ಜ್ಞಾನದ ಅರಿವಿನ ಜೊತೆಯಲ್ಲಿ ಸಮಾನತೆ ಸಂದೇಶ ಸಾರುವ ಜವಾಬ್ದಾರಿಯಲ್ಲಿ ಶಿಕ್ಷಣ ಪಡೆದವರು ಬಸವಣ್ಣ, ಕನಕದಾಸರು ಸೇರಿದಂತೆ ಹಲವು ಮಹನೀಯರು ತಿಳಿಸಿರುವ ಆದರ್ಶವನ್ನು ಪಾಲಿಸುವ ಮೂಲಕ ಪೌರಕಾರ್ಮಿಕರು ನಮ್ಮಗಳ ಸಹೋದರರು ಎಂದು ತಿಳಿದು ಜೊತೆಯಲ್ಲಿ ನಡೆಯಬೇಕು.
ಕನ್ನಡಪ್ರಭ ವಾರ್ತೆ ಮಳವಳ್ಳಿ
ಸಮಾಜದಲ್ಲಿ ವೃತ್ತಿ ಗೌರವಿಸುವ ಪ್ರವೃತ್ತಿ ಬೆಳೆಸಿಕೊಂಡು ಮನುಷ್ಯರು ಸಮಾನತೆಯಿಂದ ಬದುಕಬೇಕು ಎಂದು ಕೃಷಿ ಸಚಿವ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದರು.ಪಟ್ಟಣದ ಡಾ.ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಪುರಸಭೆಯಿಂದ ನಡೆದ ಪೌರ ಕಾರ್ಮಿಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಪೌರಕಾರ್ಮಿಕರು ಪಟ್ಟಣವನ್ನು ಸ್ವಚ್ಛಗೊಳಿಸುವುದರಿಂದಲೇ ಸುಂದರವಾಗಿ ಕಾಣಲು ಸಾಧ್ಯವಾಗುತ್ತಿದೆ. ಪ್ರತಿಯೊಬ್ಬರ ಉತ್ತಮ ಆರೋಗ್ಯಕ್ಕೆ ಇವರ ಪಾತ್ರ ಪ್ರಮುಖವಾಗಿದೆ ಎಂದರು.
ವೃತ್ತಿ ಯಾವುದೇ ಇರಲಿ ಗೌರವ ಮತ್ತು ಬದ್ಧತೆಯಿಂದ ಬದಕಲು ಸಮಾನತೆಯ ಹಕ್ಕನ್ನು ಡಾ.ಬಿ.ಆರ್.ಅಂಬೇಡ್ಕರ್ ಅವರು ಬರೆದಿರುವ ಸಂವಿಧಾನದಲ್ಲಿ ಕಲ್ಪಿಸಿಕೊಟ್ಟಿದ್ದಾರೆ. ನಾವೆಲ್ಲರೂ ಸಮಾನರು ಎನ್ನುವ ಉದ್ದೇಶದಿಂದ ಸಿಎಂ, ಸಚಿವರು, ಅಧಿಕಾರಿಗಳು ಎಲ್ಲಾ ಶಾಸಕರು ಪೌರಕಾರ್ಮಿಕರು ಬಳಸುವ ಸಮವಸ್ತ್ರವನ್ನು ಧರಿಸಿ ಸಮಾಜವನ್ನು ಕೊಳಕು ಮಾಡುವವರಿಗಿಂತ ಶುದ್ಧೀಕರಿಸುವವರಿಗೆ ಗೌರವ ಸಲ್ಲಿಸಬೇಕೆಂಬುವುದನ್ನು ಸಮಾಜಕ್ಕೆ ತಿಳಿಸಿಕೊಟ್ಟಿದ್ದಾರೆ ಎಂದರು.ಜ್ಞಾನದ ಅರಿವಿನ ಜೊತೆಯಲ್ಲಿ ಸಮಾನತೆ ಸಂದೇಶ ಸಾರುವ ಜವಾಬ್ದಾರಿಯಲ್ಲಿ ಶಿಕ್ಷಣ ಪಡೆದವರು ಬಸವಣ್ಣ, ಕನಕದಾಸರು ಸೇರಿದಂತೆ ಹಲವು ಮಹನೀಯರು ತಿಳಿಸಿರುವ ಆದರ್ಶವನ್ನು ಪಾಲಿಸುವ ಮೂಲಕ ಪೌರಕಾರ್ಮಿಕರು ನಮ್ಮಗಳ ಸಹೋದರರು ಎಂದು ತಿಳಿದು ಜೊತೆಯಲ್ಲಿ ನಡೆಯಬೇಕು ಎಂದರು.
