ಮಕ್ಕಳು ಕಾಣುತ್ತಿರುವ ಕನಸುಗಳಿಗೆ ಪಾಲಕರು ಮತ್ತು ತರಬೇತುದಾರರು ಕಣ್ಣಾಗಬೇಕು ಎಂದು ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್‌ನ ಸುವರ್ಣ ಕನ್ನಡಿಗ ಪ್ರಶಸ್ತಿ ಪುರಸ್ಕೃತ ಡಾ.ಅಶೋಕಕುಮಾರ ರಾ.ಜಾಧವ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಮಕ್ಕಳು ಕಾಣುತ್ತಿರುವ ಕನಸುಗಳಿಗೆ ಪಾಲಕರು ಮತ್ತು ತರಬೇತುದಾರರು ಕಣ್ಣಾಗಬೇಕು ಎಂದು ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್‌ನ ಸುವರ್ಣ ಕನ್ನಡಿಗ ಪ್ರಶಸ್ತಿ ಪುರಸ್ಕೃತ ಡಾ.ಅಶೋಕಕುಮಾರ ರಾ.ಜಾಧವ ಹೇಳಿದರು.

ನಗರದ ಬುಲ್ಸ್‌ರಿಂಗ್‌ ಕ್ರಿಕೆಟ್‌ ಅಕಾಡೆಮಿಯ ವತಿಯಿಂದ ಏರ್ಪಡಿಸಲಾಗಿದ್ದ ಕ್ರಿಕೆಟ್‌ ತರಬೇತಿ ಪಡೆಯುತ್ತಿರುವ ಮಕ್ಕಳ ತಾಯಿಂದರಿಗಾಗಿ ಏರ್ಪಡಿಸಲಾಗಿದ್ದ ಕ್ರಿಕೆಟ್‌ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದ ಅವರು, ಯಾವ ದೈಹಿಕ ಚಟುವಟಿಕೆಗಳಿಂದ ಮಾನಸಿಕವಾಗಿ ಖುಷಿ ಮತ್ತು ಮನೋರಂಜನೆ ಸಿಗುತ್ತದೋ ಅಲ್ಲಿ ಮಾತ್ರ ದೈಹಿಕ ಬೆಳವಣಿಗೆ ಜೊತೆಗೆ ಮಾನಸಿಕ ಉಲ್ಲಾಸ, ಕ್ರೀಡಾಮನೋಭಾವ, ಸಹ ಆಟಗಾರರೊಂದಿಗೆ ಸಮನ್ವಯತೆ, ಪರಸ್ಪರ ಹೊಂದಾಣಿಕೆ ಹಾಗೂ ಸಾಮಾಜಿಕವಾಗಿಯೂ ತೊಡಗಿಸಿಕೊಳ್ಳುವ ಅವಕಾಶ ಸಿಗುತ್ತದೆ ಎಂದರು.ಬಬಲೇಶ್ವರ ಮತಕ್ಷೇತ್ರದ ರಾಜಕೀಯ ಧುರೀಣ ಬಸವರಾಜ ಹೊನವಾಡ ಮಾತನಾಡಿ, ಇಂದಿನ ದೈನಂದಿನ ಕಾರ್ಯ ಚಟುವಟಿಕೆಗಳಿಂದ ಬೇಸತ್ತಿರುವ ಮಹಿಳೆಯರಿಗೆ ಇಂತಹ ಕ್ರೀಡಾಕೂಟದಿಂದ ಚೈತನ್ಯ ತುಂಬುವ ಮತ್ತು ಅವರಲ್ಲಿ ಹೊಸತನ ತುಂಬುವ ಕೆಲಸ ಆಗುತ್ತದೆ ಎಂದು ತಿಳಿಸಿದರು.ಮುಖ್ಯ ತರಬೇತುದಾರ ರವಿ ಭಾರದಖಾನೆ ಮಾತನಾಡಿ, ಬಹಳ ದಿನಗಳಿಂದಲೂ ಕೆಲವು ತಾಯಂದಿರು ತಮಗಾಗಿಯೂ ಪಂದ್ಯ ಆಯೋಜಿಸಲು ಕೇಳುತ್ತಿದ್ದಾರೆ. ಅವರು ತಾವು ಕಾಲೇಜಿನ ದಿನಗಳಲ್ಲಿ ಕಳೆದ ಅನುಭವ ಮರಳಿ ಪಡೆಯಲು ಇದೊಂದು ಅವಕಾಶ ಎಂದರು.ತಮ್ಮ ನಿರೀಕ್ಷೆಗೂ ಮೀರಿ ಯಶಸ್ಸು ಸಂದಿದ್ದು, ಜವಾಬ್ದಾರಿ ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ಬೇರೆ, ಬೇರೆ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳೆಯರಿಗೂ ಅವಕಾಶ ಒದಗಿಸುವ ನಿಟ್ಟಿನಲ್ಲಿ ಯೋಜಿಸಲಾಗುವುದು ಎಂದರು. ಅರಣ್ಯಾಧಿಕಾರಿ ಬಸವರಾಜ ಹೊಳೆಯಾಚಿ, ಹಿಟ್ಟಿನಹಳ್ಳಿ ತಾಂಡಾದ ದೈಹಿಕ ಶಿಕ್ಷಕರಾದ ಸಂತೋಷ ಅಂಗಡಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಂತೋಷ ಅಂಗಡಿ ಸ್ವಾಗತಿಸಿದರು. ರೈಲ್ವೆ ಇಲಾಖೆಯ ಪ್ರೇಮಸಿಂಗ ಚವ್ಹಾಣ ವಂದನಾರ್ಪಣೆ ಮಾಡಿದರು. ಅಕಾಡೆಮಿಯ ಉಪಾಧ್ಯಕ್ಷ ಅಬ್ಬಿ ವಕಾಸ್‌ ಪೀರಜಾದೆ, ಝಾಕೀರ ನಾಯ್ಕೋಡಿ, ಪವನ ವಯನರ, ಮೋಹ್ಸಿನ್‌ ಇಕ್ಬಾಲ್‌ ಸೈಯ್ಯದ್‌ ಸೇರಿದಂತೆ ಹಲವು ಶಿಬಿರಾರ್ಥಿಗಳು, ಪಾಲಕರು ಉಪಸ್ಥಿತರಿದ್ದರು.ಆಶಾ ಚವ್ಹಾಣ ತಂಡಕ್ಕೆ 20 ರನ್‌ಗಳ ಗೆಲುವು

