ಸಾರಾಂಶ
ರಾಜ್ಯದಲ್ಲಿ ನಾವಿಂದು ಪ್ರತಿಪಕ್ಷ ಸ್ಥಾನದಲ್ಲಿ ಕೂತಿದ್ದೇವೆಂದರೆ ಅದಕ್ಕೆ ಕಾಂಗ್ರೆಸ್‌ನ ಗ್ಯಾರಂಟಿ ಮಾತ್ರ ಕಾರಣವಲ್ಲ, ನಮ್ಮ ಸ್ವಯಂಕೃತ ಅಪರಾಧವೂ ದೊಡ್ಡ ಕಾರಣ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದ್ದಾರೆ.
10ರಲ್ಲಿ 9 ನಮ್ಮ ಸ್ವಯಂಕೃತ ಅಪರಾಧಗಳು-ವಿಜಯೇಂದ್ರ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುರಾಜ್ಯದಲ್ಲಿ ನಾವಿಂದು ಪ್ರತಿಪಕ್ಷ ಸ್ಥಾನದಲ್ಲಿ ಕೂತಿದ್ದೇವೆಂದರೆ ಅದಕ್ಕೆ ಕಾಂಗ್ರೆಸ್‌ನ ಗ್ಯಾರಂಟಿ ಮಾತ್ರ ಕಾರಣವಲ್ಲ, ನಮ್ಮ ಸ್ವಯಂಕೃತ ಅಪರಾಧವೂ ದೊಡ್ಡ ಕಾರಣ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದ್ದಾರೆ.
ಬಿಜೆಪಿ ನೂತನ ಜಿಲ್ಲಾಧ್ಯಕ್ಷ ದೇವರಾಜ್ ಶೆಟ್ಟಿ ಅವರ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿ, ಕಾಂಗ್ರೆಸ್ ಪಕ್ಷದ ಬೋಗಸ್ ಗ್ಯಾರಂಟಿ ನೋಡಿ ಜನ ವೋಟ್ ಕೊಡಲಿಲ್ಲ, ಆಗ ನಮ್ಮದು ಕೂಡ ತಪ್ಪಿತ್ತು ಎಂದರು.ಪ್ರತಿಪಕ್ಷ ಸ್ಥಾನದಲ್ಲಿ ಬಿಜೆಪಿ ಕುಳಿತುಕೊಂಡಿದೆ ಎಂದರೆ ಅದಕ್ಕೆ 10 ಕಾರಣಗಳಿವೆ. ಅವುಗಳಲ್ಲಿ 9 ಕಾರಣಗಳು ನಮ್ಮ ಸ್ವಯಂಕೃತ ಅಪರಾಧಗಳು. 10ನೆಯದು ಕಾಂಗ್ರೆಸ್‌ನ ಗ್ಯಾರಂಟಿ, ಅದನ್ನು ನಾವು ಒಪ್ಪಿಕೊಳ್ಳಲೇಬೇಕು ಎಂದರು.
ರಾಜ್ಯದಲ್ಲಿರುವ ಮಹಿಳೆಯರು ಉಚಿತ ಬಸ್ ಪ್ರಯಾಣ ಮಾಡಲು ಅವಕಾಶ ಕೊಡಿ ಎಂದು ಕೇಳಿರಲಿಲ್ಲ, ಆ ದರಿದ್ರ ಪರಿಸ್ಥಿತಿ ನಮ್ಮ ರಾಜ್ಯಕ್ಕೆ ಬಂದಿಲ್ಲ. ಶಕ್ತಿ ಯೋಜನೆಯಿಂದಾಗಿ ಶಾಲಾ-ಕಾಲೇಜಿಗೆ ಹೋಗುವ ಮಕ್ಕಳ ಜೊತೆಗೆ ತಾಯಂದಿರಿಗೂ ಬಸ್ ಸಿಗುತ್ತಿಲ್ಲ, ಈ ಯೋಜನೆ ಜಾರಿ ಮಾಡುವಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದರು.ಬಿಜೆಪಿಯ ಯಾವುದೇ ಕಾರ್ಯಕರ್ತರು ಚುನಾವಣಾ ಫಲಿತಾಂಶದಿಂದ ದಿಕ್ಕೆಟ್ಟು ತಲೆ ತಗ್ಗಿಸಿ ಓಡಾಡಬಾರದು. ದಕ್ಷಿಣ ಭಾರತದಲ್ಲಿ ಬಿಜೆಪಿ ಭದ್ರಕೋಟೆ ಕರ್ನಾಟಕ ಎನ್ನುವುದನ್ನು ಮತ್ತೊಮ್ಮೆ ಸಾಬೀತುಮಾಡಬೇಕು. ಚಿಕ್ಕಮಗಳೂರಿನ ಐದೂ ಕ್ಷೇತ್ರಗಳನ್ನು ಬಿಜೆಪಿ ಗೆಲ್ಲಿಸಬೇಕು. ಎಲ್ಲರೂ ಒಟ್ಟಾಗಿ ಪಕ್ಷಕ್ಕೆ ಶಕ್ತಿ ಕೊಡುವ ಕೆಲಸ ಮಾಡಬೇಕು ಎಂದು ಹೇಳಿದರು.
ಕಾಂಗ್ರೆಸ್ ಗ್ಯಾರಂಟಿಗಿಂತ ಮೋದಿಯವರ ಗ್ಯಾರಂಟಿಯೇ ಮುಖ್ಯ ಎಂದು ಪಂಚ ರಾಜ್ಯದ ಚುನಾವಣೆಯಲ್ಲಿ ಅಲ್ಲಿನ ಜನ ಆಶೀರ್ವಾದ ಮಾಡಿದ್ದಾರೆ ಎಂದರು.