ಸವಾಲು ಬದಿಗೊತ್ತಿ ನಾವೇ ಮುಂದೆ ಬರಬೇಕು

| Published : Jul 20 2025, 01:22 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಆಧುನಿಕ ಮಹಿಳೆ ಶಿಕ್ಷಣ, ಅರಿವು, ಆರ್ಥಿಕ ಸಬಲತೆಯಿಂದಾಗಿ ಸಮಸ್ಯೆಗಳನ್ನು ಮೆಟ್ಟಿನಿಲ್ಲುವ ಶಕ್ತಿಯನ್ನು ಪಡೆದುಕೊಳ್ಳುತ್ತಿರುವುದು ಸಂತಸದ ಸಂಗತಿ ಎಂದು ಉಪನ್ಯಾಸಕಿ ಲಕ್ಷ್ಮೀ ಮೋರೆ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಆಧುನಿಕ ಮಹಿಳೆ ಶಿಕ್ಷಣ, ಅರಿವು, ಆರ್ಥಿಕ ಸಬಲತೆಯಿಂದಾಗಿ ಸಮಸ್ಯೆಗಳನ್ನು ಮೆಟ್ಟಿನಿಲ್ಲುವ ಶಕ್ತಿಯನ್ನು ಪಡೆದುಕೊಳ್ಳುತ್ತಿರುವುದು ಸಂತಸದ ಸಂಗತಿ ಎಂದು ಉಪನ್ಯಾಸಕಿ ಲಕ್ಷ್ಮೀ ಮೋರೆ ಹೇಳಿದರು.

ನಗರದ ತಾಜಬಾವಡಿ ಹಿಂಬದಿಯ ಸಿಕ್ಯಾಬ್ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಬೂಕರ್ ಪ್ರಶಸ್ತಿ ಪುರಸ್ಕೃತ ಬಾನು ಮುಸ್ತಾಕರ ಎದೆಯ ಹಣತೆ ಕೃತಿಯ ಅವಲೋಕನ ಕಾರ್ಯಕ್ರಮದಲ್ಲಿ ಮಾತನಾಡಿ, ಮಹಿಳೆಗೆ ಯಾರು ಮುಂದೆ ಬಾ ಎಂದು ಕರೆಯುವವರಿಲ್ಲ. ಸವಾಲುಗಳನ್ನು ಬದಿಗೊತ್ತಿ ತಾವಾಗಿಯೇ ಮುಂದೆ ಬರಬೇಕು. ಸಾರಾ ಅಬೂಬಕರ್ ಮತ್ತು ಬಾನುಮುಸ್ತಾಕ ಕನ್ನಡ ನಾಡಿನ ಎರಡು ಅನರ್ಘ್ಯ ಸಾಹಿತ್ಯ ರತ್ನಗಳು. ಬಾನು ಮುಸ್ತಾಕರು ಬಾಲ್ಯದಲ್ಲಿ ತಮ್ಮ ಸುತ್ತಮುತ್ತ ಮಹಿಳೆಯ ಮೇಲಾಗುತ್ತಿರುವ ಶೋಷಣೆ, ದೌರ್ಜನ್ಯ, ಅನ್ಯಾಯಗಳನ್ನು ಕಂಡು ಕಥೆಗಳಲ್ಲಿ ಸೆರೆಹಿಡಿದಿದ್ದಾರೆ. ಅವರು ಬಳಸಿಕೊಂಡ ಕಥಾ ವಸ್ತುಗಳು ಬೂಕರ್ ತೀರ್ಪುಗಾರರ ಹೃದಯ ತಟ್ಟಿವೆ. ಬಾನು ಮುಸ್ತಾಕರ ಎದೆಯ ಹಣತೆ ಮಹಿಳಾ ಸಮಸ್ಯೆಗಳನ್ನು ಅನಾವರಣಗೊಳಿಸುವಲ್ಲಿ ಪ್ರಬಲಪಾತ್ರ ವಹಿಸಿದೆ. ಸಾಹಿತ್ಯಕ್ಕೆ ದೊಡ್ಡ ಶಕ್ತಿ ಇದೆ ಎನ್ನುವುದನ್ನು ಬಾನು ಮುಸ್ತಾಕ ತೋರಿಸಿಕೊಟ್ಟಿದ್ದಾರೆ ಎಂದರು.

ಸಿಕ್ಯಾಬ್ ಪದವಿ ಪೂರ್ವ ಕಾಲೇಜುಗಳ ಡೀನ್ ಎನ್.ಎಸ್.ಭೂಸನೂರ ಮಾತನಾಡಿ, ಕೆಲವರ ಮಾತೃಭಾಷೆ ಬೇರೆ ಬೇರೆ ಆಗಿರಬಹುದು ಕನ್ನಡವನ್ನು ಓದು ಬರೆಯಲು ಚೆನ್ನಾಗಿ ಕಲಿತು ಭಾಷಾ ಸಾಮರ್ಥ್ಯ ವೃದ್ಧಿಸಿಕೊಳ್ಳಬೇಕು. ಸಾಹಿತ್ಯದ ಓದು ಬರವಣಿಗೆ ರೂಢಿಸಿಕೊಳ್ಳಬೇಕು. ಕನ್ನಡಕ್ಕೆ ಕನ್ನಡಿಗರೇ ಬೆನ್ನೆಲುಬು ಎಂದು ತಿಳಿಸಿದರು.

ಉಪನ್ಯಾಸಕಿ ಎನ್.ಎ.ದಖನಿ ಮಾತನಾಡಿ, ಜಟಿಲ ಸಮಸ್ಯೆಗಳ ಮಧ್ಯೆಯೂ ವೃತ್ತಿ ಪ್ರವೃತ್ತಿಯಲ್ಲಿ ಮೇರು ಹಂತಕ್ಕೆ ಬಂದವರು ಬಾನು ಮುಸ್ತಾಕ. ನಾವು ಕೂಡ ಹಲವು ಸಮಸ್ಯೆಗಳನ್ನು ಮೀರಿ ನಿಲ್ಲುವ ಶಕ್ತಿ ಪಡೆಯಬೇಕು. ನನ್ನ ಜೀವನ ಬರೀ ನಾಲ್ಕು ಗೋಡೆಗಳನ್ನು ಅವಲಂಬಿಸಿಲ್ಲ ಅಂತರ್ಶಕ್ತಿಯನ್ನು ಅವಲಂಬಿಸಿದೆ ಎಂದು ಬಾನು ಮುಸ್ತಾಕ ಹೇಳಿದ್ದಾರೆ. ಈ ಹೇಳಿಕೆ ಗಮನೀವಾಗಿದೆ ಎಂದು ಹೇಳಿದರು.

ಉಪನ್ಯಾಸಕ ಎ.ಎಲ್.ನಾಗೂರ, ಪ್ರಾಚಾರ್ಯೆ ಎಸ್.ಕೆ.ಕಟ್ಟಿಮನಿ ಮಾತನಾಡಿದರು. ಹಾದಿಯಾ ನಿರೂಪಿಸಿದರು. ಎಸ್.ಎಂ.ಲಾಹೋರಿ ವಂದಿಸಿದರು.