ಪ್ರಾರಂಭಿಕವಾಗಿ ಕೇವಲ ಎರಡು ತಂಡಗಳಿಗಾಗಿ ಆಯೋಜಿಸಿದ್ದ ಈ ಪಂದ್ಯಾವಳಿಯಲ್ಲಿ ಮಾಜಿ ಕ್ರಿಕೆಟ್‌ ಆಟಗಾರ್ತಿ ಆಶಾ ಚವ್ಹಾಣ ಟಾಸ್‌ ಗೆದ್ದು ಬ್ಯಾಟಿಂಗ್‌ ಮಾಡಿದರು. ಅವರ ತಂಡ ನಿಗದಿತ 10 ಓವರ್‌ನಲ್ಲಿ 6 ವಿಕೆಟ್‌ ಕಳೆದುಕೊಂಡು 128 ರನ್‌ ಗಳಿಸಿದರು. ನಂತರ ಬ್ಯಾಟಿಂಗ್‌ ಮಾಡಿದ ಕ್ರಿಕೆಟ್‌ಗ ಪವನದೀಪ ಭಾರದಖಾನೆ ತಾಯಿ ಕೀರ್ತಿ ಭಾರದಖಾನೆಯವರ ತಂಡ 10 ಓವರ್‌ಗಳ ಮುಕ್ತಾಯಕ್ಕೆ 7 ವಿಕೆಟ್‌ ಕಳೆದುಕೊಂಡು ಕೇವಲ 108 ರನ್‌ ಗಳಿಸಿ 20 ರನ್‌ಗಳಿಂದ ಸೋಲನ್ನು ಒಪ್ಪಿಕೊಂಡಿತು. ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ವಿಜೇತ ತಂಡದ ರಹೀಮಾ ನಾಗರಕೋಟಿ ಪಡೆದರು. ಸೋತ ತಂಡದ ಪರವಾಗಿ ನೇತ್ರಾ ಹೊಳೆಯಾಚಿ ಅತ್ಯಧಿಕ ರನ್‌ ಗಳಿಸಿದರು. ಪಂದ್ಯಾವಳಿಯಲ್ಲಿ ಸಂಯುಕ್ತ ಪಾಟೀಲ, ಸುನಂದ ವಂಬರ್ಸೆ, ಸುದರ್ಶನಾ ಕಾಂಬಳೆ, ಸುಷ್ಮೀತಾ ಕಬಾಡೆ, ವೈಶಾಲಿ ಬಿರಾದಾರ, ಅನು ಚವ್ಹಾಣ, ಸಂಧ್ಯಾ ಹಬ್ಬು, ಮೋನಿಕಾ ಪುಕಾಳೆ, ಸುನೀತಾ ರಾಠೋಡ, ಅನೀತಾ ಸಂತೋಷ ಅಂಗಡಿ, ಉಷಾ ಪವಾರ, ಭಾಗ್ಯಲಕ್ಷ್ಮೀ ರಾಠೋಡ, ಜಗದೇವಿ ಕನ್ನೊಳ್ಳಿ, ದೀಪಾ ಹುಲ್ಲೂರ, ಅನುರಾಧಾ ಹೋನವಾಡ, ಚಂಚಲಕರ ಆಟಗಾರರಾಗಿ ಭಾಗವಹಿಸಿದ್ದರು. ನೀವು ನಿಮ್ಮ ಕಾಲೇಜಿನ ಜೀವನದಲ್ಲಿ ಪಡೆದ ಅನುಭವ ಈಗ ನಿಮ್ಮ ಮಕ್ಕಳ ಕ್ರೀಡಾ ಬೆಳವಣಿಗೆಯಲ್ಲಿ ಸಹಕಾರಿಯಾಗುತ್ತದೆ. ಎಲ್ಲಿ ಪಾಲಕರ ಮತ್ತು ತರಬೇತುದಾರ ನಡುವೆ ಸಮನ್ವಯತೆ ಇರುತ್ತದೆ ಹಾಗೂ ಇಬ್ಬರೂ ಕೂಡಿ ಮಕ್ಕಳಲ್ಲಿರುವ ಕೌಶಲ್ಯ ಗುರುತಿಸಿ ಪ್ರೋತ್ಸಾಹಿಸುವ, ಅವರ ದೌರ್ಬಲ್ಯಗಳನ್ನು ತಿದ್ದಿ ಹುರಿದುಂಬಿಸುತ್ತಾರೋ ಅಂತಹ ಮಕ್ಕಳು ಮಾತ್ರ ಹೆಚ್ಚಿನ ಸಾಧನೆಗಳನ್ನು ಮಾಡುತ್ತಾರೆ.

