ನಾಡಿನ ಶಕ್ತಿದೇವತೆಗಳಲ್ಲಿ ಒಂದಾದ ತಾಲೂಕಿನ ದಸರೀಘಟ್ಟದ ಶ್ರೀ ಚೌಡೇಶ್ವರಿ ದೇವಿ ಮುಳ್ಳುಗದ್ದಿಗೆ ಉತ್ಸವ ಆಳೆತ್ತರದ ಗಟ್ಟಿಕಾರೆಮುಳ್ಳಿನ ರಾಶಿಯ ಮೇಲೆ ವಿಜಯದಶಮಿ ಅತ್ಯಂತ ವೈಭವ ಮತ್ತು ಭಕ್ತಿ ಪರಾಕಾಷ್ಠೆಯಿಂದ ನಡೆಯಿತು.

ಕನ್ನಡಪ್ರಭ‍ ವಾರ್ತೆ ತಿಪಟೂರು

ನಾಡಿನ ಶಕ್ತಿದೇವತೆಗಳಲ್ಲಿ ಒಂದಾದ ತಾಲೂಕಿನ ದಸರೀಘಟ್ಟದ ಶ್ರೀ ಚೌಡೇಶ್ವರಿ ದೇವಿ ಮುಳ್ಳುಗದ್ದಿಗೆ ಉತ್ಸವ ಆಳೆತ್ತರದ ಗಟ್ಟಿಕಾರೆಮುಳ್ಳಿನ ರಾಶಿಯ ಮೇಲೆ ವಿಜಯದಶಮಿ ಅತ್ಯಂತ ವೈಭವ ಮತ್ತು ಭಕ್ತಿ ಪರಾಕಾಷ್ಠೆಯಿಂದ ನಡೆಯಿತು.

ಧಾರ್ಮಿಕ ಸಭೆ ಸಾನ್ನಿಧ್ಯ ವಹಿಸಿದ್ದ ಆದಿಚುಂಚನಗಿರಿ ಮಹಾಸಂಸ್ಥಾನ ಪೀಠಾಧ್ಯಕ್ಷರಾದ ಜಗದ್ಗುರು ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರು ಆಶೀರ್ವಚನ ನೀಡುತ್ತ, ಶ್ರೀ ಚೌಡೇಶ್ವರಿ ತಾಯಿಯಿಂದ ಹಲವಾರು ಪವಾಡ ಜರುಗಿದ್ದು ದೇವಿ ಶಕ್ತಿಯನ್ನು ನಾವು, ನೀವೆಲ್ಲ ಅರಿತಿದ್ದೇವೆ. ಜಗತ್ತಿನ ಸಂಸಾರ ಮುಳ್ಳು ಗದ್ದಿಗೆಯಂತೆ ಎಂದು ತಿಳಿಸಿದರು.

