ಮಕ್ಕಳ ಬದಲಿಸಲು ನಾವು ಬದಲಾಗಬೇಕು: ಅನಂತ ಶಾಲೆಯ ಅಕ್ಷಯ ಗೋಖಲೆ

| Published : Jan 15 2024, 01:48 AM IST

ಮಕ್ಕಳ ಬದಲಿಸಲು ನಾವು ಬದಲಾಗಬೇಕು: ಅನಂತ ಶಾಲೆಯ ಅಕ್ಷಯ ಗೋಖಲೆ
Share this Article
  • FB
  • TW
  • Linkdin
  • Email

ಸಾರಾಂಶ

ಮಕ್ಕಳು ಬದಲಾಗಬೇಕೆಂದು ಬಯಸುವ ನಾವು ಮೊದಲು ಬದಲಾಗಬೇಕು. ಮಕ್ಕಳು ಅನುಕರಣೆಯ ಮೂಲಕ ಬೆಳೆಯುವುದರಿಂದ ನಮ್ಮ ವಾತಾವರಣ, ಸಂಸ್ಕೃತಿ, ಜೀವನ ಶೈಲಿ ಮಕ್ಕಳ ಬದಲಾವಣೆಗೆ ಕಾರಣವಾಗುತ್ತವೆ ಎಂದು ಅನಂತ್ ಇಂಟರ್‌ನ್ಯಾಷನಲ್ ಶಾಲೆಯ ಅಕ್ಷಯ ಗೋಖಲೆ ಹೇಳಿದರು. ವಿವೇಕಾನಂದ ಜಯಂತಿ ಹಿನ್ನೆಲೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅನಂತ್ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ವಿವೇಕಾನಂದ ಜಯಂತಿ । ಮಾತೃದೇವೋಭವ- ಪಿತೃದೇವೋಭವ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಅರಸೀಕೆರೆ

ಮಕ್ಕಳು ಬದಲಾಗಬೇಕೆಂದು ಬಯಸುವ ನಾವು ಮೊದಲು ಬದಲಾಗಬೇಕು. ಮಕ್ಕಳು ಅನುಕರಣೆಯ ಮೂಲಕ ಬೆಳೆಯುವುದರಿಂದ ನಮ್ಮ ವಾತಾವರಣ, ಸಂಸ್ಕೃತಿ, ಜೀವನ ಶೈಲಿ ಮಕ್ಕಳ ಬದಲಾವಣೆಗೆ ಕಾರಣವಾಗುತ್ತವೆ ಎಂದು ಅನಂತ್ ಇಂಟರ್‌ನ್ಯಾಷನಲ್ ಶಾಲೆಯ ಅಕ್ಷಯ ಗೋಖಲೆ ಹೇಳಿದರು.

ನಗರದ ಅನಂತ್ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ವಿವೇಕಾನಂದ ಜಯಂತಿಯ ಅಂಗವಾಗಿ ಮಾತೃದೇವೋಭವ- ಪಿತೃದೇವೋಭವ ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಮಕ್ಕಳು ದಾರಿ ತಪ್ಪುತ್ತವೆ ಎಂದು ಆತಂಕ ಪಡುವ ಬದಲು ಆಂತರಿಕ ಚಿಂತನೆ ಮಾಡಿದರೆ ಮಕ್ಕಳನ್ನು ಬದಲಾಯಿಸಲು ಸಾಧ್ಯ. ಮಗು ಜನಿಸಿದಾಗ ತಾಯಿ ಆ ನೋವಲ್ಲಿಯೂ ಕಣ್ಣೀರ ಹರಿಸುತ್ತ ಸಂತಸ ಪಡುತ್ತಾಳೆ. ಆದರೆ ಮುಂದೆ ನಮ್ಮಿಂದ ಕಣ್ಣೀರು ಹಾಕಿಸದಂತೆ ನೋಡಿಕೊಂಡಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ ಎಂದು ಸಲಹೆ ನೀಡಿದರು.

ಅಧ್ಯಕ್ಷ ಆರ್. ಅನಂತಕುಮಾರ್ ಮಾತನಾಡಿ, ಮಕ್ಕಳು ಮುನ್ನುಗ್ಗಿ ಸಾಧಿಸಬೇಕಾದರೆ ಮೊದಲು ನಾಯಕತ್ವದ ಗುಣ ಬರಬೇಕು. ಅದು ಬರಬೇಕಾದರೆ ನಾವು ಆದರ್ಶನಾಯಕರ ವಿಚಾರಧಾರೆಯನ್ನು ಮನಸ್ಸಿನಲ್ಲಿ ಬೇರೂರುವಂತೆ ಮಾಡಿಕೊಳ್ಳಬೇಕು. ತಂದೆ ತಾಯಿಗಳನ್ನು ಪೂಜಿಸುವ ಈ ಕಾರ್ಯಕ್ರಮ ಮಕ್ಕಳ ಮನಸ್ಸುನ್ನು ಬದಲಾಯಿಸಿ ಸಮಾಜಕ್ಕೆ ಉತ್ತಮ ವ್ಯಕ್ತಿತ್ವದ ಮನಸ್ಸುಗಳನ್ನು ನೀಡಲು ಮುನ್ನುಡಿಯಾಗುವುದು ಎಂದು ಅಭಿಪ್ರಾಯಪಟ್ಟರು.

ಈ ಕಾರ್ಯಕ್ರಮದಲ್ಲಿ ಮಕ್ಕಳಿಂದ ತಂದೆ-ತಾಯಿಯರ ಪಾದ ಪೂಜೆ ಮಾಡಿಸಲಾಯಿತು. ಸಂಸ್ಥೆಯ ವತಿಯಿಂದ ಆಯ್ಕೆಯಾದ ಹತ್ತನೇ ತರಗತಿಯ ಇಬ್ಬರು ವಿದ್ಯಾರ್ಥಿಗಳಿಗೆ ಶ್ರವಣ ಕುಮಾರ ಪ್ರಶಸ್ತಿಯನ್ನು ಹಾಗೂ ಶಿಕ್ಷಕಿಯಾದ ಹುವಿ ಅನಿತ ಅವರಿಗೆ ಆಚಾರ್ಯದೇವೋಭವ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಶಾಲೆಯ ಸಂಸ್ಥಾಪಕ ಅಧ್ಯಕ್ಷ ಆರ್.ಅನಂತಕುಮಾರ್, ಮುಖ್ಯ ಅತಿಥಿ ಕುಮಾರಿ. ಶಾಲಾ ನಿರ್ದೇಶಕ ಪ್ರಶಾಂತ್ ಅನಂತಕುಮಾರ್, ಅಭಿನಿತ ಪ್ರಶಾಂತ್, ಪ್ರಾಂಶುಪಾಲ ಡಾ.ಸುರೇಶ್ ಕುಮಾರ್ ಕುಂದೂರು ಹಾಗೂ ಶಾಲಾ ಸಿಬ್ಬಂದಿ, ಮಕ್ಕಳು ಮತ್ತು ಪೋಷಕ ವರ್ಗದವರು ಪಾಲ್ಗೊಂಡಿದ್ದರು.

ನಗರದ ಅನಂತ್ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ವಿವೇಕಾನಂದ ಜಯಂತಿಯ ಅಂಗವಾಗಿ ಮಾತೃದೇವೋಭವ- ಪಿತೃದೇವೋಭವ ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.