-ಡಾ.ಅಶೋಕಕುಮಾರ ರಾ.ಜಾಧವ,

ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್‌ನ ಸುವರ್ಣ ಕನ್ನಡಿಗ ಪ್ರಶಸ್ತಿ ಪುರಸ್ಕೃತರು.

ಮುಂದಿನ ದಿನಗಳಲ್ಲಿ ಇಂತಹ ಪಂದ್ಯಗಳನ್ನು ತಿಂಗಳಲ್ಲಿ ಕನಿಷ್ಠ 2 ಬಾರಿಯಾದರೂ ಏರ್ಪಡಿಸಲು ಮುಖ್ಯ ಸಂಘಟಕ ರಾಷ್ಟ್ರೀಯ ಕ್ರಿಕೆಟ್‌ ಆಟಗಾರ ಹಾಗೂ ಬುಲ್ಸ್‌ರಿಂಗ್‌ ಅಕಾಡೆಮಿಯ ಮುಖ್ಯಸ್ಥ ರವಿ ಭಾರದಖಾನೆಯವರು ವ್ಯವಸ್ಥಿತವಾಗಿ ಯೋಜನೆ ರೂಪಿಸಿ, ಆಯೋಜಿಸಬೇಕು. ಅದಕ್ಕೆ ಬೇಕಾಗುವ ಆರ್ಥಿಕ ಸಹಾಯವನ್ನು ನಾವು ಮಾಡಲು ಸಿದ್ಧ.

-ಬಸವರಾಜ ಹೊನವಾಡ,

ಯುವ ಧುರೀಣ, ಬಬಲೇಶ್ವರ ಮತಕ್ಷೇತ್ರ.