ ಅದನ್ನು ಹಾಳು ಮಾಡುವ ಪ್ರಯತ್ನ ಮಾಡಬಾರದು. ಕಪ್ಪತಗುಡ್ಡ ಕೇವಲ ಗದಗ ಜಿಲ್ಲೆಯ ಸಂಪತ್ತಲ್ಲ, ಇದು ಇಡೀ ದೇಶದ ಸಂಪತ್ತು. ಆದ್ದರಿಂದ ಕಪ್ಪತಗುಡ್ಡ ಉಳುವಿನ ಹೋರಾಟಕ್ಕಾಗಿ ನಾವು ಸದಾಸಿದ್ದ ಎಂದರು.

ಪುರಸಭೆಯ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ ಮಾತನಾಡಿ, ಸರ್ಕಾರದಿಂದ ಸಾರ್ವಜನಿಕರಿಗೆ ಗೊತ್ತಿಲ್ಲದಂತೆ ಕಪ್ಪತಗುಡ್ಡವನ್ನು ಮಾರುವ ಹುನ್ನಾರು ನಡೆದಿದೆ. ರಾಜಕಾರಣಿಗಳು ದುಡ್ಡಿನ ದುರಾಸೆಗೋಸ್ಕರ ರಾಜ್ಯ ಸರ್ಕಾರದ ಮೂಲಕ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಕಪ್ಪತಗುಡ್ಡದ ಸಂರಕ್ಷಣಗೆ ಸಾರ್ವಜನಿಕರು ಮುಂದಾಗಬೇಕು ಎಂದರು.

ಪತ್ರಕರ್ತ ಸಿ.ಕೆ.ಗಣಪ್ಪನವರ, ಕಪ್ಪತಗುಡ್ಡ ಸಂರಕ್ಷಣಾ ವೇದಿಕೆಯ ಅಧ್ಯಕ್ಷ ಸಿ.ಎಸ್. ಅರಸನಾಳ ಮಾತನಾಡಿದರು. ತಹಸೀಲ್ದಾರರ ಪರವಾಗಿ ಉಪತಹಸೀಲ್ದಾರ ಎಸ್.ಎಸ್.ಬಿಚ್ಚಾಲಿ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಸುಮಾರು 500 ಕ್ಕೂ ಹೆಚ್ಚು ಜನರು ಸಹಿ ಮಾಡಿ ಕಪ್ಪತಗುಡ್ಡದ ಮೇಲಿರುವ ತಮ್ಮ ಪ್ರೀತಿ ತೋರಿಸಿದರು. ಈಶ್ವರಪ್ಪ ಹಂಚಿನಾಳ, ಕರಬಸಪ್ಪ ಹಂಚಿನಾಳ, ಆನಂದಗೌಡ ಪಾಟೀಲ, ವೀರಣ್ಣ ತುಪ್ಪದ, ಮುತ್ತು ಹಾಳಕೇರಿ, ಎನ್.ಎಫ್. ಅಕ್ಕೂರ, ಕೊಟ್ರೇಶ ಅಂಗಡಿ, ಅಡಿವೆಪ್ಪ ಚಲವಾದಿ, ಮಂಜುನಾಥ ಮುಧೋಳ, ಡಿ.ಡಿ. ಮೋರನಾಳ, ದೇವಪ್ಪ ಇಟಗಿ, ನಾಗರಾಜ ಮುರಡಿ, ಪವನ ಚೋಪ್ರಾ, ನಾಗರಾಜ ಕೊರ್ಲಹಳ್ಳಿ, ಬಿ.ಎಸ್.ಜೋಗಿನ, ಎಸ್.ಬಿ.ಎಸ್ ಆಯುರ್ವೇದ ಮೆಡಿಕಲ್ ಕಾಲೇಜಿನ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು, ಜ.ಅ. ಪದವಿ ಪೂರ್ವ ಕಾಲೇಜಿನ ಎನ್.ಎಸ್.ಎಸ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.