ಬದುಕಿನಲ್ಲಿ ಹಲವಾರು ಕಷ್ಟಗಳು ಬರುತ್ತವೆ. ಕಷ್ಟಕ್ಕೆ ಯಾರು ಕಾರಣರಲ್ಲ. ಆಧ್ಯಾತ್ಮಿಕ ತಾಪ, ಭೌತಿಕ ತಾಪ, ಆದಿ ದೈವಿಕ ತಾಪ ಕೂಡ ಬರಲಿದೆ. ಈ ಎಲ್ಲಾ ತಾಪಗಳನ್ನು ಪರಿಹರಿಸಿಕೊಳ್ಳಲು ತಾಯಿ ಶ್ರೀ ಚೌಡೇಶ್ವರಿ ದೇವಿಯಿಂದ ಮಾತ್ರ ಸಾಧ್ಯ. ಜೀವನದಲ್ಲಿ ನಾವು ಯಾರಿಗೂ ತೊಂದರೆ ಮಾಡಬಾರದು. ನಾವು ಮಾಡಿದ ಒಳ್ಳೆಯದು ಹಾಗೂ ಕೆಟ್ಟದ್ದನ್ನು ನಾವೇ ಅನುಭವಿಸಬೇಕಾಗುತ್ತದೆ. ಕಷ್ಟಗಳೆಂಬುವು ಸಾಮಾನ್ಯ. ಕಷ್ಟಗಳೆಂಬ ಮುಳ್ಳುಗಳ ಮೇಲೆ ನಡೆಯುವಾಗ ಭಗವಂತನ ಸ್ಮರಣೆ ಮಾಡಿದರೆ ಕಷ್ಟಗಳು ಮಂಜಿನಂತೆ ಕರಗುತ್ತವೆ. ಸಂಸಾರದ ಸಾಗರದಲ್ಲಿ ಸಹ ಕಷ್ಟಗಳು ನಿವಾರಣೆಯಾಗಲು ದೈವೀಭಕ್ತಿ ಅಗತ್ಯ. ಸುಖ ದುಃಖಗಳು ಬಂದಾಗ ದೇವರ ಸ್ಮರಣೆ ಮಾಡಬೇಕು. ಜಗತ್ತಿನ ಸೃಷ್ಟಿಕರ್ತ ಪರಮಾತ್ಮ. ಮನುಷ್ಯನಾದವನು ಕೃತಜ್ಞತಾ ಬಾವದಿಂದ ಬದುಕಬೇಕು. ವಿಜ್ಞಾನ ಎಷ್ಟೇ ಮುಂದುವರಿದರೂ ಜ್ಙಾನವೆಂಬುದು ಮಸುಕಾಗಿದೆ. ಪ್ರಕೃತಿ ಮುಂದೆ ಮನುಷ್ಯ ಕ್ಷಣಿಕನಾಗಿದ್ದಾನೆ. ಅಂತಃಕರಣ ಶುದ್ಧಿಗೊಂಡರೆ ಮತ್ತಷ್ಟು ಶಕ್ತಿ ಪಡೆಯಬಹುದು. ಮನುಷ್ಯನ ಪಯಣ ಯಾವಾಗಲೂ ಒಳ್ಳೆಯ ದಿಕ್ಕಿನಲ್ಲಿ ಸಾಗಲಿ. ಯಾವಾಗಲೂ ದೇವರ ಮೇಲೆ ಹಾಗೂ ಗುರುವಿನ ಮೇಲೆ ಶ್ರದ್ಧೆ ಇಟ್ಟುಕೊಳ್ಳಬೇಕು. ಜ್ಞಾನ ಗುರುವಿನಿಂದ ಬರಲಿದ್ದು ದೇವಿ, ದೇವತೆಗಳ ಭಕ್ತಿ ಸ್ಮರಣೆಯಿಂದ ಕಷ್ಟಗಳು ಪರಿಹಾರವಾಗಲಿವೆ ಎಂದು ಹೇಳಿದರು.

ಮಾದೀಹಳ್ಳಿ ರಾಮಕೃಷ್ಣ ಮಠದ ಶ್ರೀ ಪ್ರದ್ಯುತ್ ನಾಥ ಸ್ವಾಮೀಜಿ ಮಾತನಾಡಿ ಶ್ರೀ ಚೌಡೇಶ್ವರಿ ದೇವಿಯು ಸಜ್ಜನರಿಗೆ ಆಶೀರ್ವದಿಸಲಿದ್ದು ಇಲ್ಲಿಗೆ ಬಂದಿರುವ ಭಕ್ತರೆಲ್ಲರಿಗೂ ಚೌಡೇಶ್ವರಿ ತಾಯಿ ಮಕ್ಕಳಂತೆ ಬಂದಿದ್ದಾರೆ. ಜಗತ್ತಿನಲ್ಲಿ ಶಕ್ತಿಯ ವೈಶಿಷ್ಟ್ಯಗಳನ್ನ ಜಗನ್ಮಾತೆಯಿಂದ ಕಾಣಲು ಸಾಧ್ಯ. ಭಕ್ತರೆಲ್ಲರಿಗೂ ದೇವಿ ಕೃಪೆ ದೊರಕಲಿ ಎಂದು ಶ್ರೀಗಳು ಹೇಳಿದರು.