ಪುರಸಭೆ ಪೌರಕಾರ್ಮಿಕರಿಗೆ ಪಟ್ಟಣದ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಐದು ಎಕರೆ ಜಮೀನು ಗುರುತಿಸಿ ನಿವೇಶನ ನೀಡಲು ಮುಂದಾಗಲಾಗುವುದು. ಪುರಸಭೆಯಲ್ಲಿ 39 ಮಂದಿ ಪೌರಕಾರ್ಮಿಕರಿದ್ದಾರೆ. ಎಲ್ಲರಿಗೂ ನಿವೇಶನ ಸೇರಿದಂತೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಲಾಗುತ್ತಿದೆ ಎಂದರು.ಸರ್ಕಾರದ ಬೆಳಗಿನ ಉಪಾಹಾರ ನೀಡುತ್ತಿದೆ. ನಿಮ್ಮ ಬಹುತೇಕ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸಲಾಗಿದೆ. ನಿಮ್ಮ ಕುಟುಂಬಗಳಲ್ಲಿ ಸದಸ್ಯರ ಸಂಖ್ಯೆ ಹೆಚ್ಚುತ್ತಿರುವುದರಿಂದ ಪಟ್ಟಣದಲ್ಲಿ ನಿವೇಶನ ಕಲ್ಪಿಸುವುದು ಕಷ್ಟಸಾಧ್ಯವಾಗಿದೆ. ಹೀಗಾಗಿ ಪಟ್ಟಣಕ್ಕೆ ಹೊಂದುಕೊಂಡಂತೆ ಗ್ರಾಮೀಣ ಪ್ರದೇಶದಲ್ಲಿ ನಿವೇಶನ ಗುರುತಿಸಿ ನೀಡಲಾಗುವುದು ಎಂದು ಭರವಸೆ ನೀಡಿದರು.
ಪೌರಕಾರ್ಮಿಕರು ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು. ಸರ್ಕಾರಿ ಶಾಲೆಗಳಿಗೆ ಹಲವು ಸೌಲಭ್ಯ ಒದಗಿಸಲಾಗಿದೆ. ನಿಮ್ಮ ಮಕ್ಕಳು ಶಿಕ್ಷಣ ವಂಚಿತರಾಗದಂತೆ ಜಾಗೃತಿ ವಹಿಸಬೇಕು ಎಂದು ಕರೆ ನೀಡಿದರು.ಈ ವೇಳೆ ತಹಸೀಲ್ದಾರ್ ಎಸ್.ವಿ.ಲೋಕೇಶ್ ಮಾತನಾಡಿ, ಪಟ್ಟಣದ ಸ್ವಚ್ಛತೆ, ನೈರ್ಮಲ್ಯದ ಮೂಲಕ ನಾಗರಿಕರ ಆರೋಗ್ಯ ಕಾಪಾಡುವ ಕೆಲಸ ಮಾಡುತ್ತಾ ಜನರಿಗೆ ಪ್ರಾಥಮಿಕ ವೈದ್ಯರಂತೆ ಇರುವ ಪೌರಕಾರ್ಮಿಕರ ಸೇವೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಇಂಥ ಆಚರಣೆಗಳನ್ನು ನಮ್ಮ ನಡುವಿನ ಸಂಬಂಧ ಗಟ್ಟಿಗೊಳಿಸುತ್ತವೆ ಎಂದು ಅಭಿಪ್ರಾಯಪಟ್ಟರು.
ವಿವಿಧ ಕ್ರೀಡೆಯಲ್ಲಿ ವಿಜೇತರಾದ ಕ್ರೀಡಾಪಟುಗಳಿಗೆ ಬಹುಮಾನ ವಿತರಿಸಿ ಕೃಷಿ ಸಚಿವರು ಪೌರಕಾರ್ಮಿಕರನ್ನು ಸನ್ಮಾನಿಸಿ ಗೌರಿಸಿದರು. ವೇದಿಕೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ಎಂ.ಸಿ ನಾಗರತ್ನ, ಮುಖಂಡ ಸಿದ್ದೇಗೌಡ ಸೇರಿದಂತೆ ಪೌರ ಕಾರ್ಮಿಕ ಸಂಘಟನೆಯ ಮುಖಂಡರು ಇದ್ದರು.