ಈ ಧಾರ್ಮಿಕ ಸಭೆಯಲ್ಲಿ ಮಂಗಳೂರಿನ ಶ್ರೀ ಧರ್ಮಪಾಲನಾಥ ಸ್ವಾಮೀಜಿ, ಚಿಕ್ಕಬಳ್ಳಾಪುರ ಮಠದ ಶ್ರೀ ಪ್ರಭುಲಿಂಗನಾಥ ಸ್ವಾಮೀಜಿ, ಮಂಗಳನಾಥಸ್ವಾಮೀಜಿ, ಬಸವನಂದಸ್ವಾಮೀಜಿ, ಶ್ರವಣಬೆಳಗೊಳದ ಬಸವೇಶ್ವರ ಸ್ವಾಮೀಜಿ, ತುಮಕೂರು ಶಾಖಾಮಠದ ನಿಶ್ಚಲನಾಥ ಸ್ವಾಮೀಜಿ, ಬಾನಂದೂರು ಮಠದ ಶ್ರೀ ಮನಸ್ವಿನಾಥ ಸ್ವಾಮೀಜಿ, ಮೈಸೂರಿನ ಶ್ರೀ ಸೋಮೇಶ್ವರ ನಾಥ ಸ್ವಾಮೀಜಿ, ಹಾಸನದ ಶ್ರೀ ಶಂಭುನಾಥ ಸ್ವಾಮೀಜಿ, ದಸರೀಘಟ್ಟ ಶಾಖಾಮಠದ ಸತ್‌ಕೀರ್ತಿನಾಥ ಸ್ವಾಮೀಜಿ, ಜೆಡಿಎಸ್ ಮುಖಂಡ ಶಾಂತಕುಮಾರ್, ಮಠದ ಟ್ರಸ್ಟಿಗಳಾದ ಡಾ. ಜಿತೇಂದ್ರ, ರವಿಶಂಕರ್, ಕೈಲಾಸನಾಥ ಗೌಡ, ಆದಿಚುಂಚನಗಿರಿ ಮಠದ ಪ್ರಾಧ್ಯಾಪಕ ಶಿವರಾಂ, ಗುಡಿಗೌಡ ಕುಮಾರಸ್ವಾಮಿ ಸೇರಿದಂತೆ ಗ್ರಾಮಸ್ಥರು, ಅಕ್ಕಪಕ್ಕದ ಗ್ರಾಮಸ್ಥರು ಮತ್ತಿತರರಿದ್ದರು.

ಮುಳ್ಳು ಗದ್ದುಗೆ ವಿಶೇಷ

ಸುಮಾರು ಆರೇಳು ಅಡಿಯಷ್ಟು ಉದ್ದ-ಅಗಲದ ಜಾಗದಲ್ಲಿ ಅಳೆತ್ತರದಷ್ಟು ಗಟ್ಟಿ ಕಾರೆಮುಳ್ಳಿನ ಗಿಡಗಳನ್ನು ರಾಶಿ ಹಾಕಲಾಗುತ್ತದೆ. ಈ ಮುಳ್ಳಿನ ರಾಶಿಯ ಮೇಲೆ ಶ್ರೀ ಚೌಡೇಶ್ವರಿ ದೇವಿಯವರ ಉತ್ಸವ ಮೂರ್ತಿಯನ್ನು ಆರೇಳು ಭಕ್ತರು ಹೊತ್ತುಕೊಂಡ ಅತ್ಯಂತ ಭಕ್ತಿಶ್ರದ್ಧೆಯಿಂದ ಸರಾಗವಾಗಿ ಮುಳ್ಳಿನ ರಾಶಿಯನ್ನು ತುಳಿಯುತ್ತಾ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಮರ‍್ನಾಲ್ಕು ಬಾರಿಹತ್ತಿ ನಡೆಯುತ್ತಾರೆ. ಇದರ ಜೊತೆಗೆ ಹರಕೆ ಮಾಡಿಕೊಂಡ ಭಕ್ತ ಸಮೂಹವೂ ದೇವಿಯ ಹಿಂದೆ ನಡೆದುಕೊಂಡು ಹೋಗುವ ಮೂಲಕ ತಮ್ಮ ಹರಕೆ ತೀರಿಸಿ ಧನ್ಯತಾಭಾವ ಮೆರೆಯುತ್ತಾರೆ.